ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು...
ಇತ್ತೀಚೆಗೆ ವಿಶ್ವಸಂಸ್ಥೆಯ ಯುನೆಸ್ಕೋ ತಂಡ ಕರ್ನಾಟಕದ ಇತಿಹಾಸ ಪ್ರಸಿದ್ಧ ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಿಗೆ ಭೇಟಿ ನೀಡಿ ಯುನೆಸ್ಕೊ ದ ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಘೋಷಿಸಲು ಬೇಕಾದ ಮಾರ್ಗದರ್ಶಿ ನಿಯಮಗಳನ್ನು ಪರಿಶೀಲಿಸಿತು. ನಮ್ಮ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡುವ ನನ್ನಂತಹ ಕೋಟ್ಯಾಂತರ ಭಾರತೀಯರು ಆಗ ಬಹಳ ಸಂತಸಗೊಂಡೆವು. ಈಗಾಗಲೇ ಹಲವಾರು ಬಾರಿ ಬೇಲೂರು ನೋಡಿದ್ದರೂ ಮತ್ತೆ ಬೇಲೂರು ನೋಡುವ ಮನಸಾಯಿತು.
ಕಳೆದ ವಾರ ಸಮಾನ ಮನಸ್ಕ ಗೆಳೆಯರೊಂದಿಗೆ ಬೇಲೂರಿಗೆ ಭೇಟಿ ನೀಡಿದ್ದೆ.ಅಂದೂ ಕೂಡಾ ಬೇಲೂರು ಮತ್ತು ಬೇಲೂರಿನ ಶಿಲ್ಪಕಲೆಯು ನನಗೆ ಹೊಸದಾಗಿ ಕಂಡಿತು .800 ವರ್ಷಗಳ ಬಳಿಕವೂ ಆ ಶಿಲ್ಪಕಲೆ ನಮ್ಮನ್ನು ಸೆಳೆಯುತ್ತಿವೆ ಎಂದರೆ ಅದಕ್ಕೆ ಕಾರಣರಾದ ನಮ್ಮ ಹೊಯ್ಸಳ ಮಹಾರಾಜರ ಬಗ್ಗೆ ಮತ್ತು ಶಿಲ್ಪಿಗಳ ಬಗ್ಗೆ ಹೆಮ್ಮೆ ಅನಿಸಿತು.
ದೇವಾಲಯ ಪ್ರವೇಶ ಮಾಡಿದ ನಮ್ಮ ತಂಡಕ್ಕೆ ಸ್ಥಳೀಯರು ಮತ್ತು ಮಾರ್ಗದರ್ಶಕರು ಕೆಲ ಅಮೂಲ್ಯವಾದ ಮಾಹಿತಿ ನೀಡಿದರು.ಅದರಲ್ಲಿ ಕೆಲವು ನಾವೀಗಾಗಲೆ ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಓದಿದ ಮಾಹಿತಿಗಳೂ ಇದ್ದವು.
ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾದ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ.
ಇದನ್ನು ಹಿಂದೆ ವೇಲುಪುರ ಎಂದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ಸಾಮಾನ್ಯ ಶಕ 1117ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶೀರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು 103 ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳರ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು 70 ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ಸಾಮಾನ್ಯ ಶಕ 1397 ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ.
ದೇವಾಲಯದ ಸುತ್ತಲೂ, ಸಂಕೀರ್ಣವಾದ ಕೆತ್ತನೆಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಚಿತ್ರಣವಿದೆ. ಬೇಲೂರು ಜೊತೆಗೆ ಹೊಯ್ಸಳ ಅಧಿಕಾರಾವಧಿಯಲ್ಲಿ ಚಾಲ್ತಿಯಲ್ಲಿದ್ದ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತವೆ. ಈ ಕಲಾಕೃತಿಗಳನ್ನು ಕಂಡು ಮನಸಾರೆ ಮೆಚ್ಚಿದ ನಾವು ಕೆಲ ಪೋಟೋ ತೆಗೆದುಕೊಂಡು ಕೆಲ ವೀಡಿಯೋ ಮಾಡಿಕೊಂಡೆವು .ನಮ್ಮ ಅಕ್ಕಪಕ್ಕದಲ್ಲಿ ವಿದೇಶಿ ಪ್ರವಾಸಿಗರು ಮತ್ತು ಹೊರರಾಜ್ಯದ ಜನರು ನಮಗಿಂತ ಆಸಕ್ತಿಯಿಂದ ನಮ್ಮ ದೇವಾಲಯ ವೀಕ್ಷಿಸುವುದನ್ನು ಕಂಡು ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಅನಿಸಿತು.
ಇದೇ ದೇವಾಲಯ ಸಮುಚ್ಚಯದಲ್ಲಿ
ಚೆನ್ನಕೇಶವ ದೇವಾಲಯದ ಜೊತೆಗೆ ಅನೇಕ ದೇವಾಲಯಗಳಿವೆ. ಅವುಗಳ ನೋಡಲು ನಾವು ಮುಂದೆ ಸಾಗಿದೆವು.ಅವುಗಳಲ್ಲಿ ಪ್ರಮುಖ ದೇವಾಲಯಗಳು ಹೀಗಿವೆ.
ಕಪ್ಪೆ ಚೆನ್ನಿಗರಾಯ ದೇವಸ್ಥಾನ,
ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ,ಕಲ್ಯಾಣ ಮಂಟಪ,
ವೀರನಾರಾಯಣ ದೇವಸ್ಥಾನ,
ರಂಗನಾಯಕಿ ಅಮ್ಮನವರ ದೇವಸ್ಥಾನ,
ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ.
ಕಪ್ಪೆ ಚೆನ್ನಿಗರಾಯನ ಗುಡಿಯನ್ನು ನೋಡುವಾಗ ಹಿಂದೆ ಓದಿದ ಕೆಲ ಅಂಶಗಳು ನೆನಪಾದವು. ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಈ ಕಪ್ಪೆಯ ಕೆತ್ತನೆಗೆ ಒಂದು ಹಿನ್ನೆಲೆ ಇದೆ.
ಹಿಂದೆ ಜಕಣಾಚಾರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ. ಈ ದೇವಾಲಯದ ನಂತರ ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ ನೋಡಿದೆವು. ಚತುರ್ಭುಜಾಧಾರಿಯಾದ ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.
ಸೌಮ್ಯನಾಯಕಿ ಅಮ್ಮನವರ ದೇವಾಲಯ ದರ್ಶನ ನಂತರ ಕಲ್ಯಾಣ ಮಂಟಪ ನೋಡಿದೆವು.ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ ಎಂದು ತಿಳಿಯಿತು.
ನಂತರ ಕಲ್ಯಾಣ ಮಂಟಪದ ಒಳಭಾಗದಲ್ಲಿದ ವೀರನಾರಾಯಣ ದೇವಾಲಯ ನೋಡಿದೆವು. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿದೆ ಎಂದು ಗೈಡ್ ವಿವರಣೆ ನೀಡಿದರು.
ವೀರನಾರಾಯಣ ದೇವಸ್ಥಾನದ ನಂತರ ಸಿಗುವ ರಂಗನಾಯಕಿ ಅಮ್ಮನವರ ದೇವಾಲಯ ದರ್ಶಿಸಿದೆವು. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದರು.
ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಸ್ಮಾರಕಗಳು ಆಕರ್ಷಣೆಯ ಕೇಂದ್ರಗಳಾಗಿ ನಮ್ಮ ಮನಸೆಳೆದವು .ಅವುಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿ...
ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರು ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು.ಅದೇ ದೀಪಾಲೆ ಕಂಬ ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ 4 ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ. ಇದನ್ನು ಗುರುತ್ವಾಕೇಂದ್ರ ಕಂಬ (ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು. ಆ ಕಾಲದ ಶಿಲ್ಪಿಗಳ ಚಾಕಚಕ್ಯತೆಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎನಿಸಿತು. ಅಲ್ಲಿ ಕೆಲ ಪೋಟೋ ತೆಗೆದುಕೊಂಡ ನಮ್ಮ ತಂಡ ಆನೆ ಬಾಗಿಲ ಕಡೆ ನಡೆಯಿತು.
ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ ಎಂದು ಮಾರ್ಗದರ್ಶಕ ಮಾಹಿತಿ ನೀಡಿದರು.
ಮತ್ತು ನಮ್ಮನ್ನು ಮಂಟಪದ ಸಾಲಿನ ಕಡೆ ಕರೆದುಕೊಂಡು ಹೋದರು.
ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು 4 ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂಬ ಮಾಹಿತಿಯನ್ನು ನೀಡಿದರು.
ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿನವೂ ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.
ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಗಮನಿಸಿ ಎಂದರು ನಮ್ಮ ಗೈಡ್.
ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರಂತೆ .
ಹೀಗೆ ಬೇಲೂರಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಸಿಕೊಂಡು ಗೈಡ್ ಹೇಳುವ ಮಾಹಿತಿಯನ್ನು ಅರ್ಥಮಾಡಿಕೊಂಡು ಸಾಗುತ್ತಿದ್ದ ನಮಗೆ ಸಮಯ ಸರಿದದ್ದೆ ತಿಳಿಯಲಿಲ್ಲ. ಈ ಮೊದಲು ಬೇಲೂರಿಗೆ ಪ್ರವಾಸ ಬಂದಾಗ ನಮ್ಮ ಗಮನವೆಲ್ಲ ಶಿಲಾಬಾಲಿಕೆಯರ ಕಡೆ ಮಾತ್ರ ಇತ್ತು. ಈ ಬಾರಿ ಅಲ್ಲಿನ ಶಾಸನಗಳು, ಮತ್ತು ವಿವಿಧ ದೇವಾಲಯಗಳು ಅವುಗಳ ಇತಿಹಾಸದ ಕಡೆ ಹೆಚ್ಚು ಗಮನಹರಿಸಿ ಮಾಹಿತಿ ಪಡೆದೆವು . ಸುಮಾರು ನಾಲ್ಕು ಗಂಟೆಗಳ ಕಾಲ ನಾವು ನೀರನ್ನು ಸಹ ಕುಡಿಯದೇ ಶಿಲ್ಪಕಲೆ ಆಸ್ವಾದ ಮಾಡಿದ್ದೆವು. ನಮ್ಮ ದೇಹದಲ್ಲಿ ಇಂಧನ ಕಡಿಮೆಯಾಗಿದೆ ಎಂದು ನಮ್ಮ ಹೆಜ್ಜೆಗಳ ವೇಗ ಹೇಳುತ್ತಿತ್ತು.
ದೇವಾಲಯದಿಂದ ಹೊರ ಬಂದು ದೇವಸ್ಥಾನದವರೇ ನಿರ್ವಹಣೆ ಮಾಡುತ್ತಿರುವ ಬೋಜನಾ ಶಾಲೆಯಲ್ಲಿ ಪಾಯಸ ,ಅನ್ನ ಸಾಂಬಾರ್, ಮೊಸರನ್ನ ಸವಿದು. ಮಕ್ಕಳಿಗೆ ಸರ ತೆಗೆದುಕೊಂಡು ಕಾರ್ ಹತ್ತಲು ಹೊರಟಾಗ
ರಾಷ್ಟ್ರಕವಿ ಕುವೆಂಪು ಅವರು ಬೇಲೂರಿನ ದೇವಾಲಯಗಳನ್ನು ನೋಡಿ ರಚಿಸಿದ "ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂಬ ಮಾತುಗಳು ನೆನಪಾದವು.ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಲಿರುವ ಬೇಲೂರಿಗೆ ನೀವೂ ಬನ್ನಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಗಕ್ಕೆ ಪರಿಚಯಿಸಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು
No comments:
Post a Comment