ಆವಿಷ್ಕಾರದ ಹರಿಕಾರ
ಕೃತಿ ವಿಮರ್ಶೆ
ಅವಿ ಯೋರಿಶ್ ರವರು ಬರೆದಿರುವ
ಆವಿಷ್ಕಾರದ ಹರಿಕಾರ ಪುಸ್ತಕವನ್ನು ವಿಶ್ವೇಶ್ವರ ಭಟ್ ರವರು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದ ಮಾಡಿದ್ದಾರೆ.
ಅವಿ ಯೋರಿಶ್ ಮೂಲತಃ ಓರ್ವ ಉದ್ಯಮಿ, ಐದು ಪುಸ್ತಕಗಳ ಲೇಖಕ ಮತ್ತು ಚಿಂತಕ ಅಮೆರಿಕ ಸರ್ಕಾರದ ಹಣಕಾಸು ಮತ್ತು ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ. ಅಮೆರಿಕ ವಿದೇಶಾಂಗ ನೀತಿ ಮಂಡಳಿಯಲ್ಲಿ ಸೀನಿಯರ್ ಫೆಲೋ, ಕಳೆದ ಇಪ್ಪತ್ತು ವರ್ಷಗಳಲ್ಲಿ, ಅವಿ ಜಗತ್ತಿನಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಉಪನ್ಯಾಸ ನೀಡಿದವರು 'ದಿ ನ್ಯೂಯಾರ್ಕ್ ಟೈಮ್ಸ್,' 'ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವದ ಐವತ್ತಕ್ಕೂ ಹೆಚ್ಚು ಪ್ರಭಾವಿ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಆವಿ , ಸಿಎನ್ಎನ್, ಫಾಕ್ಸ್ ನ್ಯೂಸ್ ಸೇರಿದಂತೆ ಅನೇಕ ಪ್ರಮುಖ ಟಿವಿ ಚಾನೆಲ್ಲುಗಳ ಸಂವಾದದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಪರಿಣತರಾಗಿರುವ, ಅವಿ ಅವರ ಪ್ರಸ್ತುತ ಪುಸ್ತಕ, ವಿಶ್ವದ ನಲವತ್ತಕ್ಕೂ ಅಧಿಕ ಭಾಷೆಗಳಿಗೆ ಅನುವಾದವಾಗಿರುವುದು ಅವರ ಚಿಂತನೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಸಾರುತ್ತವೆ.
ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂಬ ಟ್ಯಾಗ್ ಲೈನ್ ನೊಂದಿಗೆ ಇರುವ ಈ ಪುಸ್ತಕ ಓದಿದಾಗ ಒಂದು ಪುಟ್ಟ ರಾಷ್ಟ್ರ ತನ್ನ ಬದ್ಧತೆ ಮತ್ತು ಛಲದಿಂದ ಹೇಗೆ ಜಗತ್ತಿನಲ್ಲಿ ತನ್ನದೇ ಹೆಸರು ಉಳಿಸಿಕೊಂಡಿದೆ ಎಂಬುದನ್ನು ಮನವರಿಕೆ ಮಾಡುತ್ತಾ ಆ ದೇಶದ ನಾಗರಿಕರ ದೇಶಭಕ್ತಿಯ ಪರಿಚಯ ಮಾಡಿಸುವುದು ಹಾಗೂ ನಮ್ಮಲ್ಲೂ ನಮ್ಮ ದೇಶದ ಬಗ್ಗೆ ಇರಬೇಕಾದ ಗೌರವ ಮತ್ತು ಭಕ್ತಿಯನ್ನು ಬಡಿದೆಬ್ಬಿಸುತ್ತದೆ.
ಅನುವಾದಕರ ಮಾತಿನಲ್ಲೇ ಹೇಳುವುದಾದರೆ ಹಸಿದ ಹೊಟ್ಟೆ ತುಂಬಿಸಲು, ಅನಾರೋಗ್ಯ ಗುಣಪಡಿಸಲು, ರಕ್ಷಣೆ ಇಲ್ಲದವರ ರಕ್ಷಿಸಲು ಹಾಗೂ ಮರುಭೂಮಿಯನ್ನು ಅರಳಿಸಲು ಇಸ್ರೇಲಿಗರು ಏನೆಲ್ಲಾ ಮಾಡುತ್ತಿದ್ದಾರೆ, ಗೊತ್ತಾ?
ಇಸ್ರೇಲ್ ಎಂಬ ಪುಟ್ಟ ದೇಶದಲ್ಲಿರುವ ಎಲ್ಲಾ ಧರ್ಮಗಳ ಸೃಜನಶೀಲ ಮಿದುಳುಗಳೂ ಹಠಕ್ಕೆ ಬಿದ್ದವರಂತೆ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು 'ಈ' ಕೃತಿ ಕಟ್ಟಿಕೊಡುತ್ತದೆ. ಜಗತ್ತನ್ನು ದುರಸ್ತಿ ಮಾಡುವ ಯಹೂದಿಗಳ 'ಟಿಕ್ಕುನ್ ಓಲಮ್' ಎಂಬ ಚಿಂತನೆಯನ್ನು ಬಳಸಿ, ದೇಶದೇಶಗಳ ಆತ್ಮವನ್ನೇ ತಟ್ಟಿ, ಪ್ರಪಂಚದ ಬಹುದೊಡ್ಡ ಸವಾಲುಗಳನ್ನು ಮುಗುಮ್ಮಾಗಿ ಪರಿಹರಿಸಲು ಇಸ್ರೇಲ್ ತನ್ನ ಗಾತ್ರಕ್ಕೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದೆ.
ಇಸ್ರೇಲ್ನಲ್ಲಿ ಪರಮಾದ್ಭುತ ಆವಿಷ್ಕಾರಿಗಳಿದ್ದಾರೆ. ಜನರನ್ನು ಉಳಿಸುವ ಹಾಗೂ ಬದುಕಿನ ಉನ್ನತ ಉದ್ದೇಶವನ್ನು ಕಂಡುಕೊಳ್ಳುವ ಸೂತ್ರಕ್ಕೆ ಅವರೆಲ್ಲ ಬಂಧಿಗಳು, ವೈಫಲ್ಯ ಹಾಗೂ ಅಡ್ಡಿ ಆತಂಕಗಳ ಮುಖಕ್ಕೆ ಹೊಡೆದಂತೆ ಈ ಸೃಜನಶೀಲ ಮನಸ್ಸುಗಳು ಅವಕಾಶ ಮತ್ತು ಧೈರ್ಯವನ್ನು ಹುಡುಹುಡುಕಿ ಬಾಚಿಕೊಳ್ಳುತ್ತವೆ. ತನ್ನ ಪಾಲಿಗಿಂತ ಹೆಚ್ಚು ಕತ್ತಲೆಯನ್ನು ಅನುಭವಿಸಿದ ದೇಶಕ್ಕೆ ಈ ಕತೆಗಳೇ ಬೆಳಕಿನ ಕಿರಣಗಳು ಉದ್ಯಮಶೀಲರು, ಸ್ಪಾರ್ಟಪ್ಗಳ ಬಗ್ಗೆ ಆಸಕ್ತಿ ಹೊಂದಿರುವವರು ಹಾಗೂ ಸೃಜನಶೀಲ ಆವಿಷ್ಕಾರಗಳ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.
ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶವೆಂದರೆ ಇಸ್ರೇಲ್, ಇವನ್ನೆಲ್ಲಾ ನೋಡಿದರೆ, 85 ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡಸದೃಶ, ಕರ್ನಾಟಕದ ಆರು ಜಿಲ್ಲೆಗಳಷ್ಟು ಚಿಕ್ಕದಾಗಿರುವ ಇಸ್ರೇಲ್ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ.
ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ-ಹೊರೆಗಳನ್ನು ಹೊಂದಿರುವ ಆವಿಷ್ಕಾರಗಳ ಹರಿಕಾರನಾಗಿದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ಗಳಿಗಿಂತ ಹೆಚ್ಚು ಸ್ಟಾರ್ಟ್ಪ್ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ ? ಅದು ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೇ ಇಂದು ಇಸ್ರೇಲ್ ಸ್ವಾವಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ. ಎಂಬುದು ನೀವು ಈ ಪುಸ್ತಕ ಓದಿ ಮುಗಿಸಿದಾಗ ನಿಮಗೆ ಅನ್ನಿಸದೇ ಇರದು.
ಒಟ್ಟು ೧೮ ಅಧ್ಯಾಯಗಳಿರುವ ಈ ಕೃತಿಯು ಈಗಾಗಲೇ ಐದು ಬಾರಿ ಮರುಮುದ್ರಣ ಕಂಡಿದೆ ಎಂಬುದು ಪುಸ್ತಕದ ಜನಪ್ರಿಯತೆ ಬಗ್ಗೆ ತಿಳಿಸುತ್ತದೆ. ಯಹೂದಿಗಳು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಬೈಕ್ ಆ್ಯಂಬುಲೆನ್ಸ್ಗಳ ಕ್ರಾಂತಿ ನಿಜವಾದ ಉಕ್ಕಿನ ಮನುಷ್ಯರು,
ಮಿದುಳಿಗೊಂದು ಜಿಪಿಎಸ್ ,ಗೋಲ್ಡನ್ ಪೈರ್ ವಾಲ್ , ಬೆನ್ನುಹುರಿಯ ಮೇಲೆ ಕಣ್ಣು,
ಮರೆಯಾದವರಿಗೆ ಮರುಜೀವ ಈ ಅಧ್ಯಾಯಗಳು ನನಗೆ ಬಹಳ ಇಷ್ಟವಾದವು .
ಪುಸ್ತಕದ ಹೆಸರು: ಆವಿಷ್ಕಾರದ ಹರಿಕಾರ.
ಅನುವಾದ : ವಿಶ್ವೇಶ್ವರ ಭಟ್
ಪ್ರಕಾಶನ: ವಿಶ್ವ ವಾಣಿ
ಬೆಲೆ : 350.
ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment