03 September 2017

ದೇವರ ಬಗ್ಗೆ ನಂಬಿಕೆ ಇರಲಿ ದೇವ ಮಾನವರ ಮೇಲಲ್ಲ.



*ಜನರ ಧಾರ್ಮಿಕ ನಂಬಿಕೆಗಳ ದುರ್ಬಳಕೆ ಕೆಲವು ಸ್ವಘೋಷಿತ ದೇವಮಾನವರಿಂದ ಆಗುತ್ತಿರುವುದ ಕೇಳಿರುವಿರಿ. ಇಂತಹ  ದುರ್ಬಳಕೆ ಸ್ವಸ್ಥ ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿರುವುದು ಇತ್ತೀಚೆನ ರಾಮ್ ರಹೀಮ್ ಸಿಂಗ್ ನಂತಹ ದೇವಮಾನವರ ಶಿಕ್ಷೆ ಮತ್ತು ಅನಂತರದ ಹಿಂಸಾಚಾರ, ಹುಚ್ಚಾಟಗಳಿಂದ ಸಾಬೀತಾಗಿದೆ .
"ಈ ಭೂಮಿಗೆ ಮೊದಲು ದೇವರು ಬಂದ ನಂತರ ತನ್ನ ಬದಲು ತಾಯಿಯ ತಂದ" ಎಂಬ ಹಾಡು ಎಲ್ಲೋ ಕೇಳಿದ ನೆನಪು ದೈವ ಸ್ವರೂಪಿಯಾದ ಅಮ್ಮ ನಮಗೆ ಪ್ರೀತಿಯ ಜೊತೆಗೆ ತಿದ್ದಿ ತೀಡಿ ನಮ್ಮನ್ನು ಉತ್ತಮ ನಾಗರೀಕರನ್ನಾಗಿ ಮಾಡಲು ಬಹಳ ಪ್ರಮುಖ ಪಾತ್ರ ವಹಿಸುವಳು ಅದಕ್ಕೆ ಮಾತೃದೇವೋಭವ ,ಪಿತೃದೇವೋಭವ ,ಆಚಾರ್ಯ ದೇವೋಭವ ಎಂದರು. ಕೆಲವೊಮ್ಮೆ ಆಚಾರ್ಯ ಎಂಬ ಪದ ಗುರು ಎಂಬ ಅರ್ಥದ ಜೊತೆಗೆ ಧಾರ್ಮಿಕ ಮುಖಂಡ ಎಂಬ ಅರ್ಥವನ್ನು ಸಹ ಪ್ರತಿಧ್ವನಿಸುತ್ತದೆ.
ಮೊದಲು ಸಾಮಾನ್ಯವಾಗಿ ಸಾಕ್ಷರತೆಯ ಮಟ್ಟ ಕಡಿಮೆಯಿದ್ದ ಕಾಲದಲ್ಲಿ ಧರ್ಮದ ಕೆಲ ತತ್ವ, ಆದರ್ಶ, ಆಚರಣೆಗಳು ಎಲ್ಲರಿಗೂ ಸುಲಭವಾಗಿ ತಿಳಿಯದ ಕ್ಷಣಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ಸ್ವಾಮಿಗಳು, ಬಾಬಾಗಳು ನಮಗೆ ಬೆಳಕು ತೋರಿರುವುದು ಕಂಡುಬಂದಿದೆ .
ಇದರಲ್ಲಿ ಹೆಸರಿಸಬಹುದಾದ ಪ್ರಾತಸ್ಮರಣೀಯರೆಂದರೆ,ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಇತ್ಯಾದಿ, ಇವರು ಜನರ ಮತ್ತು ಸಮಾಜದ ಓರೆ ಕೋರೆಗಳನ್ನು ತಿದ್ದಿ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ದಾರಿ ದೀವಿಗೆಗಳಾಗಿದ್ದರು.
ಬದಲಾದ ಕಾಲಘಟ್ಟದಲ್ಲಿ ಜಾತಿಗೊಂದು ಮಠ,ಧಾರ್ಮಿಕ ಪಂಥಗಳು,ಅಧನಿಕ ಜೀವನಶೈಲಿ, ರಾಜಕೀಯ ಪಕ್ಷಗಳ ಒಡನಾಟದಿಂದ ಮಠಗಳ( ,ಎಲ್ಲಾ ಅಲ್ಲ) ಬಾಬಾಗಳ ಜೀವನ ಶೈಲಿ ,ಅವರ ಹಾವಭಾವ,ಮುಂತಾದವುಗಳ ಬದಲಾವಣೆಗಳನ್ನು ನಾವು ಕಾಣುವುದರ ಜೊತೆಯಲ್ಲಿ ನಕಲಿ ಬಾಬಾಗಳು ಸ್ವಯಂಘೋಷಿತ ದೇವಮಾನವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇವರ ಅನ್ಯಾಯ, ಅಕ್ರಮ, ಅನೈತಿಕ ಚಟುವಟಿಕೆಗಳು, ಎಗ್ಗಿಲ್ಲದೇ ನಡೆಯುತ್ತಿರುವುದು ದುರದೃಷ್ಟಕರ. ಅದಕ್ಕೆ ತಾಜಾ ಉದಾಹರಣೆಗಳೆಂದರೆ, ನಿತ್ಯಾನಂದ, ರಾಮ್ ರಹೀಮ್ ಸಿಂಗ್,ಬಾಬಾ ಇತ್ಯಾದಿ, ಬಾಬಾ ರಾಮ್ ರಹೀಮ್ ಸೀಂಗ್ ಗೆ ಜೈಲು ಶಿಕ್ಷೆಗೆ ಎರಡು ದಿನ ಮೊದಲು ಆರೋಪಿಯಾಗಿದ್ದ ಬಾಬಾಗೆ  ರಾಜಕೀಯ ಪಕ್ಷವೊಂದರ ಮಂತ್ರಿ ಐವತ್ತು ಲಕ್ಷ ಹಣ ನೀಡಿ ಆ ಸ್ವಯಂ ಘೋಷಿತ ದೇವಮಾನವನಿಗೆ ಪಾದಪೂಜೆ ಮಾಡಿಬಂದಿರುವುದು ಇಂತಹ ಕಳ್ಳ ಸ್ವಾಮಿಗಳೊಂದಿಗಿರುವ ಅಪವಿತ್ರ ಮೈತ್ರಿಗೆ ಉದಾಹರಣೆ.
ಇಂತಹ ದೇವ ಮಾನವರಿಗೆ ಡೋಂಗಿ ಜಾತ್ಯಾತೀತ ಬುದ್ದಿಜೀವಿಗಳು ಬೆಂಬಲಿಸುವ ಮೂಲಕ ತಮ್ಮ ಬಣ್ಣ ಬಯಲುಮಾಡಿಕೊಂಡಿದ್ದಾರೆ .ಈ ರೀತಿಯ ಬಾಬಾಗಳು ಕೇವಲ ಒಂದು ಧರ್ಮ, ಪಂತ ಕ್ಕೆ ಸೀಮಿತವಾಗಿಲ್ಲ ಬದಲಿಗೆ ಎಲ್ಕಾಧರ್ಮಗಳಲ್ಲೂ ವ್ಯಾಪಕವಾಗಿ ಬೆಳೆದಿದ್ದಾರೆ.
 ಮೊದಲಿಗೆ ಅಮಾಯಕರು ,ಅನಕ್ಷರಸ್ಥ ಜನರು ಇವರ ಅನುಯಾಯಿಗಳ ರೂಪದಲ್ಲಿ ಸೇರಿದರೆ ಕ್ರಮೇಣ ವಿದ್ಯಾವಂತರು ತಿಳಿದವರು ಸಮೂಹ ಸನ್ನಿಗೊಳಗಾಗಿ ಅವರ ಪಾಶಕ್ಕೆ ಬಿದ್ದು ಕುರುಡಾಗು ಅವರ ಅನ್ಯಾಯ ಅಕ್ರಮಗಳ ಸಮರ್ಥನೆ ಮಾಡುವುದು ದುರದೃಷ್ಟಕರ
ದೇವರು.ಆಚಾರ,ವಿಚಾರ ನಮ್ಮ ನಂಬಿಕೆ ಆದರೆ ಅದೇ ನಂಬಿಕೆಗಳು ಕುರುಡಾದಾಗ ,ಅದಕ್ಕೆ ಧರ್ಮದ ಲೇಪನವಾದಾಗ,ರಾಜಕೀಯ ಅಪವಿತ್ರ ಮೈತ್ರಿಯಾದಾಗ,ವೊಟ್ ಬ್ಯಾಂಕ್ ಪಾಲಿಟಿಕ್ಸ್ ಮುಖ್ಯವಾದಾಗ ಇಂತಹ ಸಾವಿರಾರು ಬಾಬಾಗಳು ಉದಯವಾಗಿ ಸಾಮಾಜಿಕ ಸ್ವಾಸ್ಥ್ಯ, ಸಾಮಾಜಿಕ ಶಾಂತಿಗೆ ಮಾರಕವಾಗುತ್ತಾರೆ.
ಮೊದಲು ಇಂತಹ ಬಾಬಾಗಳ ಎಲ್ಲಾ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥ ಬಾಬಾಗಳು ಯಾವದೇ ಧರ್ಮದವರಾದರೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಧಾರ್ಮಿಕ ಆಚರಣೆಗಳು ಸ್ವಾಮೀಜಿಯವರ ಸಂದೇಶಗಳು  ಜನರ ಮನಸ್ಸನ್ನು ಅರಳಿಸಬೇಕೆ ಹೊರತು ಕೆರಳಿಸಿ ಸಾಮಾನ್ಯ ಜನರ ,ಸರ್ಕಾರದ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವ ರಾಕ್ಷಸೀಯ ಗುಣಗಳನ್ನು ಪ್ರಚೋದಿಸಬಾರದು ಇನ್ನು ಮುಂದಾದರು ಯಾವದೇ ದಾರ್ಮಿಕ ಪುರುಷರ. ಸ್ವಾಮೀಜಿಯವರ ಬಗ್ಗೆ ಕುರುಡು ನಂಬಿಕೆ ಇಡುವ ಮುನ್ನ ಅವರ ಪೂರ್ವಾಪರ ತಿಳಿದು ಜಾಗೃತರಾಗಿರಬೇಕು ಅನುಮಾನ  ಬಂದರೆ ಡೊಂಗಿ ದೇವಮಾನವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಹಿಂಜರಿಯಬಾರದು.ಸರ್ಕಾರಗಳು ಇಂತವರ ಬಗ್ಗೆ ಮೃದು ದೋರಣೆ ಹೊಂದಬಾರದು  .ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ  ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸದೇ   ನಾವೆಲ್ಲರೂ ಒಟ್ಟುಗೂಡಿ ಇಂತಹ ಡೊಂಗಿ ಬಾಬಾಗಳ ವಿರುದ್ಧ. ಹಾಗು ಸಮಾಜ ಸ್ವಾಸ್ಥ್ಯ ಕದಡುವ ಶಕ್ತಿಗಳ ವಿರುದ್ಧ ‌ಹೋರಾಡುವ  ಪಣತೊಡಬೇಕಿದೆ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

No comments: