11 May 2022

ಆರ್ಯ ವೀರ್ಯ .ಪುಸ್ತಕ ವಿಮರ್ಶೆ.


 


ವಿಮರ್ಶೆ ೩೪

ಆರ್ಯ ವೀರ್ಯ 


ಆರ್ಯ ವೀರ್ಯ ಪುಸ್ತಕದ ಲೇಖಕರಾದ ಕೆ ಎನ್ ಗಣೇಶಯ್ಯ ರವರು ಓದುಗರನ್ನು ಚಿಂತನೆಗೆ ಹಚ್ಚುವ ಕೃತಿಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. 

ವೃತ್ತಿಯಿಂದ ಕೃಷಿ ವಿಜ್ಞಾನಿ, ಕೋಲಾರ ಜಿಲ್ಲೆಯವರು. 30 ವರ್ಷ ತಳಿ ಅಭಿವೃದ್ಧಿಯಲ್ಲಿ ತೊಡಗಿದ್ದವರು, ಪ್ರಾಣಿ, ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ, ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ, ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ ಮಾಡಿರುವರು.


'ಶಾಲಭಂಜಿಕೆ' ಸಣ್ಣಕಥೆ ಮೊದಲ ಸೃಜನಶೀಲ ಬರವಣಿಗೆ, ಅದೇ ಹೆಸರಿನ ಸಂಕಲನವೂ ಪ್ರಕಟವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕಥೆಗಳು ಪ್ರಕಟವಾಗಿವೆ. 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ', 'ಏಳು ರೊಟ್ಟಿಗಳು', 'ಮೂಕ ಧಾತು', 'ಶಿಲಾಕುಲ ವಲಸೆ', 'ಬಳ್ಳಿಕಾಳ ಬಳ್ಳಿ' ಮತ್ತು 'ರಕ್ತ ಸಿಕ್ತ ರತ್ನ' ಇವು ಅವರ ಕಾದಂಬರಿಗಳು. 'ಶಾಲಭಂಜಿಕೆ', 'ಪದ್ಮಪಾಣಿ, 'ನೇಹಲ', 'ಸಿಗೀರಿಯಾ', 'ಕಲ್ಪವಸಿ', 'ಮಿಹಿರಾಕುಲ', 'ಪಂನಿ ತಾಂಡವ' ಮತ್ತು 'ಆರ್ಯ ವೀರ್ಯ' ಕಥಾಸಂಕಲನಗಳು: 'ಭಿನ್ನೋಟ', 'ವಿ-ಚಾರಣ', 'ಭಿನ್ನಬಿಂಬ' ಮತ್ತು 'ತಾರುಮಾರು' ಇವು ಅವರ ಲೇಖನಗಳ ಸಂಗ್ರಹ.

ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ : ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.


ಪ್ರಸ್ತುತ ಕಥಾ ಸಂಕಲನದಲ್ಲಿ ಇರುವ 

ಚಿಂತನಾ ಬೊಗುಣಿ ಎಂಬ ಕಥೆಯಲ್ಲಿ

ಮಾಧವ ರಾವ್ ಮಗ ಮುರುಳಿ ಉತ್ತರ ಪ್ರದೇಶದ ಪ್ರವಾಸ ಹೋಗಿ ಬಂದಾಗಿನಿಂದ ಆದ ಅನಪೇಕ್ಷಿತ ವರ್ತನೆಗಳನ್ನು ಹಾಗೂ  ಬದಲಾವಣೆಗಳನ್ನು  ಗಮನಿಸುವ ತಂದೆ ಹಾಗೂ ತಂದೆಯ ಗೆಳೆಯರಾದ  ಶ್ರೀಧರ್ ರವರು  ಸಮಸ್ಯೆಯನ್ನು ಬಗೆಹರಿಸುವರೇ ಅಥವಾ ಸಮಸ್ಯೆಗಳನ್ನು ಸೃಷ್ಟಿ ಮಾಡಿದರೇ ಎಂಬುದೇ ಕಥೆಯ ಕುತೂಹಲಕರ ಅಂಶ .

ಈ ಕಥೆಯಲ್ಲಿ ಬರುವ ಕೆಲ ಸಂಭಾಷಣೆಗಳಲ್ಲಿ ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ.

'ಯಾವುದೇ ಒಂದು ಚಿಂತನೆ ಮಾತ್ರವೇ ಪ್ರಬಲವಾದ ವ್ಯಕ್ತಿಯಾಗಿ ಬೆಳೆದು ನೆಲೆಯಾಗಲು  ಅದರ ನೆರಳಿನಲ್ಲಿ ಆಶ್ರಯ ಪಡೆಯುವ ಬುದ್ಧಿಜೀವಿಗಳನ್ನು ಹೊರಗೆಳೆಯದಿದ್ದರೆ ಸಮಾಜಕ್ಕೆ ಉಪಯುಕ್ತವಾಗಬಹುದಾದ ಇತರೆ ಜ್ಞಾನ ಸಸ್ಯಗಳ ಬೆಳವಣಿಗೆ ಕುಂಠಿತ ವಾಗುತ್ತದೆ ಎಂಬ ಸಂಶಯಾಸ್ಪದ ಕಾರಣಕ್ಕಾಗಿ ನಾವು ಅಂತಹ ಅಪಾಯಕಾರಿ ಬೆಳವಣಿಗೆಗಳನ್ನು ವಿರೋಧಿಸಬೇಕು ಎನ್ನುವುದು ನಮ್ಮ ಸಂಘದ ಗುರಿಯಾಗಿದ್ದಲ್ಲಿ ಅಂತಹ ಎಲ್ಲ ಬೆಳವಣಿಗೆಗಳನ್ನೂ ವಿರೋಧಿಸಬೇಕು ಅಲ್ಲವೇ? 'ದಾಸ ಕ್ಯಾಪಿಟಲ್' ಆಗಲಿ, ಲೋಹಿಯಾರ ತತ್ವಗಳಾಗಲಿ, ವಿವೇಕಾನಂದರ ಬೋಧನೆ ಗಳಾಗಲಿ, ಮಹಾತ್ಮ ಗಾಂಧಿಯವರ ತತ್ವಗಳಾಗಲಿ, ಹೀಗೆ ಯಾವುದೇ ವಿಚಾರ ಪ್ರಬಲ ಶಕ್ತಿಯಾಗಿ ಬೆಳೆದು ಆ ಕಾಲಘಟ್ಟದ ವೈಚಾರಿಕ ಮನಸ್ಸುಗಳನ್ನು ತಮ್ಮ ದಾಸರನ್ನಾಗಿಸಿಕೊಂಡಲ್ಲಿ ಆಗ ಸರ್ವತೋಮುಖ ಜ್ಞಾನವೃದ್ಧಿಗೆ ಅಡ್ಡಿಯಾಗುತ್ತದೆ. ಎನ್ನುವ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


 ರುಂಡಗಂಡ ಎಂಬ ಕಥೆಯಲ್ಲಿ 

ನಂದನ್ ಅವರ ಮಗಳು ಸಂದ್ಯಾ ರಾಘವ್ ನನ್ನು ಮದುವೆಯಾಗಿ ,ನಂತರ ಸಂದ್ಯಾಳ ಕಾಲೇಜಿನ ಗೆಳೆಯ ಸಂತೋಷ್ ದೇಹಕ್ಕೆ ರಾಘವ್ ಮುಖ ಸೇರಿದ ಬಗ್ಗೆ ಸಂಧ್ಯಾ ತನಿಖಾದಿಕಾರಿಯಾಗಿ ,ಹಣ ವರ್ಗಾವಣೆಯಾದ ಬಗ್ಗೆ ಹಾಗೂ ರಾಘವ್ ನ ಮೋಸವನ್ನು , ಆಧಾರ್ ಕಾರ್ಡ್ ನ  ಅಧಾರದ ಮೇಲೆ ಚಾಕಚಕ್ಯತೆಯಿಂದ ಕಂಡುಹಿಡಿಯುವ ಕಥನ ಕುತೂಹಲಕಾರಿಯಾಗಿದೆ.

ಕಥೆಯ ಪಾತ್ರಧಾರಿ ಸಂಧ್ಯಾ ಹೇಳುವಂತೆ ,ಇಟಲಿಯ ಸೆರ್ಗಿಯೋ ಕನವರೋ ಎಂಬ ವೈದ್ಯ ವಿಜ್ಞಾನಿ ಹತ್ತು ವರ್ಷದ ಹಿಂದೆ, ಅಂದರೆ ಸುಮಾರು 2015 ರಿಂದ 2017ರ ಸಮಯದಲ್ಲಿ ಒಬ್ಬ ಚೀನೀ ವೈದ್ಯನೊಡನೆ ಸೇರಿ ಒಬ್ಬರ ಶಿರವನ್ನು ಮತ್ತೊಬ್ಬರ ದೇಹಕ್ಕೆ ಕಸಿಮಾಡುವ ತಮ್ಮ ಪ್ರಯತ್ನ ಫಲಕಾರಿಯಾಗಿದೆ ಎಂದು ಘೋಷಿಸಿದ್ದ. ಅದೇ ಸಮಯದಲ್ಲಿ ದೇಹವೆಲ್ಲ ಊನವಾಗಿದ್ದ, ಆದರೆ ಎಲ್ಲ ರೀತಿಯಲ್ಲೂ ಆರೋಗ್ಯಕರ ಶಿರವನ್ನು ಹೊಂದಿದ್ದ, ಅತ್ಯಂತ ಬುದ್ಧಿಶಾಲಿಯೂ ಆದ ಚೀನೀ ವ್ಯಕ್ತಿಯೊಬ್ಬ ಅಂತಹ ಶಸ್ತ್ರಚಿಕಿತ್ಸೆ ಸಾಧ್ಯವಾಗುವ ಹಾಗಿದ್ದರೆ ತಾನು ಒಂದು ದೇಹ ಪಡೆಯಲು ಸಿದ್ಧವೆಂದು ಹೇಳಿಕೊಂಡಿದ್ದ. ಅದಕ್ಕೆ, 'ಬೈನ್ ಡೆಡ್' ಆಗಿದ್ದ ರೋಗಿಗಳು ಸಿಕ್ಕಿದಲ್ಲಿ ತಾನು ಆ 29 ಶಸ್ತ್ರಚಿಕಿತ್ಸೆ ಮಾಡುವುದಾಗಿ ಇಟಲಿಯ ಈ ವೈದ್ಯ ಒಪ್ಪಿದ್ದ ಕೂಡಾ. ಇದರ ಬಗ್ಗೆ ಹಲವಾರು ವಿಜ್ಞಾನಿಗಳು ಮತ್ತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರೂ, ಇಲಿಗಳಲ್ಲಿ ಇದು ಸಾಧ್ಯ ಎಂದು ಈಗಾಗಲೇ ತೋರಿಸಲಾಗಿತ್ತು. ಪಲ್ಲವ್ ಭಾಗ ಅವರು ಕೊಟ್ಟ ವರದಿಯ ಪ್ರಕಾರ ಈ ಶಸ್ತ್ರಕ್ರಿಯೆ ಮಾನವರಲ್ಲಿಯೂ ನಡೆಯುತ್ತಿದ್ದು, ಹಲವಾರು ಅಂತಹ ವ್ಯಕ್ತಿಗಳು ಈಗಾಗಲೇ  ಶಸ್ತ್ರಚಿಕಿತ್ಸೆ ಗೆ ಒಳಗಾಗಿರುವ ಸಾಧ್ಯತೆಗಳ ಬೆನ್ನಟ್ಟುವ ಮೂಲಕ ಪತ್ತೇದಾರಿ ಕೆಲಸ ಮಾಡಿ ಅಪರಾಧಿಗಳ ಹಿಡಿಯುವ ಕಾರ್ಯ ಮಾಡಿದರು.


ಮತ್ತೊಂದು ಕಥೆ ಆರ್ಯ ವೀರ್ಯ ಓದಿದಾಗ ಮಾನವನ ವಂಶಧಾತುಗಳನ್ನು ಸಂಸ್ಕರಣಗೊಳಿಸಿ, ತಿದ್ದಿ, ಬದಲಾವಣೆ ಮೂಲಕ 'ಬುದ್ಧಿವಂತಿಕೆಯನ್ನು ಹೆಚ್ಚಿಸುವತ್ತ ಅಥವಾ ಆರೋಗ್ಯವನ್ನು ಉತ್ತಮ ಗೊಳಿಸುವತ್ತ ಅಥವಾ ಜೀವನವನ್ನು ಸುಗಮಗೊಳಿಸುವತ್ತ ನಡೆಯುತ್ತಿರುವ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಈ ನಿಟ್ಟಿನಲ್ಲಿ ಒಂದು ಅಪರೂಪದ, ರಹಸ್ಯ ಯೋಜನೆಯನ್ನು ನಾಜಿ ಪ್ರಮುಖರು ಕೈಗೊಂಡಿದ್ದರೆಂಬ ಬಗ್ಗೆ ಹಲವು ಮೂಲಗಳಿಂದ ದೃಢಪಟ್ಟಿದೆ. ಅಂತಹ ಒಂದು ಯೋಜನೆಯ ಸುತ್ತ ಬೆಳೆದ ಕತೆಯೂ ಈ ಸಂಕಲನದಲ್ಲಿದೆ. ಈ ಕಾರ್ಯ ಸಾಧಿಸಲು ನಾಜಿಗಳು ಯಾವ ಮಟ್ಟಕ್ಕೂ ಇಳಿಯಬಲ್ಲರು ಎಂಬುದನ್ನು ಈ ಕಥೆಯಲ್ಲಿ ಚಿತ್ರ ಸಹಿತ ದಾಖಲೆ ಸಹಿತ ನೀಡಿದ್ದಾರೆ.

ಎಂದಿನಂತೆ ಕೆ ಎನ್ ಗಣೇಶಯ್ಯ ರವರ ಶೈಲಿಯಾಗಿ ಆಧಾರಗಳ ಉಲ್ಲೇಖ,ಪೂರಕ ಚಿತ್ರಗಳು ಸಂಶೋಧನಾ ಗುಣ ಹಾಗೂ

ಘಟನೆಗಳು ನಿರೂಪಣೆಯ ಚಾಕಚಕ್ಯತೆ ಈ ಕಥಾ ಸಂಕಲನದಲ್ಲಿಯೂ ಇದೆ .ಒಮ್ಮೆ ಓದಿ  ನಿಮಗೆ ವಿಶ್ವ ಪರ್ಯಟನೆ ಮಾಡಿದ, ವಿಜ್ಞಾನದ ಸಂಶೋಧನೆ ಮಾಡಿದ ಅನುಭವವಾಗುವುದರಲ್ಲಿ ಸಂದೇಹವಿಲ್ಲ..


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ


No comments: