ಸಹಜ ಸುಂದರ ಸೈನಿಕ ಕಥೆ
ಮೃತ್ಯುಂಜಯನ ಬಗ್ಗೆ ತನ್ನ ಅಪ್ಪ ಆಗಾಗ ಮನೆಪಾಠ ಮಾಡುವಾಗ ಮಕ್ಕಳಿಗೆ ಅವನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಕೇಳಿ ಕುಮುದಾಳಿಗೆ ತೀವ್ರ ಕುತೂಹಲ ಉಂಟಾಗಿತ್ತು.
ನಮ್ಮಪ್ಪ ಇಷ್ಟು ಬಿಲ್ಡಪ್ ಕೊಡೋ ಆ ಮೃತ್ಯುಂಜಯ ಹೇಗಿರಬಹುದು? ಎಂಬ ಕುತೂಹಲ ಅವಳಲ್ಲಿ ಮನೆ ಮಾಡಿತ್ತು.
"ಅವನ ಮೈಕಟ್ಟು, ಅವನ ಎತ್ತರ ಅವನ ವ್ಯಕ್ತಿತ್ವ ಎಲ್ಲವೂ ಅತ್ಯುತ್ತಮ ಅದಕ್ಕೆ ಅವನು ಇಂದು ಓರ್ವ ದೇಶಭಕ್ತನಾಗಿ ನಮ್ಮ ದೇಶಕಾಯುವ ಸೈನಿಕನಾಗಿ ಸೇವೆ ಮಾಡುತ್ತಿದ್ದಾನೆ. ಮನೆಯಲ್ಲಿ ಮೂರು ತಲೆಮಾರುಗಳು ಕೂತು ಉಂಡರೂ ಅವರ ಸಂಪತ್ತು ಕರಗಲ್ಲ .ಇಷ್ಟೆಲ್ಲಾ ಇದ್ದರೂ ತಾಯಿ ಸೇವೆಗೆ ಅವನ ತುಡಿತದಿಂದ ಸೈನ್ಯ ಸೇರಿ ನಿಜವಾದ ಭಾರತ ಮಾತೆಯ ಮಗನಾಗಿ ದೇಶಸೇವೆ ಮಾಡುತ್ತಾ ನಮ್ಮೂರ ಕೀರ್ತಿ ಹೆಚ್ಚು ಮಾಡಿರುವನು. ನೀವೂ ಅದೇ ತರಹ ನಮ್ಮೂರ ಹೆಸರು ಉಳಿಸುವ ಕೆಲಸ ಮಾಡಿ " ಎಂದು ಮಕ್ಕಳಿಗೆ ಅಪ್ಪ ಮನೆಪಾಠ ಮಾಡುವಾಗ ನೆಪಮಾತ್ರಕ್ಕೆ ಅಂತಿಮ ಪದವಿ ವರ್ಷದ ಭಾರತದ ಸಂವಿಧಾನ ಪುಸ್ತಕ ಹಿಡಿದು ಓದುವ ಕುಮುದಾಗೆ ಅಪ್ಪ ಹೇಳುವ ಮಿಲಿಟರಿ ಹುಡುಗನ ಕಥೆಯ ಕಡೆಗೆ ಗಮನ ಹರಿದು ಪುಸ್ತಕ ಎತ್ತಿಟ್ಟು ಅಡುಗೆ ಮನೆ ಕಡೆ ಹೋಗಿ
"ಅಮ್ಮಾ ಇನ್ನೂ ತಿಂಡಿ ಆಗ್ಲಿಲ್ವ ಕಾಲೇಜ್ ಗೆ ಹೋಗ್ಬೇಕು , ಟೈಮ್ ಆಯ್ತು, ಆ ಗೌಡ್ರ ಗದ್ದೆ ದಾಟಿ ಬಸ್ಟ್ಯಾಂಡ್ ಗೆ ಹೋಗಿ ಬಸ್ ಹತ್ತಿ ಹೋಗೋಷ್ಟರಲ್ಲಿ ನಮ್ ಕಾಲೇಜ್ ನ ಪಸ್ಟ್ ಪಿರೀಯಡ್ ಆಗಿರುತ್ತೆ ." ಎಂದು ತಟ್ಟೆಗೆ ಕೈಹಾಕಿದಳು.
ಗಬ ಗಬ ತಿಂಡಿ ತಿಂದು ನೀರು ಕುಡಿದ ಕುಮುದಾ ಪುಸ್ತಕ ಮತ್ತು ನೋಟ್ ಪುಸ್ತಕ ಎದೆಗವಚಿಕೊಂಡು ಬಾಯ್ ಅಪ್ಪ ,ಬಾಯ್ ಅಮ್ಮ, ಎಂದು ಬಿರಬಿರನೆ ಗದ್ದೆ ದಾರಿಯ ಕಡೆ ಹೆಜ್ಜೆ ಹಾಕಿದಳು ಕುಮುದಾ.
ದಾರಿಯಲ್ಲಿ "ಓ ಮೃತ್ಯುಂಜಯಪ್ಪ ಆರ್ಮಿಯಿಂದ ರಜಾ ಹಾಕಿ ಯಾವಾಗ ಬಂದೆ? ಚೆನ್ನಾಗಿದ್ದೀಯಾ?" ಎಂದು ಗದ್ದೆಯಲ್ಲಿ ಕೆಲಸ ಮಾಡುವ ಪಾತಲಿಂಗಣ್ಣ ಕೇಳಿದಾಗ ಕುಮುದಾಳ ಕಿವಿ ನೆಟ್ಟಗಾದವು.
ಎದುರಿಗೆ ಅನತಿ ದೂರದಲ್ಲಿ ಬರುತ್ತಿದ್ದ ಸ್ಪುರದ್ರೂಪಿ ಯುವಕ, "ಮೂರು ದಿನ ಆಯ್ತು ಪಾತಣ್ಣ .ನೀವು ಚೆನಾಗಿದ್ದೀರಾ? " ಎಂದು ಪ್ರಶ್ನಿಸುತ್ತಾ ದಾರಿಯಲ್ಲಿ ನಡೆದು ಕುಮದಾಳ ಕಡೆ ಬಂದರು.
ಹತ್ತಿರ ಬಂದಂತೆ ಮೃತ್ಯುಂಜಯ ನ ನಿಲುವು ,ನಡಿಗೆ, ಅವನು ಹಾಕಿದ ಗುಲಾಬಿ ಬಣ್ಣದ ಅಂಗಿ, ಬಿಳಿಪಂಚೆ ಕೈಯಲ್ಲೊಂದು ಚೀಲ ನೋಡುತ್ತಾ ರಸ್ತೆಯಲ್ಲೇ ಮೈಮರೆತು ನಿಂತಳು ಕುಮುದಾ.
"ಹಲೊ.. ದಾರಿ ಬಿಡಿ ಏನ್ ಹೀಗೆ ನಿಂತ್ ಬಿಟ್ರಿ? " ಎಂದಾಗ ಬೆಚ್ಚಿದವಳಂತೆ ಎಚ್ಚೆತ್ತು ನಾಚಿಕೆಯಿಂದ ಅವನನ್ನು ವಾರೆಗಣ್ಣಿನಲಿ ನೋಡಿ ನಕ್ಕು ಮುಂದೆ ಸಾಗಿದಳು.
ಸರಳ ಸಹಜ ಸುಂದರಿಯ ನೋಡಿದ ಮೃತ್ಯುಂಜಯನಿಗೂ ಅವಳನ್ನು ತಿರುಗಿ ನೋಡದೇ ಇರಲು ಆಗಲೇ ಇಲ್ಲ. ಈ ಹುಡುಗಿ ಯಾರಿರಬಹುದು ಎಂದು ಯೋಚಿಸುತ್ತಾ ಮನೆ ಕಡೆ ಹೆಜ್ಹೆ ಹಾಕಿದ.
ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋದರೂ ಅಂದು ಪಾಠ ಮಾಡುವ ಎಲ್ಲಾ ಲೆಕ್ಚರ್ ಗಳು ಮೃತ್ಯುಂಜಯ ನಂತೆಯೇ ಕಂಡರು .ತನ್ನ ತಲೆಯ ಮೇಲೆ ತಾನೆ ಬಲಗೈಯಲ್ಲಿ ಒಂದು ಏಟು ಕೊಟ್ಟು "ಏನಾಗಿದೆ ಇವತ್ತು ನನಗೆ " ಪ್ರಶ್ನೆ ಹಾಕಿಕೊಂಡಳು.
ಕಾಲೇಜಿಂದ ಮನೆಗೆ ಬಂದ ಕುಮುದಾ ಅಡಿಗೆ ಮನೆಗೆ ಹೋಗಿ ಅಮ್ಮನ ಬಳಿ
"ಅಮ್ಮ ಮೃತ್ಯುಂಜಯ ಅವರಿಗೆ ಮದುವೆಯಾಗಿದೆಯಾ? ಎಂದು ಪ್ರಶ್ನೆ ಹಾಕಿದಳು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment