15 June 2021

ಮಾದರಿಯಾಗೋಣ .ಲೇಖನ


 *ಮಾದರಿಯಾಗೋಣ"

ನಾನು ಇದುವರೆಗೆ ವೃದ್ದಾಶ್ರಮಕ್ಕೆ ಭೇಟಿ ನೀಡಿಲ್ಲ
ಆದರೆ ಆ ಪದ ಕೇಳಿಯೇ ಮನದಲ್ಲಿ ಬೇಸರ ಮೂಡುವುದು, ಮಾನವನು ಏಕೆ ಹೀಗೆ ಸ್ವಾರ್ಥಿಯಾದ? ಎಂದು ಪ್ರಶ್ನೆ ಏಳುವುದು ,

ಹೆತ್ತು, ಹೊತ್ತು ಸಾಕಿ ಸಲಹಿದ  ತಂದೆ ತಾಯಿಗಳು ಅವರ ಸಂಧ್ಯಾ ಕಾಲದಲ್ಲಿ ಮಕ್ಕಳಿಗೆ ಬೇಡವಾಗುವುದು ವಿಪರ್ಯಾಸ,

ಮೌಲ್ಯಗಳ ಅಧಃಪತನ, ಆಧುನಿಕ ಸಮಾಜದ ಪ್ರಭಾವ ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವ, ಹೆಚ್ಚಾದ ವಿಭಕ್ತ ಕುಟುಂಬಗಳ ಒಲವು ಹೀಗೆ ವೃದ್ದಾಶ್ರಮಗಳು ಹೆಚ್ಚಾಗಲು ನಾನಾ ಕಾರಣಗಳನ್ನು ನೀಡಬಹುದು.

ಈ ಸಂಧರ್ಭದಲ್ಲಿ ಡುಂಡಿರಾಜ್ ರವರ ಹನಿಗವನ ನೆನಪಾಯಿತು

"ಜನ ಆದರೂ ಅಷ್ಟೇ
ದನ ಆದರೂ ಅಷ್ಟೇ
ಒಂದೇ ಲಾಜಿಕ್ಕು
ಲಾಭ ಇರುವವರೆಗೆ
ಸಾಕು|
ಆಮೇಲೆ

ಬಿಸಾಕು||"


ಹೌದಲಲ್ಲವೆ ? ನಾವೆಲ್ಲರೂ ಇದನ್ನೇ ಮಾಡುವುದು ನಮ್ಮ ಪಾಲಕರಿಂದ ನಮಗೆ ಲಾಭ ಆಗುವಂತಿದ್ದರೆ ಮಾತ್ರ ಅವರನ್ನು ಸಾಕುವೆವು ಅವರಿಂದ ನಮಗೆ ಉಪಯೋಗ ಇಲ್ಲವೆಂದು ಗೊತ್ತಾದ ನಂತರ ವೃದ್ದಾಶ್ರಮದ ಕಡೆ ಸಾಗಹಾಕುವೆವು, ಈ ವಿಚಾರದಲ್ಲಿ ನಮ್ಮ ನಡವಳಿಕೆಗಳು ಪ್ರಾಣಿಗಳಿಗಿಂತ ಕಡೆಯಾಗಿವೆ ಎಂದು ಹೇಳಲು ಬೇಸರವಾಗುತ್ತದೆ.


ವೃದ್ದಾಶ್ರಮಗಳು ಹೆಚ್ಚಾಗಲು ಕುಟುಂಬದ ಕಲಹಗಳು ಕೆಲವೊಮ್ಮೆ ಕಾರಣವಾಗುತ್ತವೆ ,ಹೊಸದಾಗಿ ಮದುವೆಯಾಗಿ ಬಂದ ಸೊಸೆಗೆ ಅತ್ತೆ ಮಾವ ಹೊರೆಯಾಗಿ ಅವರಿಂದ ದೂರ ಸರಿಯಲು ಸಂಚು ರೂಪಿಸುವರು( ಎಲ್ಲರೂ ಅಲ್ಲ) ಇಲ್ಲವೇ ಹಿರಿಜೀವಗಳಿಗೆ ಕಿರಿ ಜೀವಗಳು ಕಿರುಕುಳ ನೀಡಿ ಅವರೆ ವೃದ್ದಾಶ್ರಮದ ಕಡೆ ಹೋಗುವಂತೆ ಮಾಡುವರು.


ವಯಸ್ಸಾದ ಅಪ್ಪ ಅಮ್ಮನ


ವೃದ್ದಾಶ್ರಮಕ್ಜೆ ಸೇರಿಸಿ


ಬಂದ ಮಗ ಅಂದುಕೊಂಡ


ತಪ್ಪಿತು ಒಂದು ಯೋಚನೆ |


ಮರುಗುತ್ತಾ ಅಮ್ಮ
ಮನದಲ್ಲೇ ಹಾರೈಸಿದಳು
ನಿನ್ನ ಮಕ್ಕಳು ನಿನ್ನಂತೆ
ಮಾಡದಿರಲಿ ಯೋಜನೆ||

ಕೆಲವು ಕಡೆ, ಕೋರ್ಟ್ ಗಳು ,ಇನ್ನೂ ಕೆಲವು ಕಡೆ ಕಾನೂನುಗಳ ಮೂಲಕ ಪೋಷಕ ರನ್ನು ನೋಡಿಕೊಳ್ಳಲು ಬಲವಂತವಾದ ಪ್ರಯತ್ನ ನಡೆದಿವೆ ,ಆದರೆ ಮಾನವನ ಹೃದಯದಾಂತರಾಳದಿ ಪೋಷಕರ ಮೇಲಿನ ಪ್ರೀತಿಯಿಂದ ಪೋಷಕರ ಹಾರೈಕೆ ಮಾಡದಿದ್ದರೆ ಎಷ್ಟೇ ಕಾನೂನು ಮಾಡಿದರೂ ವ್ಯರ್ಥ.

ನಾವು ಎಷ್ಟೇ ಅನಾಧರ ಮಾಡಿದರೂ ನಮ್ಮ ಪೋಷಕರು ನಮ್ಮ ಏಳ್ಗೆ ಬಯಸುತ್ತಾರೆ, ಒಂದು ಬಾರಿ ನಾವೂ ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ನಮಗೂ ವಯಸ್ಸಾಗುವುದು, ಎಂದು ಅರಿತರೆ ನಮ್ಮ ತಂದೆ ತಾಯಿಗಳು ನಮಗಾಗಿ ಮಾಡಿದ ತ್ಯಾಗ, ಕಷ್ಟಗಳನ್ನು ನೆನೆದರೆ ಖಂಡಿತವಾಗಿಯೂ ನಾವು ನಮ್ಮ ತಂದೆ ತಾಯಿಗಳನ್ನು ವೃದ್ದಾಶ್ರಮಗಳಿಗೆ ಸೇರಿಸುವುದಿಲ್ಲ, ಬದಲಾವಣೆ ಯಾವಾಗ ಬೇಕಾದರೂ ಯಾರಿಂದ ಬೇಕಾದರೂ ಆಗಬಹುದು, ಅದು ನಮ್ಮಿಂದಲೇ ಆಗಲಿ, ನಾವು ಪ್ರತಿಯೊಬ್ಬರೂ ನಮ್ಮ ತಂದೆ ತಾಯಿಗಳನ್ನು ಹಾರೈಕೆ ಮಾಡುವುದನ್ನು ಆಂದೋಲನ ರೂಪದಲ್ಲಿ ಜಾರಿಗೊಳಿಸಿಕೊಳ್ಳೋಣ , ಒಳ್ಳೆಯ ಆಚರಣೆಗಳು ಬೇಗ ಎಲ್ಲೆಡೆಗೂ ವಿಸ್ತಾರವಾಗಿ ಹರಡದಿದ್ದರೂ ಕ್ರಮೇಣವಾಗಿ ಒಳ್ಳೆಯದಾಗುತ್ತದೆ, ನಾವೆಲ್ಲರೂ ನಮ್ಮ ಪೋಷಕರನ್ನು ಅವರ ಇಳಿವಯಸ್ಸಿನಲ್ಲಿ ಹಾರೈಕೆ ಮಾಡುವ ಪಣ ತೊಡೋಣ ಇತರರಿಗೆ ಮಾದರಿಯಾಗೋಣ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಿ ಜಿ ಹಳ್ಳಿ
ಚಿತ್ರದುರ್ಗ

No comments: