21 December 2021

ಕುರುಸಾರ್ವಭೌಮ.


 


ನಾಟಕ ಪುಸ್ತಕ ವಿಮರ್ಶೆ .

ಕುರು ಸಾರ್ವಭೌಮ ಮತ್ತು ಯಶೋಧರ ಎಂಬ ಎರಡು
ನಾಟಕಗಳನ್ನು ಹೊಂದಿರುವ
ನಾಗರಾಜ ಜಿ ನಾಗಸಂದ್ರ ರವರ ಕೃತಿಯನ್ನು ಓದಿದಾಗ ಸುಯೋಧನನ ಬಗ್ಗೆ ಗೌರವ ಹೆಚ್ಚಾಗುತ್ತದೆ. ಯಶೋಧರೆಯ ಮನದ ತುಮಲಗಳು ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯುತ್ತವೆ.
ಬಾಣಗೆರೆ ಪ್ರಕಾಶನದಿಂದ ಪ್ರಕಟವಾದ ಈ ಕೃತಿಯನ್ನು ಎಲ್ಲಾ ಸಾಹಿತ್ಯ ಪ್ರಿಯರು ಓದಲೇಬೇಕು.

ಕವನ, ಕಥೆ, ಕಾದಂಬರಿ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿರುವ ಆತ್ಮೀಯರು, ಬಂಧುಗಳೂ ಆದ  ಶ್ರೀ ನಾಗರಾಜ ಜಿ ನಾಗಸಂದ್ರ ಇವರು ವೃತ್ತಿಯಲ್ಲಿ ಶಿಕ್ಷಕರು, ಅದರಲ್ಲೂ ನಾ ಕಂಡಂತೆ, ಶಿಕ್ಷಣ ಇಲಾಖೆ ಕಂಡಂತೆ ಅತ್ಯುತ್ತಮ ಶಿಕ್ಷಕರು. ಹೀಗಾಗಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಸಮಕಾಲೀನ ಶಿಕ್ಷಕರಿಗೆ ಇದು ಸ್ಪೂರ್ತಿದಾಯಕವಾಗಿದೆ ಎಂದು ನುಡಿಯಲು ನನ್ನ ಹೃದಯ ತುಂಬಿ ಬರುತ್ತಿದೆ. ಪ್ರವೃತ್ತಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಾ ಸದ್ದಿಲ್ಲದೆ  ಶಿಸ್ತು ದ್ಧವಾಗಿ ವೃತ್ತಿ ಹಾಗೂ ಪ್ರವೃತ್ತಿಗಳೆರಡರಲ್ಲೂ ಹೆಸರು ಹಾಗೂ ಯಶಸ್ಸನ್ನು ಗಳಿಸಿರುವ ವಿರಳರಲ್ಲಿ ಇವರು ಒಬ್ಬರು.
ಇದುವರೆಗೂ ಇವರು   ಸಾಮಾಜಿಕ ವಿಷಯಾಧಾರಿತ ಕೃತಿಗಳಾದ “ಆಕಾಂಕ್ಷೆ, ನಿನ್ನೊಲುಮೆ, ಕವನ ಸಂಕಲನಗಳು, ಕಮರಿತು ಕಮಲ, ಒಳಸುಳಿ, ಅಂತರ, ಜಗದ ನಿಯಮ, ಕಾದಂಬರಿಗಳು, ನಮ್ಮೂರ ಭೂಪರು, ಪ್ರಕಾಂಡ ಪಂಡಿತರು, ನೆಲವ ನಂಬಿ, ಕಾಲಚಕ್ರ, ಕಥಾ ಸಂಕಲನಗಳು, ಸುಳಿಗೆ ಸಿಲುಕಿದ ನೌಕೆ, ನಾಟಕ, ನಮ್ಮೂರ ಹಬ್ಬ, ಐತಿಹಾಸಿಕ, ಮಕ್ಕೊಳಗಣ ಮಾಣಿಕ್ಯ ಮಕ್ಕಳ ಕಥಾಸಂಕಲನ ಹಾಗೂ ವರ್ತಮಾನ” ಅಂಕಣ ಬರಹಗಳ ಸಂಗ್ರಹ ಕೃತಿಗಳ ರೂಪ ಪಡೆದು ಪ್ರಕಟವಾಗಿವೆ. ನಾಡಿನ ಪ್ರಸಿದ್ಧ ದಿನ ಪತ್ರಿಕೆಗಳಾದ ಕನ್ನಡ ಪ್ರಭ, ಉದಯ ಕಾಲ, ಪ್ರಜಾ ವಾಹಿನಿ, ಜಯ ಕಿರಣ, ದಿನ ಪತ್ರಿಕೆಗಳಲ್ಲಿ ಹಾಗೂ ಮಂಜುವಾಣಿ, ಸರ್ಕಾರಿ ನೌಕರ ಮಿತ್ರ, ಜ್ಞಾನ ಸಂಗಮ, ಹಾಗೂ ಕರ್ನಾಟಕ ಸೌರಭ ಮಾಸಿಕಗಳಲ್ಲೂ ಶ್ರೀಯುತರ ಹಲವು ಅಂಕಣ ಬರಹಗಳು ಪ್ರಕಟವಾಗಿರುತ್ತವೆ.

ಕೋವಿಡ್ ಲಾಕ್ಡೌನ್ ಸಮಯದಲ್ಲಿ ಕರೆ ಮಾಡಿದ ನಾಗರಾಜ್ ಸರ್ ರವರು ಎರಡು ನಾಟಕ ರಚನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು.ಈಗ ಆ ಕೃತಿಯನ್ನು ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿದಾಗ ಎರಡು ಮಹಾಕಾವ್ಯ ಓದಿದ ಅನುಭವವಾಯಿತು.

ಈ  ನಾಟಕಗಳ ರಚನೆಗೆ ಅವರ  ಮೇಲೆ ಪ್ರಭಾವ ಬೀರಿದ ಮಹಾಭಾರತದ ಕೃತಿಗಳಾದ ಕುವೆಂಪು ಅವರ “ಸ್ಮಶಾನ ಕುರುಕ್ಷೇತ್ರ" ಎಸ್. ಎಲ್. ಬೈರಪ್ಪನವರ "ಪರ್ವ" ಕಂನಾಡಿ ನಾರಾಯಣ ಅವರ “ದ್ವಾಪರ ಸಂತೋಷಕುಮಾರ ಮೆಹಂದಳೆಯವರ “ಮಹಾಪತನ, ನಾರಾಯಣಾಚಾರ್ಯರ ಸಂಪೂರ್ಣ ಮಹಾಭಾರತ ಕೃತಿಗಳು, ಎಂಬುದನ್ನು ನಾಟಕಕಾರರು ತಮ್ಮ ನುಡಿಗಳಲ್ಲಿ ಹೇಳಿರುವರು ಅದು ನಾಟಕಗಳಲ್ಲೂ ಪ್ರತಿಬಿಂಬಿತವಾಗಿದೆ.

ಖ್ಯಾತ ಅಂಕಣಕಾರರು ಹಾಗೂ ಕಾದಂಬರಿಕಾರರು ಆದ ಸಂತೋಷ್ ಕುಮಾರ್ ಮೆಹಂದಳೆಯವರು ಮುನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ ನಾಗರಾಜ್ ಜಿ ನಾಗಸಂದ್ರ ರವರು
ನಾಟಕವನ್ನು ಹರಿತವಾದ ಶೈಲಿ ಮತ್ತು ಭಾಷೆಯಲ್ಲಿ ಮುನ್ನಡೆಸಿದ್ದಾರೆ. ಪ್ರತೀ ಹಂತದಲ್ಲೂ ಕೇವಲ ಸಂಭಾಷಣೆಯ ಮೂಲಕವೇ ಕತೆಯ ಓಘ ಹಾಗೂ ತಲುಪಿಸಬೇಕಾದ ವಿಷಯ ವಸ್ತುವನ್ನು ಓದುಗನಿಗೆ ಮತ್ತು ಆ ಮೂಲಕ ನಾಟಕ ವೇದಿಕೆಯೇರಿದರೆ ನೋಡುಗನಿಗೆ ತಲುಪುವಂತೆ ಮಾಡಬಲ್ಲ ತಂತ್ರಗಾರಿಕೆ ಗಮನೀಯ ಅಂಶ.

ಪ್ರತೀ ದೃಶ್ಯದಲ್ಲೂ ಕಥಾನಾಯಕ ದುರ್ಯೋಧನನ ಬಗ್ಗೆ ಇಲ್ಲಿ ನಮಗೆ ಅರಿವಿಲ್ಲದೆ ಆತ್ಮೀಯತೆ ಮೂಡುತ್ತಾ ಅವನ ಪಾತ್ರವಾಗುತ್ತ ಹೋಗುವ ಜೊತೆಗೆ ಪರಿಕಲ್ಪನೆಯ ದೃಶ್ಯಗಳು ನಮ್ಮೆದುರಿಗೆ ಜೀವಂತವಾಗುವ ಚಿತ್ರಣ ಬರಹಗಾರನ ಕಸಬುತನಕ್ಕೆ ಸಾಕ್ಷಿ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಶೈಲಿಯ ಮೇಲೆ ಇರುವ ಹಿಡಿತ, ಕಥೆ ಹಾಗೂ ನಾಟಕದ ಅಗತ್ಯತೆಗೆ ಬೇಕಾಗುವ ಅಬ್ಬರದ ಸಂಭಾಷಣೆಗಳನ್ನು ಸಮಯೋಚಿತವಾಗಿ ಸಂಯೋಜಿಸಿರುವ ನಾಗರಾಜ,ರವರು ಪ್ರತಿ ದೃಶ್ಯಗಳನ್ನು ಕಲ್ಪನಾತ್ಮಕ ಎನ್ನುವ ಭಾವದಲ್ಲಿ ಸೃಜಿಸಿದ್ದಾರೆ. ಕುರು ಸಾರ್ವಭೌಮ ನಾಟಕ ರಂಗದ ಮೇಲೆ ಸಕಾರಾತ್ಮಕವಾಗಿ ಸೂಕ್ತ ಧ್ವನಿ ಹಾಗು ಬೆಳಕಿನ ಸಂಯೋಜನೆಯಲ್ಲಿ ಕಟ್ಟಿ ಕೊಡುವುದಾದಲ್ಲಿ, ಬರಹಕ್ಕೆ ತಕ್ಕ ನಿರ್ದೇಶಕ ದೊರಕಿದರೆ ಕಲಾತ್ಮಕತೆಯಿಂದ ಉತ್ತಮವಾಗಿ ಹೊರಹೊಮ್ಮಬಹುದಾದ ನಾಟಕ ಇದು.

ಸೂಕ್ತ ವ್ಯಕ್ತಿ, ಅಭಿನಯ ಹಾಗೂ ರಂಗ ಸಜ್ಜಿಕೆಗಳಿಗೆ ತಕ್ಕುದಾದ ಭಾಷಾ ಪ್ರೌಢಿಮೆಯ ನಾಟಕ ಕುರು ಸಾರ್ವಭೌಮವನ್ನು ಪುಸ್ತಕ ರೂಪದಲ್ಲಿ ಮಾತ್ರ ಓದದೆ ಕನ್ನಡಿಗರು ರಂಗರೂಪಕಕ್ಕೂ ಬಳಸಿಕೊಂಡಲ್ಲಿ ಉತ್ತಮವಾದ ಸಾಹಿತ್ಯಕ ರಚನೆಗೊಂದು ಮೌಲ್ಯ ಹಾಗು ಅದು ಕುರು ಸಾರ್ವಭೌಮನಿಗೂ ಸಲ್ಲುವ ಮೌಲ್ಯ ಎಂಬುದು ನನ್ನ ಅನಿಸಿಕೆ. ಹಲವು ಮಹಾಭಾರತಗಳನ್ನು ಓದಿ, ಅಭ್ಯಸಿಸಿ ಅದರ ಮೂಲಕ ದುರ್ಯೋಧನ ಪಾತ್ರ ರೂಪಿಸುವಲ್ಲಿ ಮಹತ್ವದ ಸಮಯವನ್ನು ನೀಡಿರುವರು.

ಇನ್ನೂ ಇದೇ ಕೃತಿಯ ಎರಡನೇ ನಾಟಕ ಯಶೋಧರ ನಮ್ಮನ್ನು ಚಿಂತನೆಗೆ ಹಚ್ಚಿ ಯಶೋಧರ ಳ ಅಂತರಂಗದ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಬುದ್ಧನ ತತ್ವಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಅಂತಹ ಮಾನವೀಯ ಧರ್ಮ ಬೋಧಿಸಿದ ಬುದ್ಧನ ಬಗ್ಗೆ ಹಲವರು ತಮ್ಮದೇ ಆದ ರೀತಿಯಲ್ಲಿ ಬರೆದು ಪ್ರಚುರಪಡಿಸಿದ್ದಾರೆ. ಅಷ್ಟಾದರು ಬುದ್ಧನ ಪತ್ನಿ ಯಶೋಧರೆಯು ಕಿರಿಯ ವಯಸ್ಸಿನಲ್ಲೇ ತನ್ನ ಪತಿಯನ್ನು ಅಗಲಿ ನೋವನ್ನು ನುಂಗಿದ್ದಳು. ಆ ನೋವಿನ ಹಿನ್ನೆಲೆಯಲ್ಲಿ ರಚಿತವಾಗಿರುವ ಸಂಭಾಷಣೆ ನನ್ನ ಕಾಡಿತು ನಾಟಕದ ಕೊನೆಯ ದೃಶ್ಯ ಓದುವಾಗ ಮೊದ ಮೊದಲು ಯಶೋಧರೆಯ ಅಂತರಂಗದ ನೋವು ಹೊರಬಂದರೆ ಕ್ರಮೇಣ ಬುದ್ದನ ಅನುಯಾಯಿಯಾಗಿ ಅವನ ಸಂದೇಶಗಳನ್ನು ಸಾರುವ ಕಾರ್ಯ ಮಾಡುವೆ ಎಂಬ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸಮಾಜದ ಒಳಿತಿಗಾಗಿ ತನ್ನ ಸುಖ ತ್ಯಾಗ ಮಾಡುವುದರಲ್ಲಿಯೂ ಸುಖವಿದೆ ಎಂದು ತೋರಿಸಿದಳು.

ಈ ಪುಸ್ತಕದ ಬಗ್ಗೆ ನನಗೆ ಮೆಚ್ಚುಗೆಯಾದ ಮತ್ತೊಂದು ಸಂಗತಿ ಸುಂದರ ಮುಖಪುಟ ಮತ್ತು ಒಳಪುಟ ವಿನ್ಯಾಸ.

ಆತ್ಮೀಯರಾದ  ನಾಗರಾಜ ಜಿ ನಾಗಸಂದ್ರ  ಅವರ ಲೇಖನಿಯಿಂದ ಇನ್ನೂ ಉತ್ತಮವಾದ ಕೃತಿಗಳು ಬರಲಿ ಅವುಗಳ ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಹಾರೈಸುತ್ತೇನೆ

ನಾಟಕ:  ಕುರು ಸಾರ್ವಭೌಮ ಮತ್ತು ಯಶೋಧರ

ಲೇಖಕರು : ನಾಗರಾಜ ಜಿ ನಾಗಸಂದ್ರ

ಪ್ರಕಾಶನ: ಬಾಣಗೆರೆ ಪ್ರಕಾಶನ

ಬೆಲೆ: 110₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

No comments: