14 July 2023

ಟೊಮ್ಯಾಟೋ ಪುರಾಣ...


 

ಟೊಮ್ಯಾಟೊ ಪುರಾಣ...

ಟೊಮ್ಯಾಟೊ...ಟೊಮ್ಯಾಟೊ... ದೇಶದಾದ್ಯಂತ ಜನರ ನಿದ್ದೆಗೆಡಿಸಿದ ಪದ! ಅದರ ದರ ಕೇಳಿ ಜನರು ಕನಸಲ್ಲೂ ಬೆಚ್ಚಿಬೀಳುತ್ತಿದ್ದಾರೆ.

ಹೆಂಡತಿ ಬಲವಂತ ಮಾಡಿದಾಗ
ಅವನಂದ ಬೇಡ ಟೊಮ್ಯಾಟೊ
ಜಾಸ್ತಿಯಾಗಿದೆ  ಅದರ ದರ |
ಆಯ್ತು ತರಬೇಡಿ ಬಿಡಿ
ನಿಮಗೆ ಸಿಗುವುದು ಡೌಟು
ನನ್ನ ಅಧರ ||

ಕೆಲವೆಡೆ ಟೊಮ್ಯಾಟೊ ಅಂಗಡಿಗಳಲ್ಲಿ ಸಿಸಿ ಟಿ ವಿ ಅಳವಡಿಸಿದ್ದರೆ ಇನ್ನೂ ಕೆಲವೆಡೆ ಟೊಮ್ಯಾಟೊ ಬೆಳೆದ ರೈತರು ಕಳ್ಳರ ಕಾಟದಿಂದ  ಹೈರಾಣಗಿದ್ದಾರೆ . ರಾತ್ರಿಯಿಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಮ್ಮ ಬೆಳೆ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ಟೊಮ್ಯಾಟೊ ಪ್ರವರ ಇಲ್ಲಿಗೇ ನಿಂತಿಲ್ಲ ಇದು ಕೆಲ ಸಂಸಾರಗಳನ್ನು ಒಡೆದ ಅಪಖ್ಯಾತಿಗೆ ಒಳಗಾಗಿದೆ.ಗಂಡ ಎರಡು ಟೊಮ್ಯಾಟೊ ಹಣ್ಣು ಹಾಕಿ ಅಡುಗೆ ಮಾಡಿದ ಎಂದು ಮುನಿದ ಹೆಂಡತಿ ಜಗಳವಾಡಿಕೊಂಡು ಮನೆ ಬಿಟ್ಟು ತವರು ಮನೆಗೆ ಹೋದ ಬಗ್ಗೆ ಹೊರ ರಾಜ್ಯದಿಂದ ವರದಿಯಾಗಿದೆ.

ರುಚಿಯಿರಲಿ ಎಂದು
ಎರಡು ಟೊಮ್ಯಾಟೊ ಹೆಚ್ಚು
ಹಾಕಿ ಅಡುಗೆ ಮಾಡಿದೆ |
ಬೇಸರಗೊಂಡು ತವರು
ಮನೆಗೆ ಹೊರಟೇ ಬಿಟ್ಟಳು
ನನ್ನ ಮುದ್ದಿನ ಮಡದಿ ||

ಎಂದು ವರ ಪರಿತಪಿಸುತ್ತಿದ್ದಾನೆ.
ಇದಕ್ಕೆ ವಿರುದ್ಧವಾಗಿ ನೆರೆಮನೆಯವನು ಟೊಮ್ಯಾಟೊ ತರದೇ ತನ್ನ ಹೆಂಡತಿಗೆ ಗೋಳಾಡಿಸಿ ಯಾಮಾರಿಸಿದ್ದಾನೆ.

ಮಾರುಕಟ್ಟೆಗೆ ಹೋಗಿ
ಟೊಮ್ಯಾಟೊ ತನ್ನಿ ಎಂದು
ಗಂಡನಿಗೆ ಹೇಳುತ್ತಿದ್ದಾಳೆ ತಟ್ಟಿ ತಟ್ಟಿ|
ಹುಣಸೆ ಹಣ್ಣು ಹಾಕಿ
ಅಡುಗೆ ಮಾಡಿ ಬಿಡೆ
ಟೊಮ್ಯಾಟೊ ಆಗಿದೆ ತುಟ್ಟಿ ತುಟ್ಟಿ||

ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಹಾರ ಹಾಕಿಕೊಂಡು ಓಡಾಡುವ ಜನರು ಅಲ್ಲಲ್ಲಿ ಕಾಣಬಹುದು

ಮೊದಲು ನನ್ನವಳು ವರಾತ
ತೆಗೆಯುತ್ತಿದ್ದಳು ಎಂದು
ಕೊಡಿಸುವಿರಿ ಬಂಗಾರದ
ಕಾಸಿನ ಸರ, ಅವಲಕ್ಕಿ ಸರ|
ಈಗ ವರಸೆ ಬದಲಿಸಿದ್ದಾಳೆ
ಕೊಡಿಸಿ ಸಾಕು ಒಂದು
ಟೊಮ್ಯಾಟೊ ಸರ ಅವಳಿಗೂ
ತಿಳಿದುಹೋಗಿದೆ ಏರಿದ ಟೊಮ್ಯಾಟೊ ದರ ||

ಟೊಮ್ಯಾಟೊ ಬಗ್ಗೆ ಮಾತನಾಡುವಾಗ
ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ.
ಕೆಂಪು ಬಣ್ಣದಲ್ಲಿ ಇರುವುದು ಮಾತ್ರ ಟೊಮೆಟೊ ಅಲ್ಲ. ಬದಲಿಗೆ ಹಳದಿ, ಗುಲಾಬಿ, ನೇರಳೆ, ಕಪ್ಪು ಹಾಗೂ ಬಿಳಿ ಬಣ್ಣಗಳ ಟೊಮೆಟೊಗಳು ಇವೆ.
ಯುರೋಪ್ನಲ್ಲಿ ಮೊದಲ ಬಾರಿಗೆ ಬೆಳೆದ ಟೊಮೆಟೊ ಹಳದಿ ಬಣ್ಣದ್ದಾಗಿತ್ತು. ಹೀಗಾಗಿ ಅಲ್ಲಿ ಇದನ್ನು ಆರಂಭದಲ್ಲಿ 'ಪೊಮೊ ಡಿ'ಒರೊ' (ಚಿನ್ನದ ಸೇಬು) ಎಂದು ಕರೆಯಲಾಗಿತ್ತು,
ಜಗತ್ತಿನಾದ್ಯಂತ ಟೊಮೆಟೊದ ಸುಮಾರು 10 ಸಾವಿರ ತಳಿಗಳಿವೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ವಾಲ್ಟನ್ ಡಿಸ್ನಿ ರೆಸಾರ್ಟ್ನಲ್ಲಿ ಈವರೆಗೂ ಪತ್ತೆಯಾದ ಟೊಮೆಟೊ ಗಿಡಗಳಲ್ಲಿ ಅತ್ಯಂತ ದೊಡ್ಡದು.
ಈ ಗಿಡ 56.73 ಚದರ ಮೀಟರ್ನಷ್ಟು ವ್ಯಾಪ್ತಿ ಹೊಂದಿದೆ. ಹಾಗೆಯೇ ಜಗತ್ತಿನ ಅತಿ ದೊಡ್ಡ ಟೊಮೆಟೊ 1986ರಲ್ಲಿ ಅಮೆರಿಕಾದ ಒಕ್ಲಹೊಮಾದಲ್ಲಿ ಪತ್ತೆಯಾಗಿತ್ತು. ಒಂದು ಟೊಮೆಟೊ3.5 ಕೆ.ಜಿ. ತೂಗುತ್ತಿತ್ತು. ಸ್ಪೇನ್ನಲ್ಲಿ ನಡೆಯುವ ಲಾ ಟೊಮಾಟಿನಾ ಎಂಬ ವಾರ್ಷಿಕ ಹಬ್ಬದಲ್ಲಿ ಸುಮಾರು 1.5ಲಕ್ಷ ಟೊಮೆಟೊವನ್ನು ಹೋಳಿ ಹಬ್ಬದ ಬಣ್ಣದ ರೀತಿಯಲ್ಲಿ ಜನರು ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ವರ್ಷ ಆಗಸ್ಟ್ 30ರಂದು ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ.
ಹೀಗೆ ಟೊಮ್ಯಾಟೊ ಪುರಾಣ ಹೇಳುತ್ತಾ ಹೊರಟರೆ ಮುಗಿಯುವುದಿಲ್ಲ. ಏರಿರುವ ಕೆಂಪಣ್ಣಿನ ದರ ಇಳಿಯಲಿ ರೈತರು ಮತ್ತು ಗ್ರಾಹಕರ ಮೊಗದಲ್ಲಿ  ಆದರ್ಶ ದರದಿಂದ ಮಂದಹಾಸ ಮೂಡಲಿ ಕೆಂಪಾದ ಹಣ್ಣಿನ ಪರಿಣಾಮವಾಗಿ ಮನಸ್ತಾಪವಾದ ಮನಗಳು ಒಂದುಗೂಡಲಿ ಎಂಬುದೇ ನಮ್ಮ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

No comments: