26 June 2021

ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗಳು.ಲೇಖನ


 ಪವಾಡ ಪುರುಷ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಗಳು 


ನಮ್ಮ ಕರ್ನಾಟಕದಲ್ಲಿ ಸಹ ಹಲವಾರು ಸಿದ್ದ ಸಾಧಕರು, ಪವಾಡ ಪುರುಷರು ಪವಾಡಗಳನ್ನು ಮಾಡಿ ಮನೆ ಮಾತಾಗಿದ್ದಾರೆ, ಪೂಜ್ಯರಾಗಿದ್ದಾರೆ, 

ಅಂತಹ ಹಲವಾರು ಪವಾಡ ಪುರುಷರಲ್ಲಿ ನನಗೆ ತಿಳಿದ ಕೆಲವರ ಹೆಸರು ಹೇಳುವುದಾದರೆ, ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿ, ಕೊಳಾಳು ಕೆಂಚವಧೂತರು ,ಕಂದೀಕೆರೆ ಶಾಂತಜ್ಜ ಇತ್ಯಾದಿ...


ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿ ರವರ ಕೆಲ ಪವಾಡಗಳನ್ನು ನೋಡುವುದಾದರೆ


೧ ಬೆಂಗಾಡಾದ ನಾಯಕನ ಹಟ್ಟಿ ಪ್ರದೇಶದಲ್ಲಿ ಕೆರೆಕಟ್ಟಿಸುವ ಕಾರ್ಯ ಜಾರಿಯಲ್ಲಿತ್ತು ,ಕಾರ್ಮಿಕರು ಸಂಜೆ ಕೂಲಿಗಾಗಿ ನಿರೀಕ್ಷೆಯಲ್ಲಿ ಇದ್ದರು, ಆಗ ಸ್ಥಳಕ್ಕೆ ಬಂದ ತಿಪ್ಪೇರುದ್ರಸ್ವಾಮಿಗಳು ,ಎಲ್ಲರೂ ಕುಳಿತುಕೊಂಡು ನಿಮ್ಮ ಮುಂದೆ ಒಂದೊಂದು ಮಣ್ಣಿನ ಗುಡ್ಡೆ ಮಾಡಿಕೊಳ್ಳಲು ಹೇಳಿದರು, ಏನೂ ಅರ್ಥವಾಗದೆ ಕುಳಿತ ಕಾರ್ಮಿಕರು ತಮ್ಮ ಮುಂದೆ ಮಣ್ಣ ರಾಶಿ ಮಾಡಿದರು, ತಮ್ಮ ಕೈಯಲ್ಲಿ ಹಿಡಿದ ಬೆತ್ತದಿಂದ ಎಲ್ಲಾ ಮಣ್ಣಿನ ರಾಶಿಗಳಿಗೆ ಮಂತ್ರಿಸಿ, ಈಗ ಮಣ್ಣಿನ ರಾಶಿಯಲ್ಲಿ ನಿಮ್ಮ ಕೂಲಿಯಿದೆ ನೋಡಿ ಎಂದರು. ಕುತೂಹಲದಿಂದ ಕಾರ್ಮಿಕರು ಮಣ್ಣ ರಾಶಿ ತೆರೆದರೆ ಕೆಲವರಿಗೆ ಬಂಗಾರದ ನಾಣ್ಯಗಳು, ಕೆಲವರಿಗೆ ಬೆಳ್ಳಿಯ ನಾಣ್ಯಗಳು ಲಬಿಸಿದ್ದವು! ಇನ್ನೂ ಕೆಲವರ ಮಣ್ಣಿನ ರಾಶಿಯಲ್ಲಿ ಏನೂ  ಇರಲಿಲ್ಲ, ಅಂತವರಿಗೆ ಕೆಲಸದಲ್ಲಿ ನಾವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅರ್ಥವಾಗಿತ್ತು, ಓರ್ವ ಪ್ರಾಮಾಣಿಕ ಮಹಿಳೆ ಸ್ವಾಮಿ ಗಳ ಬಳಿ ಬಂದು" ಸ್ವಾಮಿ ನನಗೆ ಹೆಚ್ಚು ನಾಣ್ಯ ಬಂದಿದೆ ತೆಗೆದುಕೊಳ್ಳಿ" ಎಂದರು ಆಗ ಸ್ವಾಮಿ ಗಳು "  ನೋಡಮ್ಮ ನೀನು ಗರ್ಭಿಣಿ ಯಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ ಆ ಹೆಚ್ಚಿನ ನಾಣ್ಯ     ನಿನ್ನ ಹೊಟ್ಟೆ ಯಲ್ಲಿ ಕೆಲಸ ಮಾಡಿದ ಮಗುವಿಗೆ" ಎಂದರು . ಇದನ್ನು ತಿಪ್ಪೇರುದ್ರಸ್ವಾಮಿ ಗಳು " ಮಾಡಿದಷ್ಟು ನೀಡು ಭಿಕ್ಷೆ " ಎಂದು ಕರೆದರು.


೨ ಒಮ್ಮೆ ಒಂದು ಹಳ್ಳಿಯಲ್ಲಿ ಒಂದು ಕುಟುಂಬ ಎಮ್ಮೆಯ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿತ್ತು, ಈಗಿರುವಾಗ ಒಂದು ದಿನ ಎಮ್ಮೆ ಅಕಾಲಿಕವಾಗಿ ಮರಣ ಹೊಂದಿತು, ಕುಟುಂಬದ ಸದಸ್ಯರು ಚಿಂತಾಕ್ರಾಂತರಾಗಿ ಅಳುತ್ತಾ ಕುಳಿತರು, ಅದೇ ದಾರಿಯಲ್ಲಿ ಬಂದ ತಿಪ್ಪೇರುದ್ರಸ್ವಾಮಿ ಗಳು ತಮ್ಮ ಬೆತ್ತದಿಂದ ಎಮ್ಮೆಯನ್ನು ಬದುಕಿಸಿ  ಹಾಲು ಕರೆದು ಕುಟುಂಬದ ಸದಸ್ಯರಿಗೆ ನೀಡಿದರು ." ಇದು ಸತ್ತೆಮ್ಮೆ ಬದುಕಿಸಿದ ಪವಾಡ" ಎಂದು ಹೆಸರು ಪಡೆಯಿತು.


೩ ತಿಪ್ಪೇರುದ್ರಸ್ವಾಮಿಗಳು ಪಂಚಗಾಣಾಧೀಶರಲ್ಲಿ  ಒಬ್ಬರು ಎಂದು ಹೇಳುವರು ಅವರು ಒಮ್ಮೆ ದೇಶ ಸಂಚಾರ ಮಾಡುತ್ತಾ ನಾಯಕನ ಹಟ್ಟಿ ಗೆ ಬಂದಾಗ ರಾತ್ರಿಯಲ್ಲಿ ತಂಗಲು ಸ್ತಳ ಹುಡುಕುವಾಗ ಒಂದು ಮಾರಮ್ಮನ ದೇವಾಲಯ ನೋಡಿ ಒಳಹೋಗಲು ಸಿದ್ದರಾದಾಗ ಮಾರಮ್ಮ ನಿರಾಕರಿಸಿದರು," ಹೋಗಲಿ ಒಂದು ಬೆತ್ತ ಮತ್ತು ಜೋಳಿಗೆ ಇಡಲು ‌ಗುಡಿಯಲ್ಲಿ ಅವಕಾಶವನ್ನು ನೀಡು " ಎಂಬ ಮನವಿಗೆ ಮನ್ನಿಸಿ ಜೋಳಿಗೆ ಮತ್ತು ಬೆತ್ತ ಗುಡಿಯಲ್ಲಿ ಇಟ್ಟ ತಕ್ಷಣ ಗುಡಿಯಲ್ಲಿ ಅಸಂಖ್ಯಾತ ಬೆತ್ತ, ಜೋಳಿಗೆ ತುಂಬಿದವು, ಕೊನೆಗೆ  ಮಾರಮ್ಮನವರಿಗೆ ಇವರು ಪಂಚಗಣಾದೀಶರಲ್ಲಿ ಓರ್ವರು ಎಂದು ತಿಳಿದು   ಆ ದೇಗುಲ ಬಿಟ್ಟು ಹೊರಬಂದರು.


೪ ಒಮ್ಮೆ ಗ್ರಾಮದ ಓರ್ವ ವ್ಯಕ್ತಿಯು ಬಡತನದ ಬೇಗೆಯಲ್ಲಿ ಬೆಂದು ಬೇಸತ್ತು ಕುಳಿತಿದ್ದಾಗ ತಿಪ್ಪೇರುದ್ರಸ್ವಾಮಿ ರವರು ಅವರಿಗೆ ಧಾನ್ಯ ನೀಡುವ ಅಕ್ಷಯ ವಾಡೆ( ಧಾನ್ಯ ಸಂಗ್ರಹ ಮಾಡುವ ಸಾಧನ) ನೀಡಿದರು." ಪ್ರತಿದಿನ ಈ ವಾಡೆಯ ಕೆಳಭಾಗದಲ್ಲಿರುವ ಚಿಕ್ಕ ತೂತಿನ ಬಳಿ ಮೊರ ಹಿಡಿದರೆ ಅಂದು ನಿಮಗೆ ಬೇಕಾದ ದವಸ ಧಾನ್ಯ ಬರುವುದು , ಆದರೆ 

..ಎಚ್ಚರಿಕೆ ಯಾವುದೇ ಕಾರಣದಿಂದ ವಾಡೆಯ ಬಾಗಿಲು ತೆರೆಯಬಾರದು" ಎಂದು ಹೇಳಿ ಆಶೀರ್ವದಿಸಿ ಸ್ವಾಮಿಗಳು ಹೊರಟರು, ಹದಿನೈದು ದಿನ ಸಮಯಕ್ಕೆ ಸರಿಯಾಗಿ ಪವಾಡದ  ದವಸ ಧಾನ್ಯಗಳನ್ನು ಪಡೆದ ದಂಪತಿಗಳು ಸುಖವಾಗಿದ್ದರು ,ಒಂದು ದಿನ ಆ ಮನೆಯ ಗೃಹಿಣಿ ಕುತೂಹಲದಿಂದ ವಾಡೆಯ ಬಾಗಿಲು ತೆರದರು, ಇಡೀ ವಾಡೆ ಸುಟ್ಟ ಬೂದಿಯಾಯಿತು!



ಇಂತಹ ಅಸಂಖ್ಯಾತ ಪವಾಡಗಳನ್ನು ಮಾಡಿರುವ  ತಿಪ್ಪೇರುದ್ರಸ್ವಾಮಿಗಳು ಕೋಟ್ಯಂತರ ಭಕ್ತಾದಿಗಳಿಗೆ ಇಂದಿಗೂ ವರ ನೀಡುವ ದೇವರು , 


ನೀವು ಕೂಡ ಒಮ್ಮೆ ಈ ಪವಾಡಪುರುಷರ ನೆಲೆ ಕಾಣಲು ಉತ್ಸುಕರಾಗಿದ್ದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಕ್ಕೆ ಬರಬೇಕು ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಮೂವತ್ತೈದು ಕಿಲೋಮೀಟರ್   ದೂರವಿದೆ ,ಉತ್ತಮ ಸಾರಿಗೆ ಸಂಪರ್ಕವಿದೆ , ಬನ್ನಿ ತಿಪ್ಪೇರುದ್ರಸ್ವಾಮಿ ರವರ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ನೀಡಿ ಪುನೀತರಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: