*"ನಟರಾಜ "ಬಾಲ್ಯದ ನೆನಪಿನ ಲೇಖನ*
https://pratilipi.page.link/ThsAjAMtiN6HLYhp8
*ನಟರಾಜ*
ನಾನಾಗ ನಮ್ಮೂರ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಿಕ್ಷಕರು ಪ್ರತಿವಾರ ನಮ್ಮನ್ನು ಹೊರಸಂಚಾರ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇನೂ ದೂರವಲ್ಲದಿದ್ದರೂ ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೊರಸಂಚಾರ ಕರೆದುಕೊಂಡು ಹೋಗಿ ಯಾವುದಾದರೊಂದು ಕೆರೆ ಅಥವಾ ತೋಟದಲ್ಲಿ ನಾವು ನಮ್ಮ ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿ ಅನ್ನ, ಚಿತ್ರನ್ನ, ಪಕೋಡ, ರೊಟ್ಟಿ ಹೀಗೆ ವಿವಿಧ ತಿಂಡಿಗಳನ್ನು ಪರಸ್ಪರ ಹಂಚಿಕೊಂಡು ತಿಂದ ನಂತರ ಎಲ್ಲಾ ಮಕ್ಕಳ ಚಿತ್ತ ನನ್ನ ಕಡೆ ಹರಿಯುತ್ತಿತ್ತು. ಅವರು" ಸಾ ವೆಂಕಟೇಶ್ ಹತ್ರ ಡ್ಯಾನ್ಸ್ ಮಾಡ್ಸಿ ಸಾ... " ಅಂದಾಗ ಆ... ಬಾರಾ ವೆಂಕಟೇಶ ಡ್ಯಾನ್ಸ್ ಮಾಡು ನಮ್ಮ ಶಿಕ್ಷಕರು ಕರೆಯುತ್ತಿದ್ದರು. ನಾನು ಹೋಗಿ ಆಗ ಪ್ರಚಲಿತದಲ್ಲಿದ್ದ "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು...." ಹಾಡನ್ನು ನಾನೇ ಹೇಳಿಕೊಂಡು ಕುಣಿಯತೊಡಗಿದೆ. ಎಲ್ಲಾ ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮತ್ತೊಮ್ಮೆ ಕುಣಿಯಲು ಹೇಳಿದರು .ಹೀಗೆ ಮೂರು ಬಾರಿ ಕುಣಿದ ಮೇಲೆ ಚೂರು ಚೂರು ತಿಂದ ವಿವಿಧ ಬಗೆಯ ತಿಂಡಿಗಳು ಯಾವಾಗಲೋ ಕರಗಿದ್ದವು. ನನ್ನ ಡ್ಯಾನ್ಸ್ ಆದ ಮೇಲೆ ಆನಂದ ಎಂಬ ನನ್ನ ಕ್ಲಾಸ್ ಮೇಟ್ ನನ್ನ ಕುಣಿಯಲು ಹೇಳಿದರು ಅವನು " ಒನ್ ಟೂ ತ್ರೀ ಪೋರ್ ಪಾನ್ ಪಟಾನ" ಎಂದು ಯಾರಿಗೂ ಅರ್ಥವಾಗದಿದ್ದರೂ ತೆಲುಗು ಹಾಡು ಹೇಳಿಕೊಂಡು ಕುಣಿಯುವಾಗ ನಾವೆಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿ ಇನ್ನೂ ಕುಣಿಯುವಂತೆ ಮಾಡಿದೆವು. ಈ ರೀತಿಯಾಗಿ ಕುಣಿಯಲು ಆರಂಭ ಮಾಡಿದ ನಮ್ಮನ್ನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಡ್ಯಾನ್ಸ್ ಖಾಯಂ ಆಗಿರುತ್ತಿತ್ತು. ಒಂದು ರೀತಿಯಲ್ಲಿ ನಾವು ನಮ್ಮ ಶಾಲೆಯ ಅಧಿಕೃತ ನಟ ರಾಜರಾಗಿ ಗುರ್ತಿಸಿಕೊಂಡಿದ್ದೆವು.
ನಂತರ ನನ್ನ ವಿದ್ಯಾಭ್ಯಾಸ ಮುಂದುವರೆದು ಟಿ ಸಿ ಹೆಚ್ ಓದುವಾಗ ಹಿರಿಯೂರಿನಲ್ಲಿ " ತೂ ಚೀಜ್ ಬಡೀ ಹೈ....." ಹಾಡಿಗೆ ಡ್ಯಾನ್ಸ್ ಮಾಡಿದ್ದೆ. ಮೈಸೂರಿನಲ್ಲಿ ಬಿ ಎಡ್ ಓದುವಾಗ ಸಿ ಟಿ ಸಿ ಕ್ಯಾಂಪ್ ನಲ್ಲಿ " ಸಂದೇಶ್ ಆತೇ ಐ ..... ಎಂಬ ಹಾಡಿಗೆ ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದೆ.
ಇತ್ತೀಚಿಗೆ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದ ನಿಮಿತ್ತವಾಗಿ ಹೈದರಾಬಾದ್ ಗೆ ಹೋದಾಗ ರಾಮೋಜಿ ಪಿಲಂ ಸಿಟಿಯಲ್ಲಿ ಕೃತಕ ಮಳೆ ನೀರಿನಲ್ಲಿ ಎಲ್ಲಾ ಭಾಷೆಗಳ ಹಾಡಿಗೆ ರೈನ್ ಡ್ಯಾನ್ಸ್ ಮಾಡಿದ್ದು ನೆನಪಾಯಿತು . ವಯಸ್ಸಿನ ನಿರ್ಬಂಧವಿಲ್ಲದೇ ತಮಗಿಷ್ಟ ಬಂದ ಹಾಗೆ ಕುಣಿದ ಆ ಕ್ಷಣಗಳು ನಮ್ಮ ಜೀವನದಿ ಮರೆಯಲಾರದ ಕ್ಷಣಗಳೆಂದು ಹೇಳಬಹುದು.
ಆದರೂ ಬಾಲ್ಯದಲ್ಲಿ ಕುಣಿದ "ಕಾಣದಂತೆ ಮಾಯವಾದನು ... ಹಾಡು ನೆನೆದರೆ ಏನೋ ಒಂತರ ಸಂತಸ .ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಿದ್ದ ಆ ಡ್ಯಾನ್ಸ್ ಜ್ಞಾಪಿಸಿದ ಮತ್ತೊಮ್ಮೆ ಆನಂದದಿಂದ ನಮ್ಮ ನೆನಪಿಗೆ ಜಾರಿ ಆನಂದಪಟ್ಟೆವು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment