This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
04 ಅಕ್ಟೋಬರ್ 2021
ಡಿಜಿಟಲ್ ಇಂಡಿಯ .ಪ್ರಬಂಧ
ಡಿಜಿಟಲ್ ಇಂಡಿಯಾ
ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮವಾಗಿ ಆಧುನಿಕ ಜಗತ್ತು ದಿನಕ್ಕೊಂದು ಆವಿಷ್ಕಾರದಿಂದಾಗಿ ಹೊಸ ಜೀವನಕ್ಕೆ ತೆರೆದು ಕೊಳ‍್ಳುತ್ತಿದೆ.ಇದರ ಜೊತೆಯಲ್ಲಿ ಹೊಸ ಸವಾಲುಗಳನ್ನು ಸಹ ನಾವು ಎದುರಿಸುತ್ತಿದ್ದೇವೆ .ವಿಜ್ಞಾನ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ಭಾರತ ಸರ್ಕಾರವು 2015 ರಲ್ಲಿ ಬೃಹತ್ ಅಭಿಯಾನವನ್ನು ಆರಂಭಿಸಿದೆ ಇದರ ಅನುಷ್ಠಾನದಿಂದ ದೇಶದ ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಸೇವೆಗಳು ಸುಲಭವಾಗಿ ಸಾಮಾನ್ಯ ಜನರಿಗೆ ತಲುಪಲು ಸಹಾಯಕಾರಿಯಾಗಿದೆ. "ಡಿಜಿಟಲ್ ಇಂಡಿಯಾ" ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಭಾರತದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಆರಂಭಿಸಿತು. ದೇಶದಾದ್ಯಂತ ತನ್ನ ಆನ್ಲೈನ್ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ವಿದ್ಯುನ್ಮಾನದ ಮೂಲಕ ಲಭ್ಯವಾಗುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ.. ದೇಶವನ್ನು ಡಿಜಿಟಲ್ ಸಬಲೀಕರಣಗೊಳಿಸಲು ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುವುದೂ ಸಹ ಈ ಅಭಿಯಾನದ ಅಂಗವಾಗಿದೆ. ಜನಸಾಮಾನ್ಯರು ಅವರ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಬಳಸಲು ಪ್ರೋತ್ಸಾಹಿಸುತ್ತದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 1, 2015 ರಂದುಈ ಅಭಿಯಾನವನ್ನು ಪ್ರಾರಂಭಿಸಿದರು. ಇದು ಗ್ರಾಮೀಣ ಭಾರತವನ್ನು ಹೈಸ್ಪೀಡ್ ಇಂಟರ್ನೆಟ್ ಸಂಪರ್ಕದ ಸಹಾಯದಿಂದ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
"ಡಿಜಿಟಲ್ ಇಂಡಿಯಾ" ಅಭಿಯಾನದ ಮೂಲಭೂತವಾಗಿ ಮೂರು ಅಂಶಗಳ ಆಧಾರದ ಮೇಲೆ ನಿಂತಿದೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಬಹುದು.
*ಡಿಜಿಟಲ್ ಮೂಲಸೌಕರ್ಯದ ಸೃಷ್ಟಿ*
ದೇಶದಾದ್ಯಂತ ವಿವಿಧ ಡಿಜಿಟಲ್ ಸೇವೆಗಳನ್ನು ನಿಯೋಜಿಸಲು ಸಾಧ್ಯವಾಗಬೇಕಾದರೆ, ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಲವಾದ ಡಿಜಿಟಲ್ ಮೂಲಸೌಕರ್ಯವನ್ನು ರಚಿಸುವುದು ಅಗತ್ಯವಾಗಿದೆ. ಇಂದು ದೇಶದ ಕೆಲವು ಪ್ರದೇಶಗಳು ಯಾವುದೇ ಎಲೆಕ್ಟ್ರಾನಿಕ್ ನೆಟ್ವರ್ಕ್ ಹೊಂದಿಲ್ಲ. ದೇಶಾದ್ಯಂತ ಡಿಜಿಟಲ್ ನೆಟ್ವರ್ಕ್ ಸ್ಥಾಪಿಸಲು ಇದು ಸಕಾಲವಾಗಿದೆ. "ಭಾರತ್ ಬ್ರಾಡ್‌ಬ್ಯಾಂಡ್ ನೆಟ್ ವರ್ಕ್ ಲಿಮಿಟೆಡ್," "ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ ವರ್ಕ್" ಯೋಜನೆಗಳು ಡಿಜಿಟಲ್ ಇಂಡಿಯಾ ಯೋಜನೆಯ ಜವಾಬ್ದಾರಿಯನ್ನೂ ಹೊಂದಿದೆ.
*ಡಿಜಿಟಲ್ ಸೇವೆಯ ವಿತರಣೆ*
ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಸರ್ಕಾರಿ ಸೇವೆಗಳು ಮತ್ತು ಇತರ ಸೇವೆಗಳನ್ನು ಡಿಜಿಟಲ್ ಆಗಿ ಜನರಿಗೆ ತಲುಪಿಸುವುದು. ಭೌತಿಕದಿಂದ ಡಿಜಿಟಲ್ ಗೆ ಸೇವೆಗಳನ್ನು ತಲುಪಿಸುವ ವಿಧಾನವನ್ನು ಬದಲಾಯಿಸುವುದು ಸುಲಭ. ಭಾರತ ಸರ್ಕಾರದ ಅನೇಕ ಸೇವೆಗಳನ್ನು ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ. ಜನರ ದೈನಂದಿನ ಹಣಕಾಸಿನ ವಹಿವಾಟುಗಳನ್ನು ಡಿಜಿಟಲ್ ಆಗಿ ಪರಿವರ್ತಿಸಲಾಗಿದೆ. ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭ್ರಷ್ಟಾಚಾರವನ್ನು ತಡೆಯಲು ಎಲ್ಲಾ ಹಣದ ವಹಿವಾಟುಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುತ್ತಿದೆ.
*ಡಿಜಿಟಲ್ ಸಾಕ್ಷರತೆ*
ಹಿಂದಿನ ಕಾಲದಲ್ಲಿ ಓದು. ಬರಹ ಲೆಕ್ಕಾಚಾರ ಗೊತ್ತಿದ್ದರೆ ಸಾಕ್ಷರತೆ ಹೊಂದಿದವರು ಎನ್ನುತ್ತಿದ್ದರು.
ಈಗ ಈ ಮೇಲಿನವುಗಳ ಜೊತೆಯಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ಜ್ಞಾನ ಹೊಂದಿರುವುದು ಅಪೇಕ್ಷಣೀಯ
"ಭಾರತದ ಜನರ ಸಂಪೂರ್ಣ ಭಾಗವಹಿಸುವಿಕೆಗಾಗಿ, ಅವರು ಹೊಂದಿರಬೇಕಾದ ಜ್ಞಾನ. ಕೌಶಲ್ಯ ಮತ್ತು ಸಾಮರ್ಥ್ಯವನ್ನು ಡಿಜಿಟಲ್ ಸಾಕ್ಷರತೆ" ಎಂದು ಕರೆಯಬಹುದು.
ಡಿಜಿಟಲ್ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಿರುವ ಮೂಲಭೂತ ನಡವಳಿಕೆ, ಜ್ಞಾನ ಮತ್ತು ಕೌಶಲ್ಯಗಳು ಕಡ್ಡಾಯವಾಗಿದೆ. ಡೆಸ್ಕ್ ಟಾಪ್ ಪಿಸಿಗಳು, ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಗಳನ್ನು ಡಿಜಿಟಲೀಕರಣ ಉದ್ದೇಶಕ್ಕಾಗಿ ಬಳಸುವ ಸಾಧನಗಳಾಗಿವೆ.
ದೇಶದ ಆರು ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಡಿಜಿಟಲ್ ಸಾಕ್ಷರತೆ ನೀಡಲು ಗುರಿ ಹೊಂದಲಾಗಿದೆ .ಆ ನಿಟ್ಟಿನಲ್ಲಿ ಅಲ್ಪ ಮಟ್ಟದಲ್ಲಿ ಪ್ರಗತಿ ಸಾಧಿಸಿರುವುದು ಗಮನಾರ್ಹ.
ಡಿಜಿಟಲ್ ಇಂಡಿಯಾ ಕಾರ್ಯಕ್ರಮದೊಂದಿಗೆ, ಭಾರತ ಸರ್ಕಾರವು ಒಟ್ಟಾರೆಯಾಗಿ ಅನೇಕ ರಂಗಗಳಲ್ಲಿ ಡಿಜಿಟಲೀಕರಣ ಮಾಡಿ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಆಶಿಸುತ್ತಿದೆ.
ಭಾರತ ಸರ್ಕಾರ ಡಿಜಿಟಲ್ ಇಂಡಿಯಾದ ಒಂಭತ್ತು ಮೂಲ ಅಂಶಗಳನ್ನು
'ಪಿಲ್ಲರ್ ಆಫ್ ಡಿಜಿಟಲ್ ಇಂಡಿಯಾ' ಎಂದು ಕರೆದು ಡಿಜಿಟಲೀಕರಣಕ್ಕೆ ಕಂಕಣ ಬದ್ದವಾಗಿದೆ.ಆ ಒಂಭತ್ತು ಅಂಶಗಳು
1. ಬ್ರಾಡ್ಬ್ಯಾಂಡ್ ಹೆದ್ದಾರಿಗಳನ್ನು ಸೃಷ್ಟಿ ಮಾಡುವುದು.
2. ಸರ್ವರಿಗೂ ಮೊಬೈಲ್ ಸಂಪರ್ಕ ಏರ್ಪಡಿಸುವುದು
3. ಸಾರ್ವಜನಿಕ ಹಿತಾಸಕ್ತಿ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳುವುದು
4. ಇ-ಆಡಳಿತ ಜಾರಿ ಮಾಡುವುದು
5. ಇ-ಕ್ರಾಂತಿಗೆ ಒತ್ತು ನೀಡುವುದು.
6. ಜಾಗತಿಕ ಮಾಹಿತಿ ಸಂಗ್ರಹ ಮಾಡುವುದು.
7. ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆ ಮಾಡುವುದು.
8. ಉದ್ಯೋಗಿಗಳಿಗಾಗಿ ಮಾಹಿತಿ ತಂತ್ರಜ್ಞಾನದಲ್ಲಿ ತರಬೇತಿ ನೀಡುವುದು.
9. ಡಿಜಿಟಲೀಕರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
ತಂತ್ರಜ್ಞಾನದ ಮಹತ್ವದ ಅರಿವು ಡಿಜಿಟಲ್ ಇಂಡಿಯಾ ಅಭಿಯಾನದಿಂದ ಭಾರತದ ಜನಸಾಮಾನ್ಯರಲ್ಲಿ ಯಶಸ್ವಿಯಾಗಿ ಸೃಷ್ಟಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಅಪಾರ ಬೆಳವಣಿಗೆ ಕಂಡುಬಂದಿದೆ. ಕೋವಿಡ್ ಸಮಯದಲ್ಲಿ ಡಿಜಿಟಲ್ ಇಂಡಿಯಾದ ಮಹತ್ವ ಇನ್ನೂ ಹೆಚ್ಚಾಗಿರುವುದು ಕಂಡುಬರುತ್ತದೆ.
ಪ್ರಪಂಚದಾದ್ಯಂತದ ತಂತ್ರಜ್ಞಾನ ದೈತ್ಯರು ಡಿಜಿಟಲ್ ಇಂಡಿಯಾ ಅಭಿಯಾನದತ್ತ ಗಮನ ಹರಿಸುತ್ತಾ ಸಂತೋಷದಿಂದ ಬೆಂಬಲಿಸುತ್ತಿದ್ದಾರೆ. ಫೇಸ್ಬುಕ್ ಸಿ.ಇ.ಒ ಮಾರ್ಕ್ ಜುಕರ್ ಬರ್ಗ್ ಕೂಡ ಡಿಜಿಟಲ್ ಇಂಡಿಯಾವನ್ನು ಬೆಂಬಲಿಸಿದ್ದಾರೆ. ಭಾರತದ 500 ರೈಲ್ವೇ ನಿಲ್ದಾಣಗಳಲ್ಲಿ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಒದಗಿಸಲು ಗೂಗಲ್ ತನ್ನ ಬದ್ಧತೆಯನ್ನು ಪ್ರದರ್ಶಸಿದೆ. ಮೈಕ್ರೋಸಾಫ್ಟ್ ದೇಶದ 500,000 ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಲು ಒಪ್ಪಿಕೊಂಡಿದೆ. ಮೈಕ್ರೋಸಾಫ್ಟ್ ಕೂಡ ಭಾರತೀಯ ದತ್ತಾಂಶ ಕೇಂದ್ರಗಳ ಮೂಲಕ ಭಾರತವನ್ನು ತನ್ನ ಕ್ಲೌಡ್ ಹಬ್ ಆಗಿ ಮಾಡುತ್ತಿದೆ. ಒರಾಕಲ್ ಸ್ಮಾರ್ಟ್ ಸಿಟಿ ಉಪಕ್ರಮಗಳು ಮತ್ತು ಪಾವತಿಗಳಲ್ಲಿ ಕೆಲಸ ಮಾಡಲು 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹೂಡಿಕೆ ಮಾಡಿದೆ.
ಹೀಗೆ ಡಿಜಿಟಲ್ ಇಂಡಿಯಾ ಅಭಿಯಾನವು ಭಾರತದಲ್ಲಿ ಉತ್ತಮವಾಗಿ ಜಾರಿಯಾಗುತ್ತಿದೆ. ಇದಕ್ಕೆ ಸರ್ಕಾರಗಳು ,ಕಂಪನಿಗಳು ಉತ್ತಮ ಬೆಂಬಲ ನೀಡುತ್ತಿವೆ.ಇದರ ಜೊತೆಗೆ ಸಾರ್ವಜನಿಕರು ಉತ್ತಮ ಬೆಂಬಲ ನೀಡಿ ಭಾರತವನ್ನು ಡಿಜಿಟಲ್ ಭಾರತ ಮಾಡಲು ಪಣ ತೊಡಬೇಕಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
02 ಅಕ್ಟೋಬರ್ 2021
ಆನ್ಲೈನ್ ಖರೀದಿ ಏಕೆ ?
ಬಿಗ್ ಬಿಲಿಯನ್ ಡೇ
ಸ್ಪೆಷಲ್ ಧಮಾಕ ಡೇ
ಸಾಲು ಸಾಲು ಹಬ್ಬಗಳ ವೇಳೆ ಮಾದ್ಯಮಗಳಲ್ಲಿ ರಂಗು ರಂಗಾದ ಜಾಹಿರಾತುಗಳು ನಮ್ಮ ಕಣ್ಣುಗಳ ಕುಕ್ಕುತ್ತವೆ ಖರೀದಿ ಮಾಡಲು ನಮ್ಮನ್ನು ಖರೀದಿ ಮಾಡಲು ಪ್ರೇರೇಪಿಸುತ್ತವೆ .
ಈ ರೀತಿಯ ಆಫರ್ ನೀಡಿ ನಮ್ಮನ್ನು ಕೊಳ್ಳುವಂತೆ ಪ್ರಚೋದಿಸುವ ವಿವಿಧ ಆನ್ಲೈನ್ ಮಾರಾಟ ಕಂಪನಿಗಳು ಎರಡು ಮೂರು ದಿನಗಳಲ್ಲಿ ಆರು ತಿಂಗಳಷ್ಟು ವಹಿವಾಟು ಮಾಡಿ ,ಸಾಕಷ್ಟು ಲಾಭ ಮಾಡಿಕೊಂಡು ಗ್ರಾಹಕರಿಗೆ ಕೊಡುಗೆ ಹಾಗೂ ರಿಯಾಯಿತಿ ಪ್ರಕಟಿಸಿ ನಮಗರಿವಿಲ್ಲದೇ ಕೊಳ್ಳುಬಾಕ ಸಂಸ್ಕೃತಿಯನ್ನು ಪರಿಚಯಿಸಿತ್ತಾ, ನಮ್ಮಿಂದ ಹಣ ಪೀಕಿಸುವ ಆನ್ಲೈನ್ ಕಂಪನಿಗಳು ನಾಯಿಕೊಡೆಗಳಂತೆ ದಿನಕ್ಕೊಂದು ಹುಟ್ಟಿ , ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಅಲ್ಲಲ್ಲಿ ಬಾಗಿಲು ಮುಚ್ಚುವ ಹಂತಕ್ಕೆ ಬಂದಿರುವುದನ್ನು ಗಮನಿಸಬಹುದು.
ಆನ್ಲೈನ್ ಖರೀದಿಯಿಂದ ಅನುಕೂಲ ಮತ್ತು ಅನಾನೂಲಗಳೂ ಇವೆ
ಮೊದಲಿಗೆ ಅನುಕೂಲಗಳನ್ನು ನೋಡುವುದಾದರೆ
೧ ಖರೀದಾರರ ಸಮಯ ಮತ್ತು ಹಣದ ಉಳಿತಾಯ ಸಾಧ್ಯವಾಗುತ್ತದೆ.
೨ ಮನೆ ಬಳಿಗೆ ಸಾಮಾನುಗಳನ್ನು ತಲುಪಿಸುವುದರಿಂದ ಗ್ರಾಹಕರಿಗೆ ಸಾಗಣೆಯು ವೆಚ್ಚ ಉಳಿತಾಯವಾಗುತ್ತದೆ.
೩ ಸ್ಪರ್ಧಾತ್ಮಕ ಬೆಲೆಗಳಲ್ಲಿ ವಸ್ತುಗಳು ಸಿಗುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ.
೪ ಸಾಂಪ್ರದಾಯಿಕ ಅಂಗಡಿಗಳಿಗಿಂತ ವಿಭಿನ್ನ ವಿನ್ಯಾಸ, ಬಣ್ಣದ ಮತ್ತು ಮಾದರಿಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿ ಮಾಡಬಹುದು.
೫ ಕೋವಿಡ್ ನಂತಹ ಸಂದರ್ಭಗಳಲ್ಲಿ ಮನೆಯ ಹೊರಗೆ ಕಾಲಿಡದ ವೇಳೆಯಲ್ಲಿ ಆನ್ಲೈನ್ ಖರೀದಿಯು ನಮಗೆ ವರದಾನ ಆಗಲಿದೆ.
ಅನಾನುಕೂಲಗಳು
೧ ಕೆಲವೊಮ್ಮೆ ಹೇಳಿದ ಸಮಯಕ್ಕೆ ವಸ್ತುಗಳು ತಲುಪುವುದಿಲ್ಲ.
೨ ಮೊದಲೇ ನಾವು ಖರೀದಿ ಮಾಡಿದ ವಸ್ತುಗಳ ಬದಲಾಗಿ ಕಲ್ಲು ,ಮಣ್ಣು, ಮರದ ಹೊಟ್ಟು ಇತ್ಯಾದಿ ಕಳಿಸಿ ಮೋಸ ಮಾಡಿದ ಉದಾಹರಣೆ ಇವೆ.
೩ ನಾವು ಖರೀದಿ ಮಾಡುವಾಗ ನೀಡುವ ನಮ್ಮ ವೈಯಕ್ತಿಕ ಖಾಸಗಿ ವಿವರಗಳನ್ನು ಆನ್ಲೈನ್ ಕಂಪನಿಗಳು ದುರುಪಯೋಗ ಮಾಡಿಕೊಂಡಿರುವ ಉದಾಹರಣೆ ಇವೆ.
೪ ಹಣಕಾಸಿನ ವ್ಯವಹಾರ ಮಾಡುವಾಗ ನಾವು ನೀಡುವ ಬ್ಯಾಂಕ್ ವಿವರ ಒ.ಟಿ ಪಿ ಗಳು ಸೈಬರ್ ಅಪರಾಧ ಎಸಗಲು ದಾರಿ ಮಾಡಿಕೊಡುತ್ತವೆ.
೫ ನಕಲಿ ಆನ್ಲೈನ್ ಕಂಪನಿಗಳು ಗ್ರಾಹಕರಿಗೆ ಮೋಸ ಮಾಡಿರುವ ನೂರಾರು ಉದಾಹರಣೆಗಳಿವೆ.
೬ ನಾವು ಆರ್ಡರ್ ಮಾಡಿದ ವಸ್ತುಗಳಿಗಿಂತ ಕಡಿಮೆ ಗುಣಮಟ್ಟದ ವಸ್ತುಗಳನ್ನು ಕಳಿಸಿ ಗ್ರಾಹರಿಗೆ ವಂಚಿಸುವ ಆನ್ಲೈನ್ ಕಂಪನಿಗಳು ಇವೆ.
ಪ್ರತಿಯೊಂದರಲ್ಲೂ ಒಳಿತು ಕೆಡುಕುಗಳು ಇರುವಂತೆ ಆನ್ಲೈನ್ ಖರೀದಿಯಲ್ಲೂ ಇವೆ .ಎಲ್ಲಾ ಸಂಧರ್ಭಗಳಲ್ಲಿ ಸಣ್ಣ ಪುಟ್ಟದ್ದಕ್ಕೂ ಆನ್ಲೈನ್ ಖರೀದಿ ಮಾಡದೆ , ನಾಲ್ಕಾರು ಕಡೆ ವಿಚಾರಿಸಿ ಕಡಿಮೆ ಬೆಲೆ ಇದ್ದಾಗ ಮಾತ್ರ ಆನ್ಲೈನ್ ಖರೀದಿ ಮಾಡಿದರೆ ಗ್ರಾಹಕರು ಜಾಣರಾಗಬಹುದು.ಸೈಬರ್ ಅಪರಾಧಗಳನ್ನು ತಡೆಯಲು ನಮ್ಮ ವೈಯಕ್ತಿಕ ವಿವರಗಳನ್ನು ಮತ್ತು ಬ್ಯಾಂಕ್ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ ಈ ಮುನ್ನೆಚ್ಚರಿಕೆ ಮತ್ತು ವಿವೇಚನೆ ನಮ್ಮಲ್ಲಿ ಇದ್ದರೆ ಆನ್ಲೈನ್ ಖರೀದಿ ಗ್ರಾಹಕರಿಗೆ ನಿಜಕ್ಕೂ ವರದಾನವೇ ಸರಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ