ಆಕೆ ಉಲಿದ ಹಾಡು.
ಹಾಡೆಂದರೆ ನನಗೆ ಪಂಚಪ್ರಾಣ ಬಾಲ್ಯದಿಂದಲೂ ಶಿಕ್ಷಕರ ಮತ್ತು ಸ್ನೇಹಿತರ ಒತ್ತಾಯದ ಮೇರೆಗೆ ಆಗಾಗ ಹಾಡುತ್ತಿದ್ದೆ. ನಾನು ಬೇರೆಯವರ ಹಾಡು ಕೇಳಿ ಖುಷಿ ಪಡುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ನಾನು ಯರಬಳ್ಳಿಯಲ್ಲಿ ಪಿ ಯು ಸಿ ಓದುವಾಗ ನಮ್ಮ ಸಹಪಾಠಿಯಾಗಿದ್ದ ಹರ್ತಿಕೋಟೆಯ ರೂಪ ಎಂಬ ವಿದ್ಯಾರ್ಥಿನಿ ಶಬರಿ ಮಲೆ ಸ್ವಾಮಿ ಅಯ್ಯಪ್ಪ ಚಿತ್ರದ "ಗಣಪತಿಯೇ..... ಬುದ್ದಿದಾತನೆ.... ಸಲಹು ಗಣೇಶನೇ ....ನೀ ನಮ್ಮ ಗೆಲುವಾಗಿ ಬಾ....." ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು .ಅವರು ಹಾಡಿದ ಹಾಡು ಕ್ಯಾಸೆಟ್ ನಲ್ಲಿ ಹಾಡಿದ ರೀತಿಯೇ ಇತ್ತು. ಈಗಲೂ ಆ ಭಕ್ತಿ ಗೀತೆ ಕೇಳಿದಾಗ ರೂಪ ನೆನಪಾಗುತ್ತಾರೆ.
ಟಿ ಸಿ ಹೆಚ್ ಓದುವಾಗ ಗಾಯಕಿಯರ ದಂಡೇ ಇತ್ತು. ಭಾರತಿ ಎಂಬ ಪ್ರಶಿಕ್ಷಣಾರ್ಥಿ " ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ " ಎಂಬ ಹಾಡನ್ನು ಭಾವ ತುಂಬಿ ಹಾಡುತ್ತಿದ್ದರು. ಹದಿನೈದು ದಿನಕ್ಕೆ ಒಂದು ಸಮಾರಂಭದಲ್ಲಿ ಇವರ ಹಾಡನ್ನು ಕೇಳಲು ನಾವು ಕಾತುರರಾಗಿದ್ದೆವು. ಅದೇ ಸಮಯದಲ್ಲಿ ಶೈಲಜಾ ಎಂಬ ನಮ್ಮ ಸಹಪಾಠಿ" ಹಸಿರು ಗಾಜಿನ ಬಳೆದಳೆ.... ಸ್ತ್ರೀ ಕುಲದ ಶುಭ ಕರಗಳೆ" ಎಂಬ ಗೀತೆಯನ್ನು ಬಹಳ ಸೊಗಸಾಗಿ ಹಾಡುತ್ತಿದ್ದರು. ನೋಡಲು ಸ್ವಲ್ಪ ಕಪ್ಪಾಗಿದ್ದರೂ ಇವರ ಸ್ವರಕ್ಕೆ ಮಾರುಹೋಗದ ಹುಡಗರಿರಲಿಲ್ಲ. ಆ ಪೈಕಿ ಸ್ವಲ್ಪ ಹೆಚ್ಚಾಗಿ ಮಾರುಹೋದ ನಮ್ಮ ಗೆಳೆಯ ಲೋಕೇಶ್ ಶೈಲಾಜಾಳನ್ನೇ ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರೂ ಈಗಲೂ ಸಂಪರ್ಕದಲ್ಲಿ ಇದ್ದು ಸ್ನೇಹವನ್ನು ಮುಂದುವರೆಸಿದ್ದೇವೆ. ಭಾರತಿ ಮತ್ತು ರೂಪರವರು ಈಗ ಎಲ್ಲಿವರೋ ತಿಳಿದಿಲ್ಲ. ಆದರೂ ಅವರು ಹಾಡಿದ ಹಾಡುಗಳ ಕೇಳಿದಾಗ ಅವರ ನೆನಪಾಗುತ್ತದೆ. ಮತ್ತು ಕಾಲೇಜಿನ ದಿನಗಳು ಮರುಕಳಿಸುತ್ತವೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment