18 November 2022

ಕಾಂತಾರ ಮತ್ತು ಕಾಡೊಂದಿತ್ತಲ್ಲ...

 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

ಪ್ರಾದೇಶಿಕ ಸಿನಿಮಾ ಎಂದುಕೊಂಡದ್ದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಾ ತನ್ನ ನಾಗಾಲೋಟ ಮುಂದುವರೆಸಿರುವ ಚಿತ್ರ ಕಾಂತಾರ... ಚಿತ್ರದಲ್ಲಿ ಅಂತಾದ್ದೇನಿದೆ? ಎಂದು ಅಚ್ಚರಿ ಪಟ್ಟ ಜನಕ್ಕೆ ಚಿತ್ರ  ನೋಡಿದಾಗ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಚಿತ್ರ. ಕಾಡಿನ ಜೊತೆಗಿನ ಸಹ ಜೀವನಕ್ಕೆ ಸಂಬಂಧಿಸಿದ ಚಿತ್ರ ಎಂಬುದು ಅರ್ಥವಾಗಿತ್ತು. ಅದಕ್ಕೆ ಜನ ಮತ್ತೆ ಮತ್ತೆ ಆ ಸಿನಿಮಾ ನೋಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾಗಳು ನಮ್ಮ ಜೀವನದ ಪ್ರತಿಬಿಂಬಗಳು.ಸಾಹಿತ್ಯ ಓದುವಾಗ ಮತ್ತು ಸಿನಿಮಾ ನೋಡುವಾಗ ನಮ್ಮ ಜೀವನದಲ್ಲೂ ಅಂತಹ ಘಟನೆಗಳು ಸಂಭವಿಸಿದ್ದರೆ ಅಥವಾ ಅನುಭವಕ್ಕೆ ಬಂದಿದ್ದರೆ ನಮಗೆ ಆ ಕೃತಿ ಹೆಚ್ಚು ಆಪ್ತವಾಗುತ್ತದೆ...
ಮೊನ್ನೆ ಲೇಖಕರಾದ  ಶಶಿಧರ ವಿಶ್ವಾಮಿತ್ರ ರವರ "ಕಾಡೊಂದಿತ್ತಲ್ಲ" ಎಂಬ ಕೃತಿಯನ್ನು ಓದಿದೆ. ಕಾಂತಾರ ಸಿನಿಮಾ ನೋಡಿದ ಕೆಲವೇ ದಿನಗಳಲ್ಲಿ ಓದಿದ್ದರಿಂದ ಈ ಕೃತಿಯು ಹೆಚ್ಚು ಇಷ್ಟವಾಯಿತು.ಈ ಪುಸ್ತಕದಲ್ಲಿ ಉಲ್ಲೇಖಿಸಿರುವ  ಕಾಡಿನ ಮರಗಳು ,ಪ್ರಾಣಿಗಳು, ಸಸ್ಯ ಸಂಕುಲ ಮುಂತಾದ ಹೆಸರುಗಳನ್ನು ಬಹುತೇಕ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇಳೆ ಇಲ್ಲವೇನೋ ಎಂಬುದು ನನ್ನ ಅನಿಸಿಕೆ. ಕಾಡು ಮತ್ತು ನಾಡಿನ ಸಂಬಂಧ, ಕಾಡು ಮತ್ತು ವನ್ಯಜೀವಿಗಳ ಸಹಜೀವನ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ.

ಲಾರೆನ್ಸ್ ಫಾರೆಸ್ಟ್ ಎಂಬ ಶಾರ್ಪ್ ಶೂಟರ್ ಆಫ್ರಿಕಾದ ಮಳೆ ಕಾಡಿನಲ್ಲಿ  ಸಾವಿರಾರು ಆನೆಗಳನ್ನು ತನ್ನ ಕೋವಿಯಿಂದ ಕೊಂದ ಕಟುಕ . ಭಾರತದಲ್ಲಿ ಬ್ರಿಟಿಷರ ಪರವಾಗಿ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಮಾಡುವಾಗ ಕರಡಿಯಿಂದ ದಾಳಿಗೊಳಗಾಗಿ ಸಾವು ಬದುಕಿನ ಮಧ್ಯ ಹೋರಾಟ ಮಾಡುವಾಗ ಸಿದ್ದನ ರೂಪದ ದೈವಮಾನವ ಬಂದು ಅವನ ರಕ್ತಸ್ರಾವ ನಿಲ್ಲಿಸಿ ಜೀವದಾನ ಮಾಡಿದ .ಅಂದಿನಿಂದ ಲಾರೆನ್ಸ್ ಎಂದೂ ಬೇಟೆಯಾಡುವುದಿರಲಿ ಒಂದು ಇರುವೆಯನ್ನು ಸಹ ನೋಯಿಸದ ಮನಸ್ಸಿನ ವ್ಯಕ್ತಿಯಾಗಿ ಬದಲಾಗಿ ತನ್ನ ಜೀವನವನ್ನು ವನ್ಯ ಪ್ರಾಣಿಗಳ ಸಂರಕ್ಷಣೆಗೆ ಮುಡಿಪಿಟ್ಟರು.
ಈ ಪುಸ್ತಕದ ಈ ಎರಡೂ ಪಾತ್ರಗಳು ನಮಗೆ ಕಾಂತಾರವನ್ನು ನೆನಪು ಮಾಡುತ್ತವೆ. ಕಟುಕ ಲಾರೆನ್ಸ್ ಬದಲಾದ ರೀತಿಯನ್ನು ನೋಡಿ ಕಾಂತರಾದ ಶಿವ ನೆನಪಾಗುತ್ತಾನೆ. ಕಾಡನ್ನು ಮತ್ತು ಜೀವಿಗಳನ್ನು  ಕಾಯುವ ಶಕ್ತಿಯೊಂದಿದೆ ಎಂಬುದನ್ನು ಪಂಜುರ್ಲಿ ಕಾಂತಾರದಲ್ಲಿ ಪ್ರತಿನಿಧಿಸಿದರೆ ಪ್ರಸ್ತುತ ಕಾಡೊಂದಿತ್ತಲ್ಲ ಕೃತಿಯಲ್ಲಿ ಆ ಪಾತ್ರವನ್ನು ಸಿದ್ದ ಮತ್ತು ಅವನ ಐದು ಜನ ಸಿದ್ದಪುರುಷರನ್ನು ಕಾಣಬಹುದು.

ಸಾಮಾನ್ಯ ಅರಣ್ಯ ದ ಗಾರ್ಡ್ ಆಗಿದ್ದ ಕೃಷ್ಣಪ್ಪ ಲಾರೆನ್ಸ್ ಮತ್ತು ಬರ್ಕ್ ರವರಿಂದ ಪ್ರಭಾವಿತರಾಗಿ ರಾಜ್ಯದ ಅರಣ್ಯ ಇಲಾಖೆಯ ಉನ್ನತವಾದ ಹುದ್ದೆಯಾದ ಮಹಾ ಅರಣ್ಯ ಪಾಲಕ ಹುದ್ದೆಗೆ ಏರಿ ಕಾಡ ರಕ್ಷಣೆಗೆ ಪಣ ತೊಟ್ಟ ರೀತಿಯನ್ನು ನೋಡಿದಾಗ ಕಾಂತಾರದ ಕಿಶೋರ್ ಪಾತ್ರ ನೆನಪಾಗುತ್ತದೆ.

“ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ಟಿನ ಹುಲಿಗಳ ಗತಿ ಅಧೋಗತಿಯಾಗಿದೆ. ಇದಕ್ಕೆ ಕಾರಣಗಳಲ್ಲಿ ಮುಖ್ಯವಾದವು ಯಾವುವು ಎಂದರೆ, ಉತ್ತರ ಪ್ರದೇಶದ ಆಡಳಿತ ಸರಿಯಿಲ್ಲ. ಸರ್ಕಾರವೂ ಗಟ್ಟಿಯಿಲ್ಲ. ಜನರ ದುರಾಗ್ರಹ ಹೆಚ್ಚು ಎಂದೆಲ್ಲ ಎಲ್ಲರಿಗೂ ಗೊತ್ತಿರುವುದನ್ನೇ ಪಟ್ಟಿಮಾಡಿ ಹೇಳಬಹುದು. ಆದರೆ ಈ ಮಹನೀಯರ ಕರ್ನಾಟಕ ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸ್ವಲ್ಪ ವರ್ಷಗಳ ಕೆಳಗೆ ಅಲ್ಲಿಯ ಬಂಡೀಪುರ ನಾಗರಹೊಳೆ ಮುತ್ತತ್ತಿ ಮುಂತಾದ ರಕ್ಷಿತಾರಣ್ಯಗಳ ಸುತ್ತ ಇರುವ ಗಿಡಜನ ಬಂಡೆದ್ದು ಕಾಡಿಗೇ ಕಿಚ್ಚು ಕೊಟ್ಟ ಮೇಲೆ 33 ಸಾವಿರ ಎಕರೆ ಕಾಡು ದಹಿಸಿಹೋಯಿತಂತಲ್ಲ, ಯಾಕೆ? ಈ ವಿಷಯಕ್ಕೆ ವಿಸ್ತಾರ ತನಿಖೆ ನಡೆದಿದೆಯೆ? ಇಲ್ಲಿ ಪ್ರಸ್ತಾಪಕ್ಕೆ ಬರುತ್ತದೆಯೇ? ಉಹು. ನೀವದನ್ನು ಇಂಥಲ್ಲಿಗೆ ಮಂಡಿಸುವ ವಿಷಯವೆಂದು ಸೇರಿಸಿರೋಲ್ಲ, ತನಿಖೆ ನಡೆಸಿದ ಮೇಲೆ ಫೈಲುಗಳನ್ನು ಗೋಪ್ಯವಾಗಿ ಮುಚ್ಚಿಟ್ಟಿರುತ್ತೀರ. ಯಾಕೆ ಗೊತ್ತೆ? ನಾನು ಹೇಳುತೀನಿ ಕೇಳಿ, ಅಭಯಾರಣ್ಯವೆಂಬೋ ಹೆಸರಲ್ಲಿ ಸ್ವಜನ ವಿರೋಧಿ, ಧನವಂತಪರ  ನಿಮ್ಮ ಧೋರಣೆ ಜನರನ್ನ ರೊಚ್ಚಿಗೇಳಿಸುತ್ತ,  ಪಂಚತಾರ ಹೋಟೆಲು? ವಿಹಾರ ಮಂದಿರ? ಇಂಥವಕ್ಕೆ ಪರವಾನಗಿ ಕೊಡುವ ಧೈರ್ಯವನ್ನ ಯಾಕೆ ಮಾಡಿದಿರಿ?... ಇದು ಅರಣ್ಯಪಾಲಕರಾದ ನಿಮಗೆ ಶೋಭೆ ತರುತ್ತಾ" ಎನ್ನುವ ಮಾತುಗಳು ಈ ಕೃತಿಯಲ್ಲಿ ಪರಿಸರ ಹೋರಾಟಗಾರ್ತಿ ನರ್ಮದಾ ವಿಪುಲೆ ರವರ  ಬಾಯಲ್ಲಿ ಲೇಖಕರು ವ್ಯಕ್ತ ಪಡಿಸಿದ  ಅಭಿಪ್ರಾಯಗಳು.. ಪರಿಸರ ಕಾಳಜಿಯ ಈ   ಮಾತುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳನ್ನು  ಅಪಹಾಸ್ಯ ಮಾಡುವ ರೀತಿಯನ್ನು ನೋಡಿದಾಗ ಸಮಾಜದಲ್ಲಿ ವನ,ಮತ್ತು ವನ್ಯಜೀವಿಗಳ ಉಳಿವಿಗೆ ಮಾಡುವ ಹೋರಾಟಗಳು ಸಂಪೂರ್ಣವಾಗಿ ಯಶಸ್ವಿಯಾಗದಿರಲು ಯಾರು ಕಾರಣ ಎಂಬ ಅರಿವಾಗುತ್ತದೆ.

ಈ ಕೃತಿಯಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಅಂಶ
ಮೆಡೋಸ್ ಎಂಬ  ರಾಜ್ಯದ ಒಂದು ಸಣ್ಣ ಹಳ್ಳಿಯ ಒಬ್ಬ ಮಹಿಳೆ ಒಂದು ಸಾವಿರ ಎಕರೆಯಲ್ಲಿ ಸ್ವಯಿಚ್ಛೆಯಿಂದ ಅರಣ್ಯ ಬೆಳೆಸಿ, ತಾನು ಸಾಯುವ ತನಕ ಕಾಪಿಟ್ಟು ತಾನಿದ್ದ ಮನೆಯ ಸಹಿತ ಪುರಸಭೆಗೆ ದಾನ ಮಾಡಿದ ಪ್ರಸಂಗ .ಇದನ್ನು ಓದುವಾಗ ನಮ್ಮ ಸಾಲು ಮರದ ತಿಮ್ಮಕ್ಕ ಕಣ್ಣ ಮುಂದೆ ಬಂದರು. ಇಂತಹ ನಿಸ್ವಾರ್ಥ ಜೀವಿಗಳು ನಮ್ಮ ನಡುವೆ ಇರುವುದೇ ನಮಗೆ ಹೆಮ್ಮೆ.

ಹೆಸರು ಹೇಳುವಂತೆ 'ಕಾಡೊಂದಿತ್ತಲ್ಲ' ಎನ್ನುವುದು ನೆಲ, ನಾಡು, ಭೂಮಿ ಎಂಬ ಮೂಲ ಪರಿಕಲ್ಪನೆಗಳ ಸುತ್ತ  ಇರುವ  ಗುಡ್ಡ, ಬೆಟ್ಟ, ಗುಟ್ಟೆ, ಕೊರಕಲು ಎಂಬುದರ ಮೇಲೆ ಬೀಳುವ ಬಿಸಿಲು, ಆಡುವ ಗಾಳಿ, ಹನಿಯುವ ಮಳೆಯ, ನೆಲದಡಿಯ ಸಾರವನ್ನುಂಡು, ಕಂಗೊಳಿಸುವ ಗೊಂಡಾರಣ್ಯ, ದಟ್ಟಾರಣ್ಯ, ಮಲೆನಾಡು, ಮರಕಾಡು, ಗಿಡಕಾಡು, ಕುರುಚಲು ಕಾಡು, ಹುಲ್ಲುಗಾವಲು, ಗೋಮಾಳ ಎಂಬಲ್ಲಿ ಬಗೆಬಗೆಯ ರೂಪ ಆಕಾರ ಬಣ್ಣಗಳಿಂದ ಮೈ ತಳೆದು ಬಂದು ಎಂದಿನದೋ ಚರಿತಾನುಕಥನವನ್ನು ಹಾಡಿನಲ್ಲಿ ಕುಣಿತದಲ್ಲಿ ಗಾಥೆಯಾಗಿಸಿದ ಪರಿ ಬಹಳ ಸುಂದರ .ಇದರ ಜೊತೆಗೆ
ಅಂದಿನ ಪರಿಸರದಲ್ಲಿ ಇದ್ದೂ ಇಲ್ಲದಂತಿರುವ ಕಾಡಾಡಿ ಸಿದ್ಧರು ಅಲೆದಾಡಿ ಬೈರಾಗಿಗಳು, ಕಾಡಾಡಿ ಗಿಡಜನರು, ನಾಡಾಡಿ ಹಳ್ಳಿಯ ಮುಗ್ಧರು, ಊರಾಡಿಗಳು ಇದ್ದರು.

ಹೆಚ್ಚುತ್ತಿರುವ ಜನಸಂಖ್ಯೆ,ಮಿತಿಮೀರಿದ  ಯಂತ್ರಗಳ ಸದ್ದಿನಲ್ಲಿ   ಏನಾಗುತ್ತಿದೆ. ಎಂತಾಗುತ್ತಿದೆ ಎಂಬುದೇ ತಿಳಿಯದಾಗಿದೆ.  ಈ ಕೃತಿಯಲ್ಲಿ ಕಾಡಿನ ತೋಳ, ಊರಾಡಿ ನಾಯಿ, ಅಲೆದಾಡಿ ಬೈರಾಗಿ ಮೈತಳೆದು ನೆರೆದು ಹಾಡುತ್ತವೆ. ಆಕಾಶಕ್ಕೆ ಮೂತಿ, ಮುಖವೆತ್ತಿ ಹತಾಶೆಯಿಂದ ರೋದಿಸುತ್ತವೆ.
ಈ ಅಳಲು ಆಳುವವರ   ದಿಕ್ಕೆಡಿಸುತ್ತ ಇರುವುದಿಷ್ಟೇ, ಇಷ್ಟೊರಳಗೆ ಹದವಾಗಿ ಪಾಕಗೊಂಡು ಬೆರೆತು ಬಾಳಿದರೆ ಉಳಿವುಂಟು ಎನ್ನುವ ಎಚ್ಚರ ಹೇಳುತ್ತವೆ.
ಓದುಗರನ್ನು ತಟ್ಟಿ ಎಬ್ಬಿಸುವ ಶಕ್ತಿ 'ಕಾಡೊಂದಿತ್ತಲ್ಲ' ಹಾಡ್ಕಥನಕ್ಕಿದೆ. ಇನ್ನೇಕೆ ತಡ ಕಾಂತಾರ ನೋಡಿದಂತೆ ಕಾಡೊಂದಿತ್ತಲ್ಲ ಕೃತಿ ಓದಿಬಿಡಿ ಅದು ಕಾಡದಿದ್ದರೆ ಕೇಳಿ....

ಪುಸ್ತಕ : ಕಾಡೊಂದಿತ್ತಲ್ಲ
ಲೇಖಕರು: ಶಶಿಧರ ವಿಶ್ವಾಮಿತ್ರ.
ಬೆಲೆ:130
ಪ್ರಕಾಶನ:  ಕಮಲಾ ಎಂಟರ್ ಪ್ರೈಸಸ್ ಬೆಂಗಳೂರು

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

No comments: