#ಮಾಧುರಿಲೇಕ್..
ಅರುಣಾಚಲ ಪ್ರದೇಶದ ತವಾಂಗ್ ನಿಂದ ಬುಮ್ಲಾ ಪಾಸ್ ಕಡೆಗೆ ಪಯಣಿಸುವಾಗ ನಮಗೆ ಸಿಗುವ ಪ್ರಾಕೃತಿಕ ತಾಣವೇ ಮಾಧುರಿ ಸರೋವರ!
ಮಾಧುರಿ ದೀಕ್ಷಿತ್ ತನ್ನ ನೃತ್ಯ ಹಾಗೂ ಮಾದಕ ನೋಟದಿಂದ ರಸಿಕರ ಸೆಳೆದಂತೆ ಈ ಸರೋವರದ
ಬಣ್ಣ ಬಣ್ಣದ ನೀರು ನಯನ ಮನೋಹರ ನೋಟವು ಪ್ರವಾಸಿಗರನ್ನು ಸೆಳೆಯುತ್ತದೆ. ಸರೋವರದ ಹಿನ್ನೆಲೆಯಲ್ಲಿ ಹಸಿರೊದ್ದ ಬೆಟ್ಟದ ಮೇಲೆ ಅಲ್ಲಲ್ಲಿ ಮಂಜಿನ ಹನಿಗಳನ್ನು ಯಾರೋ ಪೋಣಿಸಿದಂತೆ ಕಾಣುವ ಈ ಸರೋವರದ ಸೌಂದರ್ಯ ವರ್ಣಿಸಲಸದಳ. ನಾವು ಅಲ್ಲಿಗೆ ಹೋದಾಗ ಮೈನಸ್ 6 ಡಿಗ್ರಿ ಸೆಲ್ಸಿಯಸ್ ಚಳಿಯ ವಾತಾವರಣದಲ್ಲಿ ಆ ಸುಂದರ ದೃಶ್ಯಗಳನ್ನು ನೋಡುತ್ತ ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡು ಸಂತಸಪಟ್ಟೆವು.ಹೊರ ರಾಜ್ಯದ ಆ ಸುಂದರ ತಾಣದಲ್ಲಿ ಹಲವಾರು ಅಪರಿಚಿತ ಕನ್ನಡದ ಮನಸುಗಳು ನಮ್ಮ ಜೊತೆಯಲ್ಲಿ ಸೇರಿಕೊಂಡು ಪರಿಚಿತರಾಗಿ ನಮ್ಮ ಆನಂದವನ್ನು ಇಮ್ಮಡಿಗೊಳಿಸಿದರು.
ಸಂಗೆಸ್ಟಾರ್ ತ್ಸೋ , ಹಿಂದೆ ಶೋಂಗಾ-ತ್ಸರ್ ಸರೋವರ ಎಂದು ಕರೆಯಲಾಗುತ್ತಿತ್ತು ಈಗ ಮಾಧುರಿ ಸರೋವರ ಎಂದು ಜನಪ್ರಿಯವಾಗಿದೆ. ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಹೋಗುವ ದಾರಿಯಲ್ಲಿದೆ , ಸಮುದ್ರದಿಂದ 3,708 ಮೀಟರ್ ಮೇಲಿರುವ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ.
ಉತ್ತರಕ್ಕೆ ತಕ್ಪೋ ಶಿರಿ ಹಿಮನದಿಯ ಕೆಳಗೆ ಹುಟ್ಟುವ ತಕ್ತ್ಸಾಂಗ್ ಚು ನದಿಯು ಈ ಪ್ರದೇಶದ ಮೂಲಕ ಹರಿಯುತ್ತದೆ. ಇದು ಪಶ್ಚಿಮಕ್ಕೆ ಹರಿದು ನಂತರ ನೈಮ್ಜಂಗ್ ಚು ನದಿಯನ್ನು 8 ಮೈಲುಗಳು ಕೆಳಗೆ ಸೇರುತ್ತದೆ . ತಕ್ತ್ಸಂಗ್ ಗೊಂಪಾ ಪಶ್ಚಿಮಕ್ಕೆ 1.5 ಮೈಲಿಗಳು ಪ್ರದೇಶದಲ್ಲಿದೆ.
ಇಲ್ಲಿ ಶಾರುಖ್.ಖಾನ್ ಮಾಧುರಿ ಅಭಿನಯದ ಕೋಯ್ಲಾ ಚಿತ್ರದ "ತನ್ಹಾಯಿ ತನ್ಹಾಯಿ ತನ್ಹಾಯಿ ದೊನೋ ಕಾ ಪಾಸ್ ಲೇ ಆಯಿ" ಹಾಡನ್ನು ಚಿತ್ರೀಕರಣ ಮಾಡಿದ ನೆನಪಿಗಾಗಿ ಇಂದು ಮಾಧುರಿ ಲೇಕ್ ಎಂದು ಜನಪ್ರಿಯವಾಗಿದೆ. ಚಲನ ಚಿತ್ರದಲ್ಲಿ ಈ ಹಾಡು ನೋಡಿದ್ದೆ.ಅದೇ ಸ್ಥಳವನ್ನು ನೇರವಾಗಿ ನೋಡಿದಾಗ ಮತ್ತೆ ಮಾಧುರಿ ನೆನಪಾದಳು..
ಸಮಯ ಸಿಕ್ಕರೆ ಮತ್ತೊಮ್ಮೆ ಮಾಧುರಿಯನ್ನು, ಹಾಡನ್ನು ,ಲೇಕನ್ನು ನೋಡುವ ಬಯಕೆ ಇದ್ದೇ ಇದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #ArunachalPradesh #tawang #madhuridixit #madhurilake #tourism
No comments:
Post a Comment