15 January 2022

ಉಂಡಾಡಿ ಗುಂಡ .ವಿಮರ್ಶೆ.


 


ಉಂಡಾಡಿ ಗುಂಡ. ಕೃತಿ ವಿಮರ್ಶೆ


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಪರಿಚಿತರಾದ ವಾಸು ಎಂದೇ ಪರಿಚಿತವಾಗಿರುವ ಸಮುದ್ರವಳ್ಳಿ ವಾಸು ರವರ ಮಕ್ಕಳ ಕವನಗಳ ಸಂಕಲನ  ಉಂಡಾಡಿ ಗುಂಡ ಪುಸ್ತಕ ಓದಿದೆ.ಇದರಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗುವ ಮೂವತ್ತೈದು ಕವನಗಳಿವೆ.ನೀವು ಕೂಡಾ ಓದಿ    ಇವು ದೊಡ್ಡವರಿಗೂ ಇಷ್ಟವಾಗುತ್ತವೆ. 


 ಸಮುದ್ರವಳ್ಳಿ  ವಾಸುರವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಮುದ್ರವಳ್ಳಿ ಎಂಬ ಗ್ರಾಮದಲ್ಲಿ ಜನಿಸಿದವರು ರೈತ ಕುಟುಂಬದಲ್ಲ ಜನಿಸಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯ ಗೀಳನ್ನು ಹೊಂದಿದ್ದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು , ಕವಿತೆಗಳು, ಕಥೆಗಳು ಪ್ರಕಟಗೊಂಡಿವೆ. ಈಗಾಗಲೇ ಸಿಹಿಮುತ್ತು ಎಂಬ ಚುಟುಕು ಸಂಕಲನ, ಯಡವಟ್ಟು ವಾಸು ಎಂಬ  ಹಾಸ್ಯ ಲೇಖನ  ಮಕ್ಕಳ ಕಿರುನಾಟಕಗಳು, ಹುಚ್ಚುತ್ತಿ ಎಂಬ ಕಥಾ ಸಂಕಲನ, ಮಲೆನಾಡಿನ ಮಾರ್ಗದಾಳುಗಳು ಎಂಬ  ಕಾದಂಬರಿ,ಧಣ ಢಣ ಘಂಟೆ ಬಾರಿಸಿತು ಎಂಬ ಮಕ್ಕಳ ಕವನಗಳ ಸಂಕಲನ ಸಿಂಗಾರಿ ಎಂಬ  ಕಥಾಕವನ ಸಂಕಲನ , ನನ್ನಾಕೆ ಹೇಳಿದ್ದು ಎಂಬ  ಹನಿಗವನ ಸಂಕಲನ, ಅಂತರಂಗದ ಅಳಲು ಎಂಬ ಕವನ ಸಂಕಲನ ಪ್ರಕಟಮಾಡಿದ್ದಾರೆ ಪ್ರಸ್ತುತ ಉಂಡಾಡಿ ಗುಂಡ ಎಂಬ ಮಕ್ಕಳ ಕವನಗಳು ಮಕ್ಕಳ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.   ಇವರ ಮಲೆನಾಡಿನ ಮಾರ್ಗದಾಳುಗಳು ಕಾದಂಬರಿ ಎರಡನೇ ಮುದ್ರಣಗೊಂಡು ಓದುಗರ ಮನಗೆದ್ದ ರೀತಿಯಲ್ಲಿ  ಈ ಪುಸ್ತಕವೂ ಓದುಗರ ತಲುಪಲಿ ಎಂದು ಹಾರೈಸುವೆ .


ಪ್ರಸ್ತುತ ಉಂಡಾಡಿ ಗುಂಡ ಪುಸ್ತಕದ ಬಗ್ಗೆ ಹೇಳುವುದಾದರೆ

ವಾಸು ಅವರು ನಮ್ಮ ನಾಡಿನ  ಹಿರಿಯ ಕವಿಗಳ ಬಗ್ಗೆ ಬರೆಯುವಾಗ ಹಲವಾರು ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಹಲವು ದಿನ ಕೂತು ಪದ್ಯ ರೂಪ ಕೊಟ್ಟಿದ್ದಾರೆ.


ಮಗ್ಗಿಯ ಮೇಲಿನ ಕವನಗಳು ಮತ್ತಷ್ಟು ಸುಂದರವಾಗಿವೆ. 


'ಹಣ್ಣು' ಕವಿತೆಯಲ್ಲಿ

 "ಬಾಳೆಹಣ್ಣು ತಿಂದು

ಸಹಬಾಳ್ವೆ ಮಾಡಿ ...

ಕಿತ್ತಲೆಹಣ್ಣು ತಿಂದು 

ಕಿತ್ತಾಡದೆ ಒಟ್ಟಾಗಿರಿ "

ಎಂಬ ಒಗ್ಗಟ್ಟಿನ ತತ್ವ ಹೇಳಿದೆ.


'ಪಾಪು' ಕವಿತೆಯಲ್ಲಿ ಬರುವ

"ನಗುವಿನಲೆಯ ಇರುಳ ದೀಪ

 ಬಿದಿಗೆ ಚಂದ್ರನಂತೆ ರೂಪ !"

ಎಂಬ ಪದಗಳು ನಮ್ಮನ್ನು ಸೆಳೆಯುವವು.


ಪೊಲೀಸ್ ಗೆಳೆಯರ ಬಗ್ಗೆ ಬರೆದಿರುವ ಕವನ  ಅಭಿಮಾನದ ನುಡಿಗಳಿಂತಿವೆ.

"ಸಮವಸ್ತ್ರ ಧರಿಸಿ, ತಮೋಗುಣ ಅಳಿಸುವಿರಿ

ಸಹಬಾಳ್ವೆ, ಸಮಾನತೆ ಉಳಿಸುವಿರಿ."


'ಪರೀಕ್ಷೆ' ಕವಿತೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಬೇಡ ಎಂಬ ಸಲಹೆ ನೀಡಿರುವರು.

"ಇಷ್ಟದಿ ಕಲಿತರೆ ರಸಗುಲ್ಲ

ಕಷ್ಟದಿ ಕಲಿತರೆ ಕಸ ಎಲ್ಲಾ"


ಪುಟ್ಟನ ಪರಿಸರ ಪ್ರಜ್ಞೆ ನಿಮಗೂ  ಖಂಡಿತಾ ಖುಷಿಕೊಡುತ್ತದೆ.

"ಕೆರೆಗಳ ಹೂಳನು ಎತ್ತೋಣ ಗಿಡಮರಬಳ್ಳಿ ಬೆಳೆಸೋಣ."


ವ್ಯಾಕರಣದ ಬಗೆಗಿನ ಕವಿತೆ ಲಘುಹಾಸ್ಯದ ಮೂಲಕ ಜ್ಞಾನವನ್ನು ನೀಡುತ್ತದೆ. ಉದಾಹರಣೆಗೆ 

"ಸ್ವರಗಳು ಎಂದರೆ ಸರಗಳು ಅಲ್ಲ ವ್ಯಂಜನವೆಂದರೆ ಅಂಜನವಲ್ಲ

ಗಾದೆ ಮಾತಿನಲಿ ಬಾಧೆಯು ಇಲ್ಲ."


 ಹೀಗೆ 35 ಮಕ್ಕಳ ಕವನಗಳು ಭಿನ್ನವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕೆಲವು ಪದ್ಯ ಗಳಿಗೆ ಛಂದಸ್ಸನ್ನೂ ಬಳಸಲಾಗಿದೆ.ಕೆಲವು ಉತ್ತಮ ಪ್ರಾಸಗಳಿಂದ ಕೂಡಿವೆ .

ಮಕ್ಕಳ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮುದ್ರವಳ್ಳಿ ವಾಸು ರಂತವರು ಇನ್ನೂ ಹೆಚ್ಚಿನ ಮಕ್ಕಳ ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವೆ.



ಪುಸ್ತಕ: ಉಂಡಾಡಿ ಗುಂಡ.

ಕವಿ: ಸಮುದ್ರವಳ್ಳಿ ವಾಸು.

ಪ್ರಕಾಶನ: ಯದುನಂದನ ಪ್ರಕಾಶನ

ಬೆಲೆ: 80


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529


No comments: