ಆವುದು ಘನ. ಆವುದು ಕಿರಿದು ಹೇಳಾ?
ಪುಸ್ತಕ ವಿಮರ್ಶೆ.
ಆತ್ಮೀಯರು ,ಪ್ರಕಾಶಕರು, ನೂರಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾದ
ಎಂ.ವಿ.ಶಂಕರಾನಂದ ರವರ ಆವುದು ಘನ ಆವುದು ಕಿರಿದು ಹೇಳಾ ಪುಸ್ತಕದಲ್ಲಿ ನಮಗೆ ಐವತ್ತೊಂಭತ್ತು ಸೂಫಿ ಕಥೆಗಳಿವೆ .
ಆ ಎಲ್ಲಾ ಸೂಫಿ ಕಥೆಗಳು ಮಕ್ಕಳಿಂದ ಹಿಡಿದು ವೃದ್ಧ ರವರೆಗೂ ಎಲ್ಲರಿಗೂ ಇಷ್ಟವಾಗುತ್ತವೆ .
ಈ ಕೃತಿಯ ಡಾ.ರವಿಕುಮಾರ್ ನೀಹ ರವರು ಸುಧೀರ್ಘವಾದ ಮುನ್ನುಡಿಯಲ್ಲಿ ಉಲ್ಲೇಖ ಮಾಡಿದಂತೆ ಈ ಸೂಫಿ ಕಥೆಗಳನ್ನು ಓದಿದರೆ ನಮಗೊಂದು ಹೊಳಹು ಮೂಡಿ ಒಂದು ಚಿಂತನೆ ಮೊಳಕೆಯೊಡೆಯುವುದರಲ್ಲಿ ಸಂದೇಹವಿಲ್ಲ.
ಅವರ ಮಾತಿನಲ್ಲೇ ಹೇಳುವುದಾದರೆ ..
ಬದುಕಿನ ಅನಂತ ದರ್ಶನಗಳನ್ನು ಹುಡುಕ ಹೊರಟ ಕಾರಣದಿಂದ ಇಲ್ಲಿನ ಕತೆಗಳಲ್ಲಿ ಇಡೀ ಜೀವಮಂಡಲವೇ ಪಾತ್ರವಾಗಿ ನಿಂತಿವೆ. ಅವು ಪಾತ್ರಗಳು ಎನ್ನುವುದಕ್ಕಿಂತ ಈ ಲೋಕ ತಲುಪಬೇಕಾದ ಮಾನವೀಯ ದರ್ಶನದ ಕಡೆ ಈ ಕತೆಗಳು ಬೆರಳು ತೋರುತ್ತವೆ. ಆ ಕಾರಣದಿಂದ ಈ ಸಂಕಲನದ ತುಂಬಾ ನದಿ, ಮರಳುಭೂಮಿ, ನೆಲ-ಗಾಳಿ, ಮರಳುಗಾಡಿನ ನೀರು, ನೊಣ-ಆನೆ ಸಂಭಾಷಣೆ, ಪ್ರತಿಮೆ, ನಿಧಿ, ಸಾಹುಕಾರನ ಚಿನ್ನದ ನಾಣ್ಯ, ನಡುವಯಸ್ಸಿನ ಹೆಣ್ಣು, ಹಾದಿ ತಪ್ಪಿದ ಮಗ, ರಾಜ-ದರ್ವಸಿ, ಮೂರ್ಖರಾಜ, ಮಸೀದಿ-ಚಪ್ಪಲಿ, ಕಬ್ಬಿಣದ, ದೀಪದ ಕಂಭ, ಮಾಯಾಕನ್ನಡಿ, ಮಾಯಾಭಟ್ಟಲು, ಮಾರಿ ಮುಖವಾಡ, ಮಂತ್ರದಂಡ, ವಿದ್ಯೆ-ಆಹಾರ, ಕತ್ತೆಗಳು, ನಾಯಿ, ಉಡುಪು, ಮೂತ್ರ, ಮರಜೇನು, ನೆಲದೊಳಗಿನ ಮೊರೆತ ಇರುವೆ-ಚಿನ್ನದ ನಾಣ್ಯ, ಮೀನು-ವಜ್ರ, ಮೀನುಗಾರ ರೈತ, ವ್ಯಾಪಾರಿ, ಸನ್ಯಾಸಿ, ಹಕ್ಕಿ, ಬೆಕ್ಕು, ನಾಯಿ, ಹೀಗೆ ಬಹುಪಾತ್ರಗಳು ಇಲ್ಲಿಲ್ಲ ಹರಡಿಕೊಂಡಿವೆ. ಇವೆಲ್ಲವೂ ಜನಸಾಮಾನ್ಯರ ನಡುವಿನಲ್ಲೇ ಇರುವಂಥವು. ತಮ್ಮ ಸುತ್ತಲೇ ಇರುವ ಸಂಗತಿಗಳ ಜತೆಯೇ ಬದುಕಿನ ದರ್ಶನ ಮಾಡಿಸುವುದು ಈ ಕತೆಗಳ ವೈಶಿಷ್ಟ್ಯ ಆ ಕಾರಣದಿಂದ ಕೇವಲ ತಾತ್ವಿಕತೆಗಳೆಂಬ ಕಬ್ಬಿಣದ ಕಡಲೆಗಳು ಜನರನ್ನು ತಲುಪಲು ಏದುಸಿರುಬಿಡುತ್ತಿವೆ. ಜನರ ನಡುವಿನಿಂದಲೇ ಹುಟ್ಟಿದವು ಸಹಜ ಉಸಿರಾಟದಿಂದ ಓಡಾಡಿಕೊಂಡಿರುತ್ತವೆ ಎಂಬುದನ್ನು ಈ ಕತೆಗಳು ಅಂತರ್ಯದಲ್ಲಿ ಧರಿಸಿರುವ ನೆಲೆಗಳು.
ಶಂಕರಾನಂದ ರವರು ಇಡೀ ಸೂಫಿಯನ್ನು ನಮ್ಮ ಶರಣ ಪರಂಪರೆಗೆ ಅನ್ವಯಿಸಿರುವುದು ವಿಶೇಷವಾಗಿದೆ. ಮತ್ತು ಸರಿಯಾಗಿಯೇ ಇದೆ. ಇಲ್ಲಿನ ಪ್ರತಿ ಕತೆಗಳಿಗೂ ಶರಣರ ವಚನಗಳ ಸಾಲನ್ನೇ ಶೀರ್ಷಿಕೆಯನ್ನಾಗಿ ಇಟ್ಟಿರುವುದು ಅಧ್ಯಯನಕ್ಕೆ ಹೊಸ ತೋರುಗಲ್ಲಾಗಿದೆ ಎಂದರೆ ತಪ್ಪಾಗಲಾರದು.
ಈ ಕೃತಿಯ ಎಲ್ಲಾ ಕಥೆಗಳು ನನಗೆ ಇಷ್ಟವಾದರೂ ಕೆಲವು ನನ್ನನ್ನು ಬಹಳ ಕಾಡಿದವು ಇನ್ನೂ ಕೆಲವನ್ನು ಪುನಃ ಮನನ ಮಾಡಿಕೊಳ್ಳುತ್ತಿರುವೆ.
"ಅರ್ಥದ ಮೇಲಣ ಆಶೆ " ಎಂಬ ಕಥೆಯಲ್ಲಿ
ಕುರುಡರಾದವರು ಆನೆಯ ಆಕಾರದ ಬಗೆಗಾಗಲೀ ಗಾತ್ರದ ಬಗೆಗಾಗಲಿ
ಯಾವ ಕಲ್ಪನೆಯೂ ಇರದೇ ಆನೆಯನ್ನು ಸಮೀಪಿಸಿ ಕೈಗೆ ತಾಕಿದ ಅದರ ಬೃಹತ್ ದೇಹದ ಅಂಗಾಂಗಗಳ ಮೇಲೆ ಕೈ ಆಡಿಸುತ್ತಾ ಆನೆಯ ಬಗ್ಗೆ ಮಾಹಿತಿಯ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾದ ಬಗ್ಗೆ ಹೇಳುತ್ತಾ
ತಾವು ಬಿಡಿಬಿಡಿಯಾಗಿ ಮುಟ್ಟಿದ ಅವಯವವೇ ಆನೆ ಎಂಬುದಾಗಿ ಕಲ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತೇ ಹೊರತು ಆ ಎಲ್ಲಾ ಅವಯವಗಳ ಸಮಗ್ರತೆಯಲ್ಲಿ ಮಾತ್ರವೇ ಆನೆ ಎಂಬ ಪರಿಕಲ್ಪನೆ ಇರಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅವರಿಗೆ ಸಾಧ್ಯವಿರಲಿಲ್ಲ.
ಜ್ಞಾನವನ್ನು ಅದರ ಅಖಂಡತೆಯಲ್ಲಿ ಕಂಡುಕೊಳ್ಳಲಾರದವರು. ನಾವೂ ಸಹ ಕುರುಡರಂತೆಯೇ ಅಪೂರ್ಣತೆಯನ್ನೇ ಪೂರ್ಣತೆ ಎಂಬ ಭ್ರಮೆಯಲ್ಲಿ ಬದುಕುತ್ತೇವೆ .
ನಮ್ಮ ಅಭಿಪ್ರಾಯಗಳು ಬಿಡಿಯಾಗಿ ಸರಿ,ಒಟ್ಟಾಗಿ ತಪ್ಪು ಆದರೂ ಕೆಲವೊಮ್ಮೆ ನಮ್ಮದೇ ಸರಿ ಎಂದು ವಿತಂಡವಾದ ಮಾಡುವುದನ್ನು ನಿಲ್ಲಿಸುವುದಿಲ್ಲ.
"ಅವಧಿ ಅಳಿಯಿತ್ತು" ಎಂಬ ಕಥೆಯು ಚಿಕ್ಕದಾದರೂ ಬಹುದೊಡ್ಡ ಸಂದೇಶ ನೀಡಿದೆ.
ತನ್ನೆಲ್ಲ ಸಮಸ್ಯೆಗಳು ಬಗೆಹರಿದರೆ ಮನೆಯನ್ನು ಮಾರಿ ಅದರಿಂದ ಬರುವ ಹಣವನ್ನೆಲ್ಲಾ ಬಡಬಗ್ಗರಿಗೆ ದಾನಮಾಡುವುದಾಗಿ ಹರಕೆ ಹೊತ್ತುಕೊಂಡ.
ಸ್ವಲ್ಪ ದಿನಗಳು ಕಳೆಯುವಷ್ಟರಲ್ಲಿ ಅವನ ಸಮಸ್ಯೆಗಳು ಬಗೆಹರಿದವು. ಹರಕೆಯಂತೆ
ನಡೆದುಕೊಳ್ಳಲೇಬೇಕಾದ ವೇಳೆ ಬಂದೊದಗಿತು. ಆದರೆ ಮನೆಯ ಮಾರಾಟದಿಂದ
ಬರುವ ಅಪಾರ ಹಣವನ್ನು ದಾನಮಾಡುವುದೆಂದರೆ ಹೇಗೆ ಎಂಬ ಚಿಂತೆ ಕಾಡತೊಡಗಿತು.
ಒಂದು ಉಪಾಯವನ್ನು ಹುಡುಕಿ ತೆಗೆದ. ಮನೆಗೆ ಒಂದು ಬೆಳ್ಳಿ ನಾಣ್ಯದ ದರವನ್ನು ನಿಗದಿಪಡಿಸಿದ. ಆದರೆ ಮನೆಕೊಳ್ಳುವವನು ಅದರ ಜೊತೆಗೆ ಒಂದು ಬೆಕ್ಕನ್ನು ಕೊಳ್ಳಬೇಕೆಂಬ ಷರತ್ತು ಹಾಕಿದ. ಬೆಕ್ಕಿನ ಬೆಲೆ ಹತ್ತು
ಸಾವಿರ ಬೆಳ್ಳಿ ನಾಣ್ಯಗಳೆಂದು ನಿಗದಿಪಡಿಸಿದ. ಮನೆ ಮತ್ತು ಬೆಕ್ಕು ಷರತ್ತಿನಂತೆ ಜಂಟಿಯಾಗಿ ಮಾರಾಟವಾದುವು. ಆದರೆ ಹರಕೆ ಹೊತ್ತಿದ್ದ ವ್ಯಕ್ತಿಯು ಮನೆಯ ಲೆಕ್ಕದ ಒಂದು ಬೆಳ್ಳಿ ನಾಣ್ಯವನ್ನು ಬಡವನಿಗೆ ದಾನಮಾಡಿ ಬೆಕ್ಕಿನ ಲೆಕ್ಕದ ಹತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು ತಿಜೋರಿಗೆ ತುಂಬಿಕೊಂಡ. ಹರಕೆಯೇನೋ ತೀರಿದಂತಾಯಿತು. ಆದರೆ ಸ್ವಾರ್ಥದ ದೃಷ್ಟಿಯಲ್ಲಿ ಅದನ್ನು ವ್ಯಾಖ್ಯಾನಿಸಿಕೊಂಡು ಅದರಲ್ಲಿಯೂ ಲಾಭಮಾಡಿಕೊಂಡ. ಇಂತಹ ಮನೋಭಾವನೆ ಇರುವ ಜನರು ಸಂಕಟ ಬಂದಾಗ ವೆಂಕಟರಮಣ ಎಂಬುದನ್ನೇ ಮುಂದುವರೆಸುತ್ತಾರೆ.
"ಆವುದು ಘನ, ಆವುದು ಕಿರಿದು ಹೇಳಾ?"ಎಂಬ ಶೀರ್ಷಿಕಾ ಕಥೆಯಲ್ಲಿ ಬರುವ ನೀತಿಯು ಸಾರ್ವಕಾಲಿಕ .ಯಾರು ಭಗವಂತನ ಕರುಣೆಯನ್ನು ಉಪೇಕ್ಷಿಸಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಆಸೆ ಪಡುತ್ತಾರೋ ಅಂತವರಿಗೆ ದುರ್ಗತಿ ತಪ್ಪಿದ್ದಲ್ಲ .
ಇತಿಹಾಸ ಲೇಖಕರು ಆತ್ಮೀಯರೂ ಸಂಘಟಕರೂ ಆದ ಎಂ ಎಚ್ ನಾಗಾರಾಜು ರವರು ಬೆನ್ನುಡಿಯಲ್ಲಿ ಹೇಳಿದಂತೆ ಓದುಗರ ಮನಸ್ಸನ್ನು ಸಮೃದ್ಧಗೊಳಿಸಿರುವ ಶಂಕರಾನಂದ ರವರಿಗೆ ಸಾಹಿತ್ಯದ ರಚನೆ ಮತ್ತು ಭಾಷಾಂತರದ ಕಲೆ ಸಿದ್ಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನೀರು ಕುಡಿದಷ್ಟೇ ಸುಲಭವಾಗಿ ಲೀಲಾಜಾಲವಾಗಿ ಭಾಷೆ ಬಳಸುತ್ತಾರೆ. ಮಕ್ಕಳು ಮಾತ್ರವಲ್ಲ ಎಲ್ಲಾ ವಯೋಮಾನದ ಓದುಗರಿಗೂ ಇಲ್ಲಿನ ಕಥೆಗಳು ಋಷಿ ಕೊಡುತ್ತವೆ. ಮುದಗೊಳಿಸುತ್ತವೆ. ಅವರ ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ.ಇದು ನಿಜವೂ ಹೌದು.
ಆದ್ದರಿಂದ ನೀವೂ ಸಹ ಒಮ್ಮೆ ಆವುದು ಘನ ಆವುದು ಕಿರಿದು ಹೇಳಾ? ಪುಸ್ತಕ ಓದಲೇಬೇಕು
ಪುಸ್ತಕ: ಆವುದು ಘನ ಆವುದು ಕಿರಿದು ಹೇಳಾ?
ಪ್ರಕಾಶನ: ಕಲ್ಪತರು ಪ್ರಕಾಶನ
ವರ್ಷ: 2021
ಬೆಲೆ: 165
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529.
No comments:
Post a Comment