07 July 2018

ನೆನಪಾಗುವುದು (ಕವನ)

*ನೆನಪಾಗುವುದು*


ಶಾಲೆಯಿಂದ ಮನೆಗೆ ಬಂದ
ನನ್ನ ಮಗಳು ಅಮ್ಮಾ ನನಗೆ
ಗೋಬಿ ಬೇಕು ಪಿಜಾ ಬೇಕು ಎಂದಾಗ
ನನ್ನಜ್ಜಿ ನನಗೆ ಕೊಟ್ಟ ಸಜ್ಜೆ ರೊಟ್ಟಿ
ಚಿನಕುರುಳಿ ನೆನಪಾಗುವುದು

ಮಳೆಯಲಿ ನೆನೆದು ಬಂದು
ಅಪ್ಪಾ ನನಗೆ ಕೊಡೆ ಬೇಕು
ಬಣ್ಣದ್ದಿರಬೇಕು ವಿಶಿಷ್ಠವಾಗಿರಬೇಕು
ಎಂದಾಗ ಮಳೆಯಲೂ ಚಳಿಯಲೂ ನನ್ನ
ಬೆಚ್ಚಗಿಟ್ಟ ಅಜ್ಜಿಯ  ಕೌದಿಯ ನೆನಪಾಗುವುದು

ಅಮ್ಮಾ ನನಗೆ ಪೋಕೆಮಾನ್ ಬೇಕು
ಚಿಂಟು ಟೀವಿ ನೋಡಬೇಕು ಎಂದು
ಮಗಳ ಹಟ ಮಾಡಿದಾಗ ಮುಸ್ಸಂಜೆ
ತಲೆ ನೇವರಿಸಿ ಕಥೆ ಹೇಳುವ ಅಜ್ಜಿಯ
ನೆನಪಾಗುವುದು .

ಇವನ್ನೆಲ್ಲಾ ನನ್ನ ಮಗಳಿಗೆ ಹೇಳಿ
ಗೋಬಿ ಬೇಡ ಸಿರಿಧಾನ್ಯ ನೋಡು
ಟಿವಿ ಮೊಬೈಲ್ ಕಡಿಮೆ ಮಾಡು
ಎಂದರೆ ನೀನಾವ ಕಾಲದಲ್ಲಿರುವೆ
ಎಂದು ಮಗಳು‌ ಜರಿದಾಗಲೂ
ನಮ್ಮಜ್ಹಿಯ ನೆನಪಾಗುವುದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: