20 June 2021

ಯೋಗಿಗಳಾಗೋಣ


 



ಯೋಗಿಗಳಾಗೋಣ 


ಯೋಗವು ಪ್ರಪಂಚಕ್ಕೆ ಮನು ಕುಲಕ್ಕೆ ಭಾರತ ನೀಡಿದ ಹೆಮ್ಮೆಯ ಕೊಡುಗೆ ಎಂದು ಹೇಳಲು ಭಾರತೀಯರಾದ ನಮಗೆ ಹೆಮ್ಮೆ ಇದೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ ಹಕ್ಕೊತ್ತಾಯ ಮಾಡಿದ ಪರಿಣಾಮವಾಗಿ ಪ್ರತಿ ವರ್ಷ ಜೂನ್ ಇಪ್ಪತ್ತೊಂದನೇ ದಿನ "ವಿಶ್ವ ಯೋಗ ದಿನ" ಎಂದು ಘೋಷಣೆ ಮಾಡಿದೆ.


ಪತಂಜಲಿ ಯೋಗ ಶಿಕ್ಷಣ ಸಮಿತಿ ಇಂದು ದೇಶಾದ್ಯಂತ ಯೋಗಾಭ್ಯಾಸ ಶಿಬಿರಗಳನ್ನು ಹಮ್ಮಿಕೊಂಡು ಉಚಿತವಾಗಿ ಯೋಗಾಸ‌ನ ತರಗತಿಗಳನ್ನು ಹಮ್ಮಿಕೊಂಡಿವೆ ಇದರ ಪ್ರಯೋಜನ ಪಡೆವುದು ನಮ್ಮೆಲ್ಲರ ಆದ್ಯ ಕರ್ತವ್ಯ.


ಮೊದಲು ನಾನೂ ಯೋಗಾಭ್ಯಾಸ ಮಾಡುತ್ತಿರಲಿಲ್ಲ, ನಾಲ್ಕು ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಾಗ ಕೆಲವು ಆಸನಗಳ ಪರಿಚಯ ಆಗಿತ್ತು, ನಿರಂತರ ಅಭ್ಯಾಸ ಇರಲಿಲ್ಲ, ಮೊದಲ ಮತ್ತು ಎರಡನೇ ಅಂತರರಾಷ್ಟ್ರೀಯ ಯೋಗ ದಿನದಂದು ಮಾತ್ರ ಯೋಗಾಸನ ಮಾಡಿದ್ದೆ. ಇತ್ತೀಚಿನ  ಕೋವಿಡ್ ಪ್ರಯುಕ್ತ ಲಾಕ್ಡೌನ್ ಕಾಲದಲ್ಲಿ ಯೂತ್ ಪಾರ್ ಸೇವಾ( ವೈಪಿಎಸ್) ಸಂಘಟನೆಯ ಆನ್ಲೈನ್ ಯೋಗ ತರಬೇತಿ ಶಿಬಿರದಲಿ ಹತ್ತು ದಿನಗಳ ಕಾಲ ತರಬೇತಿಯನ್ನು ಪಡೆದು ದಿನವೂ ಕನಿಷ್ಠ ಒಂದು ಗಂಟೆಯ ಕಾಲ ಯೋಗಾಭ್ಯಾಸ ಮಾಡುತ್ತಿರುವೆ , ಅದರಿಂದ ಹಲವಾರು ಪ್ರಯೋಜನಗಳನ್ನು ಅನುಭವಿಸುತ್ತಿರುವೆ. ಬಂಧುಗಳೆ ನೀವೂ ಸಹ ಈ ದುರಿತ ಕಾಲದಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಲು, ಸಂಸ್ಕಾರ ಬೆಳೆಸಿಕೊಳ್ಳಲು ಖಂಡಿತವಾಗಿಯೂ ಯೋಗ ಮಾಡಲು ಪ್ರಯತ್ನ ಮಾಡಿ.


ನಾನು ತಿಳಿದಂತೆ ಅಷ್ಟಾಂಗ ಮಾರ್ಗಗಳನ್ನು ಈ ಕೆಳಗಿನಂತೆ ಹೇಳಬಹುದು


ಅಷ್ಟಾಂಗ ಯೋಗ ಎಂದರೇನು?


ಪತಂಜಲಿಯಿಂದ ಪರಿಚಯಿಸಿದ  ಯೋಗಪದ್ಧತಿ ಇಂದು ಪ್ರಪಂಚದಲ್ಲಿ ಹಬ್ಬಿದೆ ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿದ್ದಾರೆ,ಯೋಗ ಸಾಧನೆ ಮಾಡಲು ಅಷ್ಟಾಂಗ ಮಾರ್ಗ ಅನುಸರಿಸಬೇಕು ಅವೆಂದರೆ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ .


 ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಯಮದಲ್ಲಿ ಆಚರಿಸಬೇಕಾದ ಅಂಶಗಳು.


 ವಿಹಿತ ಕಾರ್ಯಗಳ ಆಚರಣೆ ನಿಯಮ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ,ಈಶ್ವರಪ್ರಣಿಧಾನ-ಇವು ನಿಯಮಗಳು. 


ಆಸನವೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಆಸನಗಳಲ್ಲಿ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು. 


ಆಸನಸಿದ್ಧಿಯಾದ ಅನಂತರ ಶ್ವಾಸ-ಉಚ್ವಾಸ  ಗಮನಾಗಮನಗಳನ್ನು ತಡೆಯುವುದನ್ನು (ಶ್ವಾಸಪ್ರಶ್ವಾಸಯೋರ್ಗತಿವಿಚ್ಛೇದಃ) ಪ್ರಾಣಾಯಾಮವೆಂದು ಕರೆದಿದ್ದಾರೆ


ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದೇ ಧಾರಣ.


 ಪಂಚೇಂದ್ರಿಯಗಳು ತಂತಮ್ಮ ವಿಷಯಗಳ ಕಡೆ ಒಲಿಯದಂತೆ ತಡೆಹಿಡಿದು, ಧಾರಣದಲ್ಲಿರುವ ಚಿತ್ತದಲ್ಲಿಯೇ ನಿಲ್ಲುವಂತೆ ಮಾಡುವುದು ಪ್ರತ್ಯಾಹಾರ. 



  ಧಾರಣೆಯ ಸ್ಥಳದಲ್ಲಿ ಏಕತಾನತೆಯನ್ನು ಅವಲಂಬಿಸಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನ.


ಧ್ಯಾನ ಧ್ಯಾನವಸ್ತುವಿನ ಸ್ವರೂಪವನ್ನೇ ಪಡೆದು ಚಿತ್ತದ ಸ್ವರೂಪವನ್ನು ಕಳೆದುಕೊಳ್ಳುವುದು ಸಮಾಧಿ (ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪಶೂನ್ಯಮಿವ ಸಮಾಧಿಃ). 


ಹೀಗೆ ಎಂಟು ಅಂಗಗಳನ್ನು ಆಚರಣೆ ಮಾಡಿದರೆ ಇದು ಮೋಕ್ಷಕ್ಕೆ ದಾರಿಯಾಗುವುದು ನಾವು ಬಹಳಷ್ಟು ಜನ ಈ ಎಂಟು ಅಂಗಗಳಲ್ಲಿ ಕೆಲವೊಮ್ಮೆ ಪ್ರಾಣಾಯಾಮದ ವರೆಗೆ ತಲುಪಿರುವೆವು, ಇದೂ ಸಹ ಕಡಿಮೆ ಸಾಧನೆಯೇನಲ್ಲ, ಮುಂದಿನ ಹಂತಗಳನ್ನು ಅಭ್ಯಾಸ ಮಾಡಿದರೆ ಸಮಾಧಿ ಸ್ಥಿತಿ ತಲುಪುವುದು ಕಷ್ಟವೇನಲ್ಲ ,  


ಯೋಗಾಭ್ಯಾಸ ದ ಹೆಸರಲ್ಲೇ ಅಭ್ಯಾಸ ಇರುವುದು ಪ್ರತಿದಿನ ಯೋಗಾಭ್ಯಾಸವನ್ನು ವೃತದಂತೆ ಪಾಲಿಸಿದರೆ ಭಗವಂತ ನೀಡಿದ ಶರೀರವನ್ನು ಆರೋಗ್ಯ ಪೂರ್ಣವಾಗಿ ಇಟ್ಟುಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯದ ವೃದ್ಧಿಯಾಗಿ , ನಮ್ಮ ಆತ್ಮ ಶುದ್ದಿಯಾಗಿ ಮುಂದೆ ಪರಮಾತ್ಮನಲ್ಲಿ ಸುಲಭವಾಗಿ ಲೀನವಾಗುತ್ತದೆ.

ನಮ್ಮದು ಯೋಗಿಗಳ ನಾಡು ಯೋಗಾಚರಣೆ ಮಾಡುವರೆಲ್ಲರೂ ಯೋಗಿಗಳೆ,ಭೋಗದಿಂದ ತರ ತರದ ರೋಗಗಳು ನಮ್ಮನ್ನು ಕಾಡುವವು, ಯೋಗಕ್ಕೆ ರೋಗ ನಿವಾರಣೆ ಮಾಡುವ ತಾಕತ್ತು ಇದೆ, ಮತ್ತೇಕೆ ತಡ ಬನ್ನಿ ಯೋಗಿಗಳಾಗೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: