16 December 2021

ಸ್ತಿತಪ್ರಜ್ಞರಾಗೋಣ.ಲೇಖನ


 


ನಾವು ಸಾಮಾನ್ಯ ಮಾನವರು ನಾವು ಭಾವನಾ ಜೀವಿಗಳು ಅಂತೆಯೇ ನೋವು ನಲಿವು ನಮ್ಮ ಜೀವನದಲ್ಲಿ ನಾವು ಅನುಭವಿಸುತ್ತಲೇ ಇರುವೆವು .ಜೀವನದಿ ಬೇವು ಬೆಲ್ಲ ಎರಡೂ ಉಂಟು ಆದರೆ ನಾವು ಬಹುತೇಕರು ಬೆಲ್ಲವ ಮಾತ್ರ ಸವಿದು ಬೇವು ಬೇಡವೇ ಬೇಡ ಎಂಬ ಮನಸ್ಥಿತಿಯನ್ನು ಹೊಂದಿದ್ದೇವೆ.ಇದರ ಮುಂದುವರಿದ ಭಾಗವಾಗಿ ನಮಗೇನಾದರೂ ಕಷ್ಟಗಳು ಎದುರಾದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ.ಇನ್ನೂ ಇದೇ ಸ್ಥಿತಿ ಮುಂದುವರೆದರೆ ಖಿನ್ನತೆಗೆ ಜಾರುವ ಸಾದ್ಯತೆಯೂ ಇದೆ .


ಇಂತಹ ಸಮಯದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಕುರಿತು ಚಿಂತಿಸದೇ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ಈ ಸಂಧರ್ಭದಲ್ಲಿ ನಮ್ಮ ಹಿರಿಯರು ಚಿಂತಕರು ಹೇಳಿದ ಪ್ರೇರಣೆಯ ಮಾತುಗಳನ್ನು ನೆನದು ಮುಂದೆ ಸಾಗೋಣ. ನಕಾರಾತ್ಮಕವಾಗಿ ಯೋಚಿಸದೇ ಸಕಾರಾತ್ಮಕವಾಗಿ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳೋಣ.‌ಸೂರ್ಯ ಚಂದ್ರರಿಗೂ ಗ್ರಹಣ ಹಿಡಿಯುವುದು ಆದರೆ ಅದು ಕ್ಷಣಿಕ ಮೋಡಗಳು ಹೆಚ್ಚು ಕಾಲ ಸೂರ್ಯನ ಮುಚ್ಚಲು ಸಾದ್ಯವಿಲ್ಲ. ಅಂತೆಯೇ ನಮಗೊದಗಿದ ತೊಂದರೆಗಳು, ಸಮಸ್ಯೆಗಳೂ ಕೂಡಾ ನಮ್ಮ ಪ್ರಯತ್ನ ಮತ್ತು ಭಗವಂತನ ಕೃಪೆಯಿಂದ ಖಂಡಿತವಾಗಿಯೂ ಬಗೆಹರಿಯುತ್ತವೆ. ರಾತ್ರಿ ಕಳೆದ ಮೇಲೆ ಹಗಲು ಬಂದೇ ಬರುವುದು .ಆದ್ದರಿಂದ ಕಷ್ಟಗಳನ್ನು ದಿಟ್ಟವಾಗಿ ಎದುರಿಸೋಣ . ನೋವು ನಲಿವು. ಕಷ್ಟ ಸುಖಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು ಅವುಗಳನ್ನು ಸ್ತಿತಪ್ರಜ್ಞರಂತೆ ಸ್ವೀಕರಿಸೋಣ.


ಇದಕ್ಕೆ ಪೂರಕವಾಗಿ ನನ್ನ ಒಂದು ಗಜಲ್ ನಿಮಗಾಗಿ


ಗಜಲ್ 


ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ  ನೀನು

ಬಿದ್ದವನೆಂದು ಕೊರಗದಿರು ಮುಂದೆ  ಎದ್ದೇಳುವೆ ನೀನು 


ಅವಮಾನ ಅಪಮಾನಗಳೆ  ಸಾಧನೆಗಳ ಮೆಟ್ಟಿಲು 

ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ  ನೀನು


ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ 

ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು


ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ 

ಕಳೆದಲ್ಲೇ ಹುಡುಕು  ಮುಕ್ತಿ ಹೊಂದುವೆ ನೀನು 


ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ 

ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು 





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: