04 January 2022

ಆಗಸ್ಟ್ ಮಾಸದ ರಾಜಕೀಯ ಕಥನ


 

ಆಗಸ್ಟ್ ಮಾಸದ ನೆನಪು.
ರಾಜಕೀಯ ಕಥನ .ವಿಮರ್ಶೆ

ಭಾರತ ಆಂಗ್ಲರ ದಾಸ್ಯದಿಂದ ವಿಮೋಚನೆಯಾದ ಇತಿಹಾಸ ನಮಗೆಲ್ಲಾ ತಿಳಿದಿದೆ .ಈ ಹಿನ್ನೆಲೆಯಲ್ಲಿ ಆಗಸ್ಟ್ ಮಾಸದಲ್ಲಿ ನಡೆದ ರಾಜಕೀಯ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಂಡು ಕೆಲವು ಮಾಸದ ನೆನಪುಗಳು ಮತ್ತು ಅವುಗಳಿಗೆ ಕಾರಣವಾದ ನಾಯಕರು ಮತ್ತು  ಸನ್ನಿವೇಶಗಳನ್ನು "ಆಗಸ್ಟ್ ಮಾಸದ ರಾಜಕೀಯ ಕಥನ " ಎಂಬ ಪುಸ್ತಕದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಪಲ್ಲವಿ ಇಡೂರು ರವರು.

ಈ ಪುಸ್ತಕದಲ್ಲಿ. ಸ್ವಾತಂತ್ರ್ಯ ಸಂಘರ್ಷದ ಸಂಕೀರ್ಣ ಆರಂಭ  ದೀರ್ಘ ದಶಕದ ಅಂತ್ಯದ ಚುನಾವಣಾ ಅಖಾಡ,ಎರಡನೇ ಮಹಾಯುದ್ಧ ಮತ್ತು ಭಾರತದ ರಾಜಕೀಯ ,ಕೋಮು ರಾಜಕೀಯದ ಮುನ್ನುಡಿ,ಮುಳುಗುತ್ತಿದ್ದ ಆಂಗ್ಲ ಸಾಮ್ರಾಜ್ಯ ಉಳಿಸಲು ಪ್ರಯತ್ನ ಮಾಡಿದ ಕ್ರಿಪ್ಸ್ ಮಿಷನ್  ನ ಹೊಸ ಸೂತ್ರ,ಸಿಡಿದೆದ್ದ ಭಾರತೀಯರ ಕ್ವಿಟ್ ಇಂಡಿಯಾ ಸೇರಿದಂತೆ ನಾನಾ ಪ್ರತಿಭಟನಾ ಚಳುವಳಿಗಳು
ಅವುಗಳ ಹತ್ತಿಕ್ಕಲು ಮಾಡಿದ ಬ್ರಿಟಿಷರ  ಸಂಧಾನ ನಾಟಕಗಳು ದ್ವಿ ರಾಷ್ಟ್ರ ರಚನೆ ಅನಿವಾರ್ಯ ಎಂಬಂತಹ ಪರಿಸ್ಥಿತಿ ತಂದಿರಿಸಿದ ಸಂಘಟನೆಗಳು ಮತ್ತು ವ್ಯಕ್ತಿಗಳ ಬಗ್ಗೆ ಈ ಪುಸ್ತಕದಲ್ಲಿ ಲೇಖಕಿ ಬಹಳ ಸಮಗ್ರ ಮಾಹಿತಿಯನ್ನು ನೀಡಿರುವರು. ಭಾರತದ ಇತಿಹಾಸದ ಬಗ್ಗೆಆಸಕ್ತಿ ಇರುವವರೆಲ್ಲರೂ ಓದಲೇಬೇಕಾದ ಕೃತಿ ಇದಾಗಿದೆ.

ಸ್ವಾತಂತ್ರ್ಯ ಹೋರಾಟದ
ರಾಜಕೀಯಗಳು ಏನೇನಿದ್ದವು? ಅವು ಸಾಮಾಜಿಕವಾಗಿ ಬೀರಿದ ಪ್ರಭಾವ ಎಂತದ್ದು ಅನ್ನುವುದನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ, ವಿಮರ್ಶಾತ್ಮಕವಾಗಿ ಕಟ್ಟಿಕೊಡುವಲ್ಲಿ ಈ ಪುಸ್ತಕ ಯಶಸ್ವಿಯಾಗಿದೆ ಎನ್ನಬಹುದು. ಸ್ವಾತಂತ್ರ್ಯ ಹೋರಾಟವೆನ್ನುವುದು ರಾಜಕೀಯ ಹಾಗೂ ಸಾಮಾಜಿಕ ಆಯಾಮಗಳೆರಡನ್ನೂ ಹೊಂದಿದೆಯೆನ್ನಬಹುದು. ಸಾಮಾಜಿಕ ತಲ್ಲಣಗಳು ರಾಜಕೀಯವಾಗಿ ಬಳಸಲ್ಪಟ್ಟರೆ, ರಾಜಕೀಯ ನಿಲುವುಗಳು ಸಾಮಾಜಿಕ ಬದಲಾವಣೆಗೆ, ಕೆಲವೊಮ್ಮೆ ಅಸ್ತಿರತೆಗೂ ಕಾರಣವಾಯಿತು. ಈ ಒಂದು ರಾಜಕೀಯ ವಿಷಮಸ್ಥಿತಿಯಲ್ಲಿ ನಡೆದಂತಹ ಘಟನೆಗಳು ಮತ್ತು ಅವುಗಳು ಕಟ್ಟಿದ ಗೋಡೆಯು ಕೆಡವಿದ ಸಾಮರಸ್ಯಕ್ಕಿಂತಲೂ ಎತ್ತರದ್ದು ಎನ್ನಬಹುದು.

1920ರ ನಂತರದ ದಿನಗಳನ್ನು ನೋಡುವುದಾದರೆ, ಅನೇಕಾನೇಕ ಕೋಮು ಘರ್ಷಣೆಗಳಿಗೆ ರಾಜಕೀಯ ಸಂಗತಿಗಳು ಕಾರಣವಾಗಿವೆ. ಅಂತೆಯೇ ಚಿಕ್ಕ ಪುಟ್ಟ ವಿಚಾರಕ್ಕೂ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಪ್ರಕ್ಷುಬ್ಧವಾಗಿ, ಹತ್ಯಾಕಾಂಡಗಳು ನಡೆದು ಸಾಮಾಜಿಕ ರಾಜಕೀಯವಾಗಿಯೂ ಅಸಮತೋಲನ ಸೃಷ್ಟಿಸುತ್ತಿದ್ದ ಘಟನೆಗಳು ಬಳಸಲ್ಪಡುತ್ತಿದ್ದವೆನ್ನಬಹುದು. 1920ರ ನಂತರ ಗಾಂಧೀಜಿಯವರು ಹಿಂದೂ-ಮುಸ್ಲಿಮರ ಏಕತೆಗಾಗಿ ಅತ್ಯಂತ ತೀವ್ರವಾಗಿ ಕೆಲಸ ಮಾಡಿದ್ದರು. ಆದರೂ ನಡೆಯುತ್ತಿದ್ದ ಕೋಮು ಗಲಭೆಗಳ ಅಂಕಿ-ಅಂಶಗಳನ್ನು ನೋಡಿದರೆ ಭಾರತದೊಳಗಿದ್ದುದು ಕೇವಲ ಜನರ ನಡುವಿನ ಧಾರ್ಮಿಕ ಸಮಸ್ಯೆಗಳಷ್ಟೇ ಆಗಿರಲಿಲ್ಲ. ಬದಲಿಗೆ ರಾಜಕೀಯ ಲೇಪನವೂ ಇತ್ತೆನ್ನುವುದು ಎದ್ದು ಕಾಣಿಸುತ್ತದೆ. ಖಿಲಾಫತ್ ಚಳುವಳಿಯ ಸಂದರ್ಭದಲ್ಲಿ ಮಲಬಾರಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೋಪ್ಲಾ ದಂಗೆಯಿಂದಲೇ ಲೆಕ್ಕ ಹಾಕಿದರೂ, ಶುರುವಾಗಿದ್ದು ಬ್ರಿಟಿಷರ ವಿರುದ್ಧವಾದರೂ ಅದು ತಿರುಗಿದ್ದು ಕೋಮುಗಲಭೆಗೆ, ಈ ನೆಪದಲ್ಲಿ ಕೊಲೆ. ಬಲಾತ್ಕಾರ, ಲೂಟಿಯಂತಹ ಎಲ್ಲ ವಿನಾಶಕಾರಿ ಕೃತ್ಯಗಳು ನಡೆದು ಹೋದವು. 1921-22ರ ಸಾಲಿನಲ್ಲಿ ಪಂಜಾಬ್ ಮತ್ತು ಬಂಗಾಳದಲ್ಲಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಮೆರವಣಿಗೆ ನಡೆಯಿತೆನ್ನುವ ನೆಪದಲ್ಲಿ ಗಂಭೀರ ಸ್ವರೂಪದ ದಂಗೆಗಳಾದರೆ, 1923-24ರಲ್ಲಿ ನಾರ್ಥ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್‌ನ(ಬೈಬರ್ ಪ್ರದೇಶ) ಕೋಹತ್ ನಗರದಲ್ಲಿ ದಂಗೆಯಾಗಲು ಇಸ್ಲಾಂ ವಿರುದ್ಧದ ಒಂದು ಕವನ ಸಾಕಾಯಿತು. ಈ ದಂಗೆಯಲ್ಲಿ ಸತ್ತವರು ಸುಮಾರು 155 ಮಂದಿ, ಲೂಟಿಯಾದ ಆಸ್ತಿಪಾಸ್ತಿಗಳು ಲೆಕ್ಕಕ್ಕೆ ಸಿಗದಷ್ಟು, 1924-25ರ ಸಮಯದಲ್ಲಿ ಬ್ರಿಟಿಷ್ ಭಾರತದ ಅನೇಕ ಕಡೆ ಗಲಭೆಗಳು ಸಂಭವಿಸಿದ್ದಕ್ಕೆ ಪುರಾವೆಗಳಿವೆ. ದೆಹಲಿ, ಲಾಹೋರ್,  ಮೊರಾದಾಬಾದ್, ನಾಗಪುರ ಮುಂತಾದವುಗಳೊಂದಿಗೆ ನಿಜಾಮರ ಅಧಿಪತ್ಯದಲ್ಲಿದ್ದ ಈಗ ನಮ್ಮದೇ ರಾಜ್ಯದ ಜಿಲ್ಲೆ ಗುಲ್ಬರ್ಗದಲ್ಲಿಯೂ ಭೀಕರ ಗಲಭೆಗಳಾದವು.

ಜನಸಾಂದ್ರತೆ ಜಾಸ್ತಿಯಿರುವ ನಗರ ಪ್ರದೇಶಗಳಿಗೆ ಮೀಸಲಿದ್ದ ಹಿಂದೂ ಮುಸಲ್ಮಾನರ ನಡುವಿನ ಗಲಭೆ 1925-26ರ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೂ ವ್ಯಾಪಿಸಿತು. ಕಲ್ಕತ್ತಾ, ಯುನೈಟೆಡ್ ಪ್ರಾವಿನ್ಸ್, ಮಧ್ಯಪ್ರಾಂತ್ಯ ಮತ್ತು ಬಾಂಬೆ ಪ್ರೆಸಿಡೆನ್ಸಿ, ಬಿಹಾರ, ಗುಜರಾತ್ ಮುಂತಾದ ಕಡೆ ಹಿಂದೂಗಳು ಹಾಗೂ ಮುಸಲ್ಮಾನರ ಹಬ್ಬಗಳ ಆಚರಣೆಯ ಸಂದರ್ಭದ ಕಾರಣಗಳೇ ಅನೇಕ ಕೋಮುಗಲಭೆಗಳನ್ನು ಹುಟ್ಟು ಹಾಕಿದವು. ಅಲೀಘಡದಲ್ಲಿ ನಡೆದ ರಾಮಲೀಲಾ ಹಬ್ಬದ ಆಚರಣೆ ಯಾವ ರೂಪದ ಕೋಮುಗಲಭೆಗೆ ಕಾರಣವಾಯಿತೆಂದರೆ, ಪೊಲೀಸರು ಗೋಲಿಬಾರ್ ನಡೆಸಿ ಅದರಿಂದಲೂ, ಜನ ಸಾವಿಗೀಡಾಗುವಷ್ಟು, ಆ ವರ್ಷ ಕಲ್ಕತ್ತಾ ನಗರವೊಂದರಲ್ಲೇ ಕೋಮುಗಲಭೆಯಿಂದ ಸತ್ತವರು ಸುಮಾರು 44 ಜನ, ಗಾಯಗೊಂಡವರು 500ಕ್ಕೂ ಹೆಚ್ಚು. ಇನ್ನು 1926ರಿಂದ 1930ರ ತನಕ ನಡೆದ ಗಲಭೆ ಪ್ರಕರಣಗಳಲ್ಲಿ ಸತ್ತವರ ಸಂಖ್ಯೆ 500ಕ್ಕೂ ಅಧಿಕ ಮತ್ತು ಗಾಯಗೊಂಡವರು 4000ಕ್ಕೂ ಹೆಚ್ಚಿನ ಜನ, ಅತ್ಯಾಚಾರ, ಸುಲಿಗೆ, ಬಹಿಷ್ಕಾರ, ಊರಿಗೆ ಊರೇ ಗುಳೇ ಹೋಗುವುದು ಸರ್ವೇ ಸಾಮಾನ್ಯ ಎನ್ನುವಷ್ಟು ಪ್ರಕ್ಷುಬ್ಧ ವಾತಾವರಣ ಇನ್ನೂ ಸ್ವಾತಂತ್ರ್ಯ ಸಂಗ್ರಾಮಕ್ಕೊಂದು ಸರಿಯಾದ ರೂಪುರೇಷೆ ಸಿಗುವ ಮೊದಲೇ ನಡೆದಿತ್ತು. 1931ರಲ್ಲಿ ದುಂಡು ಮೇಜಿನ ಸಭೆಯಂತಹ ಮಹತ್ವದ ಘಟನೆ ನಡೆದು ಸ್ವಾತಂತ್ರ್ಯ ಹೋರಾಟವೆನ್ನುವುದು ರಾಜಕೀಯವಾಗಿ ಇನ್ನೊಂದು ಆಯಾಮಕ್ಕೆ ಹೊರಳಿಕೊಂಡಿತು. ಇಲ್ಲಿಂದ ಮುಂದೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಲೇ ಹೋಯಿತೆನ್ನಬಹುದು. 1931-32ರ ಸಾಲಿನಲ್ಲಿ ಕಾನ್ಸುರದಲ್ಲಿ ನಡೆದ ಗಲಭೆ ಇದಕ್ಕೆ ಸಾಕ್ಷಿಯೆನ್ನುವಂತೆ ಸುಮಾರು 500 ಜನರನ್ನು ಬಲಿಪಡೆಯಿತು. ಇಲ್ಲಿಂದ ಮುಂದೆ ಹೋಳಿ, ಈದ್, ರಾಮಲೀಲಾ ಮುಂತಾದ ಸಾರ್ವಜನಿಕ ಹಬ್ಬಗಳೆಂದರೆ ಒಂದಲ್ಲ. ಒಂದು ಕಡೆಯಲ್ಲಿ ಗಲಭೆಗಳು ಸಾಮಾನ್ಯ ಎನ್ನುವಂತಹ ಪರಿಸ್ಥಿತಿ ಉಂಟಾಯಿತು. 1939ರಲ್ಲಿ ಸಿಂದ್ ಪ್ರಾಂತ್ಯದಲ್ಲಿ ನಡೆದ ಗಲಭೆಯಲ್ಲಿ ಅನೇಕ ಊರುಗಳು, ಪಟ್ಟಣಗಳಿಗೆಲ್ಲ ಇದರ ಉರಿ ಹಬ್ಬಿ ಹಿಂದೂ ಮುಸ್ಲಿಮರೆನ್ನುವ ಬೇಧವಿಲ್ಲದೆ ಬಲಿ ಪಡೆದದ್ದು ಸುಮಾರು 200 ಜನರನ್ನು, ಇವೆಲ್ಲವೂ ದಾಖಲೆಗಳಲ್ಲಿ ನಮೂದಾದ ಪ್ರಕರಣಗಳ ಪಟ್ಟಿಯಾದರೆ, ಲೆಕ್ಕಕ್ಕೇ ಸಿಗದ ಘಟನೆಗಳು ಇನ್ನೆಷ್ಟೋ.

ಇನ್ನು 1940ರ ನಂತರ ಸ್ವಾತಂತ್ರ್ಯದ ತನಕದ ಕೋಮುಗಲಭೆಗಳು ಮಾಡಿದ ಹಾನಿ ಇದಕ್ಕಿಂತಲೂ ಭೀಕರ, ಜಿನ್ನಾರ ಒಂದು ಕರೆ, 1946ರಲ್ಲಿ ಕಲ್ಕತ್ತಾ, ಪೂರ್ವ ಬಂಗಾಳ, ನೋಕಾಲಿ ಪ್ರದೇಶವನ್ನು ಅಕ್ಷರಶಃ ಸಾವಿನ ಮನೆಯಾಗಿಸಿತು. ಅಲ್ಲಿಯ ತನಕ ವರ್ಷದಲ್ಲಿ ಲೆಕ್ಕಕ್ಕೆ ಸಿಕ್ಕ ಮತ್ತು ಸಿಗದಿರುವ ಒಟ್ಟು ಪ್ರಕರಣಗಳು ಸಾವಿರದ ಆಸುಪಾಸಿನಲ್ಲಿದ್ದರೆ, ಇದೊಂದೇ ಘಟನೆ ಬಲಿಪಡೆದಿದ್ದು 6000ಕ್ಕೂ ಅಧಿಕ ಜನರನ್ನು ಇಲ್ಲಿ ಯಾವ ಸಾವಿಗೂ ಧರ್ಮವಿರಲಿಲ್ಲ. ಹಿಂದೂ ಮುಸ್ಲಿಮರೆನ್ನದೆ ಕಂಡ ಕಂಡವರು ಬೀದಿ ಹೆಣವಾಗಿದ್ದಂತಹ ದಾರುಣ ಘಟನೆಗಳಾಗಿದ್ದವು. ಇದೇ ಗಲಭೆ ಬಿಹಾರಕ್ಕೂ ಹಬ್ಬಿ ಗಾಂಧೀಜಿಯವರು ಅಲ್ಲೇ ಬೀಡು ಬಿಟ್ಟು ಗಲಭೆ ನಿಯಂತ್ರಿಸಲು ಪಟ್ಟಪಾಡು ಅಷ್ಟಿಷ್ಟಲ್ಲ.

ಕೆಲ ಸಂಘಟನೆಗಳು ಮತ್ತು ವ್ಯಕ್ತಿಗಳು ದೇಶದ ಹಿತಕ್ಕಾಗಿ ಯೋಚಿಸದೇ ತಮ್ಮ ಸ್ವಾರ್ಥ ಸಾಧನೆಗೆ ಮಹತ್ವ ನೀಡಿದ್ದು ನಮಗೆ ಸ್ವತಂತ್ರ ನಿಧಾನವಾಗಿ ಲಭಿಸಿತು ಎಂಬುದು ಅರಗಿಸಿಕೊಳ್ಳಲಾಗದ ಸತ್ಯ.
ಮೇಲಿನ ಎಲ್ಲಾ ಘಟನೆಗಳನ್ನು ಪತ್ಯಕ್ಷ ಮತ್ತು ಪರೋಕ್ಷವಾಗಿ ಸಾಕ್ಷಿಯಾಗಿದ್ದ ಆಂಗ್ಲರು ಭಾರತವನ್ನು ವಿಭಜನೆ ಮಾಡಿ ಸ್ವಾತಂತ್ರ್ಯ ನೀಡುವುದು ಎಂಬ ತೀರ್ಮಾನಕ್ಕೆ ಬಂದುದು  ವಿಶೇಷವೇನಲ್ಲ ಎನ್ನಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: