31 July 2023

ಆಗಸ್ಟ್ ಮಾಸದ ನೆನಪುಗಳು ಭಾಗ ೧ .#ಚಂದ್ರಶೇಖರ್ ಆಜಾದ್


 


ಸ್ವಾತಂತ್ರ್ಯದ ಹಣತೆಗಳು ..

ಭಾಗ ೧
ಚಂದ್ರಶೇಖರ ಆಜಾದ್.

ಚಂದ್ರಶೇಖರ ಸೀತಾರಾಮ ತಿವಾರಿಯವರು ಭಾರತದ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾಗರಿಕ ಶಾಸನಭಂಗದ ಆಧಾರದ ಮೊಕದ್ದಮೆಯಲ್ಲಿ   ಬಂಧಿತರಾದಾಗ ,  ನ್ಯಾಯಾಧೀಶರು  ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್ " ಎಂದು ಹೇಳಿದರು. ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು.ಆದರೂ ತಮ್ಮ ಹೆಸರು ಆಜಾದ್ ಎಂದೇ ಹೇಳಿದರು. ಅಂದಿನಿಂದ ಚಂದ್ರಶೇಖರ ಆಜಾದ್ ಆಗಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಪ್ರಮುಖವಾದ ಗುರುತು ಮೂಡಿಸಿದರು.
ಚಂದ್ರಶೇಖರ ಆಜಾದ್ರವರು 23 ಜುಲೈ 1906ರಂದು  ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂಡಿತ್ ಸೀತಾರಾಮ್ ತಿವಾರಿಯವರು  ಜಾಗ್ರಣೀ ದೇವಿಯವರು ಅವರ ತಾಯಿ. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 





ಆಜಾದರು  ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನೇ  ಮುಡಿಪಾಗಿಡಲು ನಿರ್ಧರಿಸಿದರು.
ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ  ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖ್ದೇವ್, ಬಟುಕೇಶ್ವರ ದತ್  ಮತ್ತು ರಾಜ್ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.  
ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು  ನಂಬಿದ್ದರು. ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಜ್ಯೋತಿ ಶ್ರೀವಾಸ್ತವ್ ರೊಂದಿಗೆ ಉತ್ತಮ ಸ್ನೇಹತ್ವ ಸಂಪಾದಿಸಿದ್ದರು.

1925 ರಲ್ಲಿ  ಕಾಕೊರಿ ರೈಲು ದರೋಡೆ , 1926ರಲ್ಲಿ  ವೈಸ್ರಾಯ್  ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ , ಮತ್ತು ಲಾಲಾ ಲಜಪತ್ ರಾಯ್ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್ನಲ್ಲಿ 1928 ರಲ್ಲಿ  ಜಾನ್ ಪಾಯಂಟ್ಜ್ ಸಾಂಡರ್ಸ್ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾದರು.
24 ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್ರವರು ಗಮನಾರ್ಹ ಅವಧಿಯವರೆಗೆ ಝಾನ್ಸಿಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು. ಇದರ ಸಮೀಪವಿರುವ ಅರಣ್ಯವನ್ನು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

ಅವರು ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದರು ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವರ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು  ಆರಂಭಿಸಿದರು.  
ಸಮೀಪದ ಧಿಮಾರ್ಪುರ ಎಂಬ ಹಳ್ಳಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರಲ್ಲದೇ ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಧಿಮಾರ್ಪುರ ಎಂಬ ಆ ಹಳ್ಳಿಗೆ ಈಗ ಅವರದೇ ಹೆಸರಿಡಲಾಗಿದ್ದು, ಅದೀಗ ಆಜಾದ್ಪುರ ಎಂಬ ಹೆಸರನ್ನು ಹೊಂದಿದೆ. ಝಾನ್ಸಿಯಲ್ಲಿ ದಂಡುಪ್ರದೇಶದಲ್ಲಿರುವ ಸಾದರ್ ಬಜಾರ್ ಎಂಬಲ್ಲಿದ್ದ ಬುಂದೇಲ್ಖಂಡ್ ಮೋಟಾರ್ ಗ್ಯಾರೇಜಿನಲ್ಲಿ ಅವರು ಕಾರನ್ನು ಚಲಾಯಿಸಲು ಕಲಿತರು.
ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್ರವರುಗಳನ್ನು ಝಾನ್ಸಿಯಲ್ಲಿಯೇ ಅವರು ಭೇಟಿಯಾಗಿದ್ದು, ತದನಂತರ ಇವರುಗಳೆಲ್ಲಾ ಅವರ ಕ್ರಾಂತಿಕಾರಿ ತಂಡದ ಅವಿಭಾಜ್ಯ ಅಂಗವಾದರು. ಝಾನ್ಸಿ ಮೂಲದ ಆಗಿನ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ರವರುಗಳು ಕೂಡಾ ಚಂದ್ರಶೇಖರ ಆಜಾದ್ರ ನಿಕಟ ಸಹಾಯಕರಾಗಿದ್ದರು.
1931ರ ವೇಳೆಗೆ ಆಜಾದರು ಅಲಹಾಬಾದ್ನಲ್ಲಿ ವಾಸಿಸುತ್ತಿದ್ದರು. 27 ಫೆಬ್ರವರಿ 1931ರಂದು, ಪೊಲೀಸ್ ಮಾಹಿತಿದಾರರು ಆಜಾದ್ ಮತ್ತು ಸುಖ್ದೇವ್ ರವರು ಆಲ್ಫ್ರೆಡ್ ಉದ್ಯಾನದಲ್ಲಿ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಗಮನಿಸಿ ಬ್ರಿಟಿಷ್ ಆಡಳಿತದ ಗಮನಕ್ಕೆ ತಂದರು.
ಕೆಲವೇ ನಿಮಿಷಗಳಲ್ಲಿ ನೂರಾರು ಪೊಲೀಸರು  ಇಡೀ ಉದ್ಯಾನವನ್ನು ಸುತ್ತುವರೆದು ಅವರನ್ನು ಸೆರೆ ಹಿಡಿಯಲು ಮುಂದಾದರು.
ಜಾಗೃತರಾದ ಇಬ್ಬರೂ  ಪ್ರತಿರೋಧ ತೋರಿದರು.
ಹೋರಾಟದ ಆರಂಭದಲ್ಲಿಯೇ, ಆಜಾದರ ತೊಡೆಗೆ ಗುಂಡು ತಗುಲಿ ಗಾಯವಾಯಿತಾದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಆದರೆ ಅವರು ಸುಖ್ದೇವ್ ರವರು ತಪ್ಪಿಸಿಕೊಳ್ಳಲು ಅವಕಾಶವಾಗುವಂತೆ ಅವರಿಗೆ ರಕ್ಷಣೆಯನ್ನು ಒದಗುವಂತೆ ಗುಂಡುಹಾರಿಸತೊಡಗಿದರು. ಸುಖ್ದೇವ್ರವರು ತಪ್ಪಿಸಿಕೊಂಡ ನಂತರ ಆಜಾದರು ಸಾಕಷ್ಟು ಹೊತ್ತಿನವರೆಗೆ ಪೊಲೀಸರು ಮೇಲೆರಗದಂತೆ ಹೋರಾಟ ಮಾಡಿದರು.  
ಅಂತಿಮವಾಗಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟು ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಲೇ ಇತ್ತು.
ಏಕಾಂಗಿ ಹೋರಾಟ ವ್ಯರ್ಥ ಎಂಬ ಅರಿವು ಆಜಾದ್ ರವರಿಗೆ ಆಗಿತ್ತು. ಅವರ ಪಿಸ್ತೂಲಿನಲ್ಲಿ ಒಂದೇ ಒಂದು ಗುಂಡು ಉಳಿದಿರುವುದು ಗಮನಕ್ಕೆ ಬಂದು  ಬ್ರಿಟಿಷರಿಗೆ ಶರಣಾಗುವ ಬದಲಿಗೆ ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ಪ್ರಾಣಾರ್ಪಣೆ ಮಾಡಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು.
9900925529

No comments: