13 December 2020

*ವಿದ್ಯಾಗಮ ಬೇಕೆ?ಲೇಖನ


 ಸ್ಪರ್ಧೆಗೆ


*ವಿದ್ಯಾಗಮ ಯೋಜನೆಯ ಸಾಧಕ ಭಾಧಕಗಳು*


ಪ್ರಪಂಚವನ್ನೇ ಅಲುಗಾಡಿಸಿದ ಕಣ್ಣಿಗೆ ಕಾಣದ ಅಣುವೊಂದು ಮಾಡಿದ ಅವಾಂತರಗಳ ಲೆಕ್ಕ ಹಾಕಲು ಸಾಧ್ಯವಿಲ್ಲ. ಸಕಲ ರಂಗಗಳಲ್ಲಿ ಹಿನ್ನಡೆಯನ್ನು ಎಲ್ಲಾ ದೇಶಗಳು  ಅನುಭವಿಸಬೇಕಾಗಿ ಬಂದುದು ನಮಗೆಲ್ಲ ತಿಳಿದ ವಿಷಯವೇ ಸರಿ. ಶಾಲಾ ಶಿಕ್ಷಣ ವ್ಯವಸ್ಥೆಯು ಈ ಅವಧಿಯಲ್ಲಿ ಬಹಳ ತೊಂದರೆಗೊಳಗಾಗಿ ಸರ್ಕಾರ, ಪೋಷಕರು, ಮತ್ತು ವಿದ್ಯಾರ್ಥಿಗಳು ಬಹಳ ಚಿಂತೆಗೊಳಗಾದಾಗ ಆಶಾಕಿರಣವಾಗಿ ಬಂದ ಯೋಜನೆಯೇ ವಿದ್ಯಾಗಮ.


ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಮತ್ತು ತಕ್ಕಮಟ್ಟಿಗೆ ಯಶಸ್ಸು ಕಂಡು , ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕಲಿಕೆಯ ಕಡೆಗೆ ಗಮನಸೆಳೆಯುವಲ್ಲಿ ಈ ಯೋಜನೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿತು ಎಂಬುದನ್ನು ಯಾರೂ ಅಲ್ಲಗಳೆಯಲಾಗದು.


ಶಾಲಾ ವಾತಾವರಣವನ್ನು ಹೊರತು ಪಡಿಸಿ ಮಕ್ಕಳ ಸಾಮಾಜಿಕ ,ಆರ್ಥಿಕ, ಮತ್ತು ಭೌಗೋಳಿಕ ಹಿನ್ನೆಲೆಯಲ್ಲಿ ವಿವಿಧ ಕಾಲ್ಪನಿಕ ಕೋಣೆಗಳನ್ನು ಮಾಡಿಕೊಂಡು ಮಕ್ಕಳಿಗೆ ಕಲಿಕೆಯ ನಿರಂತರತೆ ಕಾಪಾಡಲು ವಿದ್ಯಾಗಮ ತರಗತಿಗಳು ಆರಂಭವಾದವು. 


ಕೆಲವೆ ವಿದ್ಯಾರ್ಥಿಗಳು ಮೊಬೈಲ್ ಲ್ಯಾಪ್‌ಟಾಪ್ , ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿದ್ದರು ಅಂತಹ ಮಕ್ಕಳಿಗೆ ಆನ್ಲೈನ್ ತರಗತಿ ಮಾಡುವುದು ಸವಾಲಿನ ಕೆಲಸವಾದರೂ ಅವರ ಇತಿಮಿತಿಗಳನ್ನು ಅರಿತು ನಮ್ಮ ಶಿಕ್ಷಕರು ಅವರಿಗೆ ಆನ್ಲೈನ್ ತರಗತಿಗಳನ್ನು ಮಾಡಿದರು ಇದು ಕೆಲವೆಡೆ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ದುರುಪಯೋಗ ಮಾಡಿಕೊಳ್ಳಲು ದಾರಿಯಾಗಿದ್ದು, ಕೆಲ ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ತೊಂದರೆಗಳನ್ನು ಅನುಭವಿಸಿದ್ದು ಅಲ್ಲಲ್ಲಿ ವರದಿ ಆದವು  , ಇವುಗಳ ನಡುವೆ ತಕ್ಕಮಟ್ಟಿಗೆ ಈ ತರಗತಿಗಳು ಯಶಸ್ವಿಯಾದವು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಆದರೆ ಈ ತರಗತಿಗಳು ಸಾಂಪ್ರದಾಯಿಕ ತರಗತಿಗಳಿಗೆ ಪೂರಕವೇ ಹೊರತು  ಎಂದಿಗೂ ಪರ್ಯಾಯ ಅಲ್ಲ ಎಂಬುದು ಕೆಲವೇ ದಿನಗಳಲ್ಲಿ ಸಾಬೀತಾಯಿತು.


ಇನ್ನೂ ಟಿ ವಿ ಮೊಬೈಲ್ ಇಲ್ಲದ ಬಹುತೇಕ ಮಕ್ಕಳ ತಲುಪಲು ಶಿಕ್ಷಕರು , ದೇವಾಲಯ, ಮರಗಳ ನೆರಳು, ಸಮುದಾಯ ಭವನ, ಮುಂತಾದವುಗಳ ಬಳಿ ಐದರಿಂದ ಎಂಟು ಮಕ್ಕಳ ಗುಂಪುಗಳಿಗೆ ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಪಾಠಗಳನ್ನು ಶುರು ಮಾಡಿದರು, ಈ ವೇಳೆಯಲ್ಲಿ ನಮ್ಮ ಮಹಿಳಾ ಶಿಕ್ಷಕರು ಹಲವಾರು ಮುಜುಗರ ಮತ್ತು ಸಮಸ್ಯೆಯನ್ನು ಅನುಭವಿಸಿದರೂ, ಕೆಲ ಶಿಕ್ಷಕರು ಕೋವಿಡ್ ಗೆ ಬಲಿಯಾದರೂ ಮಕ್ಕಳ ಕಲಿಕೆಗೆ ನೆರವಾಗಲು ಸರ್ಕಾರದ ಜೊತೆ ಟೊಂಕ ಕಟ್ಡಿ ನಿಂತಿದ್ದು ಶಿಕ್ಷಕ ಸಮುದಾಯದ ಬಗ್ಗೆ ಗೌರವ ಹೆಚ್ಚುವಂತೆ ಮಾಡಿತು. 


ವಿದ್ಯಾಗಮ ಒಂದು ಒಳ್ಳೆಯ ಯೋಜನೆಯಾದರೂ ಅನುಷ್ಠಾನದ ದೃಷ್ಟಿಯಿಂದ ಕೆಲ ನ್ಯೂನತೆಗಳನ್ನು ಕಾಣಬಹುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೆಡೆ ಸೇರಿ ಪಾಠ ಕಲಿಯಬಹುದು ಎಂದು ಒಪ್ಪುವುದಾದರೆ ಅದಕ್ಕೆ ದೇವಸ್ಥಾನ, ಸಮುದಾಯ ಭವನ ಬೀದಿ ಏಕೆ? ಶಾಲಾ ಆವರಣ ಏಕಾಗಬಾರದು? ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅದೇ ಪಾಠ ಪ್ರವಚನ ಮಾಡಬಹುದು.


ಕರೋನ ಎರಡನೇ ಮತ್ತು ಮೂರನೇಯ ಅಲೆಯ ಭೀತಿಯಲ್ಲಿರುವ ನಾವು ಶಾಲಾ ಕಾಲೇಜುಗಳು ಯಾವಾಗ ಆರಂಭವಾಗುವವು ಎಂಬ ಅನಿಶ್ಚಿತತೆಯ ನಡುವೆ   ಪರಿಷ್ಕೃತ ವಿದ್ಯಾಗಮ ಯೋಜನೆಯೊಂದೆ ನಮ್ಮ ಮಕ್ಕಳಿಗೆ ಕಲಿಕೆಯ ದಾರಿ ತೋರುವ ಕೈಮರವಾಗಿದೆ. ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ,ಮಾಡಿದರು ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಪಾಳಿ ಪದ್ದತಿ ಮೂಲಕ ಕಲಿಕೆಯ ವಾತಾವರಣ ಮೂಡಿಸಬಹುದು , ತನ್ಮೂಲಕ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಬಹುದು, ಬಾಲ್ಯವಿವಾಹ ಗಳನ್ನು ತಡೆಯಬಹುದು.ಮತ್ತು ಮಕ್ಕಳು  ನಿರಂತರವಾಗಿ ಕಲಿಕೆಯ ವಾತಾವರಣದಲ್ಲಿ ಇರುವಂತೆ ಮಾಡಬಹುದು. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: