ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು .ವಿಮರ್ಶೆ೩೮
ಗಿರೀಶ್ ತಾಳಿಕಟ್ಟೆ ರವರು ಸಂಗ್ರಹ ಮತ್ತು ಅನುವಾದ ಮಾಡಿರುವ ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು ಎಂಬ ಪುಸ್ತಕ ಹೆಸರೇ ಹೇಳುವಂತೆ ಶಿಕಾರಿಗೆ ಸಂಬಂಧಿಸಿದ ಕಥನಗಳ ಸಂಕಲನ. ಕೆನೆತ್ ಅಂಡರ್ಸನ್ ರವರ ಪುಸ್ತಕ ಓದಿದ್ದ ನನಗೆ ಈ ಪುಸ್ತಕ ಆಕರ್ಷಿಸಿತು. ಪುಸ್ತಕ ಓದಿ ಮುಗಿಸಿದಾಗ ಸ್ವತಂತ್ರ ಪೂರ್ವ ಶಿಕಾರಿ ಕಥೆಗಳ ನೆಪದಲ್ಲಿ ಕಾಡು ಮತ್ತು ಮಾನವನ ಸಂಬಂಧದ ಬಗ್ಗೆ ಉತ್ತಮ ಮಾಹಿತಿ ಸಿಕ್ಕಿತು.
ಇಲ್ಲಿರುವ ಕತೆಗಳು ಬರೀ ಕತೆಗಳಲ್ಲ, ನಿಜವಾಗಿಯೂ ಜರುಗಿದ ಘಟನೆಗಳು ನಮಗಿಂತ ಮೂರು ತಲೆಮಾರುಗಳ ಹಿಂದಿನವು, ವಿನಾಶದ ಅಂಚನ್ನು ತಲುಪಿರುವ ಕಾಡು, ಮಿಗ ಸಂತಾನ, ಪರಿಸರ ಇತ್ಯಾದಿಗಳಲ್ಲಿ ಬದುಕುತ್ತಿರುವ ಇಂದಿನ ನಮಗೆ ಕಲ್ಪಿಸಿಕೊಳ್ಳಲೂ ಆಗದಂತಹ ಗತಲೋಕದ ಕತೆಗಳು, ಅಂದಿನ ದುರ್ಗಮ ಜಗತ್ತಿನ ಕಾಠಿಣ್ಯದ ಬದುಕಿನ ಸಾಮಾಜಿಕ ವಿವರಗಳನ್ನು ಬಿಚ್ಚಿಡುತ್ತಲೇ ಓದುಗರಲ್ಲಿ ಕಾಡಿನ ಕುರಿತು ರಮ್ಯ ಕುತೂಹಲ, ಅರಿವು ಮೂಡಿಸುತ್ತಾ ಸಾಹಸಪ್ರಿಯತೆಯನ್ನು ಸ್ಫುರಿಸುವಂತೆ ಮಾಡುವುವು ಈ ಕಥೆಗಳು.
ಗಿರೀಶ್, ತಾಳಿಕಟ್ಟೆಯವರು ಅನುವಾದಿಸಿದ ಶಿಕಾರಿ ಕಥೆಗಳನ್ನ ಓದುತ್ತ ಓದುತ್ತ ಕಾಡಿನ ನಿಗೂಢ ಜಗತ್ತೊಂದನ್ನ ಕುಳಿತಲ್ಲೇ ಕಂಡ ಅನುಭವ, ಮನಸ್ಸು ನೆನಪುಗಳ ಹಾಯಿದೋಣಿ ಏರಿ ಹಿಮ್ಮುಖವಾಗಿ ಚಲಿಸಿದಂತೆ,
ಕಾಲದ ಒತ್ತಡದಲ್ಲಿ ಕಾಡುಗಳೆಲ್ಲ ನಿಧಾನಕ್ಕೆ ಕರಗಿ ಬಯಲಾಗುತ್ತಿರುವ ವರ್ತಮಾನದಲ್ಲಿ ಈ ಶಿಕಾರಿ ಕತೆಗಳು ಓದುಗರಿಗೆ ಆ ಕಾಲದ ಕಾಡು, ಅಲ್ಲಿನ ಅನೂಹ್ಯ ಜಗತ್ತನ್ನ ಕಲ್ಪಿಸಿಕೊಳ್ಳಲು ಒಂದು ಅವಕಾಶ ನೀಡುತ್ತವೆ. ಈಗಿನ ಕಾಡುಗಳನ್ನು ಸುತ್ತಾಡಿದವರಿಗೆ ಆ ಕಾಲದ ಕಾಡುಗಳೊಂದಿಗೆ ತುಲನೆಯೂ ಸಾಧ್ಯ, ಶಿಕಾರಿ ಕುರಿತು ಸಾಕಷ್ಟು ಅನುವಾದಿತ ಪುಸ್ತಕಗಳಿದ್ದರೂ ಗಿರೀಶ್ ಅವರ ಬರವಣಿಗೆ, ಆಯ್ದುಕೊಂಡಿರವ ಕಥೆಗಳು ಮತ್ತು ವಿಭಿನ್ನ ಶೈಲಿಯ ಅನುವಾದ ಇದನ್ನೊಂದು ಬೇರೆ ಕೃತಿಯನ್ನಾಗಿ ನಿಲ್ಲಿಸುತ್ತವೆ. ಓದುವಾಗ ಕೆಲವೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ನೆನಪಾಗದೇ ಇರಲಾರದು.
ಗಿರೀಶ್ ಅವರ ಅನುವಾದ ಮೂಲ ಕಥೆಯಷ್ಟೆರೋಮಾಂಚನವನ್ನುಂಟು ಮಾಡುತ್ತವೆ. ಇದು ಕೇವಲ ಒಂದು ಕೃತಿಯ ಅನುವಾದವಷ್ಟೇ ಅಲ್ಲ. ಅವರಿಗೆ ಕಾಡಿನ ಕುರಿತು ಇರುವ ಕೌತುಕ, ಹುಚ್ಚು ಮತ್ತು ಉತ್ಸಾಹವನ್ನ ಇಲ್ಲಿನ .ಕತೆಗಳ ಮರುಸೃಷ್ಟಿಯಲ್ಲಿ ಕಾಣಬಹುದು. ಜೇನುನೊಣ ಹೂಗಳಿಂದ ಮಕರಂದ ಸಂಗ್ರಹಿಸಿ ಸವಿಜೇನಾಗಿಸುವಂತೆ ಗಿರೀಶರವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ ಒಂದು ಸೃಜನಶೀಲ ಕ್ರಿಯೆ. ಮೈನವಿರೇಳುವಂತೆ ಓದಿಸಿಕೊಂಡ "ಹುಣಸೂರಿನ ಆನೆ ಪೀರ್‌ಭಕ್ಷ್" ಮತ್ತು "ಆಯ್ಯನಮಠದ ನರಭಕ್ಷಕಿ" ಶಿಕಾರಿ ಕಥೆಗಳು ಬಹುಕಾಲ ಕಾಡುವಂತಹವು. ಅನುವಾದವಾದರೂ ಅನುಭವಗಳನ್ನು ವಿಸ್ತರಿಸುವಂತಹ, ಸೃಜನಶೀಲ ಪ್ರಯತ್ನಕ್ಕಾಗಿ ಗಿರೀಶ್‌ರವರಿಗೆ ಅಭಿನಂದಿಸುತ್ತೇನೆ. ಜೊತೆಗೆ ಇವತ್ತಿನ ಪರಿಸ್ಥಿತಿಯಲ್ಲಿ ಕಾಡಿನ ಮೇಲೆ ನಾವು ಹೊರಿಸಿರುವ ಒತ್ತಡ, ಅದರಿಂದಾಗಿ ಅಲ್ಲಿಯ ಪ್ರಾಣಿ, ಪಕ್ಷಿಪ್ರಭೇದಗಳು ನಶಿಸುವ ಹಂತ ತಲುಪಿರುವುದು, ವನ್ಯ ಪ್ರಾಣಿ-ಮಾನವ ಸಂಘರ್ಷ ಇವೆಲ್ಲದರೆಡೆಗ ಇನ್ನಾದರೂ ಒಂಚೂರು ಯೋಚಿಸುವ ಪ್ರೇರಣೆ ನಮ್ಮಲ್ಲಿ ಮೂಡಲಿ. ಆಹಾರ ಸರಪಳಿಯ ತುತ್ತ ತುದಿಯಲ್ಲಿರುವ ಹುಲಿಗಳನ್ನು ಸಂರಕ್ಷಿಸಿದಾಗ ಮಾತ್ರ ನಾವು ಕಾವೇರಿಯಂತಹ ನದಿಯನ್ನ ಸಂರಕ್ಷಿಸಬಹುದು ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಬರುವಂತಾಗಲಿ.
ಈ ಪುಸ್ತಕದ ಮುದ್ರಣ ಮತ್ತು ವಿನ್ಯಾಸದ ಬಗ್ಗೆ ಒಂದು ಮಾತು ಹೇಳಲೇಬೇಕು . ಗಿರೀಶ್ ರವರೆ ಸ್ವತಃ ಈ ಪುಸ್ತಕದ ಒಳವಿನ್ಯಾಸ ಮಾಡಿರುವುದು ನನಗೆ ಬಹಳ ಹಿಡಿಸಿತು ಅದರಲ್ಲೂ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಚಿತ್ರಗಳು ಬಹಳ ಸೂಕ್ತವಾಗಿವೆ .
ಪುಸ್ತಕದ ಹೆಸರು:ಸ್ವಾತಂತ್ರ್ಯಪೂರ್ವ
ಶಿಕಾರಿ ಕತೆಗಳು
ಲೇಖಕರು: ಗಿರೀಶ್ ತಾಳಿಕಟ್ಟೆ
ಪ್ರಕಾಶನ: ಕಾವ್ಯ ಕಲಾ ಪ್ರಕಾಶನ ಬೆಂಗಳೂರು.
ಬೆಲೆ: 200₹
No comments:
Post a Comment