20 December 2021

ನಮ್ಮ ಉಡುಪುಗಳು ಹೇಗಿರಬೇಕು.


 ನಮ್ಮ ಉಡುಪು ಹೇಗಿರಬೇಕು


ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಎಲ್ಲೆಡೆ ಹರಿದಾಡಿತು. 

ಮಗಳು ತಂದೆಯನ್ನು ಕೇಳಿ ಮೊಬೈಲ್ ಗೆ ಸ್ಕ್ರೀನ್ ಗಾರ್ಡ್ ಹಾಕಿಸಬೇಕು ಹಣ ಕೊಡಪ್ಪ ಎಂದು ಕೇಳುತ್ತಾಳೆ. ಅದಕ್ಕೆ ಅಪ್ಪ ಸಾವಿರಾರು ರೂ ಬೆಲೆ ಬಾಳುವ ಮೊಬೈಲ್ ಗೆ ಮತ್ತೊಂದು ಗಾರ್ಡ್ ಯಾಕೆ ಎಂದು ಅಪ್ಪ ಕೇಳುತ್ತಾನೆ. ಸುರಕ್ಷಿತವಾಗಿ ಇರಲಿ ಎಂದು ಮಗಳು ಉತ್ತರ ಕೊಡುತ್ತಾಳೆ. ಸಾವಿರಾರು ಬೆಲೆ ಬಾಳುವ ಮೊಬೈಲ್ ಸುರಕ್ಷಿತವಾಗಿರುವ ಮತ್ತೊಂದು ಸ್ಕ್ರೀನ್ ಗಾರ್ಡ್ ಹಾಕುವ ನೀನು ಬೆಲೆಕಟ್ಟಲಾಗದ ನಿನ್ನ ದೇಹ ಮುಚ್ಚುವ ಸಭ್ಯ ಬಟ್ಟೆಗಳನ್ನು ಯಾಕೆ ಧರಿಸಲ್ಲ? ಎಂದು ಮಾರ್ಮಿಕಾವಾಗಿ ಪ್ರಶ್ನೆ ಮಾಡುತ್ತಾರೆ.

ಇದರ ಬಗ್ಗೆ ಪರ ವಿರೋಧ ಚರ್ಚೆ ನಡೆದರೂ ಸಭ್ಯ ಬಟ್ಟೆಗಳನ್ನು ಧರಿಸಬೇಕು ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ.


 'ಅಬ್ಬಾ ! ಶಾಲೆ ಮುಗಿಯಿತು, ಇನ್ನು ಸಮವಸ್ತಗಳ ಕಾಟವಿಲ್ಲ: ಗಮಗಿಷ್ಟ ಬಂದ ಉಡುಗೆ ತೊಡುಗೆಗಳನ್ನು ಧರಿಸಿಕೊಳ್ಳಬಹುದು' ಎಂದು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳೂ ಸಹ ನಿರಾಳವಾಗಿ ಉಸಿರಾಡುತ್ತಿದ್ದರು. ಕಾಲೇಜಿನ ಮೆಟ್ಟಿಲನ್ನು ಹತ್ತುತ್ತಲೇ ತಾನು ಸರ್ವಸ್ವತಂತ್ರರಾಗಲು ಇದು ಮೊದಲ ಹೆಜ್ಜೆ ಎಂದುಕೊಳ್ಳಬಹುದು. ಆದರೀಗ 'ಡ್ರೆಸ್ ಕೋಡ್' ಎಂಬ ನಿಯಮ ಜಾರಿಗೆ ತರುವುದೇಕೆ ಎಂದು  ಆದರ ಪರ ವಿರೋಧಿ ಅಲೆಗಳೂ ಏಳುತ್ತಿವೆ. ಇದು ಹೆಣ್ಣು ಮಕ್ಕಳ ಮೇಲೆ ವಿಶೇಷವಾಗಿ ಹೇರಲ್ಪಡುತ್ತಿರುವ ನಿಯಮ

ಹದಿಹರೆಯದ ಹುಡುಗಿಯರು ಮೈ ಮುಚ್ಚುವಂಥ ಬಟ್ಟೆ ಧರಿಸಬೇಕು  ಗೌರವಗಳನ್ನು ಮೂಡಿಸುವಂಥ ಉಡುಪನ್ನು ಧರಿಸಬೇಕು, ಪ್ರಚೋದಕ ಉಡುಪುಗಳು ಧರಿಸಬಾರದು ಎಂಬುದು ಅನುಭವಸ್ಥರ ಮತ್ತು ಹಿರಿಯರ ವಾದ .ಈ ಮಾತಿನಲ್ಲಿ ಇರುವ ಕಾಳಜಿ ದೂರದೃಷ್ಟಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.


ಇಂದಿನ ಯುವಕರೂ  ಚಿತ್ರವಿಚಿತ್ರವಾದ ವಿನ್ಯಾಸ ಹೊಂದಿದ ಹೇರ್ ಸ್ಟೈಲ್ ಮಾಡಿಕೊಂಡು ಯಾವುದೋ ನಟನ ಅಥವಾ ಕ್ರಿಕೆಟರ್ ನ ಅನುಕರಣೆ ಮಾಡುವರು ಇದು ತಪ್ಪು ಎಂದು ಹೇಳದಿದ್ದರೂ ಅವು ಸಭ್ಯತೆ ಮೀರದಿದ್ದರೆ ಚೆನ್ನ .ಇದು ಅವರು ಧರಿಸುವ ಉಡುಪಿಗೂ ಅನ್ವಯಿಸುತ್ತದೆ.

ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುವವರೂ ಇದ್ದಾರೆ. ನಮ್ಮ ಹಣ ನಮ್ಮ ಜೀವನ, ನಮ ಸ್ಟೈಲ್ ಬೇರೆಯವರು ನಮ್ಮ ಉಡುಗೆ ತೊಡುಗೆಗಳನ್ನು ನಿರ್ಧಾರ ಮಾಡುವುದು ಬೇಡ ಎಂಬ ಮಾತುಗಳನ್ನು ಸಹ ಆಡುತ್ತಾರೆ.


 ಎರಡೂ ಕಡೆಯವರ ವಾದಗಳಲ್ಲೂ ಸತ್ಯವಿದೆ. ಹರೆಯ ಎಂಬುದು ಭೋರ್ಗರೆಯುವ ಪ್ರವಾಹವಿದ್ದಂತೆ. ಅದಕ್ಕೆ ಸರಿಯಾದ ಸ್ಥಳದಲ್ಲಿ ಅಣೆಕಟ್ಟು ಕಟ್ಟಿ ಉಪಯುಕ್ತವಾಗಿ ಬಳಸಿಕೊಳ್ಳಬೇಕು. ಹಾಗಂತ ಹೆಜ್ಜೆ ಹೆಜ್ಜೆಗೂ ತಡೆಗೋಡೆಗಳನ್ನು ಎಬ್ಬಿಸಬಾರದು. ಆದರೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ನೀವೊಮ್ಮೆ ವಿಶ್ಲೇಷಣಾತ್ಮಕವಾಗಿ ಆಲೋಚಿಸಿ. ನಿಮ್ಮ ನಿರ್ಧಾರಗಳು ಪೂರ್ತಿಯಾಗಿ ಇತರರ ಅಭಿಪ್ರಾಯಗಳ ಮೇಲೆ ಆಧರಿತವಾಗಿರಬಾರದು.


ಇವತ್ತು ನೀವು ಕೊಳಕಾದ, ಪೂರ್ತಿ ಮೈ ಮುಚ್ಚದಂಥ ಒಂದು ಉಡುಪನ್ನು ಧರಿಸಿದ್ದೀರಿ. ಕೂದಲನ್ನು ಬಾಚಿಕೊಂಡಿಲ್ಲ. ಈ ಅವಸ್ಥೆಯಲ್ಲಿ ನೀವು ಹೊರಬಂದಲ್ಲಿ ಆದೆಷ್ಟು ವಿಧವಾದ ನೋಟಗಳು ಮಾತುಗಳು ನಿಮ್ಮನ್ನು ಇರಿಯುತ್ತವೆ. ನಿಮ್ಮ ಮನಸ್ಸು ಕೂಡಾ ಧರಿಸಿದ ಉಡುಪಿನ ಪ್ರಭಾವದಿಂದ ನಿರುತ್ಸಾಹದಿಂದ ಮಂಕಾಗಿರುತ್ತದೆ. ಶುಭ್ರವಾಗಿ ಸ್ನಾನ ಮಾಡಿ, ಚೆನ್ನಾಗಿ ಐರನ್  ಮಾಡಿದ ಉಡುಪು ಧರಿಸಿ ಹೊರಬನ್ನಿ, ಆಗಲೂ ಅನ್ನುವವರು ಸುಮ್ಮನೆ ಇರಲಾರರು. ಆದರೆ ನಿಮ್ಮ ಚಿತ್ತಸ್ವಾಸ್ಥ್ಯ, ಆತ್ಮವಿಶ್ವಾಸಗಳನ್ನು ಯಾರೂ ಕದಲಿಸಲಾರರು.


"ಊಟ ತನ್ನಿಚ್ಚೆ.ನೋಟ ಪರರಿಚ್ಚೆ"  ಎಂಬ ಗಾದೆ ಕೇಳಿಯೇ ಇದ್ದೀರಿ. ನಿಮ್ಮ ಆಲಂಕಾರ, ಉಡುಗೆ-ತೊಡುಗೆಗಳು ನಿಮ್ಮ ವೈಯಕ್ತಿಕ ವಿಚಾರಕ್ಕೆ ಒಳಪಡುವಂಥವು. ಅದನ್ನು ದುರುಪಯೋಗ ಪಡಿಸಿಕೊಂಡಲ್ಲಿ ನಿಮ್ಮನ್ನು ಇತರರು ದುರುಪಯೋಗಪಡಿಸಿಕೊಳ್ಳುವರು.  ಚೆಲ್ಲುಚೆಲ್ಲಾದ ವರ್ತನೆಗಳು, ಅತಿಯಾದ ಮೇಕಪ್, ವಿಚಿತ್ರ ಕೇಶವಿನ್ಯಾಸಗಳು ನಿಮ್ಮ ಬಗ್ಗೆ ನಿಮ್ಮಲ್ಲೇ ಅನುಚಿತ ಆಕಾಂಕ್ಷೆಗಳನ್ನು ಮೂಡಿಸಬಲ್ಲವು.  ನೀವೇನಾದರೂ ಬಡತನದಲ್ಲಿ ಇದ್ದರೆ  ನಿಮ್ಮ ಉಡುಪು ದುಬಾರಿ ಬೆಲೆಯದ್ದಲ್ಲ. ಹರಿದು ಹೊಲೆದಿರುವಂಥದ್ದು ಎಂಬ ಕೀಳರಿಮೆ ಕಿಂಚಿತ್ತೂ ಬೇಡ. ನಿಮ್ಮ ಪಾಲಕರ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿರಿ. ನಿಮ್ಮನ್ನು ಯಾರಾದರೂ ಹೀಯಾಳಿಸಿದಲ್ಲಿ ಮುಖ ಮುರಿಯುವ ಜವಾಬನ್ನು ಕೊಡಿ. ಇಲ್ಲವೇ ನಿರ್ಲಕ್ಷಿಸಿ.


 ಹತ್ತು ಜನರ ನಡುವೆ ಬಾಹ್ಯ ಸೌಂದರ್ಯದಿಂದ, ಉಡುಪು, ಒಡವೆಗಳಿಂದ ಎದ್ದು ಕಾಣುವ ಭ್ರಮೆ ಬೇಡ. ಹುಲಿಗಳ ಹಿಂಡಿನಲ್ಲಿ ಜಿಂಕೆ ಎದ್ದು ಕಾಣಬಹುದು. ಸುರಕ್ಷಿತವಾಗಿರುವುದಿಲ್ಲ ಎಂಬುದು ನಿಮ್ಮ ನೆನಪಿನಲ್ಲಿ ಇರಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


 

No comments: