11 June 2021

ಅವಿಸ್ಮರಣೀಯ ರೈಲು ಪಯಣ. ಲೇಖನ


 

*ಅವಿಸ್ಮರಣೀಯ  ರೈಲು ಪ್ರಯಾಣ.*

ಅರೆ ಮಲೆನಾಡಿನವನಾದ ನಾನು ಮೊದಲಿನಿಂದಲೂ ನಿಸರ್ಗ ಪ್ರಿಯ ಕಾಡು, ಮರ ಗಿಡಗಳೆಂದರೆ ಪ್ರಾಣ, ತೊಂಭತ್ತರ ದಶಕದಲ್ಲಿ ಟಿ ಸಿ ಎಚ್ ಓದುವಾಗ ಟೂರ್ ಹೋದಾಗ ಮೊದಲ ಬಾರಿಗೆ ಪಶ್ಚಿಮ ಘಟ್ಟಗಳ ಹಸಿರ ಸಿರಿಯ ಕಂಡು ಪಂಪ ಯಾಕೆ "ಆರಂಕುಷಮಿಟ್ಟೊಡಂ ನೆ‌‌ನೆವುದೆನ್ನ ಮನಮಂ ಬನವಾಸಿ ದೇಶಮಂ" ಎಂದು ಹೇಳಿದನೆಂದು ಅರ್ಥವಾಯಿತು.

ನಂತರ ಹಲವಾರು ಬಾರಿ ಪಶ್ಚಿಮ ಘಟ್ಟಗಳ ಕಾಡಿನ ಸವಿ ಕಣ್ತುಂಬಿಕೊಂಡಿರುವೆ, ಮಗಳು ಮೂಡುಬಿದಿರೆಯಲ್ಲಿ ಓದುವಾಗ ಅವಳನ್ನು ನೋಡುವ ನೆಪದಲ್ಲಿ, ಪಶ್ಚಿಮ ಘಟ್ಟಗಳ ಕಾಡಿನ  ಸೌಂದರ್ಯವನ್ನು ಹಲವು ಬಾರಿ ಸವಿದಿರುವೆ.

ಬಸ್, ಕಾರ್ ,ಮೂಲಕ ಘಟ್ಟಗಳ ಸೌಂದರ್ಯ ಸವಿದ ನಾನು ಗೆಳೆಯರ ಅನುಭವದ ಮಾತು ಕೇಳಿ ಒಮ್ಮೆ ರೈಲಿನಲ್ಲಿ ಪ್ರಯಾಣ ‌ಮಾಡುತ್ತಾ ಕಾಡಿನ ಸೊಭಗು ಸವಿಯಲು ಯೋಜಿಸಿದೆ.

ಅಂದು ಗೌರಿಬಿದನೂರು ಬಿಟ್ಟಾಗ ಬೆಳಗಿನ ಜಾವ ಮೂರು ಮೂವತ್ತು, ಗೌರಿಬಿದನೂರಿನಿಂದ ರೈಲಿನ ಮೂಲಕ ಯಶವಂತ ಪುರ ತಲುಪಿ ಅಲ್ಲಿಂದ ರೈಲಿನಲ್ಲಿ ಮಂಗಳೂರು ರೈಲಿನಲ್ಲಿ ಪ್ರಯಾಣ ಮಾಡುವುದು ನನ್ನ ಯೋಜನೆ, ರಾತ್ರಿ ಒಬ್ಬನೇ ಮನೆಯಿಂದ ಒಂದೂವರೆ ಕಿಲೊಮೀಟರ್ ಇರುವ ರೈಲು ನಿಲ್ದಾಣಕ್ಕೆ ಹೋದಾಗಲೆ ನನಗೆ ಗೊತ್ತಾಗಿದ್ದು ಆಂದ್ರ ಪ್ರದೇಶದಲ್ಲಿ ಅತಿಯಾದ ಮಳೆಯ ಕಾರಣದಿಂದಾಗಿ ಅಂದಿನ ರೈಲು ರದ್ದಾದದ್ದು, ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಮತ್ತೆ ಬಸ್ ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ ತಲುಪಿ ,ಯಶವಂತಪುರ ಕ್ಕೆ ಬಸ್ ಹಿಡಿದು  ,ರೈಲು ಟಿಕೆಟ್ ಪಡೆದು ಏಳನೇ ಪ್ಲಾಟ್ ಪಾರಂ ಕಡೆ ಹೆಜ್ಜೆ ಹಾಕಿದೆ ಸೈರನ್ ನೊಂದಿಗೆ ರೈಲೊಂದು ಹೊರಡಲು ಸಿದ್ಧವಾಗಿತ್ತು. ಅದೇ ರೈಲು ನಾನು ಪ್ರಯಾಣ ಮಾಡಬೇಕಿರುವುದು ಎಂದು ಗೊತ್ತಾದ ತಕ್ಷಣ ,ನನ್ನ ಕಾಲುಗಳು ತಾವೇ ಓಡಲಾರಂಬಿಸಿದವು, ಜಸ್ಟ್, ಮಿಸ್ ಆಗದೆ ರೈಲು ಹತ್ತಿ ಏದುಸಿರು ಬಿಟ್ಟು ಕುಳಿತೆ.

ಸುಧಾರಿಸಿಕೊಂಡು ನೀರು ‌ಕುಡಿದ ನಂತರ  ನನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ತಿಪಟೂರಿನ ಕೊಬ್ಬರಿ ವರ್ತಕರ ಪರಿಚಯವಾಯಿತು, ಅವರು ಒಮ್ಮೆ ನನ್ನೊಂದಿಗೆ  ಕನ್ನಡದಲ್ಲಿ ,ಕೆಲವೊಮ್ಮೆ ಮುಂಬೈನ ವರ್ತಕರೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಾ ಇದ್ದರು  ,ಕುಣಿಗಲ್ ಸ್ಟೇಷನ್ ಬಂದಾಗ ಪ್ಲಾಟ್ ಪಾರ್ಮ್ ಮೇಲೆ ಮಾರುವ  ಇಡ್ಲಿ ವಡೆ ಖರೀದಿಸಿ ರೈಲಿನಲ್ಲಿ ತಿಂದು ,ಕಿಟಕಿಯಾಚೆ ನೋಡುವಾಗ ಅಲ್ಲಲ್ಲಿ ಕಂಡು ಬಂದ ಕೆರೆ, ತೆಂಗು ಅಡಿಕೆಯ ತೋಟ ನೋಡಿ ,"ಬಹಳ ಸೂಪರ್ ಈ ಸೀನ್ ಅಲ್ವ?" ಅಂದೆ
" ಇದೇನ್ ಸೀನ್ ಸ್ವಾಮಿ ,ಸಕಲೇಶಪುರ ದಾಟಲಿ ಇರಿ ನೋಡುವಿರಂತೆ" ಎಂದರು ವರ್ತಕರು, ಅವರು ಹೇಳಿದ ಮಾತು ನನ್ನ ಗೆಳೆಯರ  ಮಾತಿಗೆ ತಾಳೆಯಾಗಿದ್ದು ಮತ್ತೂ ನನ್ನಲ್ಲಿ ಕುತೂಹಲ ಉಂಟಾಯಿತು, ಹತ್ತು ಮುಕ್ಕಾಲಿಗೆ ಸಕಲೇಶಪುರ ತಲುಪಿತು ನಮ್ಮ ಮಂಗಳೂರು ಎಕ್ಸ್ಪ್ರೆಸ್ ರೈಲು,
" ಇಲ್ಲಿ ಅರ್ಧ ಗಂಟೆ ರೈಲು ನಿಲ್ಲುತ್ತದೆ, ನೀವು ಬೇಕಾದರೆ ನೀರಿನ ಬಾಟಲ್ ಇತರೆ ವಸ್ತು ಕೊಳ್ಳಬಹುದು " ಎಂದರು ಸಹಪ್ರಯಾಣಿಕರು.

ನಾನು ಎರಡು ಲೀಟರ್ ರೈಲ್ ನೀರು ನಾಲ್ಕು ಬಾಳೆ ಹಣ್ಣು ತಂದೆ , ವರ್ತಕರಿಗೆ ಒಂದು ನೀಡಿ ನಾನೂ ತಿನ್ನುವಾಗ ರೈಲು ನಿಧಾನವಾಗಿ ಮಂಗಳೂರು ಕಡೆಗೆ ಚಲಿಸಿತು .

ರೈಲಿನ ವೇಗ ಕ್ರಮೇಣ ಕಡಿಮೆಯಾಯಿತು, ಯಶವಂತಪುರದಿಂದ ಹಾರಿ ಕೊಂಡು ಬಂದ ರೈಲು ಇದೇನಾ? ಸಕಲೇಶಪುರದಲ್ಲಿ ಇಂಜಿನ್ ಸಮಸ್ಯೆ ಆಗಿರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದೆ ,
"ಇಲ್ಲಿಂದ ಇಷ್ಟೇ ವೇಗ , ಗಂಟೆಗೆ ಹೆಚ್ಚೆಂದರೆ ಇಪ್ಪತ್ತು ಕಿಲೋಮೀಟರ್ ಅಷ್ಟೇ, ಈಗ ಈ ರೈಲು ಹೆಸರಿಗೆ ಮಾತ್ರ ಮಂಗಳೂರು ಎಕ್ಸ್ಪ್ರೆಸ್ " ಎಂದು ಜೋರಾಗಿ‌ ನಕ್ಕರು ನನ್ನ ಪಕ್ಕದಲ್ಲೇ ಕುಳಿತ ಬೆಂಗಳೂರಿನಿಂದ ಬಂದ ಯಜಮಾನರು.

ರೈಲು  ಆಮೆ ವೇಗದಲ್ಲಿ  ಚಲಿಸುವಾಗ ಇದ್ದಕ್ಕಿದ್ದಂತೆ ಕತ್ತಲಾದ ಅನುಭವ ಪಕ್ಕದ ಭೋಗಿಯ ಯುವಕರು ಜೋರಾಗಿ ಕಿರುಚುವ ಸದ್ದು ! ಗಾಬರಿಯಿಂದ ನಾನು ಏನಾಯಿತೆಂದು ಕೇಳುವ ಮೊದಲು ಬೆಳಕು ಬಂತು ," ಇದು ಮೊದಲ ಟನಲ್
ಇಂತಹ ಹತ್ತಾರು ಟನಲ್ ಒಳಗೆ ‌ನಮ್ಮ ರೈಲು ಹೋಗಿ ಮುಂದೆ ಸಾಗಲಿದೆ, ಕೆಲವು ಟನಲ್ ಐನೂರು ಮೀಟರ್ ಗಿಂತ ಉದ್ದ ಇವೆ, ನೀವು ಎಂಜಾಯ್ ಮಾಡಿ,‌ಬೇಕಂದರೆ ಜೋರಾಗಿ ಕೂಗಿ ನಮ್ಮದೇನೂ ಅಭ್ಯಂತರವಿಲ್ಲ" ನಕ್ಕರು ವರ್ತಕರು.

ನಾನು ನಕ್ಕು ಕಿಟಕಿಯ ಹೊರಗೆ ಕಣ್ಣು ಹಾಯಿಸಿದರೆ ಸ್ವರ್ಗ ಸದೃಶ ದೃಶ್ಯಗಳು! ಅಲ್ಲಲ್ಲಿ ಜುಳು.. ಜುಳು...ಹರಿವ ಝರಿಗಳು ರೈಲಿನ ಮೇಲೆ ಬಿದ್ದು ,ಕೊಟಕಿಯ ಮೂಲಕ ನಮ್ಮ ಮೈ ಸೋಕುತ್ತಿದ್ದವು, ನಾ ನೋಡದ ಎಷ್ಟೋ ಜಾತಿಯ ಮರ ಗಿಡಗಳ ನೋಡಿದೆ, ಕಣ್ಣು ಹಾಯಿಸಿದಷ್ಟೂ ಕಾಡು , ಅಲ್ಲಲ್ಲಿ ಜರುಗಿದ ಗುಡ್ಡ, ಮೈಮರೆತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ನನಗೆ ನನ್ನ ಸಹಪ್ರಯಾಣಿಕ ಕೆಮಾರಾದಲ್ಲಿ ಪೋಟೋವನ್ನು ಕ್ಲಿಕ್ಕಿಸುವಾಗ ನೆನಪಾಗಿ ನಾನೂ ನನ್ನ ರೆಡ್ಮಿ ನೋಟ್ ೪ ಮೊಬೈಲ್ ತೆಗೆದು ಪೋಟೋ ಕ್ಲಿಕಿಸಲು ರೈಲಿನ ಬೋಗಿಯ ಬಾಗಿಲ ಬಳಿ ಬಗ್ಗಿದಾಗ" ದು ತಪ್ಪು, ಬೇಕಾದರೆ ಕಿಟಕಿಯ ಒಳಗೇ ಎಷ್ಟಾದರೂ ಪೋಟೋ ತೆಗೆದುಕೊಳ್ಳಿ, ಈ ಜಾಗದಲ್ಲಿ ಸೆಲ್ಪಿ, ಪೋಟೋ ಎಂದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಮೊದಲು ಜೀವ ನಂತರ  ನೋಟ " ಎಂದು ಅನುಭವದ ಮಾತು ಹೇಳಿದರು ವರ್ತಕರು ಅಲ್ಲಿಂದ ಮೊಬೈಲ್ ಚಾರ್ಜ್ ಮುಗಿಯುವವರೆಗೆ ಸುರಕ್ಷಿತವಾಗಿ ತೆಗೆದ ಪೋಟೋಗಳು ಈಗಲೂ ನನ್ನ ಮನದಲ್ಲಿ ಮತ್ತು ಹಾರ್ಡ್ ಡಿಸ್ಕ್ ನಲ್ಲಿ ಸುರಕ್ಷಿತವಾಗಿವೆ.

ಸುಮಾರು ಮೂರೂವರೆ ಘಂಟೆಗಳ ಪ್ರಕೃತಿ ಸೊಬಗಿನ ಊಟದ ಮುಂದೆ ಹಸಿವೆಯೇ ಕಾಣಲಿಲ್ಲ ,ವಾಚ್ ನೋಡಿದೆ ಸಂಜೆ ನಾಲ್ಕು ಗಂಟೆ, ಕೆಲವರು ಇಳಿಯಲು ಲಗೇಜ್ ಸಿದ್ದಪಡಿಸಿಕೊಳ್ಳುತ್ತಿದ್ದರು, ನಾನು ಮುಂದಿನ ನಿಲ್ದಾಣ ಯಾವುದು? ಎಂದು ಕೇಳುವ ಮೊದಲೇ ರೈಲು ನಿಂತಿತು, ಇದೇ ಸುಬ್ರಹ್ಮಣ್ಯ ರೋಡ್ ಎಂದರು, ನಾನು ಅಲ್ಲೇ ಇಳಿಯಬೇಕೆಂದು ದಡಬಡನೆ ಇಳಿಯಲು ಹೊರಟೆ ,ಇಳಿಯುವಾಗ ವರ್ತಕರಿಗೆ ನಮಸ್ಕಾರ ಹೇಳಲು ಅಲ್ಲಾಡಿಸಿದೆ ಅವರು ಕಣ್ಣು ಮುಚ್ಚಿದ್ದರು  ಮಾತನಾಡಲಿಲ್ಲ .....
ರೈಲಿನಿಂದ ಇಳಿದು ಧರ್ಮಸ್ಥಳದ ‌ಕಡೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ,ಮತ್ತದೇ ರೈಲಿನ ಪಯಣದ ನೆನಪು, ಕುಟುಂಬ ಸಮೇತ ಮತ್ತೆ ಅದೇ ಮಾರ್ಗದಲ್ಲಿ ಪ್ರಯಾಣ ಮಾಡಲು ಯೋಜನೆ ರೂಪಿಸಿದರೂ ಸಾದ್ಯವಾಗಿಲ್ಲ, ನೋಡೋಣ, ಯಾವಾಗ ಪ್ರಕೃತಿ ಮಾತೆ,ಘಾಟಿ ಸುಬ್ರಮಣ್ಯ ಸ್ವಾಮಿ ,ಮತ್ತು ಧರ್ಮಸ್ಥಳದ ಮಂಜುನಾಥಸ್ವಾಮಿ,ರವರುಗಳು  ಯಶವಂತಪುರ ಮಂಗಳೂರು ಮಾರ್ಗದ ರೈಲು ಪ್ರಯಾಣಕ್ಕೆ ಅಸ್ತು ಎನ್ನುವರೋ ನಾನಂತೂ  ಕಾತುರನಾಗಿ ಕಾದಿರುವೆ.....

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಿ ಜಿ ಹಳ್ಳಿ
ಚಿತ್ರದುರ್ಗ

No comments: