28 June 2021

ಪರೀಕ್ಷೆ ಹೇಗಿರಬೇಕು? ಲೇಖನ


 



ಕೋವಿಡ್ ಸಂಧರ್ಭದಲ್ಲಿ ದೇಶಾದ್ಯಂತ ಎಲ್ಲೆಡೆ ಒಂದೇ ಚರ್ಚೆ, ಪರೀಕ್ಷೆ ಮಾಡಬೇಕೆ ?ಬೇಡವೇ? ಮಾಡಿದರೆ ಹೇಗೆ ಮಾಡಬೇಕು ? ಅದರ ಸಾಧಕ ಬಾಧಕಗಳೇನು ? ಎಂಬುದನ್ನು ಜನಸಾಮಾನ್ಯರಿಂದ ಹಿಡಿದು ತಜ್ಞರು ತಮ್ಮದೇ ಆದ ವಾದ ,ಅಭಿಪ್ರಾಯ, ಸಲಹೆಗಳನ್ನು ನೀಡುವರು.

ಹಾಗಾದರೆ ಪರೀಕ್ಷೆ ಎಂದರೇನು ಅದರ ಒಳ ಹೊರಗುಗಳು ಏನೆಂದು ನೋಡೋಣ


ಪರೀಕ್ಷೆ ಎಂಬುದು ಜ್ಞಾನ, ಸಾಮರ್ಥ್ಯ, ಮತ್ತು ಪ್ರದರ್ಶನವನ್ನು ಅಳೆಯುವ ಯಾವುದೇ ಒಂದು ವಿಧಾನ ಎಂದು ಹೇಳಬಹುದು. ಆದರೆ ವಿಪರ್ಯಾಸವೆಂದರೆ ಇಂದು ಕೇವಲ ಜ್ಞಾನವನ್ನು ಅಳೆಯಲು, ಅಂಕಿ ಸಂಖ್ಯೆಗಳಲ್ಲಿ , ಮಕ್ಕಳ ಮತ್ತು ವ್ಯಕ್ತಿಗಳ ಸಾಧನೆಯನ್ನು ಅಳೆಯುವ ಮಾಪಕವಾಗಿ ಬಳಸುತ್ತಿದ್ದೇವೆ.


ಹಲವಾರು ಶಿಕ್ಷಣ ತಜ್ಞರು ಮತ್ತು ಮನಶ್ಶಾಸ್ತ್ರಜ್ಞರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಲೆ ,ಕಾಲೇಜು ಗಳಲ್ಲಿ ಮಕ್ಕಳ ಜ್ಞಾನ, ಕೌಶಲ್ಯ, ಭಾವನಾತ್ಮಕ ,ಅನ್ವಯ ಮುಂತಾದ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲು ಪರೀಕ್ಷೆಯನ್ನು ಬಳಸಲು ಸೂಚಿಸಿದ್ದಾರೆ. ಆದರೆ ಇಂದಿನ ಬಹುತೇಕ ಪರೀಕ್ಷಾ ಪದ್ದತಿಗಳು ಕೇವಲ ಜ್ಞಾನ ಪರೀಕ್ಷೆ ಮಾಡುವಲ್ಲಿ ನಿರತವಾಗಿವೆ 

ಸಾಮಾಜಿಕ ಕೌಶಲ್ಯಗಳು,ಸಂಘಟನಾ ಕೌಶಲ್ಯ, ವೈಜ್ಞಾನಿಕ ಕೌಶಲ್ಯ,ಲಲಿತಕಲೆಗಳು, ಸೃಜನಶೀಲತೆ,ಮನೋಧೋರಣೆ ಮೌಲ್ಯಗಳು ಮುಂತಾದ ಅಂಶಗಳು ಮೌಲ್ಯಮಾಪನದ ವೇಳೆ ಗೌಣವಾಗಿರುವುದನ್ನು ಗಮನಿಸಬಹುದು.


ಹಾಗಾದರೆ ಪರೀಕ್ಷೆಯ ಪದ್ದತಿಯಲ್ಲಿ ಸುಧಾರಣೆ ಆಗಿಲ್ಲವೆ? ಎಂಬ ಪ್ರಶ್ನೆ ಸಹಜ ಖಂಡಿತವಾಗಿಯೂ ಪರೀಕ್ಷಾ ಪದ್ದತಿಯಲ್ಲಿ ಕೆಲ ಸುಧಾರಣೆ ಆಗಿವೆ .ಹಿಂದಿನ ಕಾಲದಲ್ಲಿ ಕೇವಲ ಒಂದು ಅರ್ಧವಾರ್ಷಿಕ ಮತ್ತು ಒಂದು ವಾರ್ಷಿಕ ಪರೀಕ್ಷೆ ಮಾಡಿ ಪಾಸು ,ನಪಾಸು ಮಾದರಿಯ ಮೌಲ್ಯಮಾಪನ ನಡೆಯುತ್ತಿತ್ತು. ಹಲವಾರು ಶಿಕ್ಷಣ ತಜ್ಞರು, ಇದನ್ನು ವಿರೋಧಿಸಿದ ಪರಿಣಾಮವಾಗಿ "ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ "ಜಾರಿಗೆ ಬಂದಿದೆ.

ಇದು ನಿಜಕ್ಕೂ ಸ್ವಾಗತಾರ್ಹ ಕ್ರಮ ಇಲ್ಲಿ ಮೌಲ್ಯಮಾಪನ ಕಲಿಯುವಾಗಲೇ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ,ಇದರಲ್ಲಿ ರೂಪಣಾತ್ಮಕ ಅಂದರೆ ತರಗತಿಯಲ್ಲಿ ಕಾಲಕಾಲಕ್ಕೆ ನಡೆಯುವ ಚಟುವಟಿಕೆಗಳ ಮೂಲಕ ಕಿರುಪರೀಕ್ಷೆಗಳ ಮೂಲಕ ಮಕ್ಕಳ ಕಲಿಕೆಯನ್ನು ಪರೀಕ್ಷೆ ಮಾಡಲಾಗುತ್ತದೆ, ಮತ್ತು ಸಂಕಲಾನಾತ್ಮಕ ಮೌಲ್ಯಮಾಪನವು ನಿಗದಿಯಾದ ಸಮಯದಲ್ಲಿ ಲಿಖಿತ ಮತ್ತು ಮೌಖಿಕವಾಗಿ ಪರೀಕ್ಷೆಗಳನ್ನು ನಡೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ದಾಖಲು ಮಾಡಲಾಗುತ್ತದೆ.

ಇದು ಹಳೆಯ ಪರೀಕ್ಷಾ ಪದ್ದತಿಗಿಂತ ಉತ್ತಮವಾದರೂ ಇದರಲ್ಲಿ ಕೂಡ ದೋಷಗಳು ಇಲ್ಲದಿಲ್ಲ, ಉದಾಹರಣೆಗೆ ಈ ಪದ್ದತಿಯಲ್ಲಿ ನಾವು 90 ರಿಂದ 99 ಅಂಕ ಪಡೆದವರಿಗೆಲ್ಲಾ A+ ಗ್ರೇಡ್ ನೀಡಲಾಗುತ್ತದೆ ,ವರ್ಷ ಪೂರ್ತಿ ಪ್ರಾಜೆಕ್ಟ್ ಗಳನ್ನು ಮಾಡಿ ಮಕ್ಕಳು ಒತ್ತಡಕ್ಕೆ ಸಿಲುಕಬಹುದು.ಮಾಹಿತಿ ಸಂಗ್ರಹ ಮಾಡಲು ಗೂಗಲ್ ಮತ್ತು ಇಂಟರ್ ನೆಟ್ ಹೆಚ್ಚು ಬಳಕೆ ಮಾಡಿ ಇತರೆ ಜ್ಞಾನದ ಮೂಲಗಳನ್ನು ನಿರ್ಲಕ್ಷ್ಯ ಮಾಡುವ ಸಾದ್ಯತೆಯಿದೆ.


ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಂಡಿದ್ದೆವೆ ಅದರಲ್ಲಿ "ಸಮನ್ವಯ ಶಿಕ್ಷಣ" ಸಹ ಒಂದು ಇದರ ಪ್ರಕಾರ ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳ ಜೊತೆಯಲ್ಲಿ ಕಲಿಯುವ ಉತ್ತಮ ಯೋಜನೆ ಇಂತಹ ಮಕ್ಕಳು ಬುದ್ದಿ ಶಕ್ತಿಯಲ್ಲಿ, ಮತ್ತು ಇತರೆ ಅಂಶಗಳಲ್ಲಿ ಸಾಮಾನ್ಯ ಮಕ್ಕಳಿಗಿಂತ ಕಡಿಮೆ ಇದ್ದರೂ ಅವರು ಇತರೆ ಕೌಶಲ್ಯಗಳಲ್ಲಿ ಮುಂದಿರುವರು.ಇಂತಹ ಮಕ್ಕಳ ಸಾಮರ್ಥ್ಯ ಅಳೆಯುಲು ಕೇವಲ ಲಿಖಿತ ಪರೀಕ್ಷೆ ಸೂಕ್ತ ಅಲ್ಲ, ಉದಾಹರಣೆಗೆ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಮೊದಲು ಬೇರೆಯವರ ಸಹಾಯದಿಂದ ಮಾಡಿಕೊಳ್ಳವ ಬುದ್ದಿ ಮಾಂದ್ಯ ಮಗು ಶಾಲಾ ಜೀವನದಲ್ಲಿ ಸ್ನೇಹಿತರೊಡನೆ ಬೆರೆತು ಶಿಕ್ಷಕರ ಮಾರ್ಗದರ್ಶನದಲ್ಲಿ ವರ್ಷದ ಕೊನೆಯಲ್ಲಿ ಅವನ ಕೆಲಸ ಅವನೇ ಮಾಡಿಕೊಂಡರೆ ಅದೇ ಅವನಿಗೆ ರ‌್ಯಾಂಕ್!

ಈ ನಿಟ್ಟಿನಲ್ಲಿ ಸ್ವಲ್ಪ ಪ್ರಗತಿ ಆಗಿರುವುದು ಆಶಾದಾಯಕವಾದ ಬೆಳವಣಿಗೆ.


ಹಾಗಾದರೆ ಆದರ್ಶ ಪರೀಕ್ಷಾ ಪದ್ದತಿ ಯಾವುದು? ಎಂಬ ಪ್ರಶ್ನೆ ಏಳುವುದು ಸಹಜ .ಇದಕ್ಕೆ ಉತ್ತರ ಯಾವುದೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ , ಬದಲಾದ ಕಾಲಘಟ್ಟದಲ್ಲಿ ಇಂದು ಇರುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಮುಂದಿನ ದಿನಗಳಲ್ಲಿ ಔಟ್ ಡೇಟೆಡ್ ಆಗಬಹುದು, ತಾಂತ್ರಿಕತೆ, ಕೃತಕ ಬುದ್ದಿ ಮತ್ತೆ , ಹೆಚ್ಚುತ್ತಿರುವ ಸಾಂಪ್ರದಾಯಿಕವಲ್ಲದ ಉದ್ಯೋಗಗಳು ಮುಂದಿನ ದಿನಗಳಲ್ಲಿ ನಮ್ಮ ಪಠ್ಯಕ್ರಮವನ್ನು ಪುನರ್ ಪರಿಶೀಲಿಸಬೇಕಾಗಬಹುದು,ಆಗ ಅನಿವಾರ್ಯವಾಗಿ ಹೊಸ ಪರೀಕ್ಷಾ ಪದ್ದತಿ ಹೊಸ ಮೌಲ್ಯಮಾಪನ ತಂತ್ರ ಮತ್ತು ಸಾಧನಗಳ ಮೊರೆ ಹೋಗಬೇಕಾದೀತು, ಇದಕ್ಕೆ ಮುನ್ಸೂಚಿಯಾಗಿ ಭಾರತದ ಹೊಸ ಶಿಕ್ಷಣ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತಿದ್ದೇವೆ ಅದರ ಸಮರ್ಪಕವಾದ ಅನುಷ್ಠಾನದಿಂದ ಕಲಿಕೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೊಸ ಯುಗ ಆರಂಭವಾಗುವುದು ಎಂಬ ಆಶಯ ನಮ್ಮದು.


ಮಕ್ಕಳ ಸರ್ವತೋಮುಖ ಬೆಳವಣಿಗೆಯೆ ಶಿಕ್ಷಣ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾತುಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಮೌಲ್ಯಮಾಪನ ಕ್ಕೆ ಬುನಾದಿಯಾಗಬೇಕಿದೆ,

ಮಹಾತ್ಮ ಗಾಂಧಿಜಿಯವರು ಹೇಳಿರುವ ಮೂಲ ಶಿಕ್ಷಣ ಪರಿಕಲ್ಪನೆಗಳಾದ

ಕರ( ಕೈ) ಉರ( ಹೃದಯ) ಶಿರ( ಜ್ಞಾನ) 

ಇವುಗಳ ಸಮನ್ವಯವಿರುವ 

ಯಾವುದೇ ಪದ್ದತಿಯ ಶಿಕ್ಷಣ ಮತ್ತು ಪರೀಕ್ಷಾ ಪದ್ದತಿಗಳು ಇಂದಿಗೂ ಪ್ರಸ್ತುತ ಎಂಬುದರಲ್ಲಿ ಎರಡು ಮಾತಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


No comments: