*ನೇರಿಷಾ ಎಂಬ ಗಜಲ್ ಬೆಳಕು*
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಗಜಲ್ ಬರಹಗಾರರು ಉತ್ತಮ ಗಜಲ್ ರಚನೆ ಮಾಡುವುದು ನಮಗೆಲ್ಲ ಬಹಳ ಸಂತಸದ ಸಂಗತಿ. ಅಂತಹ ಗಜಲ್ ರಚನೆಕಾರರಲ್ಲಿ ಗಂಡು ಮೆಟ್ಟಿದ ನಾಡಾದ ಚಿತ್ರದುರ್ಗದ ಮೂಲದ ನಂರುಶಿ ಕಡೂರು ಸಹ ಒಬ್ಬರು.
ಈಗಾಗಲೇ "ಕಾಮನ ಬಿಲ್ಲು ಬಣ್ಣ ಬೇಡುತ್ತದೆ " ಎಂಬ ಗಜಲ್ ಸಂಕಲನ ಪ್ರಕಟಣೆ ಮಾಡಿ ತಮ್ಮ ಗಜಲ್ ರಚನೆಯ ಮೂಲಕ ಓದುಗರಿಗೆ ವಿವಿಧ ಬಣ್ಣಗಳನ್ನು ತೋರಿದ ಕವಿಗಳು ಈಗ "ನೇರಿಷಾ " ಎಂಬ ಗಜಲ್ ಸಂಕಲನವನ್ನು ನಮ್ಮಯ ಕೈಗಿತ್ತು, ಸಮಾಜದಲ್ಲಿ ನಡೆವ ಪ್ರತಿಯೊಂದು ಅಂಶಗಳನ್ನು ಚಿಕಿತ್ಸಕ ಮನೋಭಾವದಿಂದ ನೋಡಿ ನಮಗೆ "ಬೆಳಕು" ನೀಡಿದ್ದಾರೆ.
ಈ ಸಂಕಲದ ಒಟ್ಟು ಐವತ್ತನಾಲ್ಕು ಗಜಲ್ ಗಳು ಒಂದಕ್ಕಿಂತ ಒಂದು ವಿಭಿನ್ನವಾದ ವಸ್ತು, ವಿಷಯ, ನಿರೂಪಣೆಯಲ್ಲಿ ನಮ್ಮ ಮನಸೆಳೆಯುತ್ತವೆ .ಇಲ್ಲಿ ಕವಿಯು ನಮಗೆ ಪ್ರೀತಿ, ವಿರಹ, ಮೋಹ, ವ್ಯಾಮೋಹ, ಸಾಮಾಜಿಕ ಕಳಕಳಿ, ಮಹಿಳಾ ಸಂವೇದನೆ, ಸಾಮಾಜಿಕ ಸಮಸ್ಯೆಗಳ ವಿರುದ್ಧದ ಕಹಳೆ, ನಾಡ ದೇವಿಯ ಬಗ್ಗೆ ಹೆಮ್ಮೆ ಮತ್ತು ಗೌರವ, ಪ್ರಕೃತಿ ಸೌಂದರ್ಯ, ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.
ಮೊದಲ ಗಜಲ್ ನಲ್ಲಿ ಕವಿಗಳು
" ಮುತ್ತಿನಂತಿದ್ದ ನನಗೆ ಮುತ್ತು ಕಟ್ಟಿದ ಯಾವನೋ ಒಬ್ಬ |
ಊರ ಸಿರಿವಂತಗೆ ರಾತ್ರಿ ಮಾತ್ರ ಹೆಂಡತಿ ಸುಖ ಕೊಡುವವಳು ನಾನು ಗೆಳೆಯ||"
ಎಂದು ದೇವದಾಸಿ ಹೆಣ್ಣು ಮಗಳು ಸ್ವಗತ ಮಾಡುವ ಅವಳ ದುಃಖ ದುಮ್ಮಾನಗಳನ್ನು ಸೆರೆಹಿಡಿದು ಓದುಗರು ಸಹ ಅಂತಹ ಮಹಿಳೆಯರ ಬಗ್ಗೆ ಅನುಕಂಪ ಪಡುವಂತೆ ಸುಂದರ ಗಜಲ್ ಬರೆದಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಮತ ಧರ್ಮದ ಆಧಾರದ ಮೇಲೆ ಅವಿವೇಕದಿಂದ ಕಿತ್ತಾಡುವವರಿಗೆ ಕವಿಗಳು ತಮ್ಮ ಸಂಕಲನದ ೨೫ ನೇ ಗಜಲ್ ನಲ್ಲಿ ಚೆನ್ನಾಗಿ ಚಾಟಿ ಬೀಸಿದ್ದಾರೆ.
ಮನದ ಆಲಯದಿ ಭದ್ರವಾಗಿದ್ದುದ ಬಡಿದೆಬ್ಬಿಸುವರು ಯಾರೋ|
ಗುಮ್ಮಟ, ಗುಡಿ,ಚರ್ಚು ಮಸೀದಿ ಕೇಳುವವರು ದೇವಮಾನವರೇನು?||
ಎಂದು ಕೇಳುತ್ತಾ ಸಹಬಾಳ್ವೆ ಸಹಜೀವನ ನಡೆಸಿ ಮಾನವರಾಗಿ ಎಂದು ಕರೆ ನೀಡಿದ ರೀತಿ ಗಮನಸೆಳೆಯುತ್ತದೆ.
ಆರನೆ ಗಜಲ್ ನಲ್ಲಿ ಹೊಸದಾಗಿ ಮದುವೆಯಾದ ನವದಂಪತಿಗಳು ಆಷಾಢ ಮಾಸದಲ್ಲಿ ಸಾಂಪ್ರದಾಯಿಕ ಅಗಲಿಕೆಯ ವಿರಹವನ್ನು ಬಹಳ ಸುಂದರ ಪದಗಳಲ್ಲಿ ಚಿತ್ರಿಸಿದ್ದಾರೆ.
ಹುತ್ತದಿಂದ ಹುತ್ತಕ್ಕೆ ಹಾವು ಸರಿಯದ ವೇಳೆಯಿದು|
ಅವಳಿಲ್ಲವೆಂದರೂ ಬಿಡದೆ ಸುಳಿಗಾಳಿ ಬೀಸಿದೆ||
ಎಂದು ಕವಿ ತನ್ನ ಮನದನ್ನೆ ಬಲವಂತವಾಗಿ ದೂರವಿರುವುದನ್ನು ಮನದಲ್ಲಿ ನೆನೆದು ಅವಳ ಕೂಡಲು ತವಕಿಸುವ ಭಾವ ಚೆನ್ನಾಗಿದೆ.
ನೂರಾರು ಸಂತರು ,ಸಾಧು ಸತ್ಪುಷರು ಬೋಧನೆ ಮಾಡಿದರೂ ಈಗಲೂ ಜಾತಿ ಮತದ ಕೂಪದಲ್ಲಿ ಬಿದ್ದು ಒದ್ದಾಡುವ ಜಗವ ಕಂಡು ತಮ್ಮ ೪೫ ನೇ ಗಜಲ್ ನಲ್ಲಿ
ಗಾಳಿ ಮಳೆ ಸೂರ್ಯನ ಕಿರಣಗಳಿಗೆ ಮೇಲು ಕೀಳಿನ ಭೇದ ಉಂಟೆ|
ನೂರಾರು ವರ್ಷ ಕಾಯುತ ಜಗದಿ ಬದುಕಿದ್ದ ಜಾತಿ ಧರ್ಮ ಯಾವುದು ಸಾಕಿ||.
ಎಂದು ನಮ್ಮನ್ನು ಪ್ರಶ್ನೆ ಮಾಡುತ್ತ ಚಿಂತನೆಗೆ ಹಚ್ಚುವ ನಮ್ಮ ಯುವ ಗಜಲ್ ಕವಿಯಲ್ಲಿ ಒಬ್ಬ ಸಮಾಜ ಸುಧಾರಕನ ಕಾಣಬಹುದು
ಜಾಗತೀಕರಣದ ಫಲವಾಗಿ, ಆಂಗ್ಲಭಾಷೆಯ ವ್ಯಾಮೋಹದಿಂದ, ಖಾಸಗಿ ಶಾಲೆಗಳ ಅಬ್ಬರದ ನಡುವೆ ನಮ್ಮ ಕನ್ನಡದ ಶಾಲೆಗಳು ಇಂದು ಅವಸಾನದ ಅಂಚಿನಲ್ಲಿರುವುದು ದುರದೃಷ್ಟಕರ . ಇಂತಹ ಸಂಧರ್ಭದಲ್ಲಿ ತಾನು ಕಲಿತ ಕನ್ನಡ ಶಾಲೆಯ ಹಿರಿಮೆ, ಗರಿಮೆ ಮಹತ್ವವನ್ನು ಸಾರುವ ೩೮ ನೇ ಗಜಲ್ ಓದಿದರೆ ಓದಗರು ಒಮ್ಮೆ ತಮ್ಮ ಬಾಲ್ಯದಲ್ಲಿ ಕಲಿತ ಕನ್ನಡ ಶಾಲೆಯನ್ನು ನೆನೆಯದೆ ಇರಲಾರರು.
ಮರಗಿಡ ಮಧ್ಯದಲ್ಲಿ ಕಪ್ಪುಹಲಗೆ ಬಳಪದಲ್ಲಿ ಕಲಿತ ಉನ್ನತವಾದ ಅನುಭವ ಮಂಟಪವದು|
ಹಳ್ಲಿಗಳ ವಿದ್ಯಾ ದೇವತೆಯ ಆಲಯವಾಗಿದ್ದ ನಮ್ಮ ಕನ್ನಡ ಶಾಲೆ ಎಲ್ಲಿ ಹೋಯಿತೋ||
ಎಂದು ಪ್ರಶ್ನೆ ಕೇಳುತ್ತಲೆ ನಮ್ಮ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಕವಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತಿರುವರೇನೋ ಎಂದು ಅನಿಸದೇ ಇರದು.
ಹೀಗೆ ಒಂದಕ್ಕಿಂತ ಒಂದು ಚೆಂದದ ಗಜಲ್ ಗಳು ಇರುವ "ನೇರಿಷಾ" ಒಂದೇ ಗುಕ್ಕಿಗೆ ಓದಿ ಮುಗಿಸಿದರೂ ಆ ಗಜಲ್ ಗಳಲ್ಲಿ ಇರುವ ವಿಷಯಗಳು ನಮ್ಮನ್ನು ಬಹುವಾಗಿ ಕಾಡುತ್ತವೆ, ಚಿಂತನೆಗೆ ಹಚ್ಚುತ್ತವೆ , ಸಮಾಜದ ಬಗ್ಗೆ ಕಾಳಜಿ ವಹಿಸುವಂತೆ ಮಾಡುತ್ತವೆ , ಮೂಢ ನಂಬಿಕೆಗಳಿಂದ ದೂರವಿರುವಂತೆ ಬುದ್ದಿ ಹೇಳುತ್ತವೆ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತವೆ ಮಹಿಳಾ ದೌರ್ಜನ್ಯ ಕಂಡು ಮನಮರುಗುವಂತೆ ಮಾಡುತ್ತವೆ ಹೀಗೆ ಮಳೆ ನಿಂತರೂ ಮರದಿಂದ ಮಳೆಯ ಹನಿಗಳು ಬೀಳುವಂತೆ ಪ್ರತಿ ಗಜಲ್ ಗಳು ನಮ್ಮನ್ನು ಕಾಡುತ್ತವೆ.
ನಂರುಶಿಯವರು ಪ್ರತಿಯೊಂದು ಗಜಲ್ ಗಳಲ್ಲಿ ಬಳಸಿರುವ ಭಾಷೆಯು ಸುಂದರವಾಗಿದೆ ಪ್ರತಿಮೆಗಳು ಹಿಡಿಸುತ್ತವೆ . ತಮ್ಮ ಮುಂದಿನ ಗಜಲ್ ಗಳಲ್ಲಿ ಇನ್ನೂ ಸುಂದರವಾದ ಚಿತ್ರಗಳನ್ನು, ಉತ್ತಮವಾದ ಪ್ರತಿಮೆಗಳನ್ನು ಬಳಸಿ ,ಗಜಲ್ ರಚಿಸಲಿ, ಹಾಗೂ ಕನ್ನಡ ಸಾರಸ್ವತ ಲೋಕದ ಮಹೋನ್ನತ ಕವಿಯಾಗಲಿ ಎಂದು ಹಾರೈಸುತ್ತೇನೆ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment