25 January 2022

ಮೀನಾಕ್ಷಿಯ ಸೌಗಂಧ. ಪುಸ್ತಕ ವಿಮರ್ಶೆ.


 




ಮೀನಾಕ್ಷಿಯ ಸೌಗಂಧ.

ವಿಮರ್ಶೆ 


ಬಿ .ಜಿ.ಎಲ್. ಸ್ವಾಮಿ ಶತಮಾನೋತ್ಸವ ವಿಶೇಷವಾದ  ಮೀನಾಕ್ಷಿಯ ಸೌಗಂಧ ಎಂಬ   ಬಿಡಿ ಲೇಖನಗಳು ಓದುಗರಿಗೆ ರಸದೌತಣ ನೀಡುತ್ತವೆ.


ಸ್ವಾಮಿ ಎಂದೇ ಹೆಚ್ಚು ಪರಿಚಿತರಾದ ಡಾ. ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ರವರು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ, ಹೆಸರಾಂತ ಲೇಖಕರಾದ ಡಿ ವಿ ಜಿ ರವರ  ಸುಪುತ್ರರು. ೧೯೧೮ರ ಫೆಬ್ರವರಿ ಜನಿಸಿದ ಸ್ವಾಮಿಯವರು ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ೧೯೫೩ರಿಂದ ಚೆನ್ನೈನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಕೆಲವಾರು ಸಸ್ಯಗುಂಪುಗಳನ್ನು ಅನ್ವೇಷಿಸಿದ್ದು, ಅವುಗಳಲ್ಲಿ ಮಹೇಶ್ವರಿ, ಸರ್ಕಂಡ್ರಾ ಇರಿಂಗ್‌ವೈಲಿಯ್ಯ ಸೇರಿವೆ. ಗುರುಗಳ ಹೆಸರುಗಳನ್ನೇ ಗುಂಪುಗಳಿಗೆ ಇರಿಸಿದ್ದಾರೆ. ತಿರುಚರಾಪಳ್ಳಿಯಲ್ಲಿನ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಡಾ. ಸ್ವಾಮಿಯವರ ಹೆಸರಿನ ಗೌರವಾರ್ಥ ಸ್ವಾಮಿ ಬಟಾನಿಕಲ್ ಗಾರ್ಡನ್  ಸ್ಥಾಪಿತಗೊಂಡಿದೆ.


ಸ್ವಾಮಿಯವರ ಬರವಣಿಗೆಯ ವೈವಿಧ್ಯಮಯವಾದುದು. ಅವರ ವಿಷಯ ನಿರೂಪಣೆಯಂತೂ ಮಗ್ಗುಲುಗಳನ್ನು ಒಟ್ಟಿಗೆ ಕಾಣಿಸಿ ಆಸಕ್ತಿ ಹುಟ್ಟಿಸುವಂತಹುದು. ಸೊಗಸಾದ ಹಾಸ್ಯದೊಂದಿಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಕುರಿತು ತಿಳಿಸಿಕೊಡುವ ಪ್ರತಿಭೆ ಜೊತೆ ಜೊತೆಗೆ ಕಾವ್ಯಗಳಿಂದ ಉಲ್ಲೇಖಗಳನ್ನು ನೀಡುವುದು ಇನ್ನೊಂದು ಸೊಬಗು.


ಬಿ.ಜಿ.ಎಲ್. ಸ್ವಾಮಿಯವರ ಲೇಖನಿಯಿಂದ ಹರಿದುಬಂದಿರುವ ಕೃತಿಗಳಲ್ಲಿ ಕೆಲವೆಂದರೆ: ಹೊನ್ನು, ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ , ದಕ್ಷಿಣ ಅಮೆರಿಕ, ಅಮೆರಿಕದಲ್ಲಿ ಬೃಹದಾರಣ್ಯಕ, ಮೊದಲಾದವು. ಅವರು ತಮಿಳಿನಿಂದಲೂ ಕನ್ನಡಕ್ಕೆ ಕೃತಿಗಳನ್ನು ತಂದಿದ್ದಾರೆ.


ಅವರ 'ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.


ಪ್ರಸ್ತುತ ಪುಸ್ತಕದ

ಆರ್ಜಿತ ಗುಣಗಳೂ ಅನುವಂಶೀಯತೆಯೂ ಎಂಬ ಲೇಖನದಲ್ಲಿ ನಮ್ಮ ಅನುವಂಶೀಯತೆ ಮತ್ತು ಪರಿಸರ ಹೇಗೆ ನಮ್ಮ ವ್ಯಕ್ತಿತ್ವ ರೂಪಿಸಬಹುದು ಎಂಬುದನ್ನು ಸಾಧಾರವಾಗಿ ವಿಶ್ಲೇಷಣೆ ಮಾಡಿರುವರು.


 ಲಿಂಗಜಾತಿಗಳ ಪರಸ್ಪರ ಪರಿಮಾಣ,ಜೀವವಿಜ್ಞಾನದ ತಿಲೋತ್ತಮೆ,ಆದರ್ಶ ಗೆಳೆತನ,ಒಡಲೆರಡು ಆಸುವೊಂದು

,ಅಂತರ ಬುಡಕಟ್ಟಿನವರ ಮದುವೆಗಳಾದಾಗ,“ಕಾಮದಿಂ ಕಡು ಕುರುಡರಾದವರು...",ಪ್ರಣಯ ಪ್ರಸಂಗ,ಪ್ಲಾಟಿಪಸ್,ಜೇಡನ ಚರಕ ,ಹಸಿವಿನ ಬಳ್ಳಿ,ಕದಂಬ, ಪಂಚಾವತಾರ,ಈ ಪರಿಯ ಪ್ರಭೆ ಮುಂತಾದ ಲೇಖನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


ಚರಿತ್ರೆಗೆ ಸಂಬಂಧಿಸಿದ ಲೇಖನಗಳಾದ 

ಕೊಂಗುದೇಶದ ರಾಜರು,

ಕೊಡುಂದಾಳೂರಿನಲ್ಲಿ ಕನ್ನಡ, ಎಂಬ ಬರೆಹಗಳು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತವೆ.


ಸಾಹಿತ್ಯ ಸಂಬಂಧಿತ ಲೇಖನಗಳಾದ 

ರಾಯರ ಆದ್ಯಂಜನ,ಮೀನಾಕ್ಷಿಯ ಸೌಗಂಧ, ಜೇಡರ ದಾಸಿಮಯ್ಯನ ಮತ ವಿಚಾರ,ಕಲಾವಿದ ಕೆ. ವೆಂಕಟಪ್ಪ ಮತ್ತು ವೆಂಕಟಪ್ಪ ಚಿತ್ರಶಾಲೆ, ಪುರಂದರದಾಸರು ಮತ್ತು ಬಿ.ವಿ. ಕಾರಂತರು ಮುಂತದವುಗಳಲ್ಲಿ ಸ್ಚಾಮಿ ರವರು ಬಳಸಿದ ಭಾಷೆ ಉತ್ಕೃಷ್ಟವಾದುದು.ನಿಮಗೆ ಆ ಅನುಭವವಾಗಬೇಕಾದರೆ ನೀವು ಒಮ್ಮೆ ಮೀನಾಕ್ಷಿಯ ಸೌಗಂಧ ಆಘ್ರಾಣಿಸಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: