ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡೋಣ .
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದ ನಾವು ಪಿ ಯು ಸಿ ಯಲ್ಲಿ ಅಂತಹದೇ ಫಲಿತಾಂಶ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಸಂತಸದ ಈ ಹೊತ್ತಿನಲ್ಲಿ ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ವರದಿ ನಮ್ಮ ಕೈ ಸೇರಿದೆ. ಆ ವರದಿಯ ಪ್ರಮುಖವಾದ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕೆ ಅಷ್ಟೊಂದು ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತದೆ.ಇದು ದೇಶದಾದ್ಯಂತ ನಡೆದ ಸಮೀಕ್ಷೆಯ ವರದಿಯಾಗಿದ್ದು ಈ ಸಮೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.
3,5,8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದಕ್ಕಾಗಿ ರಾಷ್ಟ್ರಮಟ್ಟದಲ್ಲಿ 'ರಾಷ್ಟ್ರೀಯ ಸಾಧನೆ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ ಖಾಸಗಿ ಶಾಲೆ ಮತ್ತು ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಮೀಕ್ಷೆ ನಡೆದಿದೆ. ಇದು ದೊಡ್ಡ ಮಟ್ಟದ ಸಮೀಕ್ಷೆಯಾಗಿದೆ. 2021ರ ಸಮೀಕ್ಷೆಯ ವರದಿಯು ಈಗ ಪ್ರಕಟವಾಗಿದೆ. ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮುಂತಾದ ವಿಷಯಗಳಲ್ಲಿನ ಕಲಿಕಾ ಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಕಲಿಕಾಮಟ್ಟವು ಕುಸಿತ ಕಂಡಿದೆ.ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಮಟ್ಟವು ಕಳವಳಕಾರಿಯಾಗಿದೆ ಎಂಬುದರತ್ತ ಸಮೀಕ್ಷಾ ವರದಿಯು ಬೆಳಕು ಚೆಲ್ಲಿದೆ.
ಭಾಷೆ, ಗಣಿತ, ವಿಜ್ಞಾನ, ಪರಿಸರ ಅಧ್ಯಯನ, ಇಂಗ್ಲಿಷ್ ಹಾಗೂ ಆಧುನಿಕ ಭಾರತೀಯ ಭಾಷೆಗಳ ಅಧ್ಯಯನದಲ್ಲಿ 3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಅಂಕಗಳನ್ನು ವರದಿ ಬಹಿರಂಗಪಡಿಸಿದೆ. ಗರಿಷ್ಠ 500 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಬಹುತೇಕ ಈ ಎಲ್ಲ ಹಂತಗಳಲ್ಲೂ ಅಂಕಗಳು ಕಡಿಮೆಯಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ.
10ನೇ ತರಗತಿಯ ಇಂಗ್ಲಿಷ್ನಲ್ಲಿ ಮಾತ್ರ 2017ಕ್ಕೆ ಹೋಲಿಸಿದರೆ 269ಅಂಕ ಪಡೆದಿದ್ದ ಮಕ್ಕಳು, 2011ರಲ್ಲಿ 383 ಅಂಕ ಪಡೆದಿರುವುದು ತುಸು ಸಮಾಧಾನ ತಂದಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಮಾಹಿತಿಯ ಅತಂಕಕಾರಿಯಾಗಿದೆ .ಅದೇನೆಂದರೆ ಪ್ರೌಢಶಾಲಾ ಹಂತದಲ್ಲಿ, ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಉಲ್ಲೇಖವಾಗಿರುವ ಕಥೆ, ನಾಟಕ, ವಸ್ತುವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು 2017ರಲ್ಲಿ 500ಕ್ಕೆ 252 ಅಂಕ ಪಡೆದಿದ್ದರು, ಆದರೆ 2011ರಲ್ಲಿ ಈ ಸಾಮರ್ಥ್ಯವು 242 ಅಂಕಗಳಿಗೆ ಕುಸಿದಿದೆ.
ಈ ಮೇಲಿನ ಅಂಶಗಳನ್ನು ಗಮನಿಸಿದರೆ ನಮಗೆ ಸಾಮಾನ್ಯವಾಗಿ ಗ್ರಹಿಕೆಯಾಗುವುದು ನಮ್ಮ ಮಕ್ಕಳ ಓದುವ ಮತ್ತು ಬರೆಯುವ ಕೌಶಲ್ಯ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಈ ಸಮೀಕ್ಷೆಯು ಮತ್ತೊಂದು ವರದಿಯನ್ನು ಗಮನಿಸುವುದಾದರೆ
ದೇಶದ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಮಕ್ಕಳಿಗೆ ಆಧುನಿಕ ಭಾರತೀಯ ಭಾಷೆಯೊಂದನ್ನು (ಎಂಐಎಲ್) ಬೋಧಿಸಲಾಗುತ್ತದೆ. ಸಂಸ್ಕೃತ, ಹಿಂದಿ, ಬಂಗಾಳಿ, ಕನ್ನಡ, ತಮಿಳು ಸೇರಿ ಒಟ್ಟು 21 ಭಾಷೆಗಳನ್ನ ಆಧುನಿಕ ಭಾರತೀಯ ಭಾಷೆ ಎಂದು ವರ್ಗೀಕರಿಸಲಾಗಿದೆ. ಆದರೆ ದೇಶದಾದ್ಯಂತ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನವರು, ಈ ಪಠ್ಯವನ್ನು ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿದ ಭಾಷೆಗಳನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಲ್ಲಿ, ಶೇ 59ರಷ್ಟು ಜನರು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲೂ ಶೇ 65ರಷ್ಟು ವಿದ್ಯಾರ್ಥಿಗಳು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು-ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ. ಇದೂ ಮತ್ತೂ ಆಘಾತಕಾರಿಯಾದ ಅಂಶ.
ಈ ರೀತಿಯ ಕಲಿಕಾ ಸಾಧನೆಯ ಕುಸಿತಕ್ಕೆ ಕಾರಣ ಹುಡುಕಲು ಹೊರಟರೆ ಹಲವಾರು ಅಂಶಗಳು ಇದೇ ಸಮೀಕ್ಷೆಯಲ್ಲಿ ನಮಗೆ ಸಿಗುತ್ತವೆ. ಅಂತಹ ಅಂಶಗಳಲ್ಲಿ ಬೋಧನೆಯ ಜೊತೆಗೆ ಶಿಕ್ಷಕರಿಗೆ ಇತರೆ ಕಾರ್ಯಭಾರ ಹಾಕಿರುವುದು ಎಂದು ದೇಶದ 43% ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತರಗತಿ ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಅತಿಮುಖ್ಯ ಎಂದು ಪರಿಗಣಿತವಾಗಿರುವ ಬೋಧನೋಪಕರಣಗಳು ಹಾಗೂ ಪೂರಕ ಸಲಕರಣೆಗಳ ಪೂರೈಕೆಯಲ್ಲಿ ಕೊರತೆಯಿದೆ ಎಂಬುದರತ್ತ ವರದಿ ಬೊಟ್ಟು ಮಾಡಿದೆ. 3 ಹಾಗೂ 8ನೇ ತರಗತಿಯಲ್ಲಿ ಶೇ.63ರಷ್ಟು ಕೊರತೆಯಿದ್ದರೆ, 5 ಹಾಗೂ 10ನೇ ತರಗತಿಯಲ್ಲಿ ಶೇ. 62ರಷ್ಟು ಕೊರತೆ ಇದೆ ಎಂಬುದು ಸಮೀಕ್ಷೆಯಲ್ಲಿ ಬಿಂಬಿತವಾಗಿದೆ. ಇದೂ ಸಹ ಕಲಿಕೆಯ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ದೇಶದ ಕೆಲ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ ಎಂಬುದನ್ನು ಈ ಸಮೀಕ್ಷೆಯು ಬಹಿರಂಗಪಡಿಸಿದೆ.
ಶಾಲಾ ಕಟ್ಟಡಗಳ ಗುಣಮಟ್ಟವೂ ಶೈಕ್ಷಣಿಕ ಚಟುವಟಿಕೆಯಲ್ಲಿ ಅತಿಮುಖ್ಯ. ಆದರೆ ರಾಜ್ಯದ 3ನೇ ತರಗತಿ ಹಂತದ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕಿದೆ ಎಂದು ಶೇ 23ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೌಢಶಾಲಾ ಹಂತದಲ್ಲಿ ಕಟ್ಟಡಗಳ ದುರಸ್ತಿ ಬೇಡಿಕೆ ಸ್ವಲ್ಪ ಕಡಿಮೆಯಿದೆ ಎಂಬುದು ಸಮಾಧಾನಕರ ಸಂಗತಿ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಈ ಹಂತದಲ್ಲಿ ಮಕ್ಕಳ ಕಲಿಕೆಯ ಕುಸಿತ ಎಲ್ಲರೂ ಯೋಚಿಸಬೇಕಾದ ಸಂಗತಿ. ಈ ಸಂಧರ್ಭದಲ್ಲಿ ಪಠ್ಯಕ್ರಮ ಪಠ್ಯ ಪುಸ್ತಕ ಕುರಿತಾಗಿ ಅನಗತ್ಯ ಗೊಂದಲ ಮಾಡಿಕೊಂಡು ರಾಡಿ ಎಬ್ಬಿಸುತ್ತಿರುವುದು ದುರದೃಷ್ಟಕರ .ಇಂತಹ ಸಂಧರ್ಭದಲ್ಲಿ ಒಬ್ಬರ ಮೇಲೋಬ್ಬರು ಅನಗತ್ಯವಾಗಿ ದೂರದೆ ಆಳುವವರು,ಅಧಿಕಾರಿಗಳು,ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಎಲ್ಲರೂ ಸೇರಿ ನಮ್ಮ ದೇಶದ ಮಕ್ಕಳ ಕಲಿಕೆ ಉತ್ತಮವಾಗಲು ಹಾಗೂ ಗುಣಾತ್ಮಕ ಆಗಿರುವಂತೆ ಕ್ರಮ ವಹಿಸಬೇಕಿದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment