ಯರಬಳ್ಳಿ ಮಾರಮ್ಮನ ಜಾತ್ರೆ.
ಬೇಡಿದ ವರಗಳ
ನೀಡಿ ಭಕ್ತರ ಅಭೀಷ್ಟೆಗಳನ್ನು ಅನಾದಿಕಾಲದಿಂದಲೂ ಈಡೇರಿಸುತ್ತಾ ಬಂದಿರುವ ಯರಬಳ್ಳಿ
ಮಾರಮ್ಮನ ಜಾತ್ರೆಯು ಪ್ರತಿ ವರ್ಷ ಶ್ರದ್ದಾಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತದೆ
ರಾಜ್ಯದ ಹೊರರಾಜ್ಯದ ಭಕ್ತರು ದೇವಿಯ ಉತ್ಸವದ ಸಂದರ್ಭದಲ್ಲಿ ಹಾಜರಿದ್ದು ದೇವಿಯ ಕೃಪೆಗೆ
ಪಾತ್ರರಾಗುತ್ತಾರೆ. ಪ್ರತಿ ವರ್ಷವೂ ಒಂದು ವಾರಕ್ಕೆ ಮೊದಲು ತಳವಾರಯ್ಯನವರು "ಸಾರುವ
"(ಹಳ್ಳಿಯಾದ್ಯಂತ ತಮಟೆ ಬಾರಿಸುತ್ತಾ ಜಾತ್ರೆಯ ಬಗ್ಗೆ ತಿಳಿಸುವುದು)ಮೂಲಕ ಜಾತ್ರೆ ಗೆ
ಅಧಿಕೃತ ಚಾಲನೆ ಸಿಗುತ್ತದೆ. ಬುಧವಾರ ಸಾರು ಹೊರಟು ಹೋಗುವ ಶಾಸ್ತ್ರ ನಡೆಯುವುದು.
ಗುರುವಾರ ದೇವಿಗೆ "ಜಲದಿ"ಉತ್ಸವ ನಡೆಯುತ್ತವೆ ಅಂದು ಮುಂಜಾನೆ ಗ್ರಾಮದಲ್ಲಿರುವ ಎಲ್ಲಾ
ಭಕ್ತರು ದೇವಾಲಯಕ್ಕೆ ಆಗಮಿಸಿ ಉರುಮೆ. ಜಾಗಟೆ. ಶಂಖ ಮುಂತಾದ ಮಂಗಳ ವಾದ್ಯಗಳೊಂದಿಗೆ
ಒಂದು ಕಿಲೋಮೀಟರ್ ದೂರದಲ್ಲಿರುವ ಜಲದಿ ಪ್ರದೇಶಕ್ಕೆ ತಾಯಿಯ ಉತ್ಸವ ಮೂರ್ತಿಯನ್ನು
ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ. ಅಂದು ಬಹುಪಾಲು ಭಕ್ತರು ಉಪವಾಸವಿದ್ದು
ದೇವಿಗೆ ಪೂಜಿಸುತ್ತಾರೆ. ಅಂದು ಸಾಯಿಂಕಾಲ ಜಲದಿ ಹೊಳೆಯಿಂದ ದೇವಾಲಯಕ್ಕೆ ತಾಯಿ
ನಡೆದುಕೊಂಡು ಬರುವುದು ನೋಡಲು ಕಣ್ಣಿಗೆ ಹಬ್ಬ. ಈ ಸಂದರ್ಭದಲ್ಲಿ "ಸೂರುಬೆಲ್ಲ
ಮೆಣಸು"(ವೀಳ್ಯದೆಲೆಯಲ್ಲಿ ಬುರುಗು. ಮೆಣಸು ಇಟ್ಟು ದೇವಿಗೆ ಅರ್ಪಿಸುವ ಶಾಸ್ತ್ರ)
ದೇವಿಗೆ ಅರ್ಪಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ.ಅಂದು ಸಂಜೆ ತಾಯಿಗೆ ಪ್ರಿಯವಾದ
"ಬಾನಗುರಿ ಉತ್ಸವ" ನಡೆಯುತ್ತವೆ ಆಗ ದೇವಿಗೆ ಕುರಿ ಬಲಿ ನೀಡಿ ತಾಯಿಗೆ ಪ್ರಸಾದ
ಅರ್ಪಿಸುತ್ತಾರೆ. ಶುಕ್ರವಾರ ಮಾರಮ್ಮನ ಆರತಿ ಉತ್ಸವ ನಡೆಯುತ್ತದೆ ಅಂದು ತಂಬಿಟ್ಟಿನಿಂದ
ಮಾಡಿದ ಆರತಿಯಲ್ಲಿ ದೀಪಗಳನ್ನು ಹಚ್ಚಿ ದೇವಿಗೆ ಬೆಳಗುವರು ಅಂದು ಹರಕೆಯನ್ನು ಹೊತ್ತ
ಕೆಲವರು "ಬೇವಿನ ಸೀರೆಯನ್ನು "ಉಟ್ಟು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಅಂದು ಮದ್ಯ
ರಾತ್ರಿಯಿಂದ ಕುರಿ ಮತ್ತು ಕೋಣಗಳ ಬಲಿ ಕೊಟ್ಟು ದೇವಿಯನ್ನು ಸಂತೃಪ್ತ ಪಡಿಸುತ್ತಾರೆ.ಅದೇ
ಶುಕ್ರವಾರ ಪ್ರತೀವರ್ಷ" ಶ್ರೀ ದೇವಿ ಮಹಾತ್ಮೆ "ಎಂಬ ಪೌರಾಣಿಕ ನಾಟಕವನ್ನು ಶ್ರದ್ಧೆ
ಭಕ್ತಿಯಿಂದ ಅಭಿನಯಿಸುವರು ಶನಿವಾರದಂದು" ಸಣ್ಣ ಸಿಡಿ ಉತ್ಸವ ",ಭಾನುವಾರ "ದೊಡ್ಡ ಸಿಡಿ
ಉತ್ಸವ " ನಡೆಯುತ್ತದೆ ಸಿಡಿ ಮರಕ್ಕೆ ಸಿಡುಹಾಡುವವರನು ಕಟ್ಟಿ ಗ್ರಾಮದ ಮುಖ್ಯ
ರಸ್ತೆಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಜಾತ್ರೆಯ ಕೊನೆಯಲ್ಲಿ ಪೋತರಾಜರು ಗಾವು
ಸಿಗಿಯುವುದರ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ತೆರ ಬೀಳುತ್ತದೆ ಈ ರೀತಿಯಲ್ಲಿ ಮದ್ಯ
ಕರ್ನಾಟಕದಲ್ಲಿ ನಡೆಯುವ ಶ್ರೀ ಯರಬಳ್ಳಿ ಮಾರಮ್ಮನ ವಾರ್ಷಿಕ ಜಾತ್ರೆ ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುತ್ತದೆ ದಯವಿಟ್ಟು ನಾವೆಲ್ಲರೂ ಜಾತ್ರೆಗೆ ಬಂದು ಮಾರಮ್ಮನ ಕೃಪೆಗೆ
ಪಾತ್ರರಾಗಬೇಕೆಂದು ಗ್ರಾಮಸ್ಥರ ಪರವಾಗಿ ಆಹ್ವಾನಿಸುತ್ತಿದ್ದೇನೆ .
ಸಿ.ಜಿ.ವೆಂಕಟೇಶ್ವರ..
ಸಮಾಜ ವಿಜ್ಞಾನ ಶಿಕ್ಷಕರು
ಯರಬಳ್ಳಿ
9900925529
No comments:
Post a Comment