19 June 2021

ಸಮ ಸಮಾಜಕ್ಕೆ ಪಣ ತೊಡೋಣ .ಲೇಖನ


 ಸಮ ಸಮಾಜಕ್ಕೆ ಪಣತೊಡೋಣ ಲೇಖನ

ಶತಮಾನಗಳಿಂದ ವಿವಿಧ ರೀತಿಯಲ್ಲಿ ತುಳಿತಕ್ಕೊಳಗಾದ ಜನರ ಮೇಲೆ ಶೋಷಣೆಗಳು ನಡೆದುಕೊಂಡೇ ಬಂದಿವೆ ಅದು ಇಂದಿಗೂ ಮುಂದುವರೆದಿರುವುದು ಶೋಚನೀಯ ಮತ್ತು ಆತಂಕಕಾರಿಯಾಗಿದೆ.


ಬುದ್ದ, ಬಸವಣ್ಣ, ವಿವೇಕಾನಂದರಾದಿಯಾಗಿ ಗಾಂದೀಜಿ, ಅಂಬೇಡ್ಕರ್ ರಂತಹ ಮಹಾನ್ ಚೇತನಗಳು ತುಳಿತಕ್ಕೊಳಗಾದವರ ಏಳಿಗೆಗೆ ಶ್ರಮಿಸಿದರು, ಇವರ ಶ್ರಮದ ಪರವಾಗಿ ಇಂದಿನ ದಿನಗಳಲ್ಲಿ ಸ್ವಲ್ಪ ಶೋಷಣೆಯ ಪ್ರಮಾಣದಲ್ಲಿ ಕಡಿಮೆಯಾದರೂ ಪೂರ್ಣವಾಗಿ ನಿಂತಿಲ್ಲ.


ಸಾಮಾಜಿಕ ,ಆರ್ಥಿಕ, ರಾಜಕೀಯ, ಶೈಕ್ಷಣಿಕ. ಔದ್ಯೋಗಿಕ ಹೀಗೆ ವಿವಿದ ರಂಗಗಳಲ್ಲಿ ಶೋಷಣೆ ಅವ್ಯಾಹತವಾಗಿ ಮುಂದುವರೆದಿದೆ.


ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು ಶಿಕ್ಷಣದ ಕೊರತೆ, ಮಾಹಿತಿ ಕೊರತೆ, ಅಜ್ಞಾನ, ಆರ್ಥಿಕ ಅವಲಂಬನೆ ಮೂಲಭೂತ ಸೌಲಭ್ಯಗಳ ಕೊರತೆ, ಮೂಢನಂಬಿಕೆಗಳು, ಉಳ್ಳವರ ದರ್ಪ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.


ಹಾಗಾದರೆ ಹೀಗೆ ತುಳಿತಕ್ಕೊಳಗಾದವರ ಶೋಷಣೆಗೆ ಕೊನೆ ಇಲ್ಲವೆ ?


ನಮ್ಮ ನಾಡಿನ ಚಿಂತಕರು, ಕವಿಗಳು, ಈ ಶೋಷಣೆಯ ವಿರುದ್ಧವಾಗಿ ದ್ಚನಿ ಎತ್ತಿದ್ದಾರೆ ಇದರಲ್ಲಿ ರಾಷ್ಟ್ರಕವಿ ಕುವೆಂಪು ,ಶಿವರಾಮ ಕಾರಂತರು ಹಾಗೂ ಇತರೆ ಕವಿಗಳು ತಮ್ಮ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಬವಣೆಗಳನ್ನು ಚಿತ್ರಿಸಿ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರಣೆ ನೀಡಿದರು.


ಇತ್ತೀಚಿನ ನಮ್ಮನಗಲಿದ  ದಿವಂಗತ ಕವಿಗಳಾದ ಸಿದ್ದಲಿಂಗಯ್ಯ ರವರು ಶೋಷಣೆ ವಿರುದ್ಧದ ಧ್ವನಿಯನ್ನು ಜೋರಾಗಿ ಮೊಳಗಿಸಿ ಉಳ್ಳವರು ಮಾಡುವ ಶೋಷಣೆ  ವಿರುದ್ಧವಾಗಿ " ಇಕ್ರಲಾ... ಒದಿರಲ...." ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವನೂರ ಮಹಾದೇವ ರವರು ಸಹ ಈ ನಿಟ್ಟಿನಲ್ಲಿ ಸಂಘಟನೆ, ಸಾಹಿತ್ಯದ ಮೂಲಕ ತುಳಿತಕ್ಕೊಳಗಾದವರ ಜಾಗೃತಿ ಮೂಡಿಸುತ್ತಿದ್ದಾರೆ.

ಹೌದು ನಾನು ತುಳಿತಕ್ಕೊಳಗಾದವರ ಪರ ಇರುವೆನುಅವರ ಶೋಷಣೆ ವಿರುದ್ಧ ಹಲವಾರು ಬಾರಿ ಧ್ವನಿ ಎತ್ತಿದ್ದೇನೆ.
ಶಿಕ್ಷಕನಾಗಿ ,ಸಾಹಿತಿಯಾಗಿ ನಾನು ನೇರವಾಗಿ ತರಗತಿಯಲ್ಲಿ   ನನ್ನ ವಿದ್ಯಾರ್ಥಿಗಳಿಗೆ ತುಳಿತಕ್ಕೊಳಗಾದವರ ಏಳ್ಗೆಗೆ ಪಣ ತೊಡಲು ಕರೆ ನೀಡುತ್ತಾ, ಪರೋಕ್ಷವಾಗಿ ಸಾಹಿತ್ಯದಲ್ಲೂ ಸಹ ವಿವಿದ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಶೋಷಣೆಯ ವಿರುದ್ಧ ಧ್ವನಿ ಎತ್ತಿರುವೆ , ಹಾಗೂ ತುಳಿತಕ್ಕೊಳಗಾದವರಿಗೆ ಆರ್ಥಿಕ ಸಹಾಯವೂ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿರುವೆನು .

ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ರವರು ಹೇಳಿದಂತೆ ತುಳಿತಕ್ಕೊಳಗಾದವರು ಮೇಲೆ ಬರಲು ಮೂರು ದಾರಿಗಳು  ಅವು " ಶಿಕ್ಷಣ, ಸಂಘಟನೆ , ಹೋರಾಟ" ಬನ್ನಿ ಆ ಮಹಾಚೇತನ ನೀಡಿರುವ ದಾರಿಯಲ್ಲಿ ಸಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಪಣ ತೊಡೋಣ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: