10 June 2021

ದೇವರ ಪೂಜೆ ಪ್ರಾರ್ಥನೆ ಏಕೆ ಮಾಡಬೇಕು.ಲೇಖನ


 ದೇವರ ಪೂಜೆ ಮತ್ತು ಪ್ರಾರ್ಥನೆ ಏಕೆ ಮಾಡಬೇಕು? ಲೇಖನ


ಪ್ರಪಂಚದ ಬಹುತೇಕ ಎಲ್ಲಾ ಧರ್ಮದ ಎಲ್ಲಾ ಜನರು ತಮ್ಮ ದಿನಚರಿಯಲ್ಲಿ ಪೂಜೆ ಮತ್ತು ಪ್ರಾರ್ಥನೆ ಗೆ ಕೆಲ ಸಮಯ ಮೀಸಲಿಟ್ಟಿರುವರು, ಪೂಜೆ ಮತ್ತು ಪ್ರಾರ್ಥನೆಯಿಂದ ನಮಗೆ ಅವ್ಯಕ್ತ ಆನಂದ, ನೆಮ್ಮದಿ ಸಿಗುವುದು ಸುಳ್ಳಲ್ಲ.


ಭಾರತದ ಸನಾತನ ಪರಂಪರೆಯ ಆಧಾರದ ಮೇಲೆ ಹೇಳುವುದಾದರೆ

ಪೂಜೆ ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆಯಾಗಿದೆ. ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನಕ್ಕೆ ಪೂಜೆ ಎನ್ನಬಹುದು.


ಶಂಕರಾಚಾರ್ಯರು ಪೂಜೆಯನ್ನು ಎರಡು ವಿಧಗಳಾಗಿ ವಿಂಗಡಿಸಿ ಅರ್ಥೈಸಿದ್ದಾರೆ,ಮೊದಲ ಅರ್ಥದಲ್ಲಿ ನಾವು ಮಾಡುವ ಶಾಸ್ತ್ರೋಕ್ತವಾದ ಕರ್ಮ ಅಥವಾ ಕೆಲಸಗಳನ್ನು ಪೂಜೆ ಎಂದರು,ಇದು ನಾವು ಮಾಡುವ ,ಸ್ನಾನದಿಂದ ಹಿಡಿದು, ಸಂಧ್ಯಾವಂದನೆ, ಭೋಜನ, ಯಾತ್ರೆ,ಪರೋಪಕಾರ, ಅಂತ್ಯಸಂಸ್ಕಾರ, ಇತ್ಯಾದಿ, ನಾವು ಬಹುತೇಕರು ತಿಳಿದೋ ತಿಳಿಯದೆಯೇ ಒಂದಲ್ಲ ಒಂದು ರೀತಿಯಲ್ಲಿ ಈ ವಿಧವಾದ ಪ್ರಾರ್ಥನೆ ಮಾಡುತ್ತಲೇ ಇರುವೆವು.


ಎರಡನೇ ರೀತಿಯಲ್ಲಿ ಪ್ರಾರ್ಥನೆಯೆಂದರೆ ನಿಯಮಬದ್ದವಾಗಿ, ಸಾಲಿಗ್ರಾಮ, ಕಳಶ,ವಿಗ್ರಹಗಳಿಗೆ ಮಾಡುವ ಶೋಡಶೋಪಚಾರ ಪೂಜೆಯಾಗಿದೆ.


ಕೆಲ ನಾಸ್ತಿಕರು ದೇವರು ,ಪೂಜೆಗಳ ಬಗ್ಗೆ ನಂಬಿಕೆ ಇರದಿರಬಹುದು ಅದು ಅವರವರ ವೈಯಕ್ತಿಕ ವಿಚಾರವಾದರೂ ಪೂಜೆಯಿಂದ ಹಲವಾರು ಉಪಯೋಗವಿರುವುದನ್ನು ನಾವು ಒಪ್ಪಲೇಬೇಕು.

ಪೂಜೆ ಮಾಡುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳು  ಕ್ರಮೇಣ ಕಡಿಮೆಯಾಗಿ,ಸಕಾರಾತ್ಮಕ ಗುಣಗಳು ಬೆಳೆದು ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ,ಪೂಜೆಯ ಬಲದಿಂದ ದೇವರ ಅನುಗ್ರಹ ನಮ್ಮ ಮೇಲಿದೆ ಎಂಬ ಭಾವನಾತ್ಮಕ ಅಂಶದಿಂದ ಕೆಲವೊಮ್ಮೆ   ನಮ್ಮ ಕೆಲಸದಲ್ಲಿ ನಮಗೆ ಹೆಚ್ಚು ಆಸಕ್ತಿ ಬರಬಹುದು, ದೇಹ ಮತ್ತು ಆತ್ಮದ ಶುದ್ಧಿಗಾಗಿ‌ ಪೂಜೆಯ ಅಗತ್ಯವಿದೆ.


ಪೂಜೆ,ಪ್ರಾರ್ಥನೆ ಮುಂತಾದವು ಕೇವಲ ಸಮಯವನ್ನು ಹಾಳು ಮಾಡುವ ವ್ಯರ್ಥ ಕಸರತ್ತು ಎಂಬುವವರಿಗೇನು ಕಡಿಮೆಯಿಲ್ಲ ಅಂತವರಿಗೆ ಈ ಘಟನೆಯನ್ನು ಹೇಳಬಹುದು.


ಒಮ್ಮೆ ಗುರುಗಳ ಬಳಿ ಒಬ್ಬ ಶಿಷ್ಯ ನೇರವಾಗಿ ಪ್ರಶ್ನೆ ಮಾಡಿದ "ಗುರುಗಳೆ, ಈ  ಪೂಜೆ, ಪ್ರಾರ್ಥನೆ, ಭಗವದ್ಗೀತೆ ಓದುತ್ತಾ ಇಷ್ಟು ದಿನ ಕಳೆದರೂ ನನಗೇನು ಉಪಯೋಗವಿಲ್ಲ ನಾನೇಕೆ ಪೂಜೆ ಮಾಡಬೇಕು " ಎಂದನು .

ಗುರುಗಳು ಶಿಷ್ಯನನ್ನು ಹತ್ತಿರ ಕರೆದು ಒಂದು ಬಿಳಿ ಚೀಲ ಕೊಟ್ಟು, ಅದನ್ನು ಇದ್ದಿಲಿನ ಪುಡಿಯಲ್ಲಿ ಅದ್ದಿ, ಕಪ್ಪಾದ ಆ ಚೀಲವನ್ನು ಕೊಟ್ಟು ,ಒಂದು ವಾರಗಳ ಕಾಲ ಈ ಬಟ್ಟೆಯ  ಚೀಲದಲ್ಲಿ ಹತ್ತಿರದ ಕೊಳದಿಂದ ನೀರು ತುಂಬಿಸಿಕೊಂಡು ಬರಬೇಕು ಎಂದು ಆಜ್ಞೆ ಮಾಡಿದರು.


ಗುರುಗಳ ಆಜ್ಞೆಯಂತೆ ಕಪ್ಪಾದ ಚೀಲದಲ್ಲಿ ಕೊಳದಿಂದ ನೀರು ತರಲು ಹೊರಟ ಶಿಷ್ಯ ಗುರುಗಳ ಆಶ್ರಮ ತಲುಪುವ ಮೊದಲೇ ನೀರು ಸೋರಿತ್ತು, ಗುರುಗಳಿಗೆ ಈ ವಿಷಯ ತಿಳಿಸಿದರೂ ,ಚಿಂತಿಸದಿರು ನಾಳೆ ಮತ್ತೆ ಅದೇ ಚೀಲದಲ್ಲಿ ನೀರು  ತೆಗೆದುಕೊಂಡು ಬಾ ಎಂದರು. ಒಂದು ವಾರ ಹೀಗೆಯೆ ಕಳೆಯಿತು, ಶಿಷ್ಯನನ್ನು ಗುರುಗಳು ಅವರ ಬಳಿ ಕರೆದು ಶಿಷ್ಯನ ಇದ್ದಿಲಿನ ಪುಡಿಯಿಂದ ಕಪ್ಪಾಗಿದ್ದ ಚೀಲ ಕ್ರಮೇಣವಾಗಿ ಬಿಳಿಯಾಗಿ ಪರಿವರ್ತನೆ ಆಗಿರುವುದರ ಕಡೆಗೆ ಗಮನ ಸೆಳೆದು

" ನಾವೂ ಸಹ ಪ್ರತಿದಿನ, ಮಾಡುವ ,ಪೂಜೆ,ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ, ಸತ್ಸಂಗ, ಭಗವದ್ಗೀತೆ ಪಠಣ, ಮುಂತಾದವುಗಳು ಕ್ರಮೇಣ ನಮ್ಮಲ್ಲಿ, ಶಾಂತಿ, ನೆಮ್ಮದಿ, ತರುವವು,ನಾವು ಮಾಡಿದ ಪಾಪಕಾರ್ಯಗಳು ಕ್ರಮೇಣ ನಾಶವಾಗುವುವು,  ಅದಕ್ಕಾಗಿ ಎಲ್ಲರೂ ಪೂಜೆ ಮಾಡಬೇಕು " ಎಂದರು.


ಆದ್ದರಿಂದ ಸ್ನೇಹಿತರೆ ನಾವೆಲ್ಲರೂ ನಮ್ಮ ಶಕ್ತಾನುಸಾರ ಸರ್ವಶಕ್ತನಾದ ಭಗವಂತನ ನೆನೆಯುತ್ತಾ ಪೂಜೆ ,ಪ್ರಾರ್ಥನೆ, ಸತ್ಸಂಗ, ಯೋಗಾಸನ, ಪ್ರಾಣಾಯಾಮ, ಧ್ಯಾನ, ಮುಂತಾದವುಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳೊಣ, ತನ್ಮೂಲಕ ಭಗವಂತನ ಕೃಪೆಗೆ ಪಾತ್ರರಾಗಿ ಮುಕ್ತಿ ಹೊಂದಲು ಪ್ರಯತ್ನಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿ ಜಿ ಹಳ್ಳಿ .ಚಿತ್ರದುರ್ಗ






No comments: