12 May 2022

ಬೆಲ್ಲಂ ಪುಲ್ಲಕ್ಕ .ಪುಸ್ತಕ ವಿಮರ್ಶೆ


 ವಿಮರ್ಶೆ 35.


ಬೆಲ್ಲಂ ಪುಲ್ಲಕ್ಕ 



ತುಮಕೂರು ಮೂಲದ ಲೇಖಕರಾದ

ಮಲ್ಲಿಕಾರ್ಜುನ ಹೊಸಪಾಳ್ಯರ ಬೆಲ್ಲಂಪುಲ್ಲಕ್ಕ  ಶೀರ್ಷಿಕೆಯ ಆಕರ್ಷಕ ಪುಸ್ತಕದ  ಹದಿನೈದು ಅಧ್ಯಾಯಗಳಲ್ಲಿ ಪ್ರತಿ ಅಧ್ಯಾಯವೂ ಓದಿಸಿಕೊಂಡು ಹೋಗುತ್ತವೆ. ಈ ಸಂಕಲನದಲ್ಲಿ ಕೃಷಿಯನ್ನು ನಂಬಿದ ರೈತರ ದಿನನಿತ್ಯದ ಬದುಕಿನ ತವಕ ತಲ್ಲಣ, ನೋವು ನಲಿವು, ಸಂಭ್ರಮ ಸಡಗರ, ಜಗಳ-ಮುನಿಸು ಎಲ್ಲವೂ ಇವೆ. ಓದುಗರಿಗೆ ಅಪರೂಪಕ್ಕೆ ಸಿಗುವ ಹಳ್ಳಿಗಾಡಿನ ಒಳನೋಟಗಳನ್ನು ಅವರು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.


ನಗರಗಳಿಗೆ ಹೋಲಿಸಿ ಗ್ರಾಮಗಳಲ್ಲಿ ಅದಿಲ್ಲ ಇದಿಲ್ಲ ಎಂಬ 'ಇಲ್ಲವುಗಳ ಪಟ್ಟಿಯನ್ನೇ ಎಲ್ಲರೂ ಮುಂದಿಡುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅಲ್ಲಿನ ಸೀಮಿತ ಅವಕಾಶಗಳನ್ನು ಹಿಗ್ಗಿಸಬಲ್ಲ ನಾನಾ ಬಗೆಯ ಸಾಧ್ಯತೆಗಳನ್ನು ಶೋಧಿಸುವವರ ಎಷ್ಟೊಂದು ಕಥನಗಳು ಕಾಣುತ್ತವೆ. ಅಲ್ಲಿನ ಬದುಕಿನಲ್ಲಿ ಎಷ್ಟೊಂದು ಬಣ್ಣಗಳು ಕಾಣುತ್ತವೆ. ದುಡಿಮೆಗೆ ಎಷ್ಟೊಂದು ಪರ್ಯಾಯಗಳಿಗೆ ಮನರಂಜನೆಗೆ ಏನೆಲ್ಲ ಅವಕಾಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿ ಎಷ್ಟೊಂದು ವೈವಿಧ್ಯ ಕಾಣುತ್ತದೆ.


ಮಲ್ಲಿಕಾರ್ಜುನ ಹೊಸಪಾಳ್ಯರವರ 

ಹುಟ್ಟೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಟಿ.ಪಿ.ಕೈಲಾಸಂ ಚಿನ್ನದ ಪದಕ ಪಡೆದ ಇವರು ಮೂರು ದಶಕಗಳಿಂದ ದೇಸಿ ಬೀಜಗಳ ಸಂರಕ್ಷಣೆ, ಜಲಮೂಲ ದಾಖಲಾತಿ, ಸುಸ್ಥಿರ ಕೃಷಿ, ಸಿರಿಧಾನ್ಯ ಉತ್ತೇಜನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ ಹವ್ಯಾಸಿ ಬರಹಗಾರರಾದ ಇವರ ರಚನೆಗಳು  ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ, ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕೃತ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿದೆ.


'ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ' ಪ್ರಬಂಧಗಳ ಸಂಕಲನವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ 'ನೆಟ್ಟಿರಾಗಿ', 'ಕೃಷಿ ಆಚರಣೆ', 'ಪೈರುಪಚ್ಚೆ. 'ಕೊರಲೆ', 'ಚೌಳು ನೆಲದ ಬಂಗಾರ', 'ಸಿರಿಧಾನ್ಯ ಪರಂಪರೆ', 'ನಶಿಸುತ್ತಿರುವ ನೀರಿನ ಜ್ಞಾನ', 'ತಲಪರಿಗೆ' ಇತ್ಯಾದಿ 13 ಪುಸ್ತಕಗಳ ಪ್ರಕಟಣೆ ಆಗಿವೆ.

 

ಗದ್ದಲದ ಸಂಭ್ರಮದ ಗದ್ದೆ ಕಣಗಾಲ ನನ್ನ ಬಾಲ್ಯ ನೆನಪಿಸಿತು. ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ ಪ್ರಬಂಧ ನನ್ನ ತಾಯಿಯ ನೆನಪು ಮಾಡಿಸಿತು. ಮಲ್ಲಿಕಾರ್ಜುನ್ ರವರಿಗೆ ರೊಟ್ಟಿ ಇಷ್ಟ ಇರಲಿಲ್ಲ .ಆದರೆ ನನಗೆ ನನ್ನಮ್ಮ ಮಾಡಿದ ರಾಗಿ ರೊಟ್ಟಿ ಈಗಲೂ ಇಷ್ಟ. ಗಂಧಸಾಲೆಯ ಘಮಲಿನಲ್ಲಿ ಬರುವ  ಭತ್ತದ ತಳಿಗಳಂತಹ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಪೊರಕೆಗಳ ಬಗ್ಗೆ ಬರೆದ ಪ್ರಬಂಧವು ನಾನೂ ಒಮ್ಮೆ ಪ್ರಬಂಧ ಬರೆದಿದ್ದನ್ನು ನೆನಪಿಗೆ ತಂದಿತು.

ಪ್ರತಿಯೊಂದು ಪ್ರಬಂಧಕ್ಕೆ ಹೊಂದುವ ರೇಖಾಚಿತ್ರಗಳ ಉಲ್ಲೇಖ ಮಾಡಲೇಬೇಕು .ಜೊತೆಗೆ ಆಕರ್ಷಕ ಶೀರ್ಷಿಕೆಗೆ ತಕ್ಕಂತೆ ಮುಖಪುಟವಿದೆ.

ಒಟ್ಟಾರೆ ಹಳ್ಳಿಗಾಡಿನ ಸುತ್ತಾಟದ ಕಥೆಗಳನ್ನು ಓದಿ ಬೆಲ್ಲಂಪುಲ್ಲಕ್ಕರ ಚಾಕಚಕ್ಯತೆ, ಲೇಖಕರ ತಂದೆಯವರ ಬೈಯ್ಗಳವನ್ನು ಸವಿಯಲು ನೀವು ಬೆಲ್ಲಂ ಪುಲ್ಲಕ್ಕ ಓದಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


No comments: