19 June 2021

ಕಾಮನಬಿಲ್ಲಾಗೋಣ .ಲೇಖನ


 


*ಕಾಮನಬಿಲ್ಲಾಗೋಣ*


ಕೆಲವು ವ್ಯಕ್ತಿಗಳನ್ನು ನೋಡಿದಾಗ, ಅವರ ವಿಚಿತ್ರ ನಡವಳಿಕೆಗಳು, ಮಾತುಗಳು ಹಾವ ಭಾವಗಳನ್ನು ನೋಡಿದಾಗ ದೇವರು ಹೋಮೋಸೇಪಿಯನ್ಸ್ ನಲ್ಲೇ ಎಂತೆಂಥ ಸ್ಪೀಸೀಸ್ ಸೃಷ್ಟಿ ಮಾಡಿರುವನಪ್ಪ ಎನಿಸುವುದು,


ರೇವತಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗದಿರುವುದು ತಿಳಿದಿದ್ದರೂ ಸುಚಿತ್ರ  ಅವಳ ಮುಂದೆ ತನ್ನ ಮಕ್ಕಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದಳು.


ಸತೀಶನಿಗೆ ಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿ ಇರುವುದನ್ನು ತಿಳಿದೂ ಸಹ ಅವನ ಗೆಳೆಯ ರವಿ "ನೀನೇಕೆ ಈ ವರ್ಷ ಮನೆ ಕಟ್ಟಬಾರದು? ನೋಡು ನಾನೆಂಥಹ ಬಂಗಲೆಯಂತಹ ಮನೆ ಕಟ್ಟಿಸಿರುವೆ" ಎಂದು ಹಂಗಿಸುತ್ತಿದ್ದ. 


ಇವು ಕೇವಲ ಸ್ಯಾಂಪಲ್ ,ದಿನನಿತ್ಯ ಇಂತವರು ನಮ್ಮ ಮಧ್ಯ ಬಹಳ ಜನ ಸಿಗುತ್ತಾರೆ,

ನಾವು ಸಮಾಜ ಜೀವಿಯಾದರೂ ಕೆಲವೊಮ್ಮೆ ನಮ್ಮ ನಡವಳಿಕೆಗಳು ಇತರರಿಗೆ ಕಿರಿಕಿರಿ ಉಂಟುಮಾಡುವವು 

ಇಂತವರಿಗೆ ಸೋಶಿಯಲ್ ಮ್ಯಾನರ್ಸ್ ಇರುವುದಿಲ್ಲ ಎಂದು ವಿಶೇಷವಾಗಿ ಹೇಳಬೇಕಿಲ್ಲ.


ಇಂತಹ ವ್ಯಕ್ತಿಗಳ ನಡವಳಿಕೆಗಳನ್ನು ನೋಡಿದಾಗ ಇತ್ತೀಚಿಗೆ ನನ್ನ ಗೆಳೆಯ ಕಳಿಸಿದ  ವಾಟ್ಸಪ್ ಸಂದೇಶ ಓದಿ ಅದರ ಆಧಾರದಲ್ಲಿ ನಮ್ಮ ಸಾಮಾಜಿಕ ನಡವಳಿಕೆಗಳನ್ನು ಈ ಕೆಳಗಿನಂತೆ ಅಳವಡಿಸಿಕೊಳ್ಳಬಹುದು ಅನಿಸಿತು.


 ಕೆಲವೊಮ್ಮೆ ನಾವು ಯಾರಿಗಾದರೂ ಎರಡು ಬಾರಿಗಿಂತಲೂ ಹೆಚ್ಚು  ಕರೆ ಮಾಡಿದಾಗ  ಅವರು ನಮ್ಮ ಕರೆಯನ್ನು ಸ್ವೀಕರಿಸದಿದ್ದರೆ ಅವರಿಗೆ  ಏನಾದರೂ ಮುಖ್ಯವಾದ ಕೆಲಸವಿದೆ ಎಂದು ತಿಳಿದು ನಂತರ ಪ್ರಯತ್ನ ಮಾಡೋಣ.


ಹಲವಾರು ಬಾರಿ ನಾವು ನಮ್ಮ ಸ್ನೇಹಿತರಿಂದ ತುರ್ತು ಬಳಕೆ ಗಾಗಿ ಹಣವನ್ನೋ, ಕೊಡೆಯನ್ನೋ ಲಂಚ್ ಬಾಕ್ಸನ್ನೋ ಪಡೆದಿರುತ್ತೇವೆ ಆದರೆ ಅದನ್ನು ಬಹಳ ಸಲ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿರುವುದಿಲ್ಲ, 


ನಾನು ನನ್ನ

ಗೆಳೆಯನಿಂದ

ಪಡೆದ ಕೊಡೆ|

ಅವನಿಗೆ ಎಂದಿಗೂ

ಹಿಂತಿರುಗಿ ಕೊಡೆ||


ಎಂಬಂತಾಗುವುದು ಬೇಡ ಪಡೆದ ವಸ್ತುಗಳನ್ನು ಹಿಂತಿರುಗಿಸುವುದು ನಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗುವುದು.


 ಯಾರಾದರೂ ನಮ್ಮ ಪರಿಚಿತರು ಸ್ನೇಹಿತರು ಪಾರ್ಟಿ ಕೊಡುವೆವು ಎಂದರೆ ಬೇಕಂತಲೇ ದುಬಾರಿ ತಿನಿಸುಗಳನ್ನು ಕೇಳದೇ ಇರೋಣ ಏಕೆಂದರೆ ಮಾನವನ ಗುಣವೇ ಹಾಗೆ ಪುಕ್ಕಟೆ ಸಿಗುವುದೆಂದರೆ ನನಗೂ ಇರಲಿ ನನ್ನ ಮೊಮ್ಮಕ್ಕಳಿಗೂ ಇರಲಿ ಎಂಬ ಜಾಯಮಾನದವರು ನಾವು, ಬೇರೆಯವರ ಅರ್ಥಿಕ ಪರಿಸ್ಥಿತಿಯನ್ನು ಸಹ ಗಮನದಲ್ಲಿಟ್ಟುಕೊಂಡು ನಮ್ಮ ಬೇಡಿಕೆ ಸಲ್ಲಿಸೋಣ.


ನಮ್ಮ ಕೆಲವು ಸ್ನೇಹಿತರು ಹೊಟೆಲ್ ನಲ್ಲಿ ಬಿಲ್ ಕೊಡುವಾಗ, ಟ್ಯಾಕ್ಸಿಗೆ  ಹಣ ನೀಡುವಾಗ ಮೊದಲೇ ಹೊರಬಂದಿರುತ್ತಾರೆ,ಇಲ್ಲವೇ ಪರ್ಸ್ ಮರೆತುಬಂದಿರುತ್ತಾರೆ! ಹೀಗಾಗುವುದು ಬೇಡ ,ಒಮ್ಮೆ ಅವರು ಹಣ ನೀಡಿದರೆ ಮತ್ತೊಮ್ಮೆ ನಾವು ಕೊಡೋಣ ,ಯಾರಿಗೂ ಹೊರೆಯಾಗುವುದು ಬೇಡ.


ನಮ್ಮ ಕೆಲವು ಸ್ನೇಹಿತರು ತಮ್ಮದೇ ಸರಿ ಎಂದು ವಾದ ಮಾಡುವುದು ಸಾಮಾನ್ಯ 

 ಅದರ ಬದಲಾಗಿ ನಾವು ಇತರರ  ಅಭಿಪ್ರಾಯಗಳನ್ನು ಗೌರವಿಸಬೇಕು . ನಮಗೆ 6  ಕಾಣುವುದು ಎದುರಾಗಿರುವ ಯಾರಿಗಾದರೂ 9 ಕಾಣಿಸುತ್ತದೆ. ಅದಕ್ಕಾಗಿ ಮುಕ್ತ ಮನಸ್ಸು ಹೊಂದೋಣ ಇತರರ ಅಭಿಪ್ರಾಯಗಳನ್ನು ಸ್ವೀಕರಿಸೋಣ, ಆದರೆ ವಿತಂಡವಾದಗಳನ್ನಲ್ಲ.


ಕೆಲವೊಮ್ಮೆ ನಾವು ವಟ ವಟ ಮಾತನಾಡುತ್ತಾ ಇರುವೆವು ನಮ್ಮ ಜೊತೆಯಲ್ಲಿರುವವರು ಮಾತನಾಡಲು ಪ್ರಯತ್ನ ಪಟ್ಟರೂ ಅವರ ಬಾಯಿ ಮುಚ್ಚಿಸಿ ಮಾತನಾಡುತ್ತಲೆ ಇರುವೆವು, ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರದು, ದೇವರು ನಮಗೆ ಒಂದು ಬಾಯಿ ,ಎರಡು ಕಿವಿಕೊಟ್ಟಿರುವನು,ಹೆಚ್ಚು ಕೇಳಿಸಿಕೊಳ್ಳೋಣ ಕಡಿಮೆ ಮಾತನಾಡೋಣ.


ದೇವರೂ ಸಹ ಹೊಗಳಿಕೆಗೆ ಮಾರು ಹೋಗುವನು ಅದಕ್ಕಾಗಿ ಅಷ್ಟೋತ್ತರ,ಸಹಸ್ರ ನಾಮಗಳ ಉದಯವಾಗಿವೆ ,ಇನ್ನೂ ಮಾನವರಾದ ನಾವೂ ಹೊಗಳಿಕೆ ಬೇಡವೆನ್ನಲಾದೀತೆ ?


ತನ್ನ ಸಾಧನೆ ಕಂಡು

ಗೆಳೆಯರಿಂದ ಅವನು

ನಿರೀಕ್ಷಿಸಿದ್ದ ಹೊಗಳಿಕೆ|

ಪಾಪ ಅವನ 

ಸ್ನೇಹಿತರಿಗೆ ಹೊಗಳಲು

ಹೊರಟರೆ ಬರುವುದು

ಆಕಳಿಕೆ||


ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಕಂಜ್ಯೂಸ್ ಆಗದೆ ಎಲ್ಲರ ಮುಂದೆ ಹೊಗಳೋಣ, ತೆಗಳುವುದಿದ್ದರೆ ಒಬ್ಬರೆ ಇದ್ದಾಗ ತೆಗಳೋಣ.


ನಮ್ಮ ಜೀವನದಲ್ಲಿ ಪ್ರತಿ ಕ್ಷಣ ನಮಗೆ ಯಾರಾದರೂ ಯಾವುದಾದರೂ ಸಹಾಯ ‌ಮಾಡುತ್ತಲೇ ಇರುವರು ಅವರಿಗೆ ಕೃತಜ್ಞತೆ ಸೂಚಿಸುವುದು ನಮ್ಮ ಕರ್ತವ್ಯ, ಜಸ್ಟ್ ಅವರಿಗೊಂದು ತ್ಯಾಂಕ್ಸ್ ಹೇಳಿ ಅವರ ಸಂತೋಷವನ್ನು ಗಮನಿಸಿ, ನೀವೂ ತ್ಯಾಂಕ್ಸ್ ಪಡೆದುಕೊಂಡಾಗ ನಿಮಗಾದ ಆನಂದ ಅನುಭವಿಸಿ, ಇದಕ್ಕೇನು ಖರ್ಚಾಗುವುದಿಲ್ಲ ಬದಲಾಗಿ ಆನಂದದ ಕ್ಷಣಗಳು ಲಬ್ಯವಾಗುವವು.


ನಮ್ಮ ಪರಿಚಯದವರು ಸಹೋದ್ಯೋಗಿಗಳು ಆಸ್ಪತ್ರೆಗೆ ಹೊರಟಾಗ ನಾವು ಯಾಕೆ? ಎಲ್ಲಿ? ಹೇಗೆ ? ಎಂದು ಸಿ ಬಿ ಐ ಅಧಿಕಾರಿಗಳ ರೀತಿಯಲ್ಲಿ ತನಿಖೆ ಮಾಡುವುದು ಸಾಮಾನ್ಯ, ಈ ರೀತಿಯ ಪ್ರಶ್ನೆಗಳನ್ನು ಕೆಲವೊಮ್ಮೆ ಕೆಲವರು ಇಷ್ಟ ಪಡುವುದಿಲ್ಲ ಬೇರೆಯರ ಭಾವನೆಗಳನ್ನು ಗೌರವಿಸೋಣ, ಎಲ್ಲಾ ಸರಿಯಾದಾಗ ಕೆಲವೊಮ್ಮೆ ಅವರೆ ನಮಗೆ ಮುಂದೆ ವಿಷಯ ತಿಳಿಸುವರು.


ಐದಾರು ಜನ ಒಟ್ಟಿಗೆ ಸೇರಿದಾಗ ಸುಮ್ಮನೆ ಹೊಟ್ಟೆ ನೋವು ಎನ್ನಿ ,ಕನಿಷ್ಠ ನಾಲ್ಕು, ಮದ್ದು, ಐದು ಸಲಹೆ , ಮೂರು ಊಹೆ ಖಂಡಿತವಾಗಿಯೂ ಸಿಗುತ್ತದೆ ,ನಮ್ಮೂರಲ್ಲಿ ಯಾಕೋ ನೀರು ಸರಿಯಾಗಿ ಬರುತ್ತಿಲ್ಲ ಎಂದಿರೋ ಪಿ ಡಿ ಓ ಇಂದ ಹಿಡಿದು ಸಿ ಇ ಓ ಸೇರಿಸಿ ಕಂಪ್ಲೇಂಟ್ ಕೊಡಿ ಎಂಬ ಸಲಹೆ ವೀರರು ಅಪಾರ, ನಮ್ಮನ್ನು ಕೇಳದ ಹೊರತು ಮತ್ತೊಬ್ಬರ ವ್ಯವಹಾರಗಳಲ್ಲಿ ಮೂಗು ತೂರಿಸದೇ ಇರೋಣ ಅನವಶ್ಯಕ ಸಲಹೆಗಳನ್ನು ನೀಡದಿರೊಇಣ.ಇದು ನಮ್ಮ ವ್ಯಕ್ತಿತ್ವ ಸೂಚಕವಾಗುತ್ತದೆ.


ನಮ್ಮ ಕಣ್ಣುಗಳು ಆರೋಗ್ಯವಾಗಿದ್ದು ಬಿಸಿಲಿನ ತಾಪ ತಡೆಯಲು ಸನ್ಗ್ಲಾಸ್ ಹಾಕಿದ್ದರೆ ರಸ್ತೆಯಲ್ಲಿ ಯಾರಾದರೂ ಪರಿಚಿತರು ಭೇಟಿಯಾದರೆ 

ಅವರೊಂದಿಗೆ ಮಾತನಾಡುತ್ತಿದ್ದರೆ ನಮ್ಮ ಸನ್ಗ್ಲಾಸ್ ತೆಗೆದು ಮಾತನಾಡೋಣ.  ಇದು ಗೌರವದ ಸಂಕೇತ. ಜೊತೆಗೆ ಕಣ್ಣಲ್ಲಿ ಕಣ್ಣಿಟ್ಟು ಮಾತಾನಾಡುವವುದು  ಉತ್ತಮ ಸಂಪರ್ಕಕ್ಕೆ ಪೂರಕ.


ನಮ್ಮಲ್ಲಿ ಕೆಲವರಿಗೆ ನಮ್ಮ ಸಿರಿವಂತಿಕೆಯನ್ನು ಪ್ರದರ್ಶನ ಮಾಡುವ ಖಯಾಲಿ,

 ಬಡವರ ಮಧ್ಯೆ ನಮ್ಮ ಸಂಪತ್ತಿನ ಬಗ್ಗೆ ಎಂದಿಗೂ ಮಾತನಾಡದಿರೋಣ.  ಅದೇ ರೀತಿ, ಮದುವೆಯಾಗಿ ಮಕ್ಕಳಾಗದವರ ಮುಂದೆ   ಮಕ್ಕಳ ಸಾಧನೆಗಳ ಬಗ್ಗೆ ಪದೇ ಪದೇ  ಮಾತನಾಡದಿರೋಣ.


 ಈ ಮೇಲಿನ ಕೆಲ ಸಾಮಾಜಿಕ ನಡವಳಿಕೆಗಳು ಸಣ್ಣ ಸಣ್ಣವು ಎಂದುಕೊಂಡರೂ ಬದಲಾವಣೆ ಚಿಕ್ಕ ಅಂಶಗಳಿಂದಲೇ ಅರಂಭವಾಗುವುದು ಈ ಅಂಶಗಳನ್ನು ಅಳವಡಿಸಿಕೊಂಡು ನೋಡೋಣ , ಬದಲಾವಣೆಗೆ ಪ್ರಯತ್ನ ಮಾಡೋಣ.ನಮ್ಮ ಸಮಾಜದಲ್ಲಿ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಿ ಮನಸ್ಸು ನೋವು ಮಾಡಿಕೊಂಡಿದ್ದರೆ ನಾವೇಗೆ ಸಂತಸವಾಗಿರಲು ಸಾದ್ಯ? ಕೇವಲ ಒಂದು ಬಣ್ಣ ಸೇರಿ ಕಾಮನಬಿಲ್ಲು ಆಗಲು ಸಾಧ್ಯವೇ? ಪ್ರತಿಯೊಬ್ಬರೂ ಸೇರಿ ಅರ್ಥಪೂರ್ಣವಾದ ಕಾಮನ ಬಿಲ್ಲಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


 

No comments: