ಮುಂಬರುವ ವರ್ಷದಲ್ಲಿ ಸಾರ್ಥಕ ಜೀವನ ನಮ್ಮದಾಗಲಿ.
ಹಾಗೆ ನೋಡಿದರೆ ಉಗಾದಿ ನಮ್ಮ ಹೊಸ ವರ್ಷ ಆಗಲೂ ನಮಗೆ ಬೆಲ್ಲಕ್ಕಿಂತ ಬೇವೇ ಹೆಚ್ಚಾಗಿ ಕಂಡುಬಂತು . ಕ್ಯಾಲೆಂಡರ್ ಪ್ರಕಾರದ ಹೊಸ ವರ್ಷವಾದರೂ ನಮ್ಮ ಬಾಳಲ್ಲಿ ನಿಜವಾದ ಹೊಸತನ ತರಲಿ ಎಂದು ಆಶಾವಾದ ಹೊಂದಿರುವವನು ನಾನು.
ಇದಮಿತ್ತಂ ,ಹೀಗೇ ಜೀವನವಿರುವಿದು. ಹೀಗೇ ಮುಂಬರಲಿರುವ ವರ್ಷ ಇರುವುದು ಎಂಬುದನ್ನು ಊಹೆ ಮಾಡಿದರೆ ನಮ್ಮಂತಹ ಮೂರ್ಖರು ಬೇರೊಬ್ಬರಿಲ್ಲ.
ಬರುವ ಹೊಸ ವರ್ಷಗಳಲ್ಲಿ ನಮಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಖಚಿತ ಅದಕ್ಕೆ ನಾವೆಲ್ಲರೂ ಮಾನಸಿಕವಾಗಿ ಸಿದ್ದರಿರಬೇಕು.
ಕೋವಿಡ್ ಕಾಲದಲ್ಲಿ ಮಾನವನ ಆರ್ಥಿಕ ,ಸಾಮಾಜಿಕ, ಶೈಕ್ಷಣಿಕ, ಮಾನಸಿಕ ಮುಂತಾದ ಎಲ್ಲಾ ರಂಗಗಳಲ್ಲಿ ಮಾನವನಿಗೆ ನೋವೇ ಅಧಿಕವಾಗಿದೆ.ಈ ವರ್ಷ ಕೂಡಾ ಕೋವಿಡ್ ತನಯ ಅಟ್ಟಹಾಸ ಮೆರೆಯಲು ಕಾದು ಕುಳಿತಂತಿದೆ. ಇದರ ಜೊತೆಯಲ್ಲಿ ನಾವೇ ಸೃಷ್ಟಿಸಿದ ಪರಿಸರ ಅಸಮತೋಲನ ಮತ್ತು ಪರಿಸರದ ಮೇಲೆ ನಾವು ಮಾಡಿರುವ ಅನಾಚಾರಗಳ ಪರಿಣಾಮವಾಗಿ ಅಕಾಲಿಕವಾದ ಮಳೆ ,ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಭೂಕುಸಿತಗಳು ನಮ್ಮಯ ಬದುಕನ್ನು ನುಂಗಲು ಬಾಯಿ ತೆರೆದುಕುಳಿತಿರಬಹುದು. ಅಂತಹ ಪರಿಸ್ಥಿತಿ ಬಂದರೆ ನಾವು ಸಿದ್ದರಿರಬೇಕು. ಏಕೆಂದರೆ ಮಾಡಿದ್ದುಣ್ಣೋ ಮಹರಾಯ.
ಜೀವನದಲ್ಲಿ ನಾವು ಯೋಜನೆ ಮಾಡಿ ಜೀವಿಸುವೆವವು ಎಂದರೆ ಪ್ರಕೃತಿ ಮತ್ತು ಭಗವಂತ ಅದನ್ನು ಉಲ್ಟಾ ಮಾಡಿ ಈಗ ಹೇಗಿದೆ ನೋಡು ಆಟ? ಎಂದು ನಗುವನು ಆದ್ದರಿಂದ ನಾವು ಮುಂಬರುವ ವರ್ಷದಲ್ಲಿ ಅತಿಯಾಗಿ ಪ್ಲಾನ್ ಮಾಡದೆ ಬಂದದ್ದೆಲ್ಲಾ ಬರಲಿ ಅವನ ದಯವೊಂದಿರಲಿ ಎಂದು ಆಶಾವಾದದ ಮೂಲಕ ಹೊಸ ವರ್ಷ ಸ್ವಾಗತಿಸೋಣ. ಎಲ್ಲಾ ವರ್ಷದಂತೆ ಮುಂಬರುವ 2022 ಸಹ ನಮ್ಮ ಬದುಕಲ್ಲಿ ಒಂದು ನಂಬರ್ ಆ ನಂಬರ್ ದಾಟಲೇಬೇಕು ದಾಟುತ್ತೇವೆ. ಆದರೆ ಆ ವರ್ಷದಲ್ಲಿ ನಾನು ಸವಾಲುಗಳು ಎದುರಿಸಿ ನನ್ನ ಜೀವನದಲ್ಲಿ ಮರೆಯಲಾಗದ ಎಷ್ಟು ಅವಿಸ್ಮರಣೀಯ ಘಟನೆಗಳನ್ನು ಸೃಷ್ಟಿ ಮಾಡಿಕೊಂಡೆ? ನನ್ನಿಂದ ಎಷ್ಟು ಜನರ ಮೊಗದಲ್ಲಿ ನಗುವರಳಿತು? ನಾನು ಎಷ್ಟು ಜನರಿಗೆ ಸಣ್ಣ ಪುಟ್ಟ ಸಹಾಯ ಮಾಡಿದೆ? ಎಂಬುವ ಅಂಶಗಳು ನಮ್ಮ ಜೀವನದ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತವೆ.
ಇಂತಹ ಸಾರ್ಥಕ ಜೀವನವು ಮುಂಬರುವ ವರ್ಷದಲ್ಲಿ ನಮ್ಮದಾಗಲಿ ಎಂದು ಆಶಿಸುವ
ನಿಮ್ಮ ಸಿಹಿಜೀವಿ.
ಸಿ ಜಿ ವೆಂಕಟೇಶ್ವರ
ತುಮಕೂರು.
No comments:
Post a Comment