29 January 2022

ಉದಕದೊಳಗಿನ ಕಿಚ್ಚು ಭಾಗ . ೧೬




ಜೀತ ಮುಕ್ತ 

"ಏನ್ ರಂಗಮ್ಮ ಇಷ್ಟು ದೂರ ಬಂದ್ ಬಿಟ್ಟೆ ಹೇಳ್ಕಳಿಸಿದ್ದರೆ ನಾನೆ ಬರ್ತಿದ್ದೆ ನಿಮ್ಮ ಮನೆ ಹತ್ರ" ಸಿಟ್ಟು  ಅಸಹನೆ ಮತ್ತು ವ್ಯಂಗ್ಯಭರಿತವಾಗಿ ಮುಕುಂದಯ್ಯ ಮಾತನಾಡಿದಾಗ
" ಏ ಬಿಡ್ತು ಅನ್ ಸ್ವಾಮಿ ಅದ್ಯಾಕೆ ಅಂಗ್ ಮಾತಾಡ್ತಿರಾ? ನೀವು ನಮ್ ಗೌಡ್ರು ನಾವು ನಿಮ್ಮ ಮನೆತಾಕ ಬರಬೇಕೆ ವಿನಾ ನಮ್ಮಂತ ಕೀಳು ಜನದ್ ಮನೆಗೆ ನೀವು ಬರಬಾರದು". ಅಂದರು ರಂಗಮ್ಮ
" ಇಲ್ಲ ರಂಗಮ್ಮ ನಿಮ್ಗೆ ದೊಡ್ ದೊಡ್ ಜನ ಗೊತ್ತು ನಾವು ಈ ಹಳ್ಳಿ ಚಿಕ್ಕ ಜನ ಕಣವ್ವ,ನಿಮಿಗೆ ಹಿರಿಯೂರು, ಡೆಲ್ಲಿ,ಜನ ಗೊತ್ತು ನಮಗ್ಯಾರು ಗೊತ್ತು " ಮುಕುಂದಯ್ಯ ಮಾತು ಮುಂದುವರೆಸಿದರು .
ರಂಗಮ್ಮನಿಗೆ ಈಗ ಎಲ್ಲಾ ಅರ್ಥವಾಗಿತ್ತು.

ಅಂದು ಒತ್ತಾರೆ ಹಟ್ಟಿಯಲ್ಲಿ  ಊಟ ಮಾಡಿ ಅವರವರ ಪಾಡಿಗೆ ಮೇಲ್ವರ್ಗದ ಜನರ ಹೊಲಗಳಿಗೆ ಕೆಲಸಕ್ಕೆ ಹೊರಡುವ ವೇಳೆಗೆ ಮೂರ್ನಾಲ್ಕು ಜನ ಪ್ಯಾಂಟ್, ಶರ್ಟ್ದಾರಿಗಳು ಹಟ್ಟಿಗೆ ಬಂದರು. ಎಲ್ಲರೂ ಅವರನ್ನೇ ನೋಡುತ್ತಿದ್ದಂತೆ ಪಾತಲಿಂಗಪ್ಪನ ಹತ್ತಿರ ಬಂದು ಪರಿಚಯ ಮಾಡಿಕೊಂಡರು ನಾವು ಭೀಮಸೇನೆ ಕಡೆಯಿಂದ ಬಂದಿದ್ದೇವೆ .ನಮ್ಮದು ಹಿರಿಯೂರು .ನಾವು ಬಂದ ಉದ್ದೇಶ ನಿಮ್ಮ ಹಟ್ಟಿನಲ್ಲಿ  ಮತ್ತು ನಿಮ್ಮ ಊರಲ್ಲಿ ನಮ್ಮ ಜನಕ್ಕೆ ಏನಾದರೂ ತೊಂದರೆ ಇದೆಯಾ ಅಂತ ಕೇಳೋಕೆ ಬಂದಿದೀವಿ .
ಅಂದರೆ ಜೀತ ,ಯಾರ ಮನೇಲಾದ್ರು ಸಂಬಳಕ್ಕೆ ಇರೋದು ,ನಿಮಗೆ ಬಾವಿ ನೀರು ಕೊಡದೆ ಇರೋದು ಇತ್ಯಾದಿ....
" ಅಂತದ್ದೇನೂ ಇಲ್ಲ ನಮ್ ಹಟ್ಟಿ ಹುಡುಗ್ರು ಒಂದು ಐದಾರು ಗೌಡರ ಮನೇಲಿ ಸಂಬಳಕ್ಕೆ ಅದವೆ ಅಷ್ಟೇ " ಬಾಯಿ ಬಿಟ್ಟ ಪಾತಲಿಂಗಪ್ಪ.
ಯಾರ ಮನೆಯಲ್ಲಿ ಯಾರು ಜೀತಕ್ಕೆ ಇದ್ದಾರೆ ? ಅವರ ವಿಳಾಸ ಪಡೆದು ಕೊಳ್ಳುವ ವೇಳೆಗೆ ಹಟ್ಟಿ ಜನ ಕುತೂಹಲದಿಂದ ಗುಂಪುಗೂಡಿದರು ಆಗ ಕೆಂಪು ಅಂಗಿ ಧರಿಸಿದ ಕಪ್ಪನೆಯ ದಪ್ಪನೆಯ ವ್ಯಕ್ತಿ ಮಾತನಾಡಲು ಶುರು ಮಾಡಿದರು .
"ನೋಡಿ ಬಂಧುಗಳೆ ಜೀತಪದ್ದತಿ ಅಮಾನವೀಯ ಪದ್ದತಿ ಇದನ್ನು ಕೇಂದ್ರ ಸರ್ಕಾರ  ೧೯೭೬  ನೇ ಇಸವಿಯಲ್ಲಿ ನಿಷೇಧ ಮಾಡಿ ಕಾನೂನು ಮಾಡಿದೆ .ಯಾರಾದರೂ ನಮ್ಮ ಜನಾನಾ ಜೀತಕ್ಕೆ ಇಟ್ಟುಕೊಂಡರೆ ಅವರಿಗೆ ಭಾರತೀಯ ದಂಡಸಂಹಿತೆ
೩೭೦ ರ  ಪ್ರಕಾರ ಶಿಕ್ಷೆ ಆಗುತ್ತದೆ. ಅವರನ್ನು ಜೈಲಿಗೆ ಕಳಿಸಬಹುದು."
ಜೈಲು ಅಂದ ತಕ್ಷಣ ಮೂರ್ನಾಕು ಜನ ಗುಂಪಿನಿಂದ  ಮೆಲ್ಲಗೆ ನಡೆದು ಹೊರಟರು .
"ಜೀತಕ್ಕಿಟ್ಟುಕೊಂಡ ವ್ಯಕ್ತಿಗೆ ಗರಿಷ್ಠ ಮೂರುವರ್ಷ ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಬಹುದು. ನೀವು ಈ ವಿಷಯ ತಿಳಿದು ಯಾರನ್ನು ಜೀತಕ್ಕೆ ಇಡಬಾರದು" .
ಹೀಗೆ ಆ ವ್ಯಕ್ತಿ ಮಾತು ಮುಗಿಸುವ ವೇಳೆಗೆ ಅವರ ಮುಂದೆ ಇದ್ದವನು ಪಾತಲಿಂಗಪ್ಪ ಮಾತ್ರ.
ಜೀತಕ್ಕೆ ಇಟ್ಟುಕೊಂಡು ಎಲ್ಲಾ ಮನೆಗೆ ಭೇಟಿ ನೀಡಿದಂತೆ ಮುಕುಂದಯ್ಯ ರವರ ಮನೆಗೂ ಆ ತಂಡ ಭೇಟಿ ನೀಡಿತು
" ಏನ್ ಸಾರ್ ನಮ್ಮ ಹುಡುಗುನ್ನ ಜೀತಕ್ಕೆ  ಇಟ್ಟುಕೊಂಡಿದ್ದೀರಂತೆ ಇದು ಕಾನೂನು ಪ್ರಕಾರ ತಪ್ಪು ಅಲ್ವ ?" ಕೇಳಿದ ಹಿರಿಯೂರು ವ್ಯಕ್ತಿ.
" ನಾನೂ  ಎಸ್ಸೆಲ್ಸಿ ಓದಿದಿನಿ .ನನಗೂ ಕಾನೂನು ಗೊತ್ತು ಈಗ ಏನ್ ಆಗ್ಬೇಕು ಹೇಳ್ರಿ?"
"ಅದೇ ನಮ್ಮ ಗುರುಸಿದ್ದನ ಜೀತ ಮುಕ್ತ ಮಾಡಿ".
"ನೋಡಿ ನಮಗೇನು  ಅವನು ನಮ್ಮ ಮನೇಲಿ ಕೆಲಸ ಮಾಡ್ಲಿ ಅಂತ ಆಸೆ ಇಲ್ಲ. ಅವರಮ್ಮ ನಮ್ಮ ಹತ್ರ ಹದಿನೈದು ಸಾವ್ರ ದುಡ್ ಇಸ್ಕಂಡವ್ರೆ ಅದನ್ನು ಕೊಟ್ಟು ಅವನ್ ಕರ್ಕೊಂಡೋದರೆ ನಂದೇನು ತಕರಾರಿಲ್ಲ ,ಅವನ ಪರವಾಗಿ ಬಂದಿರೂ   ನಿಮ್ಮಲ್ಲೆ ಯಾರಾದ್ರೂ ಕೊಟ್ಟರೂ ಒಕೆ " ಅನ್ನುತ್ತಿದ್ದಂತೆ ಅವರವರೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ,
" ಸರಿ ಸರ್ ಅದಷ್ಟು ಬೇಗ ಅವನನ್ನು ಜೀತ ಮುಕ್ತ ಮಾಡಿ' ಎಂದು ಹೊರಟು ಹೋದರು .

ಅಂದಿನಿಂದ ಮುಕುಂದಯ್ಯ ಕುದಿಯುತ್ತಿದ್ದರು ಇಂದು  ರಂಗಮ್ಮ ಬಂದಾಗ ಸ್ವಲ್ಪ ಖಾರವಾಗೇ ಮಾತನಾಡಿದರು.

" ಸಅ್ವಾಮಿಂದರು... ಅವರಿಗೆ ನಾವೇನೂ ಹೇಳ್ಲಿಲ್ಲ ಆ ಪಾತಲಿಂಗನೆ ಹೇಳಿದ್ದು ಇದರಲ್ಲಿ ನಂದೇನು ತಪ್ಪಿಲ್ಲ ಗೌಡ, "

ಆತು ಆ ಪಾತಲಿಂಗ, ಮತ್ತು ಹಿರಿಯೂರು ಜನದತ್ರ ದುಡ್ ತಂದು ನಿನ್ ಮಗನ್ನ ಕರ್ಕೊಂಡು ಹೋಗವ್ವ ನಿಮ್ ಸಹವಾಸ ಸಾಕು ಬಡ್ಡಿ ಬ್ಯಾಡ ಬರಿ ಅಸಲು ಸಾಕು.
ನಿನ್ ಮಗ ಒಳ್ಳೆ ನರಪೇತಲ ನಾರಾಯಣ ಇದ್ದಂಗೈದಾನೆ ಅವ್ನು ಕೆಲ್ಸ ಮಾಡೋದು ಆಟ್ರಾಗೆ ಐತೆ ,ಯಾವಾಗಲೂ ಕೆಮ್ತಿರ್ತಾನೆ ಕರ್ಕೊಂಡು ಹೋಗು ನಿನ್ ಮಗನ್ನ" ರೇಗಿದರು ಮುಕುಂದಯ್ಯ.

"ನಾನ್ ಏನ್ ತಪ್ ಮಾಡ್ದೆ ಅಂತ ನನ್ ಮ್ಯಾಲೆ ರೇಗ್ತಿಯಾ ಗೌಡ "ಎಂದು ಕಣ್ಣಲ್ಲಿ ನೀರು ಹಾಕುತ್ತಾ ಅವನ್ ಕೆಮ್ಮು ಜಾಸ್ತಿ ಆಗೈತೆ ಒಂದ್ ತಿಂಗಳಿಂದ ಗೊರ ಗೊರ ಒಳ್ಳೆ ದನ ಕೆಮ್ಮಿದಂಗೆ ಕೆಮ್ತಾನೆ ,ಅವನ್ ಆಸ್ಪತ್ರೆಗೆ ತೋರ್ಸಿ ಗೌಡ"
"ಅವರ್ಯಾರೋ ಬಂದಿದ್ರಲ್ಲ ಅವರ ಜೊತಿಗ್ ಆಸ್ಪತ್ರೆಗೆ ಕಳಸ್ಬೇಕಾಗಿತ್ತು" ಮತ್ತೆ ಕುಟುಕಿದರು ಮುಕುಂದಯ್ಯ.
"ಸಾಕ್ ಬಿಡೋ ಮುಕುಂದ ಅವಳ್ಗೇನೂ ಗೊತ್ತಿಲ್ಲ ಅಂದ್ಳಲ್ಲ ಬಿಡು ,ನಾನು ನೋಡಿದಿನಿ ಆ ಹುಡುಗ ದಿನಾ ಕೆಮ್ಮುತ್ತೆ ಪಾಪ ....ನಾಳೆ  ಅವುನ್ನ ಆಸ್ಪತ್ರೆಗೆ ತೋರ್ಸು ಅಷ್ಟೇ" ಆದೇಶ ಮಾಡಿದರು ಸರಸ್ವತಜ್ಜಿ.
ಮುಕುಂದಯ್ಯ ಮಾತನಾಡದೆ ಸುಮ್ಮನಾದರು ರಂಗಮ್ಮ ಕಣ್ಣಲ್ಲಿ ನೀರು ಹಾಕತ್ತ ಎದ್ದು ಹೊರಡಲು ಸಿದ್ದವಾಗುವಾಗ
"ಏ ರಂಗವ್ವ ತಟ್ಟೆ ತಗಾ ಅರ್ದಾಂಬ್ರ ಮುದ್ದೆ ಉಂಡೋಗು" ಅಂದರು ಯಜಮನಿ .
ತಟ್ಟೆಗೆ ಹುಡುಕಾಡಿದಳು ಈ ಹುಡ್ಗ ಅದೆಲ್ಲಿ ಇಕ್ಕೆದಾನೋ ತಟ್ಟೆನ,ಹಾ.. ಚೆಂಬು ಸಿಕ್ತು ಎಂದು ಮನದಲ್ಲೇ ಅಂದುಕೊಂಡು ಕೈತೊಳೆದುಕೊಂಡು ಊಟಕ್ಕೆ ಕುಂತರು ರಂಗಮ್ಮ
"ಅಂಗೆ ಕೈಯಾಕೆ ಕೊಡಮ್ಮ ಮುದ್ದೆನಾ"
"ಅಂಗೆ ಎಂಗ್ ಉಂಬ್ತಿಯ " ಕೇಳಿದರು ತಿಮ್ಮಕ್ಕ .
" ನೀನು ಕೊಡಮ್ಮ ಎಂದಾಗ ಮೇಲಿಂದ ತಿಮ್ಮಕ್ಕ ಮುದ್ದೆಯನ್ನು ಹಾಕಿದರು ,ರಂಗಮ್ಮ ಆ ಮುದ್ದೆಯ ಮೇಲೆ ಚಿಕ್ಕ ಗುಂಡಿ ಮಾಡಿಕೊಂಡು "ಹುಂ ...ಇದರಾಕೆ ಸಾರು ಹಾಕವ್ವ" ಎಂದಾಗ ಸ್ವಲ್ಪ ಸ್ವಲ್ಪ ಸಾರು ಹಾಕಿಸಿಕೊಂಡು ಮುದ್ದೆ ಸಾರು ತಿನ್ನಲು ಪ್ರಯತ್ನ ಪಟ್ಟರೂ ಮುದ್ದೆ ಹೊಟ್ಟೆಗೆ ಇಳಿಯಲು ಬಹು ಕಾಲ ಬೇಕಾಯಿತು.
****************************
ನೀನು ಸ್ವಲ್ಪ ಹೊತ್ತು ಹೊರಗೆ ಇರಪ್ಪ ಅಮೇಲೆ ಕರೀತೆನೆ ಎಂದು ಗುರುಸಿದ್ದನಿಗೆ ಹೇಳಿ
" ನೋಡಿ ಇವ್ರೆ ಈ ಹುಡುಗನ ಕಫ ಪರೀಕ್ಷೆ ಮಾಡಿದಾಗ ಇವನಿಗೆ ಟಿ. ಬಿ. ಅಂದರೆ ಟುಬಾರ್ಕುಲಾಸಿಸ್ ಕಾಯಿಲೆ ಇದೆ ಇದಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಟ್ಟರೆ ಜೀವಕ್ಕೆ ಅಪಯವಿಲ್ಲ .ಒಳ್ಳೆ ಪೌಷ್ಟಿಕಾಹಾರ ತಿಂದರೆ ಬೇಗ ಗುಣಮುಖ ಆಗಬಹುದು " ಡಾ. ಹರೀಶ್ ರವರು ಹೇಳುತ್ತಲೆ ಇದ್ದರು
" ಎಷ್ಟು ದಿನಕ್ಕೆ ಇದು ವಾಸಿಯಾಗುತ್ತೆ ಡಾಕ್ಟರ್ ? " ಪ್ರಶ್ನೆ ಮಾಡಿದರು ಮುಕುಂದಯ್ಯ.
" ನೋಡಿ ನೀವು ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದಿದೀರಾ ಈಗ ಟ್ರೀಟ್ಮೆಂಟ್ ಶುರು ಮಾಡಿದರೆ ಮೊದಲನೇ ಕೋರ್ಸ್ ಮುಗಿಯೋದಕ್ಕೆ ೬ ರಿಂದ ೯ ತಿಂಗಳು ಆಗಬಹುದು .
ಬೇಗ ವಾಸಿಯಾಗಲಿಲ್ಲ ಅಂದರೆ ೧೮ ತಿಂಗಳ ತನಕ ಆಗಬಹುದು.ಕೆಲವೊಮ್ಮೆ ೨೪ ರಿಂದ ೨೭ ತಿಂಗಳಾದರೂ ಆಗಬಹುದು ಗುಣ ಅಗೋದಕ್ಕೆ.
" ಎಲ್ಲಾ ಎಷ್ಟು ಖರ್ಚಾಗುತ್ತದೆ ಡಾಕ್ಟರ್? "
"ಮಾತ್ರೆಗಳು ಸರ್ಕಾರದಿಂದ ಉಚಿತ ಚಿಕಿತ್ಸೆ ಉಚಿತ ಇದಕ್ಕೇನೂ ಖರ್ಚಾಗಲ್ಲ ಸರಿಯಾಗಿ ಮಾತ್ರೆ ನುಂಗಬೇಕು ನಾವ್ ಹೇಳಿದ್ದು ಮಾಡಬೇಕು ಅಷ್ಟೇ"
" ಇವನಿಂದ ಈ ಕಾಯಿಲೆ ಬೇರೆಯವರಿಗೆ ಹರಡುತ್ತಾ ಡಾಕ್ಟರ್ "
"ಇವನು ಕೆಮ್ಮುವಾಗ ಅಡ್ಡ ಬಟ್ಟೆ ಇಟ್ಟುಕೊಂಡರೆ, ತೊಂದರೆ ಇಲ್ಲ ಇಲ್ಲವಾದರೆ ಬೇರೆಯವರಿಗೆ ಹರಡಬಹುದು. ಬೇರೆ ಬಟ್ಟೆ , ಬೇರೆ ತಟ್ಟೆ ಲೋಟ ಬಳಸಿದರೆ ಒಳಿತು. ಹಾಗಾದರೆ ಟ್ರೀಟ್ಮೆಂಟ್ ಕೋರ್ಸ ಶುರು ಮಾಡಲೆ? ಎಂದು ಕೇಳಿದರು ಡಾಕ್ಟರ್ .
"ಆಗಲಿ ಮಾಡಿ ಡಾಕ್ಟರ್" ಎಂದರು ಮುಕುಂದಯ್ಯ.
ಒಂದು ಇಂಜೆಕ್ಷನ್ ಮಾಡಿ ಒಂದು ತಿಂಗಳಿಗಾಗುವಷ್ಟು ಎರಡು ಮೂರು ಬಣ್ಣದ  ರಾಶಿ ಮಾತ್ರೆ ಕೊಟ್ಟರು .ಡಾಕ್ಟರ್ ಗೆ ಮುಕುಂದಯ್ಯ ಹತ್ತು ರೂ ಕೊಡಲು ಮುಂದಾದರು "ಯಾಕೆ ದುಡ್ ಕೊಡ್ತೀರಾ? ಇದು ಸರ್ಕಾರಿ ಆಸ್ಪತ್ರೆ ನನಗೆ ಸರ್ಕಾರ ಸಂಬಳ ಕೊಡುತ್ತೆ ಬೇಡ ನಡಿರಿ ಆ ಹುಡುಗನಿಗೆ ಬ್ರೆಡ್ ಅಥವಾ ಬಿಸ್ಕತ್ತು ಕೊಡಿಸಿ" ಎಂದು ಬೇರೆ ರೋಗಿಗಳ ತಪಾಸಣೆ ಮಾಡಲು ಡಾ.ಹರೀಶ್ ಹೊರಟರು.
ಇಂತಹ ಡಾಕ್ಟರ್ ಇರ್ತಾರಾ ಎಂದು ಮುಕುಂದಯ್ಯ ಮನದಲ್ಲೇ ಅವರಿಗೆ ವಂದಿಸಿ ಆಸ್ಪತ್ರೆಯಿಂದ ಮನೆಗೆ ಬರುವವರೆಗೆ ಏನೋನೋ ಯೋಜನೆ ಯೋಚನೆ ಹಾಕುತ್ತಿದ್ದು. ಗುರುಸಿದ್ದನಿಗೆ ಈಗ ಈ ಕಾಯಿಲೆ ಬಂದಿದೆ ಇವನು ನಮ್ಮನೇಲಿ ಇದ್ದರೆ ನಮಗೆ ರೋಗ ಬಂದರೆ? ಇವನು ಕೆಲಸ ಮಾಡೋದು ಅಷ್ಟಕ್ಕಷ್ಟೆ ಸುಮ್ಮನೆ ಅವರಮ್ಮನ ಬಳಿ ದುಡ್ ಇಸ್ಕಂಡು ಇವನ ಕಳಿಸಿಬಿಡೋಣ ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ .

ಬೆಳಿಗ್ಗೆ  ಒಂಭತ್ತು ಗಂಟೆಗೆ ಹೋದವರು ಮಟ ಮಟ ಮಧ್ಯಾಹ್ನ  ಹೊತ್ತಾದರೂ  ಬರಲಿಲ್ಲ ಎಂದು ರಂಗಮ್ಮ ದೊಡ್ಡಪ್ಪಗಳ ಮನೆಯ ಚಪ್ಪರದ ಕೆಳಗೆ  ಗೂನು ಬೆನ್ನು ಹೊತ್ತು ಅತ್ತಿಂದಿತ್ತ ಓಡಾಡುತ್ತಿದ್ದರು.
" ಏ ಕುತ್ಕ ಬಾರೆ ರಂಗವ್ವ ಅದ್ಯಾಕಂಗೆ ಯೋಚ್ನೆ ಮಾಡ್ತಿಯಾ ? ಏನ್ ನಿನ್ ಮಗ ಒಬ್ನೆ ಹೋಗೆದಾನಾ? ಮುಕುಂದ ಹೋಗಿಲ್ವ?  ಅಲ್ಲೇನು ರಷ್ ಇತ್ತೇನೊ ಡಾಕ್ಟರ್ ಸಿಕ್ಕಿದರೊ ಇಲ್ವೋ ಬಾ ಕುತ್ಕ."  ಎಂದು ಸರಸ್ವತಜ್ಜಿ ಗದರಿದರು.

ಮಗನನ್ನು ಕನ್ನಡಕದಲ್ಲೆ ದೂರದಿಂದ ಗುರ್ತಿಸಿದ ಹೆತ್ತ ಕರುಳು ಸ್ವಲ್ಪ ಸಮಾಧಾನಗೊಂಡಿತು ಹತ್ತಿರ ಬರುತ್ತಲೆ ಏನಂತೆ ಗೌಡ? ಡಾಕ್ಟರು ಏನ್ ಅಂದ್ರು ?ಮಗನ ಮೈದಡವುತ್ತಾ ಕೇಳಿದಳು ರಂಗಮ್ಮ
"ಇವನಿಗೆ ಟಿ ಬಿ ಅಂತೆ ಕಣಮ್ಮ " ಅಂದ ತಕ್ಷಣವೇ ರಂಗಮ್ಮ ಜೋರಾಗಿ   ಅಳಲು ಶುರುಮಾಡಿದರು. "ಮೊನ್ನೆ ಹರ್ತಿಕೋಟ್ಯಾಗೆ ನಮ್ಮೋರು ಒಬ್ಬರು ಟಿ ಬಿ ಬಂದು ಸತ್ರು ನನ್ ಮಗ ಉಳಿಯಲ್ಲ ಅಯ್ಯೋ ದೇವ್ರೆ ಅವ್ರುನ್ನೂ ಕಿತ್ಗೊಂಡೆ .ಈಗ ಇವನು? ನಾನೇ ಮೊದ್ಲು ಹೋಗ್ಬೇಕಾಗಿತ್ತು ಇದನ್ನೆಲ್ಲಾ ನೊಡಕೆ ಉಳಿಸಿದ್ಯೇನಪ್ಪ ಶಿವ" ಎಂದು ಎದೆ ಬಡಿದುಕೊಂಡು ಅಳಲಾರಂಭಿಸಿದರು. ಅಮ್ಮ ಅಳುವುದ ಕಂಡು ಕೆಮ್ಮುತ್ತಲೆ ಅಳಲಾರಂಬಿಸಿದ ಗುರುಸಿದ್ದ ಇಡಿ ವಾತಾವರಣ ದುಃಖದಿಂದ ಕೂಡಿತ್ತು.

"ಯೋ ರಂಗವ್ವ ಸಾಕು ನಿಲ್ಸು ಅಳೋದನ್ನ
ಡಾಕ್ಟರ್ ಹೇಳಿದಾರೆ ಸರಿಯಾಗಿ ಮಾತ್ರೆ ತಗಂಡರೆ ಏನೂ ತೊಂದ್ರೆ ಇಲ್ವಂತೆ ತಕ ಈ ಮಾತ್ರೆ ಒಂದು ತಿಂಗಳಿಗೆ ಆಗುತ್ತೆ, ಎಂದು ಮಾತ್ರೆ ರಂಗಮ್ಮನ ಕೈಗೆ ಕೊಟ್ಟು
" ನೋಡು ರಂಗಮ್ಮ ನಿಮ್ ಕಡೇರು ಹಿರಿಯೂರುನಿಂದ ಬಂದು ಇವನ್ನ ಜೀತ ಬಿಡಿಸಿ ಅಂದರು ಅದೇ ಟೈಮ್ಗೆ ಇವನಿಗೆ ಆರೋಗ್ಯ ಬ್ಯಾರೆ ಸರಿ ಇಲ್ಲ .ಇಲ್ಲಿ ಇನ್ನೇನ್ ಕೆಲ್ಸ ಮಾಡ್ತಾನೆ  ?ನಿನ್ ಮಗನ್ನ ನಿನ್ ಮನೆಗೆ ಕರ್ಕೊಂಡು ಹೋಗು. ಮುಂದಿನ ವಾರ ನಮ್ ದುಡ್ಡು ತಂದು ಕೊಡು "
ಮತ್ತೆ ಅಳುತ್ತಾ " ಎಲೈತೆ ಸಾಮಿ ದುಡ್ಡು "
" ನಿಮ್ ದರಖಾಸ್ತ್ ಜಮೀನು ನಾಕುಎಕರೆ ಸರ್ಕಾರದವರು ಕೊಟ್ಟ ಜಮೀನು ಮಾರು ಓದೋ ರಂಗಸ್ವಾಮಿ ಕೇಳ್ತಿದ್ದ ನೋಡು "
ಎಂದಾಗ ರಂಗಮ್ಮ ಮಗನ ಆರೋಗ್ಯಕ್ಕಿಂತ ನನಗೆ ಜಮೀನು ಮುಖ್ಯ ಅಲ್ಲ ಜಮೀನು ಮಾರುವೆ ಎಂದು ನಿಶ್ಚಯ ಮಾಡಿಕೊಂಡು ಮಾತ್ರೆ ತೆಗೆದುಕೊಂಡು ಮಗನ ಕರೆದುಕೊಂಡು ಹೊರಟಳು .
ಇದನ್ನು ಕೇಳಿಸಿಕೊಂಡ ಗುರುಸಿದ್ದ ಜೀತಮುಕ್ತನಾಗುತ್ತಿರುವುದಕ್ಕೆ  ಮನದಲ್ಲೇ ಸ್ವಲ್ಪ ಸಂತಸವಾದರೂ ಇದ್ಯಾವುದೋ ಟಿ ಬಿ ಕಾಯಿಲೆ ನನಗೆ ಬರಬೇಕೆ ಎಂಬ   ದುಃಖ ಆವರಿಸಿತು.
ಗುರುಸಿದ್ದ ಕಡೆಯ ಬಾರಿ ಎಂಬಂತೆ ದೊಡ್ಡಪ್ಪಗಳ ಮನೆ, ದನದ ಅಕ್ಕೆ, ಕಲ್ಲಿನ ಬಾನಿ,ಸಪ್ಪೆ ಕತ್ತರಿಸೋ ಕತ್ತರಿ ,ದನದ ಕಣ್ಣಿಗಳು,ಇಂಡಿ ಚೀಲ, ತೆಂಗಿನ ಗರಿ ಪೊರಕೆ, ಈಚಲ ತೊಟ್ಟಿ, ಗೋಣಿಚೀಲ ,ಇವುಗಳನ್ನು ಮತ್ತೊಮ್ಮೆ ನೋಡಿ ಅಮ್ಮನ ಜೊತೆ ಹೆಜ್ಜೆ ಹಾಕಿದ .

ರಾತ್ರಿ ಮಗನಿಗೆ ಮಾತ್ರೆ ನುಂಗಿಸಿ ಅಂಗಳದಲ್ಲಿ ಮಲಗಿ ನಕ್ಷತ್ರಗಳ ನೋಡುತ್ತಾ ರಂಗಮ್ಮನ ಮನದಲ್ಲಿ ಪ್ರಶ್ನೆಗಳು ಏಳುತ್ತಿದ್ದವು. ದೇವರು ನನ್ನ ಮಗನಿಗೆ ಜೀತ ಮುಕ್ತಿ ಮಾಡಲು ಈ ಕಾಯಿಲೆ ಕೊಟ್ಟನೆ ? ಅಥವಾ ನಮಗಿರುವ  ನಾಕೆಕರೆ ಜಮೀನು ನಮ್ಮಿಂದ ಮುಕ್ತಿ ಮಾಡಲು ಈ ರೋಗ ಕೊಟ್ಟನೆ ? ಉತ್ತರ ಹೊಳೆಯದೆ ನಿದ್ರೆ ಬಾರದೆ  ಕಣ್ಣು ಬಿಟ್ಟು ಶುಭ್ರವಾದ ಆಗಸವನ್ನು ರಾತ್ರಿ ಹನ್ನೆರಡರವರೆಗೆ ನೋಡುತ್ತಲೇ ಇದ್ದಳು . ನೋಡ ನೋಡುತ್ತಲೇ ಒಂದು ನಕ್ಷತ್ರ ಕಳಚಿಬಿತ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

No comments: