06 December 2021

ಇದು ಕಲಿಯುಗ ,ಇನ್ನಾದರೂ ಕಲಿ


 


ಇದು ಕಲಿಯುಗ ,ಇನ್ನಾದರೂ ಕಲಿ.


ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ ಎರಡು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಣೆ ಮಾಡಿದ ವಿಷಯ ಬಹುವಾಗಿ ಚರ್ಚೆಗೆ ಗ್ರಾಸವಾಯಿತು. ಪರ ಮತ್ತು ವಿರೋಧಿಗಳು ತಮ್ಮದೆ ಆದ ವಾದ ಮಂಡಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಪರವಾಗಿರುವವರು ಇದು ಸಂವಿಧಾನದತ್ತವಾಗಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಂದು ವಾದಿಸುತ್ತಾರೆ.  ಇಂತಹ ಕಾರ್ಯಕ್ರಮಗಳನ್ನು ವಿರೋಧಿಸುವವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅನವಶ್ಯಕವಾಗಿ ನಮ್ಮ ದೇಶ ಮತ್ತು ಕೆಲ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ಕಾರ್ಯಕ್ರಮ ಅಗತ್ಯವೇ ಎಂದು ಪ್ರಶ್ನಿಸುತ್ತಾರೆ.


ಅಭಿವ್ಯಕ್ತಿ ಎಂದರೆ ನಮ್ಮ ಭಾವನೆಗಳನ್ನು ಇತರರಿಗೆ ತಲುಪಿಸುವುದು ಎಂದರ್ಥ. ಇದು ಲಿಖಿತವಾಗಿಯೂ ಹಾಗೂ ಮೌಖಿಕವಾಗಿಯೂ ಆಗಿರಬಹುದು.

ಅಭಿವ್ಯಕ್ತಿ ಸೃಜನಶೀಲತೆಗೆ ಪೂರಕವಾದದು ಇದು ವ್ಯಕ್ತಿಗಳ ವ್ಯಕ್ತಿತ್ವ ಅನಾವರಣಗೊಳಿಸಲು ಮಾದ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ.


ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ರಾಜ ಮಹಾರಾಜರು ಅಭಿವ್ಯಕ್ತಿ ಗೆ ಬಹಳ ಮಹತ್ವ ನೀಡಿದ್ದರು ಇದಕ್ಕೆ ಶ್ರೀರಾಮ ಚಂದ್ರ ಬಹುದೊಡ್ಡ ಉದಾಹರಣೆ .ಸಾಮಾನ್ಯ ಪ್ರಜೆಯ  ಅಭಿವ್ಯಕ್ತಿ ಗೆ ಅವರು ನೀಡಿದ ಮನ್ನಣೆ ಇಂದಿಗೂ ಮನನೀಯ.


ನಂತರದ ಕಾಲದಲ್ಲಿ ಕೆಲ ಆಳರಸರು ಅಲ್ಲಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಪ್ರಸಂಗಗಳು ಸಹ ನಡೆದವು.ಸ್ವಾತಂತ್ರ್ಯಾನಂತರದಲ್ಲಿ ನಮ್ಮದೇ ಸಂವಿಧಾನದ ಅಳವಡಿಕೆಯ ಸಂಧರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಾನೂನಿನ ಬೆಂಬಲ ದೊರಕಿಸಲಾಗಿದೆ.


ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು “ಭಾರತೀಯ ಸಂವಿಧಾನ’ ವಿಧಿ ಸಂಖ್ಯೆ 19 (1)(ಅ)ಯಲ್ಲಿ ಪ್ರತಿಯೋರ್ವ ಭಾರತೀಯ ಪ್ರಜೆಗೆ ನೀಡಿದೆ. “ವಾಕ್ ಮತ್ತು ಅಭಿವ್ಯಕ್ತಿ, ಸ್ವಾತಂತ್ರ್ಯ’ (Freedom of speech and expression) ಎಂದು ಕರೆಯಲ್ಪಡುವ ಈ ವಿಧಿಗೆ 19 (2)ರಲ್ಲಿ ಅದರ ಮಿತಿಗಳನ್ನೂ (Limitations) ತಿಳಿಸಿದೆ.

ಗರ್ಭದಿಂದ ಗೋರಿಯ  ವರೆಗೂ ಅಭಿವ್ಯಕ್ತಿ ವಿವಿಧ ರೀತಿ ಯಲ್ಲಿ ಪ್ರಕಟವಾಗುತ್ತಲೇ ಇರುತ್ತದೆ ಮನುಷ್ಯನ ಯೋಚನೆಗಳು ಸಂವಹನ ಮಾಧ್ಯಮ (Communi catione media)ಗಳ ಮೂಲಕ ಮೂರ್ತ ರೂಪಗೊಳ್ಳುವುದೇ ಅಭಿವ್ಯಕ್ತಿ ಎಂಬ ವ್ಯಾಖ್ಯಾನ ಕೂಡಾ ಇದೆ.ಮಾತು ಮತ್ತದರ ವಿವಿಧ ಪ್ರಕಾರಗಳು, ಬರೆಹ, ಅಭಿನಯ, ಸನ್ನೆ – ಸಂಕೇತ, ಚಿತ್ರ- ಚಲನಚಿತ್ರ, ಸಂಗೀತ, ಸಾಮಾಜಿಕ ಜಾಲ ತಾಣಗಳು…. ಎಲ್ಲವೂ ಅಭಿವ್ಯಕ್ತಿ ವೈವಿಧ್ಯ ಗಳು. ಇವೆಲ್ಲಕ್ಕೂ ಸಂವಿಧಾನ “ಅಸ್ತು’ ಎಂದಿದ್ದರೂ ಪ್ರತಿಯೊಂದಕ್ಕೂ ಹೊಣೆ ಗಾರಿಕೆಯ ಭದ್ರಕೊಂಡಿಯನ್ನು ಬೆಸೆದು ನಿಯಂತ್ರಿಸಿದೆ. ಸ್ವಾತಂತ್ರ್ಯ ಮತ್ತು ಉತ್ತರ ದಾಯಿತ್ವ ಇಲ್ಲಿ ಒಂದೇ ನಾಣ್ಯದ ಎರಡು ಮುಖಗಳು.

 ಆದರೆ ಇಂದು ಬಹುತೇಕರು ಆ ಮಿತಿಗಳನ್ನು ಮೀರಿ ಅಭಿವ್ಯಕ್ತಿ ಸ್ವತಂತ್ರ ಅನುಭವಿಸಿದ ಪರಿಣಾಮವಾಗಿ ಇಂದು ಅಲ್ಲಲ್ಲಿ ಅನರ್ಥಗಳು ಸಂಭವಿಸುತ್ತಿವೆ. ಸಮುದಾಯದ ನಡುವೆ ಬಿರುಕು ಬಿಟ್ಟು ,ಜಾತಿ ಧರ್ಮದ ಹೆಸರಿನಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೂ ಕಾರಣವಾಗಿರುವುದು  ದುರದೃಷ್ಟಕರ. ಇಂತಹ ಅನರ್ಥಗಳ ತಡೆಯಲು ಸರ್ಕಾರಗಳು ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುಲೇಬೇಕು.   ಕೆಲವೊಮ್ಮೆ ಇದು ರಾಜಕೀಯ ಬಣ್ಣ ಪಡೆದು ಆಳುವ ಸರ್ಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು ಗೊಳಿಸಲು ಪ್ರಯತ್ನ ಪಟ್ಟ ಉದಾಹರಣೆಗಳೂ ನಮ್ಮ ಮುಂದಿವೆ.


ಯಾವುದೇ ಮಾಧ್ಯಮದ ಮೂಲಕ ನಾವು ಅಭಿವ್ಯಕ್ತಿ ಪಡಿಸಬೇಕಾದರೆ ಅದು ಇತರರ ಭಾವನೆಗೆ ಧಕ್ಕೆ ಬರುವಂತಿದ್ದರೆ ಅಂತಹ ಅಭಿವ್ಯಕ್ತಿ ಮಾಡದೇ ಇರುವುದು ಸೂಕ್ತ. ಅದಕ್ಕೆ ಥಿಂಕ್ ಬಿಪೋರ್ ಇಂಕ್ ಎಂದು ಕರೆದಿರುವುದು.ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಎಂಬಂತೆ ನಮ್ಮ ಮಾತು ಮುತ್ತಿನ ಹಾರದಂತಿರಬೇಕೆ ಹೊರತು ಕಿವಿಗಿ ಕೂರ್ದಸಿಯ ಸುರಿದಂತಿರಬಾರದು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬಂತೆ ನಮ್ಮ ಮಾತುಗಳು ಹಗೆತನವನ್ನು ಸೃಷ್ಟಿಸಬಾರದು .   ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಎಲ್ಲರೂ ಲೈಕು, ಕಾಮೆಂಟುಗಳ ಹಿಂದೆ ಬಿದ್ದು ಯಾರೋ ಬರೆದ ಅನರ್ಥ ಬರುವ ಸಂದೇಶಗಳನ್ನು ಕುರುಡಾಗಿ ಮುನ್ನಾಯಿಸುವ ಉದಾಹರಣೆಗಳಿಗೇನೂ ಬರವಿಲ್ಲ.


ಕೆಲವೊಮ್ಮೆ ನಮ್ಮ ಅಭಿವ್ಯಕ್ತಿ ಸರಿಯಾಗಿದ್ದೂ ಅರ್ಥೈಸಿಕೊಳ್ಳುವವರ ತಪ್ಪು ಗ್ರಹಿಕೆಯಿಂದಲೂ ಕೆಲವೊಮ್ಮೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ  ಇನ್ನೂ ಕೆಲವರು ಬೇಕಂತಲೇ ವಿತಂಡವಾದ ತೋರುತ್ತಾ ತಪ್ಪು ಸಂದೇಶಗಳನ್ನು ರವಾನಿಸಿ ಪ್ರಚಾರ ಬಯಸುವ ಮಹಾಶಯರಿರುವರು. ಅಂತಹವರ  ವಿಚಾರದಲ್ಲಿ ಎಲ್ಲರೂ ಜಾಗರೂಕರಾಗಬೇಕು. ನಾವು ಮಾಡುವ ಒಂದು ಟ್ವೀಟ್ ,ಒಂದು ಪೋಸ್ಟ್, ಒಂದು ವೀಡಿಯೋ, ಒಂದು ಮಾತು, ಒಂದು ಪುಸ್ತಕ ಒಂದು ಚಿತ್ರ ಸಮಾಜಕ್ಕೆ ಪೂರಕವಾಗಿ ಸರ್ವರೂ ಕೂಡಿ ಬಾಳುವಂತೆ ಇರಬೇಕೇ ವಿನಃ ಗಲಭೆ ಸೃಷ್ಟಿಸಿ ಅಭದ್ರತೆ ಬೆಳೆಸಿ ಪಟ್ಟಭದ್ರ ಹಿತಾಸಕ್ತಿಗಳು ಮೆರೆಯುವಂತಿರಬಾರದು. ಮಾನಾಡಲೇಬೇಕು ಎಂದೆನಿಸಿದರೆ ಬೆಳ್ಳಿಯಂತಹ ನಾಲ್ಕು ಮಾತಾಡೋಣ. ಇಲ್ಲದಿದ್ದರೆ ಮೌನವಾಗಿದ್ದು ಬಂಗಾರವಾಗೋಣ. ಇಷ್ಟೆಲ್ಲಾ ಹೇಳಿ ಮುಗಿಸುವ ಮುನ್ನ ಇಂದು ಬೆಳಿಗ್ಗೆ ಸಿಗ್ನಲ್ ನಲ್ಲಿ ಆಟೋ ಹಿಂದೆ ಬರೆದ ಸಾಲುಗಳು ನೆನಪಾದವು" ಇದು ಕಲಿಯುಗ ಮಗ ಇನ್ನಾದರೂ ಒಳಿತು ಮಾತಾಡುವುದು  ಕಲಿ" 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529



No comments: