ಪ್ರತಿ ವಸ್ತು, ಜೀವಿ ಅಮೂಲ್ಯ.
ಸಾಮಾನ್ಯವಾಗಿ ನಾವೆಲ್ಲರೂ ಚೆನ್ನಾಗಿರುವ ವಸ್ತುಗಳನ್ನು ಬಳಸುತ್ತೇವೆ.ಸ್ವಲ್ಪ ಹಳತಾದ ಒಡೆದ ವಸ್ತುಗಳನ್ನು ಬಳಸುವುದೇ ಇಲ್ಲ. ಇದು ಮಾನವರ ವಿಷಯದಲ್ಲೂ ಅಷ್ಟೇ ಚೆನ್ನಾಗಿ ದುಡಿಯುತ್ತಿರುವವರಿಗೆ ಬೆಲೆ ಸ್ವಲ್ಪ ದಕ್ಷತೆ ಕಡಿಮೆಯಾದರೆ ಇನ್ನೆಲ್ಲಿಯ ನೆಲೆ? ಗೇಟ್ ಪಾಸ್ ಸಿದ್ದ.
ಒಬ್ಬ ಮಹಿಳೆ ಎರಡು ದೊಡ್ಡ ಮಡಿಕೆಗಳಿಂದ ದಿನವೂ ತನ್ನ ಮನೆಗೆ ದೂರದ ಹೊಳೆಯಿಂದ ನೀರು ತರುತ್ತಿದ್ದಳು. ಒಂದನ್ನು ತಲೆಯ ಮೇಲೆ ಮತ್ತೊಂದನ್ನು ಕಂಕುಳಲ್ಲಿ ಇಟ್ಟುಕೊಂಡು ನೀರು ತರುವ ಕಾರ್ಯ ಮುಂದುವರೆದಿತ್ತು.
ಅವಳು ಕಂಕಳುಲ್ಲಿಟ್ಟುಕೊಂಡ ಮಡಿಕೆಯಲ್ಲಿ ಬಿರುಕು ಇತ್ತು.ತಲೆ ಮೇಲಿನ ಮಡಿಕೆ ಚೆನ್ನಾಗಿತ್ತು ಆ ಮಡಿಕೆಯಿಂದ ಹಳ್ಳದ ನೀರು ಪೂರ್ಣ ಪ್ರಮಾಣದಲ್ಲಿ ಮನೆ ಸೇರುತ್ತಿತ್ತು. ಬಿರುಕು ಬಿಟ್ಟ ಮಡಿಕೆಯಿಂದ ಅರ್ಧದಷ್ಟು ಮಾತ್ರ ನೀರು ಮನೆಗೆ ತಲುಪುತ್ತಿತ್ತು.
ಹೀಗೆ ದಿನಗಳುರುಳಿದವು. ಎರಡು ವರ್ಷಗಳ ಕಾಲ ಆಕೆ ಇದು ಪ್ರತಿದಿನವೂ ಮನೆಗೆ ಕೇವಲ ಒಂದೂವರೆ ಮಡಿಕೆ ನೀರು ತರುತ್ತಿದ್ದಳು.
ತಲೆ ಮೇಲಿರುತ್ತಿದ್ದ ಮಡಿಕೆಯು ತನ್ನ ಪೂರ್ಣ ನೀರು ತರುವ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಿತ್ತು. ಆದರೆ ಬಿರುಕು ಬಿಟ್ಟ ಮಡಿಕೆಯು ತನ್ನ ಅಪೂರ್ಣತೆಯ ಬಗ್ಗೆ ನಾಚಿಕೆಪಡುತ್ತಾ ದುಃಖದಲ್ಲಿತ್ತು.
ಅದು ಒಂದು ದಿನ ಹೊಳೆಯ ಬಳಿ ಆ ಮಹಿಳೆಯೊಂದಿಗೆ ತನ್ನ ನೋವನ್ನು ವಿವರಿಸಿ "ನೀವೇಕೆ ನನ್ನ ಅರ್ಧ ತುಂಬಿದ ನೀರಿಗಾಗಿ ನನ್ನ ಬಳಸುವಿರಿ.ಮತ್ತೊಂದು ಪೂರ್ಣ ಮಡಿಕೆ ಪಡೆದು ನನಗೆ ವಿಶ್ರಾಂತಿ ನೀಡಿ" ಎಂದಿತು.
ಈ ಮಾತುಗಳನ್ನು ಕೇಳಿದ ಮಹಿಳೆ ನಗುತ್ತಾ
"ನಾನು ನೀರು ತರುವ ದಾರಿಯ ಒಂದು ಬದಿಯಲ್ಲಿ ಹೂವುಗಳಿವೆ, ಆದರೆ ಇನ್ನೊಂದು ಬದಿಯಲ್ಲಿ ಹೂವಿಲ್ಲ ಗಮನಿಸಿದ್ದೀಯಾ?
ನೀನು ಒಡೆದ ಮಡಿಕೆ ಎಂಬ ಕೀಳರಿಮೆ ಬಿಡು. ನಾನು ನಿನ್ನ ಹಾದಿಯ ಬದಿಯಲ್ಲಿ ಹೂವಿನ ಬೀಜಗಳನ್ನು ನೆಟ್ಟಿದ್ದೇನೆ. ನಾವು ಹೊಳೆಯಿಂದ ಹಿಂತಿರುಗುವಾಗ ಪ್ರತಿದಿನ ನೀನು ನಿನಗರಿವಿಲ್ಲದೇ ಅವುಗಳಿಗೆ ನೀರು ಹಾಕುತ್ತೀದ್ದೀಯ.ಈ ಎರಡು ವರ್ಷಗಳಿಂದ ನಾನು ಈ ಸುಂದರವಾದ ಹೂವುಗಳನ್ನು ದೇವರ ಪೂಜೆಗೆ ಬಳಸುತ್ತಿದ್ದೇನೆ" ಎಂದಳು. ಒಡೆದ ಮಡಿಕೆ ಸಾರ್ಥಕ ಭಾವದಿಂದ ಮಹಿಳೆಗೆ ಧನ್ಯವಾದಗಳನ್ನು ಅರ್ಪಿಸಿತು.
ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ಶಕ್ತಿ ಇರುವಂತೆ ಬಲಹೀನತೆಯು ಇವೆ. ಜೀವ ವೈವಿಧ್ಯತೆ ಜಗದ ನಿಯಮ. ಅಶಕ್ತರು, ಅಸಹಾಯಕರು,ಕೆಲಸಕ್ಕೆ ಬಾರದವರು ಎಂದು ಯಾರನ್ನೂ ನಾವು ಹೀಗಳೆದು ಅವರಿಂದ ಏನೂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಬಾರದು.ಈ ಜಗದ ಪ್ರತಿ ವಸ್ತು ಹಾಗೂ ಜೀವಿಯೂ ಅನನ್ಯ, ವಿಶೇಷ, ವಿಭಿನ್ನ ಮತ್ತು ಅಮೂಲ್ಯ ಅಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment