01 July 2020

*ಉದಕದೊಳಗಿನ ಕಿಚ್ಚು* ಕಾದಂಬರಿ ಭಾಗ ೧೦

*ಉದಕದೊಳಗಿನ ಕಿಚ್ಚು* ಕಾದಂಬರಿ ಭಾಗ ೧೦



  
ಪರೀಕ್ಷೆಗೆ ಓದಲು ರಜೆ ಕೊಟ್ಟಾಗ ಸತೀಶನು ಮನೆಯಲ್ಲಿ ಓದಲು ಅಕ್ಕಪಕ್ಕದ ಜನರ ಮಾತುಗಳಿಂದ ತೊಂದರೆಯಾಗಬಹುದೆಂದು ಭಾವಿಸಿ ಹೊಲಗಳಲ್ಲಿರುವ ಹೊಂಗೆ ಮರಗಳ ಕೆಳಗೆ ಪುಸ್ತಕಗಳನ್ನು ಓದುತ್ತಾ , ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದು ಊಟ ಮಾಡಿ , ಪು‌ನಃ ಓದಲು ಹೊಂಗೆ ಮರದೆಡೆ ಸಾಗುತ್ತಿದ್ದ ,ಮೂರನೇ ದಿನದಿಂದ ವೆಂಕಟೇಶ್ ಮತ್ತು ಸಿದ್ದಮಲ್ಲ ಸಹ ಸತೀಶನ ಜೊತೆಗೆ ಓದಲು ಹೊಲಕ್ಕೆ ಹೋದರೂ ಓದಿಗಿಂತ ಅವರಿಬ್ಬರ ಮಾತುಗಳು ಹೆಚ್ಚಾದಾಗ ನಾಳೆಯಿಂದ ನೀವು ನನ್ನ ಜೊತೆ ಓದಲು ಬರಬಾರದೆಂದು ನೇರವಾಗಿ ಹೇಳಿ ಒಬ್ಬನೇ ಮರದಡಿ ಓದಲು ಮುಂದುವರೆಸಿದನು ಸತೀಶ.
ಅಂದು ಊರಿನ ಇಕ್ಕೆಲಗಳಲ್ಲಿ ಜನರು ಜಮಾಯಿಸಿದ್ದರು . ಯುದ್ಧಕ್ಕೆ ಸಜ್ಜಾದ ಯೋಧರನ್ನು ಕಳಿಸುವಂತೆ ಪರೀಕ್ಷೆ ಬರೆಯುವ ಮಕ್ಕಳಿಗೆ ಹಾರೈಸಿ ಪರೀಕ್ಷಾ ಕೊಠಡಿಯವರೆಗೆ ಬಿಟ್ಟ ,"ಚೆನ್ನಾಗಿ ಬರಿ" ಎಂದು ಹಾರೈಸಿದ ಪೋಷಕರು ಮನೆಗೆ ಬರದೇ ಅಲ್ಲೇ ಇರುವ ಕಿಲಿಕಿಸ್ತ್ರೆ ಮರದ ಕೆಳೆಗೆ ನಿಂತೇಬಿಟ್ಟರು.
ಪರೀಕ್ಷಾ ಕೊಠಡಿಯ ಒಳಗೆ ನಿಶ್ಯಬ್ದ ವಾತಾವರಣ ಮಕ್ಕಳ ಕೈಗೆ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳನ್ನು  ನೀಡಿ ಶಥ ಫಥ ತಿರುಗಾಡುತ್ತಿದ್ದರು ಕೊಠಡಿಯ ಮೇಲ್ವಿಚಾರಕರು. ಸತೀಶನು ಒಮ್ಮೆ ಪ್ರಶ್ನೆ ಪತ್ರಿಕೆ ಓದಿದ . ನನಗೆಲ್ಲ ಉತ್ತರ ಗೊತ್ತು , ನಾನು ಬರೆಯಬಲ್ಲೆ , ಎಂಬ ಆತ್ಮವಿಶ್ವಾಸದ ಮಿಂಚು ಅವನ ಮೊಗದಲ್ಲಿ  ಮೂಡಿ ಮರೆಯಾಯಿತು. ಉತ್ತರ ಬರೆಯಲು ಶುರುಮಾಡಿದ .ಉಳಿದ ಬಹುತೇಕ ವಿದ್ಯಾರ್ಥಿಗಳು "ಅವನ್ಯಾರೋ ಪ್ರಶ್ನೆ ಕೊಡೋನು ನಮಗೆ ಮಾತ್ರ ಕಷ್ಟದ ಪ್ರಶ್ನೆಗಳ ಕೊಟ್ಟಿರುವ" ಎಂದು ಶಪಿಸುತ್ತಾ , ಮಾರಮ್ಮನ ದೇವಸ್ಥಾನದ ಭಂಡಾರ ಹಚ್ಚಿ ತಂದ ಪೆನ್ನು ತೆಗೆದು , ಪೆನ್ನಿಗೆ ಭಕ್ತಿಯಿಂದ ಕೈಮುಗಿದು , ಬರೆಯಲು ಪ್ರಯತ್ನಪಟ್ಟರೂ ಮುಂದಕ್ಕೆ ಹೋಗುತ್ತಿಲ್ಲ.
ಇದ್ದಕ್ಕಿದ್ದಂತೆ ರಸ್ತೆಯಲ್ಲಿ  ಶಿಳ್ಳೆಗಳು, ಕೇಕೆಗಳು ಅದನ್ನು ಕೇಳಿದ ಕೊಠಡಿಗಳ ಒಳಗಿರುವ ಹುಡುಗರು ದಬದಬನೆ ಎದ್ದು ತಾವು ತಂದಿದ್ದ ವಿಕ್ರಂ ಡೈಜೆಸ್ಟ್ ನ ಚಿಕ್ಕ ಪುಸ್ತಕಗಳನ್ನು ಕಿಟಕಿಯ ಮೂಲಕ ರಪರಪನೆ ಬಿಸಾಡಿ ಬಂದು ತಮ್ಮ ಆಸನಗಳಲ್ಲಿ ಆಸೀನರಾದರು.ಸತೀಶನಿಗೆ ಇದು ಸ್ವಲ್ಪ ಗಾಬರಿಯಾದರೂ ನಂತರ ಸಾವರಿಸಿಕೊಂಡು ಬರೆಯಲು ಮುಂದುವರೆಸಿದ .ಕೊಠಡಿಯ ಒಳಗೆ ಬಂದ ಸ್ಕ್ವಾಡ್ ನಿಜಲಿಂಗಪ್ಪನನ್ನು ಎಬ್ಬಿಸಿ , ಅವನ ಪ್ಯಾಂಟ್ ಜೇಬು, ಶರ್ಟ್ ಜೇಬು , ಚೆಕ್ ಮಾಡಿ ಕೈ ಕಾಲುಗಳು ಮತ್ತು ಇತರೆ ಅಂಗಗಳನ್ನು ಬಟ್ಟೆಯ ಮೇಲೆಯೇ ಸವರಿ ಏನೂ ಇಲ್ಲ ಎಂದು ಖಚಿತವಾದ ಮೇಲೆ ಕುಳಿತುಕೊ .ಎಂದು ಸಂಜ್ಞೆ ಮಾಡಿ ,ಎಲ್ಲರನ್ನೂ ಕಳ್ಳರಂತೆ ನೋಡುತ್ತಾ ಶಿಕ್ಷಕರಿಗೆ ಏನೋ ಹೇಳಿ , ಹೊರಟರು .ಎರಡು ನಿಮಿಷದ ನಂತರ ಬಂದು ಕಿಟಕಿಯಲ್ಲಿ‌ ಇಣುಕಿ ನೋಡಿದರು .
ಮೊದಲ ಪರೀಕ್ಷೆಯನ್ನು ಚೆನ್ನಾಗಿ ಬರೆದ ಖುಷಿಯಲ್ಲಿದ್ದ ಸತೀಶನ ಕಣ್ಣುಗಳು ಸುಜಾತಳ ನ್ನು ಹುಡುಕುತ್ತಿದ್ದವು .ನಗುತ್ತಲೇ ಬಂದ ಸುಜಾತ "ಹೆಂಗೆ ಬರ್ದೆ ಕನ್ನಡ ಪೇಪರ್" ಎಂದಳು ಸೂಪರ್ ಎಂದ " ನೀನು ಹೆಂಗೆ ಬರ್ದೆ"
"ಪರವಾಗಿಲ್ಲ ಅರವತ್ತೋ ಎಪ್ಪತ್ತೊ ಬರಬಹುದು". ಅಂದಳು ಸುಜಾತ.
ಅಷ್ಟರಲ್ಲಿ ಅವರ ಅಪ್ಪ ಬಂದಿದ್ದ ಕಂಡ ಸತೀಶ ಗೆಳೆಯರ ಕಡೆ ನಡೆದ .
ಪರೀಕ್ಷೆ ಮುಗಿಯಿತು ಮತ್ತೊಮ್ಮೆ ಸತೀಶನಿಗೆ ಮನದಲ್ಲಿ ದುಗುಡ  ಆರಂಭವಾಯಿತು. ದಿನವೂ ಅವಳ ನೋಡಲಾಗುವುದಿಲ್ಲವಲ್ಲ ಎಂದು ಮನದಲ್ಲೇ ಕೊರಗಲಾರಂಭಿಸಿದ.
ವಾಣಿ  ಬಸ್ಸಿನಿಂದ ಸಾಮಾನ್ಯ ನೀಲಿ ಸೀರೆಯನ್ನು ಉಟ್ಟ, ಕಪ್ಪಗಿದ್ದರೂ ಲಕ್ಷಣವಾದ ಮುಖ ಅಲ್ಲೊಂದು ಇಲ್ಲೊಂದು ಬಿಳಿಕೂದಲು ಕಾಣುತ್ತಿದ್ದವು .ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು, ಅಷ್ಟಿಲ್ಲದಿದ್ದರೆ ಚಿಕ್ಕ ವಯಸ್ಸಿನಲ್ಲಿ ಗಂಡನ ಕಳೆದುಕೊಂಡು ಎರಡು ಮಕ್ಕಳ ಸಾಕುವುದು ಸಾಮಾನ್ಯವೆ? ಅವರು ಸತೀಶನ ಅಮ್ಮ ಗಂಟು ಮತ್ತು ಚೀಲದೊಂದಿಗೆ ಯರಬಳ್ಳಿ ಬಸ್ಟಾಂಡ್ ನಲ್ಲಿ ಇಳಿದರು  ಜೊತೆಗೆ ಒಬ್ಬ ಹುಡುಗನಿದ್ದ ಅವನೇ ಸತೀಶನ ತಮ್ಮ ಬಾಲಾಜಿ. ಆಗ ತಾನೆ ಏಳನೇ ತರಗತಿ ಪರೀಕ್ಷೆ ಬರೆದು ಜಾತ್ರೆಗೆ ಅಮ್ಮನ ಜೊತೆ ಬಂದಿದ್ದ . ಅಲ್ಲೇ ಬಸ್ಟಾಂಡ್ ನಲ್ಲಿ ನಿಂತಿದ್ದ ಬಿಳಿಯಪ್ಪ ಚೀಲ ತೆಗೆದುಕೊಂಡು " ಅಕ್ಕ ಸೆನ್ನಾಗಿದ್ದಿಯಾ? ಬಾ ಹೋಗಾನಾ?" ಎಂದು ಮಾತನಾಡುತ್ತಾ ಮಾರಮ್ಮನ ಗುಡಿ ದಾಟಿ ಮನೆಯತ್ತ ನಡೆದರು.
ಹಸುವನಗಲಿದ ಕರುವಿನಂತೆ ಎಲ್ಲಿದ್ದನೊ ಓಡಿ ಬಂದು ಅಮ್ಮನ ತಬ್ಬಿದ ಸತೀಶ .
ಅಮ್ಮ ‌ಬಂದ ಸಂತಸದಿಂದ ಸತೀಶನ ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡಿತು . ಅಪ್ಪ ಅಮ್ಮನ ಪ್ರೀತಿ ವಂಚಿತ ಮಕ್ಕಳು ಇದ್ದಕ್ಕಿದ್ದಂತೆ ಅಪ್ಪ ಅಮ್ಮ ದೊರತರೆ, ಕೆಲವೊಮ್ಮೆ ವಿಶೇಷವಾದ  ವರ್ತನೆಯಲ್ಲಿ ತೊಡಗುವರು, ಕೆಲವೊಮ್ಮೆ ಕೆಲವರು ಬಾಲ್ಯದಲ್ಲೇ ದುಷ್ಚಟಗಳ ದಾಸರಾಗುತ್ತಾರೆ.  ಆದರೆ  ಸತೀಶ ಅಂತಹ ಹುಡುಗನಾಗಿರಲಿಲ್ಲ.
ಅಪರೂಪಕ್ಕೆ ಅಮ್ಮ ಬಂದಿದ್ದರಿಂದ ಅಮ್ಮನ ಪ್ರೀತಿ ಸವಿದು ಸ್ವಲ್ಪ ಅತಿಯಾದ ಮಾತು ಮತ್ತು ಚಟುವಟಿಕೆಗಳನ್ನು ತೋರಿದ . ಆಗಲೆ ಅನಾಹುತವೊಂದು ಸಂಭವಿಸಿದ್ದು.
ಇದ್ದಕ್ಕಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದರು ಪೂಜಾರ ಫಣಿಭೂಷಣನ ಕರೆಸಿದರು, ನಾಟಿ‌ಔಷದ ಹಾಕುವ ರಂಗಣ್ಣನವರನ್ನು ಕರೆಸಿದರು. ರಾತ್ರಿ ಒಂಭತ್ತೂವರೆ, ಮಲಗುವ ಸಮಯದಲ್ಲಿ ಇಡೀ ಬೀದಿ ಎಚ್ಚರಾಗಿ ಎಲ್ಲರ ಮನದಲ್ಲಿ ದುಗುಡ ಮನೆ ಮಾಡಿತ್ತು.
ಭೂದೇವಮ್ಮ , ಮನದಲ್ಲೇ ಚಡಪಡಿಸತೊಡಗಿದರು . ದೇವರೇ ಅಂದು ಆದಂತೆ ಇಂದು ಆಗದಿರಲಿ. ಈಗಾಗಲೇ ನೊಂದಿರುವೆ , ಮತ್ತೆ ನನಗೆ ನೋವು ಕೊಡ ಬ್ಯಾಡ .ಈಗಾಗಲೇ ಒಂದು ಜೀವ ತಗಂಡಿದಿಯಾ ಮತ್ತೆ? ಈಗ? ಇಲ್ಲ , ಹಾಗಾಗಬಾರದು , ಎಂದು ಮಗನ ಬಳಿ ಬಂದು ಕುಸಿದು ಬಿದ್ದರು .
ಭೂದೇವಮ್ಮ ಹನ್ನೆರಡು ವರ್ಷಗಳ ಹಿಂದೆ ನಡೆದ ದುರ್ಘಟನೆ ಇಡೀ ತನ್ನ ಜೀವನವನ್ನು ಬದಲಿಸಬಹುದು ನಾನು‌ ಮತ್ತು ಚಿಕ್ಕ ಮಗ ಒಂದೆಡೆ ದೊಡ್ಡ ಮಗ ಒಂದೆಡೆ ವಾಸ ಮಾಡಬೇಕು , ಗಂಡಸಿನಂತೆ ದುಡಿದು ಸಂಸಾರ‌ ಸಾಗಿಸಬೇಕಾಗಬಹುದು, ಸರೀಕರೊಡನೆ ಸಮನಾಗಿ ಬಾಳಬೇಕು ,ದುಷ್ಟರಿಗೆ ದುಸ್ವಪ್ನವಾಗಿ ಶಿಷ್ಟರಿಗೆ ಸಿಹಿಯಾಗಿ ಬಾಳಬೇಕು  ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ .
ಕೊಟಗೇಣಿ ಎಂದು ಆಡುಭಾಷೆಯಲ್ಲಿ ಕರೆವ ಚೌಡಗೊಂಡನಹಳ್ಳಿಗೆ ಭೂದೇವಮ್ಮ ನವರನ್ನು ‌ಬಾಲಾಜಿಯವರೊಂದಿಗೆ‌‌ ಮದುವೆ ‌ಮಾಡಿಕೊಡಲಾಗಿತ್ತು. ಈಗಾಗಲೇ ಹೇಳಿದಂತೆ ಭೂದೇವಮ್ಮ ಬಣ್ಣದಲ್ಲಿ ಕಪ್ಪುಆದರೂ  ಲಕ್ಷಣವಂತೆ , ಓದಿದ್ದು ಮೂರನೇ ಕ್ಲಾಸ್ ಪೇಲ್ ,  ಇದಕ್ಕೆ ವಿರುದ್ಧವಾಗಿ ಬಾಲಾಜಿಯವರು ಕೆಂಪನೆಯ  , ಐದೂವರೆ ಅಡಿ ಎತ್ತರದ ,ಸುಂದರ ಅಂಗಸೌಷ್ಟವವಿರುವ ಎತ್ತರದ ಆಳು. ಆ ಊರಿನಲ್ಲಿ ಆ ಕಾಲದಲ್ಲೆ ಪಿ‌ಯುಸಿ ಪಾಸ್ ಮಾಡಿದ ‌ನಾಲ್ವರಲ್ಲಿ ಇವರೂ ಒಬ್ಬರು. ಭೂದೇವಮ್ಮ ಯರಬಳ್ಳಿಯ ಮೂಡಲಸೀಮೆಯಾದರೆ , ಬಾಲಜಿಯವರು  ಚೌಡಗೊಂಡನಹಳ್ಳಿ ಪಡುವಲಸೀಮೆ  ,ಒಟ್ಟಿನಲ್ಲಿ ಈ ಜೋಡಿಯನ್ನು ಉತ್ತರ ,ದಕ್ಷಿಣ ಕಲೆಹಾಕಲಾದಂತಾಗಿತ್ತು.
"ಅಷ್ಟು ದೂರ ಪಡುವಲ ಸೀಮೆಗೆ ಎಂಗೆ ಕೊಡ್ತೀರಾ ಮಗಿನ್ನ ಇನ್ನೊಂದು ಸಲ ಯೋಚ್ನೆ ಮಾಡ್ರಿ " ಎಂದು ನೆರೆಮನೆಯವರು ಅಂದಾಗ ಸರಸ್ವತಜ್ಜಿ ಸ್ವಲ್ಪಮಟ್ಟಿಗೆ ಯೋಚಿಸಿದರೂ ಮಕ್ಕಳ ಧೈರ್ಯದಿಂದ ಮದುವೆ ಮಾಡಿಯೇ ಬಿಟ್ಟರು.
ತಾವು ಅಂದು ಕೊಂಡದ್ದಕ್ಕಿಂತ ಚೆನ್ನಾಗಿ ಅಳಿಯ ಮಗಳನ್ನು ನೋಡಿಕೊಳ್ಳುವುದು ಕಂಡು ಸರಸ್ವತಜ್ಜಿ ಆಡಿಕೊಂಡವರನ್ನು, ತನ್ನ ಸ್ವಂತ ಖರ್ಚಿನಲ್ಲಿ ಹೊರಕೆರೆದೇವರ ಪುರದ ಶ್ರೀ ಲಕ್ಷಿ ನರಸಿಂಹ ಸ್ವಾಮಿ ಜಾತ್ರೆಗೆ ಕರೆದುಕೊಂಡು ಹೋಗಿ , ಅಳಿಯ ಮತ್ತು ಮಗಳ ಸಂಸಾರ ತೋರಿಸಿ ತಿರುಗೇಟು ನೀಡಿದ್ದರು.
ಹೀಗೆ  ಇರುವ ಎಂಟು ಎಕರೆ ಬೆದ್ಲು ( ನೀರಾವರಿಅಲ್ಲದ ಭೂಮಿ) ‌ ಹೊಲದಲ್ಲಿ ಚೆನ್ನಾಗಿ ಬೆಳೆ ಬೆಳೆಯುವ ಮೂಲಕ ಆ ಹಳ್ಳಿಯಲ್ಲಿ, ಜೀವನ ಮಾಡುತ್ತಾ, ಸಂಸಾರ ಸಾಗಿತ್ತು .
ಅಂದು ರಾತ್ರಿ ನಾಟಿ ಕೋಳಿ‌ಸಾರು ಉಂಡು, ದಂಪತಿಗಳು ಮಕ್ಕಳೊಂದಿಗೆ ಆಟವಾಡಿ , ಅವರು ನಿದ್ದೆ ಹೋದ ಮೇಲೆ ಅಡಿಕೆ ಎಲೆ ಮೆದ್ದ ಜೋಡಿ ಒಳಗಿನ ಮನೆಯಲ್ಲಿ ಮಲಗಿದ್ದರು .
ಮಧ್ಯರಾತ್ರಿ ಎರಡು ಗಂಟೆ ಇರಬಹುದು , ಇದ್ದಕ್ಕಿದ್ದಂತೆ ಬಾಲಾಜಿ ಭೂದೇವಮ್ಮನವರನ್ನು ಹಿಡಿದೆಳೆದರು , ನಿದ್ದೆಗಣ್ಣಲ್ಲಿದ್ದ ಭೂದೇವಮ್ಮ
" ಏ ಸುಮ್ನೆ ಮಕ್ಕ ನಿಂಗೆ ಯಾವಾಗಲೂ ಅದೇ ದ್ಯಾಸ"
ಎಂದು ಮಲಗಿದಳು .ಭೂದೇವಮ್ಮ ಏಳದಿದ್ದಾಗ  ಅನಾಮತ್ತಾಗಿ ಅವರನ್ನು ಎತ್ತಿಕೊಂಡು ಮನೆಯ ಪಡಸಾಲೆ ಗೆ ಬಿಟ್ಟು, ಮತ್ತೆ ಒಳಗೆ ಹೋಗಿ ಮಕ್ಕಳನ್ನು ತಬ್ಬಿಕೊಂಡು ಬಂದು  ಬಿಟ್ಟರು. ಗಂಡನ ವಿಚಿತ್ರ ವರ್ತನೆ ಕಂಡು ಬುಡ್ಡಿ ಹಚ್ಚಿದರು ಭೂದೇವಮ್ಮ  .ಬಾಲಜಿ ನಾಲಿಗೆ ತೋರುತ್ತಾ  , ಕಿವಿ ತೋರಿಸಿ ‌, ಸಂಜ್ಞೆ ಮಾಡುವುದು ಕಾಣಿಸಿತು . ಮಾತನಾಡಲಿಲ್ಲ .ಮತ್ತೆ ಹೊರ ಹೋದ ಬಾಲಾಜಿ‌ , ದೊಡ್ಡ ಕೋಲಿನಿಂದ ಒಳಬಂದು ಬುಡ್ಡಿಯ ಹಿಡಿದು , ಕೋಣೆಯ  ಒಳಗೋದರು . ಮಕ್ಕಳು ಮತ್ತು ಭೂದೇವಮ್ಮರ ಗಾಬರಿ ಹೆಚ್ಚಾಯಿತು. ಸ್ವಲ್ಪ ಸಮಯದ ನಂತರ ಕೋಲಿನ ತುದಿಯಲ್ಲಿ , ದಾರದಂತಹ ವಸ್ತು ಬುಡ್ಡಿ ಬೆಳಕಲ್ಲಿ ಕಂಡಿತ್ತು . ಹತ್ತಿರ ಬರುತ್ತಿದಂತೆ ನೋಡಿ  , ಮಕ್ಕಳು ಮತ್ತು ಭೂದೇವಮ್ಮ ಜೋರಾಗಿ ಕಿರುಚಿದರು. ಬೀದಿಯವರೆಲ್ಲ ಜಮಾಯಿಸಿದರು . ಒಂದೆಡೆ ಕೋಲು ಮತ್ತೊಂದೆಡೆ ಇರುವ ಅದನ್ನು ತೋರಿಸಿ ಕಿವಿ ತೋರಿಸಿದರು ಜನರಿಗೆ ಅರ್ಥವಾಯಿತು.ಕಿವಿಗೆ ಕಚ್ಚಿದ ಹಾವು!!  ಅದು ಅಲ್ಲಿ ನಿರ್ಜೀವವಾಗಿದೆ. ಸ್ವಲ್ಪ ಯಾಮಾರಿದ್ದರೂ ಮಕ್ಕಳು ಮತ್ತು ಭೂದೇವಮ್ಮರಿಗೂ ತೊಂದರೆಯಾಗುವುದರಲ್ಲಿತ್ತು .
ರಾಜಣ್ಣ ಬೇಗ ಹೋಗಿ ಒಂದು ನಾಟಿ ಕೋಳಿ‌ತಂದು‌ , ಹಾವು ಕಚ್ಚಿದ ಕಿವಿಯ ಭಾಗವನ್ನು ಸ್ವಲ್ಪ ಗಾಯ ಮಾಡಿ  , ಅದರ ಮೇಲೆ ಕೋಳಿಯ ಗುದದ್ವಾರ ಇಟ್ಟರು . ಕೋಳಿ ಸತ್ತು ಹೋಯಿತು ಜನರಿಗೆ ಆಗ ಅರಿವಾಗಿತ್ತು ,ಅದು ಬಾರಿ ವಿಷದ ಹಾವೆಂದು .
ಬಾಲಾಜಿ ಯವರು ಮಾತನಾಡುತ್ತ ಇಲ್ಲ , ನಾಲಿಗೆ ದಪ್ಪವಾಗುತ್ತಿತ್ತು , ಬಲಗೈಯನ್ನು ಎತ್ತಿ ತೋರ್ಬೆರಳು ತಂದು ‌,ಎಡ ಭುಜಕ್ಕೆ ಇಟ್ಟುಕೊಂಡು ಸಂಜ್ಞೆ ಮಾಡಿದರು . ಜುಂಜಪ್ಪ ಸೂಜಿ? ಅಂದ  . ಹೌದು ಎಂಬಂತೆ  ತಲೆಯಾಡಿಸಿದರು ಬಾಲಾಜಿ . ಅದೇ ಜಾವದಲ್ಲಿ ಎತ್ತಿನ ಗಾಡಿಯಲ್ಲಿ ಬಾಲಾಜಿಯವರನ್ನು ಹೊರಕೆರೆದೇವರಪುರದ ಆಸ್ಪತ್ರೆಗೆ ಕರೆದುಕೊಂಡು ಹೊರಟರು .ಬರುಬರುತ್ತಾ  ಬಾಲಾಜಿ ಯವರ ಬಾಯಲ್ಲಿ ನೊರೆ ಬರುವುದು ಹೆಚ್ಚಾಯಿತು. ದೊಡ್ಡ ಹಳ್ಳದ ದಿನ್ನೆ ಹತ್ತವಾಗ ಭೂದೇವಮ್ಮನ ಅಳುವ ಧ್ವನಿ ಹೆಚ್ಚಾಯಿತು ಅಲ್ಲಿಗೆ ಗಾಡಿ ನಿಂತಿತು.
ಅಂದಿನಿಂದ ಭೂದೇವಮ್ಮ ನ ಜೀವನದ ಕಷ್ಟದ ದಿನಗಳ ಆರಂಭವಾಗಿದ್ದವು. ಅಳಿಯನ ತಿಥಿಯ ಶಾಸ್ತ್ರಕ್ಕೆ ಬಂದ ಸರಸ್ವತಜ್ಜಿ ಮತ್ತು ಮಕ್ಕಳು ಅಕ್ಕನನ್ನು ಯರಬಳ್ಳಿಗೆ ಕರೆದರು . ಸ್ವಾಭಿಮಾನಿ ಭೂದೇವಮ್ಮ ಹೋಗಲು ಒಪ್ಪದಿದ್ದಾಗ .ಸತೀಶನನ್ನು ಕರೆದುಕೊಂಡು ಹೋಗಿ ಓದಿಸುತ್ತಿದ್ದರು.
ಯರಬಳ್ಳಿಯ ದೊಡ್ಡಪ್ಪಗಳ ಮನೆಯಲ್ಲಿ
ಗುರುಸಿದ್ದ ಹಸಿಹುಲ್ಲಿನ ಮೆದೆಯನ್ನು ಸರಿಸಿದ  , ಏನೋ ಸರಿದಾಡಿದಂತಾಯಿತು ಲಾಟೀನು ಹಿಡಿದು ನೋಡಿದರೆ , ಮೊಂಡರಕಪ್ಪೆ !!!( ದೊಡ್ಡ ಗಾತ್ರದ ಚೇಳು)
ಅದೇ ಸತೀಶನಿಗೆ ಕಚ್ಚಿರುವುದು ಎಂದು ಖಾತ್ರಿಯಾಗಿತ್ತು .ಯಾರೋ ಭೂದೇವಮ್ಮಗೆ ಮುಖಕ್ಕೆ ನೀರು ಚಿಮುಕಿಸಿದಾಗ ಎಚ್ಚರಗೊಂಡ ಭೂದೇವಮ್ಮ ಮತ್ತೆ ಅಳಲು ಶುರುಮಾಡಿದರು. ಮುಕುಂದಯ್ಯ ಅಕ್ಕನನ್ನು ಗದರುತ್ತಾ "ಸುಮ್ನಿರು ಏನೂ ಆಗಲ್ಲ ನಾವೆಲ್ಲ ಇಲ್ಲವಾ? " ಎಂದು ಧೈರ್ಯ ಹೇಳಿದರು.
ಪೂಜಾರ ಫಣಿಭೂಷಣ ಕಾಲಿಗೆ ಎಂತದೊ ಮಂತ್ರ ಹೇಳಿ , ನಿಂಬೆಹಣ್ಣು ನೀವಳಿಸಿ , ಕೋಯ್ದರು. ನಾಟಿ ಔಷದದ ರಂಗಣ್ಣ ಯಾವುದೋ ಬೇರು ತೇದು ಹಚ್ಚಿ ,ಬೆಳ್ಳುಳ್ಳಿ ಸಿಪ್ಪೆ ಹೊಗೆಯನ್ನು ‌ಮೊಂಡರಗಪ್ಪೆ ಕಡಿದ ಜಾಗಕ್ಕೆ  ಹಾಕಿ
" ನೋಡ್ರಿ ಮಂಡ್ರಗಪ್ಪೆ ಬಾಳ ದೊಡ್ಡದು , ಜೀವಕ್ಕೆ ಅಪಾಯ ಇಲ್ಲ  ,ಆದರೆ ರಾತ್ರಿ ಪೂರಾ ನಿದ್ದೆ ಮಾಡಂಗಿಲ್ಲ ಮಾಡಿದರೆ ಇಷ ಏರುತ್ತೆ ಕುಡಿಯಾಕೆ ಬಿಸಿನೀರು ಕೊಡ್ರಿ" ಅಂದರು
"ಆಸ್ಪತ್ರೆಗೇನು ಬ್ಯಾಡವೋ ? "
ಅಂದರು ಮುರಾರಿ
"ಏನೂ ಬ್ಯಾಡಬಿಡು  ,ಒಟ್ನಲ್ಲಿ ಮಗ ನಿದ್ದೆ ಮಾಡಬಾರದು  ,ಸ್ವಲ್ಪ ಉರಿ ಇರುತ್ತೆ ಬೆಳಿಗ್ಗೆ ಸರಿ ಹೋಗುತ್ತೆ."
ಎಂದು ಎದ್ದು ಟವಲ್ ಕೊಡವಿಕೊಂಡು , ಔಷಧೀಯ ಚೀಲ ತೆಗೆದುಕೊಂಡು , ಲಾಟೀನು ಹಿಡಿದು ಹೊರಟರು ರಂಗಣ್ಣ.
ಬೆಳಗಿನ ಜಾವದ ಹೊತ್ತಿಗೆ ಉರಿ ಕಡಿಮೆಯಾಗಿ ಸತೀಶನಿಗೆ ನಿದ್ರೆ ಹತ್ತಿದರೆ , ಅವನನ್ನು ಎಚ್ಚರ ಮಾಡುತ್ತಿದ್ದರು . ಭೂದೇವಮ್ಮ ಮನದಲ್ಲೇ ಮಾರಮ್ಮನ ನೆನೆದು  ,ಮಗನಿಗೆ ಹುಷಾರಾದರೆ ಬೇವಿನ ಸೀರೆ ಸೇವೆ ಉಡುವೆ , ಎಂದು ಹರಕೆ ಹೊತ್ತರೆ .ಸರಸ್ವತಜ್ಜಿ ಮೊಮ್ಮಗ ಗುಣಮುಖ ಆದರೆ  ,ದೇವಿ ಪುರಾಣ ಓದಿಸುವುದಾಗಿ ಹರಕೆ ಕಟ್ಟಿಕೊಂಡರು.
ಎಲ್ಲರ ಹರಕೆಯ ಫಲವೋ ಫಣಿಭೂಷಣ ನ ಮಂತ್ರವೋ, ರಂಗಣ್ಣನವರ ನಾಟಿ ಔಷಧವೊ ಸತೀಶ ಬೆಳಿಗ್ಗೆ ಉರಿಯಿಲ್ಲದೇ , ತೊಂದರೆಯಿಲ್ಲದೆ , ಆರೋಗ್ಯವಾಗಿ ,ಗೆಲುವಾಗಿ ಮಾತನಾಡ ತೊಡಗಿದ, ಮನೆಯವರೆಲ್ಲರ ಸಂತಸಕ್ಕೆ ಪಾರವೇ ಇಲ್ಲ .ಗೊತ್ತಿಲ್ಲದೆ ಒಂದೆರಡು ಆನಂದಬಾಷ್ಪ ಭೂಮಿಯನ್ನು ತಲುಪಿದವು ಭೂದೇವಮ್ಮ ನ ಕಣ್ಣಿಂದ . ಮಗಳ ನೋಡಿ ಸರಸ್ವತಜ್ಜಿ ಭಾವುಕಳಾಗಿ ದೇವರ ಕೋಣೆ ಕಡೆ ನಡೆದರು.

ಮುಂದುವರೆಯುವುದು...

ಸಿ ಜಿ ವೆಂಕಟೇಶ್ವರ

No comments: