ಮಿಯಾವಾಕಿ ಕಾಡು .
ನಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಒಂದು ದಿನದ ಪ್ರವಾಸ ಕೈಗೊಂಡು ನಾಗರಹೊಳೆ, ಮಡಿಕೇರಿ ನೋಡಿಕೊಂಡು ಕಾವೇರಿ ನಿಸರ್ಗಧಾಮ ತಲುಪಿದೆವು.
ಎರಡು ಬಾರಿ ಅದೇ ಜಾಗಕ್ಕೆ ಬೇಟಿ ನೀಡಿದ ಪರಿಣಾಮವಾಗಿ ಆ ಸ್ಥಳದ ಬಗ್ಗೆ ಅಷ್ಟಾಗಿ ಆಸಕ್ತಿಯಿಲ್ಲದೆ ಮತ್ತು ಕುಸಿದು ಬಿದ್ದ ತೂಗುಸೇತುವೆಯ ನೋಡಿ ಬೇಸರದಿಂದಲೇ ಕಾವೇರಿ ನಿಸರ್ಗ ಧಾಮಕ್ಕೆ ಕಾಲಿಟ್ಟೆವು.
ಈ ಬಾರಿ ನಿಸರ್ಗಧಾಮದಲ್ಲಿ ನಾನು ಹಿಂದೆ ನೋಡಿದ್ದಕ್ಕಿಂತ ಎರಡು ವಿಶೇಷ ಸ್ಥಳಗಳು ಗಮನ ಸೆಳೆದವು.ಒಂದು ಪಕ್ಷಿ ಲೋಕ ಮತ್ತೊಂದು "ಮಿಯಾವಾಕಿ ಅರಣ್ಯ "
ಪಕ್ಷಿ ಲೋಕದ ಬಗ್ಗೆ ನಂತರ ಬರೆಯುವೆ.
ಈಗ ಮಿಯಾವಾಕಿ ಅರಣ್ಯದ ಬಗ್ಗೆ ನೋಡೋಣ.ಅಲ್ಲೇ ಹಾಕಿರುವ ಮಾಹಿತಿ ಫಲಕಗಳು ನಮಗೆ ಇದರ ಬಗ್ಗೆ ಸಮಗ್ರ ಮಾಹಿತಿ ನೀಡುತ್ತವೆ.
ಜಪಾನಿನ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಅಖಿರ ಮಿಯಾವಾಕಿ ರವರ ಹೆಸರಲ್ಲಿ ಸ್ಥಾಪಿತವಾದ ಕಾಡೇ ಮಿಯಾವಾಕಿ ಕಾಡು.
ಕರ್ನಾಟಕದಲ್ಲಿ ಈ ಪ್ರಯೋಗವನ್ನು ಮಂಗಳೂರಿನ ರಾಮಕೃಷ್ಣ ಮಿಶನ್ 2019 ರಲ್ಲಿ ಮಾಡಿದ್ದಾರೆ. ನಗರದ ಮಧ್ಯಭಾಗದಲ್ಲಿ ಅರ್ಧದಿಂದ ಒಂದು ಎಕರೆ ಜಾಗದಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆ.
ಕಾವೇರಿ ನಿಸರ್ಗಧಾಮದ ಮಿಯಾವಾಕಿ ಕಾಡನ್ನು ಟಯೊಟ ಕಿರ್ಲೋಸ್ಕರ್ ಮತ್ತು ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಈ ಅರಣ್ಯಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಶ್ರೀಗಂಧ, ರೆಂಜೆ, ಚಂಪಕ, ಚಿಕ್ಕು, ಮಾವು, ಅಶೋಕ, ತೇಗ, ಬೇವು, ಜಾಮೂನ್, ಪೀಪಲ್ ಮುಂತಾದ 28 ಗಿಡಗಳನ್ನು ನೆಡಲಾಗಿದೆ.
ಭಾರತದ ಹಲವಾರು ಕಡೆ ‘ಮಿಯಾವಾಕಿ’ ನಗರ ಅರಣ್ಯದ ಒಂದು ಪ್ರಯೋಗ ನಡೆದಿದೆ. ಮಹಾರಾಷ್ಟ್ರದ ನವಮುಂಬಯಿನಲ್ಲಿ 42 ಎಕರೆ ಜಾಗದಲ್ಲಿ ‘ನಿಸರ್ಗ ಉದ್ಯಾನ’ ಎಂಬ ಒಂದು ಸುಂದರ ಅರಣ್ಯ ಸೃಷ್ಟಿಸಲಾಗಿದೆ. ಕೇರಳದ ತಿರುವನಂತಪುರ, ತಮಿಳುನಾಡಿನ ಚೆನೈ, ತಿರುನಲ್ವೇಲಿ, ತಿರುಚಿ ಹಾಗೂ ಆಂಧ್ರದ ಹೈದರಾಬಾದ್ನಲ್ಲೂ ಅಲ್ಲದೆ ತೆಲಂಗಾಣ, ಉತ್ತರ ಪ್ರದೇಶಗಳಲ್ಲೂ ಕೂಡ ‘ಮಿಯಾವಾಕಿ’ ನಗರಾರಣ್ಯ ತಲೆಯೆತ್ತಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ಕೆಲ ಟೆಕ್ಕಿಗಳು ಮತ್ತು ರೈತರ ಸಹಾಯದಿಂದ ಮಿಯಾವಾಕಿ ಕಾಡು ಬೆಳೆಸುವ ಪ್ರಯತ್ನವಾಗಿರುವುದು ಸ್ವಾಗತಾರ್ಹ.
‘ಮಿಯಾವಾಕಿ’ ಅರಣ್ಯಕ್ಕೆ ತಗಲುವ ಖರ್ಚು ಅತೀ ಕಡಿಮೆ. ಒಮ್ಮೆ ಗುಂಡಿತೋಡಿ ಒಳ್ಳೆಯ ಮಣ್ಣು, ಗೊಬ್ಬರ ಹಾಕಿ ಮರಗಳ ಸಸಿ ನೆಟ್ಟರೆ ಆಯಿತು. ಸುಮಾರು ಒಂದು ಚದರ ಮೀಟರ್ಗೆ ನಾಲ್ಕು ಸಸಿ ನೆಡಬಹುದು. ಹನಿ ನೀರಾವರಿ ಮಾಡಿದರೆ ಅರಣ್ಯ ಬಹುಬೇಗ ಬೆಳೆಯುತ್ತದೆ. ಸುಮಾರು ಮೂರು ವರ್ಷಗಳ ಕಾಲ ಇದರ ಆರೈಕೆಯಾದರೆ ಮುಂದಿನ 25 ವರ್ಷ ಏನೂ ಮಾಡಬೇಕಿಲ್ಲ. ಮರಗಳನ್ನು ಕಡಿದು ಮಾರಿದರೆ ಲಾಭದಾಯಕ ಮತ್ತು ಆ ಸ್ಥಳದಲ್ಲಿ ಹೊಸ ಮರದ ಸಸಿ ನೆಡಬಹುದು.
‘ಮಿಯಾವಾಕಿ’ಯಿಂದ ಅಂತರ್ಜಲ ಏರಿಕೆಯಾಗಿರುವ ಉದಾಹರಣೆಗಳಿವೆ. ಜೀವ ವೈವಿಧ್ಯ, ಜೈವಿಕ ವೈವಿಧ್ಯತೆ, ಪರಿಸರ ವೈವಿಧ್ಯತೆ ಎಲ್ಲವೂ ಈ ನಗರ ಅರಣ್ಯಗಳಿಂದ ಲಭ್ಯ. ಮರಗಳ ಉದುರಿದ ಎಲೆಗಳೇ ಅದಕ್ಕೆ ಗೊಬ್ಬರವಾಗುತ್ತದೆ . ನಗರ ಪ್ರದೇಶದ ಬರಡು ಭೂಮಿಯನ್ನು ಸುಂದರ ಸ್ವಚ್ಛ ಅರಣ್ಯವಾಗಿಸಲು ‘ಮಿಯಾವಾಕಿ’ ಒಂದು ವರದಾನ
‘ಮಿಯಾವಾಕಿ’ ವಿಧಾನಕ್ಕೆ ನಾಲ್ಕು ಸೂತ್ರಗಳಿವೆ. ಜಾಗದ ಆಯ್ಕೆ, ಗಿಡ, ಮರಗಳ ಆಯ್ಕೆ, ನೀರಿನ ಸೌಲಭ್ಯ, ಹನಿ ನೀರಾವರಿ ಹೆಚ್ಚು ಸೂಕ್ತ. ಗೊಬ್ಬರ ಹಾಗೂ ಸ್ವಲ್ಪ ಕಾಲದ ನಿರ್ವಹಣೆ ಇದಿಷ್ಟನ್ನೂ ಒಂದು ಗೂಡಿಸಿದರೆ ನಗರ ಮಧ್ಯ ಭಾಗದಲ್ಲಿ ಸುಂದರ ಅರಣ್ಯ ಕಲ್ಪನೆ ನನಸಾದೀತು. ಭಾರತ ಎಲ್ಲಾ ನಗರಗಳಲ್ಲೂ ಈ ‘ಮಿಯಾವಾಕಿ’ ನಗರ ಅರಣ್ಯಗಳನ್ನೂ ಪ್ರಾರಂಭಿಸಿದರೆ ಹಲವಾರು ಕೋಟಿ ಮರಗಳನ್ನು ಬೆಳೆಸಿ ಪರಿಸರದ ಈಗಿನ ಹಾಗೂ ಮುಂದಿನ ದುರಂತಗಳನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದು. ಆಯಾ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹಣ್ಣಿನ, ಹೂವಿನ, ವಾಣಿಜ್ಯ, ಪರಿಸರಸ್ನೇಹಿ ಬೃಹತ್ ಮರಗಳನ್ನು ನೆಡಬಹುದು. ಮಿಯಾವಾಕಿ ನಗರ ಅರಣ್ಯದಿಂದ ಜೀವವೈವಿಧ್ಯತೆಗೆ ಪ್ರೋತ್ಸಾಹ ದೊರೆತು ಪ್ರಾಕೃತಿಕ ಪರಂಪರೆಯನ್ನು ಉಳಿಸಲು ಸಹಕಾರಿಯಾಗುತ್ತದೆ.
ತನ್ಮೂಲಕ ಸಹಸ್ರಮಾನದ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment