14 December 2021

ವಿದ್ಯಾರ್ಥಿಗಳಿಗಾಗಿ...


 




ವಿದ್ಯಾರ್ಥಿಗಳಿಗಾಗಿ .


ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು ,ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ ಎಂಬಂತೆ ಮಾನವರಿಗೆ ವಿದ್ಯೆಯೇ ಆಭರಣ ಮತ್ತು ಭೂಷಣ ಇಂತಹ ಮಹತ್ವದ ವಿದ್ಯೆ ಕಲಿಯುವ ಅಪೇಕ್ಷೆಯಿಂದ ಶ್ರಮಿಸುವವರೇ ವಿದ್ಯಾರ್ಥಿಗಳು, ವಿದ್ಯೆ ಜ್ಞಾನ ಸಂಪಾದನೆಗೆ ಎಂಬ ಕಾಲ ಮುಗಿದಿದೆ. 'ಅರ್ಥಕ್ಕಾಗಿಯೇ ವಿದ್ಯೆ ಎಂಬುದು ಇಂದಿನ ನಿಯಮವಾಗಿದೆ. ಏನೇ ಆದರೂ ವಿದ್ಯೆ, ಯುವಕ-ಯುವತಿಯರಿಗೆ ಹೊಸ ವಿಷಯಗಳನ್ನು, ಉತ್ತಮ ಸಂಸ್ಕಾರವನ್ನು ಕಲಿಸಿ ಅವರ ವ್ಯಕ್ತಿತ್ವವನ್ನು ವಿಕಸನ ಮಾಡುವುದರಲ್ಲಿ  ಸಂಶಯವಿಲ್ಲ.

ಹಾಗೆ ನೋಡಿದರೆ ಎಲ್ಲರೂ ವಿದ್ಯಾರ್ಥಿಗಳೆ ಎಕೆಂದರೆ ಕಲಿಕೆಯು ಗರ್ಭದಿಂದ ಗೋರಿಯವರೆಗೆ ನಡೆದೇ ಇರುತ್ತದೆ.


ಹಿಂದಿಗಿಂತ ಇಂದು ವಿದ್ಯೆ ಕಲಿಯಲು ಮತ್ತು ಕಲಿಸಲು ಅಪಾರವಾದ ಅವಕಾಶಗಳಿವೆ .

ಸಾರ್ವತ್ರಿಕ ಶಿಕ್ಷಣ ನೀಡುವ ಗುರಿಯೊಂದಿಗೆ   ಒಂದರಿಂದ ಹತ್ತನೆ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟ, ಸಮವಸ್ತ್ರಗಳು, ಬೈಸಿಕಲ್‌ಗಳನ್ನು ನೀಡಲಾಗುತ್ತಿದೆ. ಹೆಣ್ಣು ಮಕ್ಕಳು ಕಲಿಕೆಯಿಂದ ವಂಚಿತವಾಗದಂತೆ ಅವರ ಶಿಕ್ಷಣದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲಾಗಿದೆ. ವಿಶೇಷ ಚೇತನರ ಶಿಕ್ಷಣಕ್ಕಾಗಿ ಸಮನ್ವಯ ಶಿಕ್ಷಣ ಜಾರಿಗೆ ಬಂದಿದೆ.


ಮಕ್ಕಳಲ್ಲಿ ಕಲಿಕೆಯು ಸಂತಸದಾಯಕವಾಗಬೇಕು 

 ಆಸಕ್ತಿದಾಯಕವೂ, ಆಗಿರಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಅವರ ಸರ್ವತೋಮುಖ ಬೆಳವಣಿಗೆಗಾಗಿ  ಓದು-ಬರಹಗಳಷ್ಟೇ ಅಲ್ಲ. ನೃತ್ಯ ಸಂಗೀತ, ಹೊಲಿಗೆ, ಪೇಂಟಿಂಗ್, ಕ್ರೀಡೆ ಇತ್ಯಾದಿಗಳಿಗೆ ಕೂಡಾ ಒತ್ತು ನೀಡಿ ಶಿಕ್ಷಣ ನೀಡಲಾಗುತ್ತಿದೆ.


ಇಷ್ಟೆಲ್ಲಾ ಸವಲತ್ತುಗಳನ್ನು ಮತ್ತು ಪ್ರೋತ್ಸಾಹ ಗಳನ್ನು ಸರ್ಕಾರ, ಪೋಷಕರು, ಸಮುದಾಯ, ಶಿಕ್ಷಕರು ನೀಡಿದರೂ  ಇಪ್ಪತ್ತೊಂದು ವರ್ಷಗಳಿಂದ ತರಗತಿಯ ಬೋಧನಾ ಅನುಭವದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ವರ್ತನೆಗಳನ್ನು ನೋಡಿದ ನನಗೆ ಅವರಲ್ಲಿ ಅನಪೇಕ್ಷಿತ ವರ್ತನೆಗಳೇ ಹೆಚ್ಚು ಕಂಡುಬರುತ್ತಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ.


ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಆಪ್ತವಾಗಿ ಮಾತನಾಡುತ್ತಾ ಸಮಾಲೋಚನೆ ಮಾಡುತ್ತಾ ಅವರಿಗೆ ತಿಳುವಳಿಕೆ ಹೇಳುವ ಪ್ರಯತ್ನವೇ "ವಿದ್ಯಾರ್ಥಿಗಳಿಗಾಗಿ "


ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಪ್ ಎಂಬಂತೆ ,ವಿದ್ಯಾರ್ಥಿ ಜೀವನದ ಸುವರ್ಣ ಯುಗದಲ್ಲಿ

ವಿದ್ಯಾರ್ಥಿಗಳು ಈ ಲೇಖನಗಳನ್ನು ಓದಿ ಕೊಂಚವಾದರೂ ಅವರ ವರ್ತನೆಗಳನ್ನು ಬದಲಾವಣೆ ಮಾಡಿಕೊಂಡು ನಿಜವಾದ ಜ್ಞಾನಾರ್ಥಿಗಳಾಗಿ ನಮ್ಮ ದೇಶದ ಭವ್ಯ ಭವಿಷ್ಯದ ಪ್ರಜೆಗಳಾದರೆ ನನ್ನ ಈ ಪ್ರಯತ್ನ ಸಾರ್ಥಕ .



ಹದಿನೆಂಟು ತಿಂಗಳ ಕೊರೊನಾಘಾತದ ನಂತರ ಶಾಲೆಗಳು ತೆರೆದು  ತರಗತಿಗಳು ಆರಂಭವಾದಾಗ ಎಂಟನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಗೆ ಬಿಡಲು ಅವರ ತಾಯಿ ಬಂದರು .ತರಗತಿಯ ಕೋಣೆಯೊಳಗೆ ಬಿಟ್ಟು ಅಮ್ಮ ಹಿಂತಿರುಗಿದ ಕ್ಷಣದಲ್ಲೇ ಅಳುತ್ತಾ ಆ ಬಾಲಕ ಓಡಿಹೋಗಿ ಅಮ್ಮನಿಗೆ ಹೇಳಿದ ಅಮ್ಮ ನಾನು ಶಾಲೆಗೆ ಹೋಗುವುದಿಲ್ಲ ಎಂದು .ಕೊನೆಗೆ ನಾವೆಲ್ಲಾ ಶಿಕ್ಷಕರು ಆ ಬಾಲಕನಿಗೆ ತಿಳುವಳಿಕೆ ನೀಡಿ ಬುದ್ದಿ ಹೇಳಿದೆವು. ಪರಿಣಾಮವಾಗಿ ಈಗ ಆ ಬಾಲಕ ಒಂದೂ ದಿನ ತಪ್ಪದೆ ಶಾಲೆಗೆ ಬರುತ್ತಿದ್ದಾನೆ .


ಆತ್ಮೀಯ ವಿದ್ಯಾರ್ಥಿಗಳೆ...




 ನೀವು ಶಾಲೆಗೆ ಬಂದಾಗ  ನಿಮ್ಮ ತಂದೆ ತಾಯಿಗಳಿಲ್ಲ. ಶಿಕ್ಷಕರಿದ್ದಾರೆ. ಒಡಹುಟ್ಟಿದವರಿಲ್ಲ, ಸಹಪಾಠಿಗಳಿದ್ದಾರೆ. ಶಿಕ್ಷಕರ ಬಗ್ಗೆ ಭಯದ ಬದಲಿಗೆ ಗೌರವವನ್ನು ಸಹಪಾಠಿಗಳೊಂದಿಗೆ ಪರಕೀಯ ಭಾವನೆಗೆ ಬದಲು ಸ್ನೇಹವನ್ನು ಬೆಳೆಸಿಕೊಳ್ಳುವುದು ನಿಮ್ಮಕರ್ತವ್ಯ . ಶಿಕ್ಷಕರಿಂದಾಗಲೀ, ಇತರ ಮಕ್ಕಳಿಂದಾಗಲೀ ನಿಮಗೆ ಪ್ರೀತಿ, ವಾತ್ಸಲ್ಯ ಮತ್ತುಸ್ನೇಹಗಳೇ ಸದಾ ದೊರಕವು.ಅದಕ್ಕೆ ಪೂರಕವಾಗಿ ನೀವೂ ಸಹ  ಸಹಪಾಠಿಗಳೊಂದಿಗೆ ಹೊಂದಿಕೊಳ್ಳಬೇಕು.


 ಎಷ್ಟು ಬಾರಿ ಹೇಳಿಕೊಟ್ಟರೂ ತಪ್ಪು ಮಾಡುತ್ತಲೇ ಇದ್ದರೆ  ಆರೋಗ್ಯವಾಗಿದ್ದರೂ ಶಾಲೆಗೆ ತಡವಾಗಿ ಬಂದಿರುತ್ತಿದ್ದರೆ ಕೊಟ್ಟ ಹೋಂವರ್ಕ್ ಮಾಡದಿದ್ದರೆ. ಆಗ ಶಿಕ್ಷಕರು ನಿಮ್ಮನ್ನು ಕಟುವಾಗಿ ನಿಂದಿಸಿದರೆ, ತರಗತಿಯ ಬಾಗಿಲಿನಲ್ಲೇ ನಿಲ್ಲಿಸಿದರೆ ಅವಮಾನಿಸಿದರೆಂದು ನೊಂದುಕೊಳ್ಳಬಾರದು, ಅವರನ್ನು ನಿನ್ನ ಶತ್ರು ಎಂದು ಭಾವಿಸಬಾರದು.ನೀವು ಚೆನ್ನಾಗಿ ಓದಿ ವಿದ್ಯಾವಂತರಾಗಿ ನಾಡಿನ ಹೆಮ್ಮೆಯ ಪ್ರಜೆಗಳಾದರೆ ನಿಮ್ಮ ಯಶಸ್ಸನ್ನು ಕಂಡು ಮೊದಲು ಸಂಭ್ರಮ ಪಡುವವರು ಶಿಕ್ಷಕರು .ಆದ್ದರಿಂದ ನಿಮ್ಮ ಶಿಕ್ಷಕರನ್ನು ಮೊದಲು ಗೌರವದಿಂದ ಕಾಣಿ. ಆಚಾರ್ಯ ದೇವೋಭವ ಎಂಬುದು ಸದಾ ನೆನಪಿರಲಿ.


ಕೆಲವು ವಿದ್ಯಾರ್ಥಿಗಳು ತರಗತಿಯ ಕೋಣೆಯಲ್ಲಿ ಶಿಕ್ಷಕರು ನಕ್ಷೆ ಬಿಡಿಸಲು ಹೇಳಿದಾಗ ರೇಖಾಗಣಿತದ ಸಮಸ್ಯೆಗಳನ್ನು ಬಿಡಿಸುವಾಗ ,ಚಿತ್ರ ಬರೆಯುವಾಗ ಪೆನ್ಸಿಲ್, ಜ್ಯಾಮಿಟ್ರಿ ಬಾಕ್ಸ್ ನ ಸಾಧನಗಳನ್ನು ಬೇರೆಯವರಿಂದ ಪಡೆಯುವರು .ಇದು ತರಗತಿಯಲ್ಲಿ ಗದ್ದಲಕ್ಕೆ ಕಾರಣವಾಗಬಹುದು. ಕೋವಿಡ್ ಕಾಲದಲ್ಲಿ ಹೀಗೆ ಬೇರೆಯವರ ವಸ್ತುಗಳನ್ನು ಪಡೆಯುವುದು ನಾವೇ ರೋಗಗಳನ್ನು ಅಹ್ವಾನಿಸಿದಂತೆ ಆದ್ದರಿಂದ

ವಿದ್ಯಾರ್ಥಿ ದೆಸೆಯಲ್ಲೇ ಸ್ವಾವಲಂಬನೆ ರೂಪಿಸಿಕೊಳ್ಳಿ. ಆ ದಿನಕ್ಕೆ ಅಗತ್ಯವಾದ ಮಸ್ತಕಗಳು, ಲೇಖನ ಸಾಮಗ್ರಿಗಳು  ಗಣಿತಕ್ಕೆ ಅಗತ್ಯವಾದ ಪರಿಕರಗಳು, ಅಗತ್ಯವಿದ್ದಲ್ಲಿ ಚಿತ್ರಪಟಗಳನ್ನು ತೆಗೆದುಕೊಂಡಿರುವಿರೇ ಎಂದು ಖಾತ್ರಿ ಪಡಿಸಿಕೊಳ್ಳಿ .ಹಿಂದಿನ ಸಾಯಂಕಾಲ ನಾಳೆಯ ವೇಳಾಪಟ್ಟಿಗೆ ಅನುಗುಣವಾದ ಪುಸ್ತಕಗಳನ್ನು ವಸ್ತುಗಳನ್ನು ಅಚ್ಚುಕಟ್ಟಾಗಿ ನೀವೇ ಜೋಡಿಸಿಕೊಂಡು ಶಾಲೆಗೆ ತೆರಳಿ.


ಇತ್ತೀಚಿಗೆ ಒಂದು ತರಗತಿಯಲ್ಲಿ ನಾನು ಪಾಠ ಮಾಡುವಾಗ "ಸರ್ ನಾನು ಇವನ ಪಕ್ಕ ಕುಳಿತುಕೊಳ್ಳುವುದಿಲ್ಲ" ಎಂದು ಒಬ್ಬ ವಿದ್ಯಾರ್ಥಿ ಹೇಳಿದ ಕಾರಣ ಕೇಳಲಾಗಿ "ಅವನು ವಾರದಿಂದ ಸ್ನಾನ ಮಾಡಿಲ್ಲ ವಾಸನೆ ಬರುತ್ತದೆ ಸರ್" ಅಂದ .ಕೂಲಂಕಷವಾಗಿ ವಿಚಾರಿಸಿ ಆ ವಿದ್ಯಾರ್ಥಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದೆ.

ವಿದ್ಯಾರ್ಥಿಗಳೇ...

ವ್ಯಕ್ತಿಗತ ಶುಚಿತ್ವಕ್ಕೆ ಗಮನಕೊಡಿ  ನಿತ್ಯವೂ ಶುಭ್ರವಾಗಿ ಸ್ನಾನ ಮಾಡಿ, ಒಗೆದ ಬಟ್ಟೆಗಳನ್ನು ಧರಿಸಿಕೊಳ್ಳಿ. ಮುಂಜಾನೆ ಮತ್ತು ರಾತ್ರಿ ಹಲ್ಲು ಬಾಯಿಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.ವೈಯಕ್ತಿಕ ಸ್ವಚ್ಚತೆಯ ಜೊತೆ ನಿಮ್ಮ ಪರಿಸರ, ಶಾಲೆ, ಮನೆಯ ಸುತ್ತ ಮತ್ತ ಸ್ವಚ್ಚತೆಗೆ ಮಹತ್ವ ನೀಡಿ .ಇದು ನಿಮ್ಮ ಆರೋಗ್ಯಕ್ಕೆ ಪೂರಕವಾಗಿರುವುದು.

 ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯವಾಗಿ ಮಾಡಿರುವುದರಿಂದ ಒಂದೆಡೆ ಕಲಿಯುವಾಗ  ಬಡವ-ಶ್ರೀಮಂತ, ಜಾತಿಯಲ್ಲಿ ಮೇಲು-ಕೀಳು ಭಾವನೆಗಳಿಗೆ ಅವಕಾಶವಿಲ್ಲ. ಸವವಸ್ತ್ರದ ಹಿಂದಿರುವ ಈ ಘನ ಉದ್ದೇಶವನ್ನು ಅರಿತುಕೊಳ್ಳಿ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529 





No comments: