27 December 2021

ನಾನು ಬಾಲ್ಯದಿ ಕಲಿತ ಪದ್ಯಗಳು.


 


ನನ್ನ ಬಾಲ್ಯದಿ ನಾ ಕಲಿತ ಪದ್ಯಗಳು...

ಆತ್ಮ ಕಥೆ ೨೦

ನನ್ನ ಶಾಲಾ ದಿನಗಳಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಸರ್ ರವರು ಪದ್ಯಗಳನ್ನು ರಾಗವಾಗಿ ಹಾಡಿ ನಮಗೂ ಹಾಡಲು ಹೇಳಿ ಕೊಡುತ್ತಿದ್ದರು. ಸಾಮಾನ್ಯವಾಗಿ ಪದ್ಯಗಳನ್ನು ಶನಿವಾರ ಹೇಳಿಕೊಡುತ್ತಿದ್ದರು. 


ಅವರು ಹೇಳಿಕೊಟ್ಟ ಎಲ್ಲಾ ಪದ್ಯಗಳು ನನಗೆ ಇಷ್ಟ ವಾಗಿದ್ದವು .ಅದರಲ್ಲೂ  ಗೋವಿನ ಹಾಡು    "ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದೊಳಿರುವ ಕಾಳಿಂಗನೆಂಬ ಗೊಲ್ಲನ ಕಥೆಯ ...,." ಎಂದು ರಾಗವಾಗಿ ಹಾಡುತ್ತಿದ್ದ ಚಿತ್ರ ಈಗಲೂ ನನ್ನ ಮನದಪಟಲದ ಮೇಲೆ ಮೂಡುತ್ತದೆ. ಅದೇ ಪದ್ಯಕ್ಕೆ ನಮ್ಮಿಂದ  ಅಭಿನಯ ಮಾಡಿಸಿ  ಗೋವಿನ ಹಾಡನ್ನು ದೃಶ್ಯ ರೂಪದಲ್ಲಿ ಮೂಡಿಸಿ ನಮ್ಮನ್ನು ರಂಜಿಸಿದ್ದರು.


ಆ ಪದ್ಯದಲ್ಲಿ ಬರುವ ಗೋವಿನ ಪ್ರಾಮಾಣಿಕ ನಡೆ, ಹುಲಿಯ ಮನಪರಿವರ್ತನೆ , ಗೋವು ತನ್ನ ಕರುವಿಗೆ ಹೇಳುವ ಬುದ್ದಿವಾದ ಈಗಲೂ ಪ್ರಸ್ತುತ. ಒಂದು ಪದ್ಯದಲ್ಲಿ ಒಂದು ಮಹಾಕಾವ್ಯದಲ್ಲಿ ನೀಡುವ ಸಂದೇಶಗಳನ್ನು ನೋಡಬಹುದು. ಈಗಲೂ ಆಗಾಗ್ಗೆ ನಾನು ಆ ಪದ್ಯ ಓದುತ್ತೇನೆ ಪ್ರತೀ ಬಾರಿ ಓದಿದಾಗ ಹೊಸ ಹೊಳವುಗಳು ,ಚಿಂತನೆಗಳು ಚಿಗುರೊಡೆಯುತ್ತವೆ. ನನ್ನ ಬಾಲ್ಯ, ನನ್ನ ಊರು, ನನ್ನ ಸಹಪಾಠಿಗಳು, ನನ್ನ ಶಿಕ್ಷಕರು ನೆನಪಾಗುತ್ತಾರೆ.


ಇನ್ನೂ  ಬಾಲ್ಯದಲ್ಲಿ ನಾನು ಕಲಿತ ಹಾಗೂ ನನಗೆ  ಬಹಳ   ಇಷ್ಟವಾದ ಪದ್ಯ " ಒಂದು ಎರಡು ಬಾಳೆಲೆ ಹರಡು"     ಊಟದ ರೀತಿ ರಿವಾಜನ್ನು ಸರಳ ಪದಗಳಲ್ಲಿ ಸುಂದರವಾಗಿ ವರ್ಣನೆ ಮಾಡಿದ ಕವಿತೆ ನನಗೆ ಈಗಲೂ ಇಷ್ಟ . ಇದೇ ಪದ್ಯದಿಂದ ಸ್ಫೂರ್ತಿ ಪಡೆದು ಶಾಲೆಯಲ್ಲಿ ಮಕ್ಕಳು ಕಲಿಯುವ ಬಗ್ಗೆ  ನಾನೂ ಒಂದು ಶಿಶುಗೀತೆ   ಬರೆದಿರುವೆ . ಅದು ಹೀಗಿದೆ.


*ಪುಟ್ಟನ ಶಿಕ್ಷಣ*


ಒಂದು ಎರಡು 

ಶಾಲೆಗೆ ಹೊರಡು


ಮೂರು ನಾಲ್ಕು

ಪಾಠವು ಬೇಕು 


ಐದು ಆರು

ಗೆಳೆಯರ ಸೇರು


ಏಳು ಎಂಟು

ಆಟವು ಉಂಟು


ಒಂಭತ್ತು ಹತ್ತು

ಅರಿವನು ಬಿತ್ತು


ಒಂದರಿಂದ ಹತ್ತು  ಹೀಗಿತ್ತು

ಕಲಿಕೆಯ ದಾರಿಯು ಸೊಗವಿತ್ತು


ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕಲಿಯದ ವ್ಯಕ್ತಿಯನ್ನು ಅನಕ್ಷರಸ್ಥ ಎಂದು ಕರೆಯಲಾಗುತ್ತದೆ .ಕಂಪ್ಯೂಟರ್ ಕಲಿಕೆಯು ಹಂತಗಳನ್ನು ಹೇಳುವ ಒಂದು ಶಿಶುಗೀತೆಯ ನನ್ನ ಪ್ರಯತ್ನ ಇದು.


ಒಂದು ಎರಡು 

ಕಂಪ್ಯೂಟರ್ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


ಹೀಗೆ ನಾನು ಬಾಲ್ಯದಲ್ಲಿ ಕಲಿತ ಪದ್ಯಗಳ ನಂಟು ಈಗಲೂ ಮುಂದುವರೆದಿದೆ. ಕೆಲವೊಮ್ಮೆ ಅವುಗಳ ನೆನೆದು ಕೆಲವೊಮ್ಮೆ ಅದೇ ಧಾಟಿಯಲ್ಲಿ ಪದ್ಯಗಳ ಹೊಸೆದು ನಲಿಯುತ್ತೇನೆ ಓದುಗ ದೊರೆಗಳು ಮೆಚ್ಚಿ ನಾಲ್ಕು ಮಾತಾಡಿದರೆ ಇನ್ನೂ ಹಿಗ್ಗುತ್ತೇನೆ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: