ಕವಿ ಹಿಡಿದ ಕನ್ನಡಿ. ವಿಮರ್ಶೆ.
ಕವಿ ಹಿಡಿದ ಕನ್ನಡಿ .ಇದು ಕವಿ ದೊಡ್ಡರಂಗೇಗೌಡರು ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿ ದೇಸೀಯ ನೆಲೆಗಟ್ಟಿನಲ್ಲಿಯೇ ಸಹಜವಾದ ಸಹೃದಯ ಪ್ರೀತಿಯ ವಿಮರ್ಶಾ ಲೇಖನಗಳಿವೆ. ಈ ಕೃತಿಯಲ್ಲಿ ಅನೇಕ ಲೇಖನಗಳಿದ್ದು ಸಾಹಿತ್ಯ ದಿಗ್ಗಜರಾದಂಥ ಶ್ರೇಷ್ಠ ಕವಿಗಳಿಂದ ಸಾಮಾನ್ಯ ಎಲೆಮರೆಯ ಕಾಯಿಯಂಥ ಕವಿಗಳ ಕಾವ್ಯ ಕೃತಿಗಳವರೆಗೆ ವಿಮರ್ಶೆ ಸಾಗುತ್ತದೆ. ಪ್ರಾಚೀನ ಕಾಲದ ಮಹತ್ವತೆಯನ್ನು ಆಧುನಿಕ ಜಗತ್ತಿನವರೆಗೂ ನಡೆದ ಘಟನೆಗಳು ಅವುಗಳ ವಿಭಿನ್ನ ದೃಷ್ಟಿ ಧೋರಣೆಯ ಆಯಾಮಗಳನ್ನು ಇಂದು ಎಲ್ಲ ವರ್ಗದ ಜನರೂ ಓದಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ ಗಹನವಾದ ವಿಚಾರ ಅಡಗಿದೆ.
ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರಜ್ಞೆಯನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುತ್ತದೆ. ಹಾಗೆಯೇ ದೊಡ್ಡರಂಗೇಗೌಡರ ಕಾಲದ ವಸ್ತುವನ್ನು ಗ್ರಹಿಸಿದ ರೀತಿಯನ್ನು ಅವರ ಒಟ್ಟಾರೆ ತಾತ್ವಿಕ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಈ ಜಾಗತಿಕ ಅನುಭವದ ಹಿನ್ನೆಲೆ ದಟ್ಟವಾಗಿದೆ ಕವಿ ಯೇಟ್ಸ್ ನ ಹಾಗೆ ದೊಡ್ಡರಂಗೇಗೌಡರು ಕೂಡಾ ಪೂರ್ಣ ಬೌದ್ಧಿಕ ವ್ಯವಸ್ಥೆಯನ್ನು ವೈಯುಕ್ತಿಕ ಹಂತದಲ್ಲಿ ನಿರ್ಮಿಸಿಕೊಂಡರು. ಹಾಗಾಗಿ ಆಲೋಚನಾ ಕ್ರಮಗಳು ನಿರಾಯಾಸವಾಗಿ ಬರುತ್ತವೆ. ಈ ರೀತಿಯ ಕವಿಗಳು ತಮ್ಮ ವಿಚಾರಗಳನ್ನು ತಮ್ಮ ವೈಚಾರಿಕ ಆಕೃತಿಗಳ ಶೋಧನೆಗಾಗಿ ಬಳಸಿದ್ದಾರೆ. ಇವರ ಪ್ರತಿಮಾ ಜಗತ್ತು, ಭಾಷೆಯ ಉಪಯೋಗ ಮುಂತಾದವು ಅಭಿವ್ಯಕ್ತಿಯಲ್ಲಿ ತಮ್ಮ ಬೌದ್ಧಿಕ ಜಗತ್ತಿನ ಸೂಕ್ಷ್ಮ ವಾಹಕಗಳಾಗಿ ದುಡಿಯುತ್ತವೆ. ಇದು ಮೆಚ್ಚಬೇಕಾದ ಅಂಶವಾಗಿದೆ.
ಕವಿ ಮತ್ತು ಲೇಖಕರಾದ ದೊಡ್ಡರಂಗೇಗೌಡರು ಈ ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ.
"ಅರವತ್ತರ ದಶಕದಿಂದಲೂ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡೆ, ನಿರಂತರ ಕೃಷಿ ಮಾಡುತ್ತಾ ಬಂದೆ, ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದೆ. ಹಾಗೆ ಬರೆದ ಕೆಲವು ಲೇಖನಗಳನ್ನು ಸಂಕಲಿಸಿ ಇಲ್ಲಿ ಕೃತಿಯ ರೂಪದಲ್ಲಿ ನೀಡಿದ್ದೇನೆ.
ನನ್ನ ಸುತ್ತ ಮುತ್ತಣ ಸನ್ನಿವೇಶಗಳಿಗೆ ಪ್ರಾಮಾಣಿಕವಾಗಿ ಒಬ್ಬ ಕವಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ಯಾವತ್ತೂ ಜನಜೀವನದ ಪ್ರತಿಬಿಂಬವೂ ಹೌದು. ಈ ಕಾರಣದಿಂದಲೂ ಇದು ಕವಿ ಗ್ರಹಿಸಿದ ಗ್ರಹಿಕೆಗಳು ಎಲ್ಲ ರೂಕ್ಷ ವಿಷಯಗಳಿಗೂ ಕವಿ ಕನ್ನಡಿ ಹಿಡಿದು ನೋಡಿ ಪ್ರತಿಕ್ರಿಯಿಸಿದ್ದರ ಫಲ ಇದು. ಹೀಗಾಗಿ "ಕವಿ ಹಿಡಿದ ಕನ್ನಡಿ” ಎಂದು ಪುಸ್ತಕಕ್ಕೆ ಹೆಸರಿಸಿದ್ದೇನೆ." ಎಂದಿದ್ದಾರೆ.
ಈ ಕೃತಿಯಲ್ಲಿ ಬರುವ ಲೇಖನಗಳ ಕಡೆ ಒಮ್ಮೆ ಗಮನ ಹರಿಸುವುದಾದರೆ
ನಾವು ಭಾರತೀಯರು ಎತ್ತ ಸಾಗುತ್ತಿದ್ದೇವೆ? ಎಂಬ ಲೇಖನದಲ್ಲಿ ಆಧುನಿಕತೆಯೆಡೆಗೆ ಮಾನವ ಸಾಗಬೇಕಾದಾಗ ಆದ ಕೆಲ ಘಟನೆಗಳ ಚಿತ್ರಣ ನೀಡಿದ್ದಾರೆ.
ಸಾಹಿತ್ಯ ಸೌರಭ “ವಡ್ಡಾರಾಧನೆ” ,
ಕವಿ ಪಂಪಣ್ಣ ಅವರ ಮಹಾನ್ ಸಾಧನೆ ,ಪಾಂಡಿತ್ಯದಲ್ಲಿ ಎತ್ತಿದ ಕೈ : ಮಂಜೇಶ್ವರದ ಗೋವಿಂದ ಪೈ!
ಮುಂಬೆಳಕಿನ ಮುಂಗೋಳಿ ಹಟ್ಟಿಯಂಗಡಿ ನಾರಾಯಣರಾಯರು, ಕನ್ನಡ ಕಾವ್ಯಕ್ಕೆ ಹೊಸ ನುಡಿಗಟ್ಟು ನೀಡಿದ ಬಿ.ಎಂ.ಶ್ರೀ ,ಅಮಿತಾನಂದ ನೀಡುವ ಸೃಜನ ಸಂಪನ್ನ,ದಾರ್ಶನಿಕ ಮಾರ್ಗ ಕವಿ ಡಿ.ವಿ.ಜಿ.,ವೈಚಾರಿಕತೆ ಬಿತ್ತಿದ ಅಪೂರ್ವ ಮಹಾಕವಿ ಕುವೆಂಪು,“ಸರ್ವ ಸೌಖ್ಯವೂ ಕುಟುಂಬದಲ್ಲೇ ಇದೆ”ಎಂದು ಸಾರಿದ ವರಕವಿ ದ.ರಾ.ಬೇಂದ್ರೆ ಬಹುಮುಖಿ ಆಯಾಮಗಳ ಬೇಂದ್ರೆ,ನಮ್ಮ ನಮ್ಮ ಮತಿಗಳು ನಮ್ಮ ಮೆಚ್ಚಿನ ದೀವಿಗೆಯಾಗಲಿ!
ಸಾಹಿತ್ಯ ಸಂಸರ್ಗ ಹಾ.ಮಾ.ನಾ ಒಂದು ಸಂಸ್ಮರಣೆ, ಮಂದಾರ ಹೂವಿನಂಥ ಮಹೋನ್ನತ ಮುಗಳಿ,
ಉತ್ಕರ್ಷದ ಹೊನಲಿನಲ್ಲಿ ಸುಗಮ ಸಂಗೀತ ಮುತ್ತಿನಂಥ ಕಾವ್ಯ ಬರೆದ ಕೊಡಗಿನ ಮುತ್ತಣ್ಣ,
ಸಹೃದಯರ ಭಾವ ಸಂಚಲನ ಮಾಡಿದ ಕವಿ ಇಂಚಲ ಅನನ್ಯ ಆಧ್ಯಾತ್ಮ ರಂಗ: ಅವತಾರ ಶೃಂಗ ,
ಆದರ್ಶ ಗುರುಗಳು ಸತ್ಪುರುಷರು ಕನ್ನಡ ನವ್ಯಕಾವ್ಯದ ಬಹುಮುಖೀ ಆಯಾಮಗಳು,ಕನ್ನಡ ಕಾವ್ಯಲೋಕ ದಾಖಲಿಸಿದ ಯುಗಾದಿ ನಾಡಕಟ್ಟುವ ಹಾಡು ಬರೆದನವ್ಯ ಕವಿ ಗೋಪಾಲಕೃಷ್ಣಾಡಿಗರು, ಪರ್ವತವಾಣಿ ಅವರ ಬಿಂಬ ಪ್ರತಿಬಿಂಬಗಳು , ಸಿ.ಪಿ.ಕೆ. ಅವರ “ಚಿಂತನೆ ಚಿಂತಾಮಣಿ" ಭಾವನೆಗಳ ಜೊತೆಗೆ ಚಿಂತನೆಗಳ ಬೆಸೆದ ಕವಿ ವಿಷ್ಣುನಾಯ್ಕ, ಅಭಿವ್ಯಕ್ತಿಯ ಸಾಧ್ಯತೆಗಳ ವಿಸ್ತರಿಸಿದ ಅಸೀಮ ಅನ್ವೇಷಕತೇಜಸ್ವಿ,ಜ್ವಾಲಾಮುಖಿಯಂಥ ಕಾವ್ಯ ಬರೆದ ವಾಲೀಕಾರ
ಮಧು ಮಧುರ ಗೀತೆಗಳನಿತ್ತ ಗೀತಕಾರ ಸು. ರುದ್ರಮೂರ್ತಿಶಾಸ್ತ್ರಿ, ಶ್ರೀನಿವಾಸರಾಜು ಅಕ್ಕರೆಯ ಕನ್ನಡದ ಅನನ್ಯ ಪರಿಚಾರಕ ಅಸಮಾನತೆಯ ವಿರುದ್ಧ ಸಿಡಿದೆದ್ದ ತಪ್ತಕವಿ,ದಲಿತ ಬದುಕಿನ ಸಮರ್ಥ ಚಿತ್ರಣ ನೀಡಿದ ಕವಿ,ಡಾ|| ಸಿದ್ಧಲಿಂಗಯ್ಯ ,
ಈ ನೆಲದ ಕೃಷಿಕ ಕವಿ ಸಿದ್ದಪ್ಪ ಬಿದರಿ, ಅಲೆಮಾರಿ ಜೀವನಕ್ಕೆ ಹಿಡಿದ ರನ್ನಗನ್ನಡಿಗಬಾಳ,
ಆಧುನಿಕ ಕಾವ್ಯ ವೈಚಾರಿಕತೆಗೆ ಪ್ರಾಮುಖ್ಯ ವಾಸ್ತವತೆಯ ರೂಕ್ಷ ಮುಖಗಳು,ಮುಂತಾದ ಲೇಖನಗಳು ಓದುಗರಿಗೆ ಕೆಲ ಮಹಾನ್ ವ್ಯಕ್ತಿಗಳ ಪರಿಚಯ ಮಾಡುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.
ಪುಸ್ತಕದ ಹೆಸರು: ಕವಿ ಹಿಡಿದ ಕನ್ನಡಿ
ಲೇಖಕರು:ಡಾ. ದೊಡ್ಡ ರಂಗೇಗೌಡ.
ಪ್ರಕಾಶನ:ಉನ್ನತಿ ಪ್ರಕಾಶನ
ವರ್ಷ:೨೦೧೫
ಬೆಲೆ:೨೪೦₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment