ಮಾಲ್ ಮಾಲ್ ಮಾಲ್
ಮಾಲ್ ಗಳು ಮತ್ತು ಸೂಪರ್ ಮಾರ್ಕೆಟ್ ಗಳು ಮೊದಲು ಕೇವಲ ಮೆಟ್ರೋಪಾಲಿಟನ್ ನಗರಗಳಲ್ಲಿ ಕೇಂದ್ರೀಕೃತವಾಗಿದ್ದವು ಇಂದು ಕ್ರಮೇಣವಾಗಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಮಾಲ್ ಗಳು ತಲೆ ಎತ್ತಿವೆ .
ಇದು ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮಗಳನ್ನು ಬೀರಿರುವುದು ಸುಳ್ಳಲ್ಲ.
ಮಾಲ್ ಗಳ ಅನುಕೂಲಗಳು
೧ ಎಲ್ಲಾ ರೀತಿಯ ಗೃಹಬಳಕೆಯ ವಸ್ತುಗಳು ಒಂದೆಡೆ ಸಿಗುವುದು ಗ್ರಾಹಕರ ಸಮಯದಲ್ಲಿ ಉಳಿತಾಯವಾಗುತ್ತದೆ.
೨ ಸ್ಪರ್ಧಾತ್ಮಕ ಮತ್ತು ಹೋಲ್ಸೇಲ್ ದರಗಳಲ್ಲಿ ವಸ್ತುಗಳು ಲಭ್ಯತೆ ಗ್ರಾಹಕರಿಗೆ ಆರ್ಥಿಕವಾಗಿ ಲಾಭವಾಗುತ್ತದೆ.
೩ ಕೆಲವು ಮಾಲ್ ಗಳಲ್ಲಿ ಸಿನಿಮಾ, ಆಟಗಳು ಮಕ್ಕಳ ಆಟಿಕೆಗಳು ಲಭ್ಯವಿರುವ ಕಾರಣದಿಂದ ಮನರಂಜನೆಗೆ ಹೇಳಿ ಮಾಡಿಸಿದ ಜಾಗವಾಗಿದೆ.
೪ ಪ್ರಪಂಚದ ಎಲ್ಲಾ ಬ್ರಾಂಡ್ ಗಳ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿವೆ .
ಮಾಲ್ ಗಳಿಂದಾಗುವ ದುಷ್ಪರಿಣಾಮಗಳು.
೧ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಗಳ ಸೃಷ್ಟಿಸಲು ದಾರಿ ಮಾಡುತ್ತವೆ.
೨ ಬೇಡದಿದ್ದರೂ ವಿವಿಧ ಬ್ರಾಂಡ್ ನ ವಸ್ತುಗಳನ್ನು ನೋಡುತ್ತಾ ಅನವಶ್ಯಕವಾಗಿ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ.
೩ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ .ಮತ್ತು ನಷ್ಟ ಅನುಭವಿಸುತ್ತವೆ.
೪ ಬೇಡಿಕೆಯ ಕೊರತೆಯ ಕಾರಣದಿಂದಾಗಿ ಇಂತಹ ಅಂಗಡಿಗಳು ಕ್ರಮೇಣವಾಗಿ ಮುಚ್ಚಲ್ಪಟ್ಟು ನಿರುದ್ಯೋಗಕ್ಕೆ ನಾಂದಿಯಾಗಬಹುದು.
೫ ವಿದೇಶಿ ಮಾಲ್ ಗಳ ಹಾವಳಿಯಿಂದ ನಮ್ಮ ದೇಶದ ಸಂಪತ್ತು ಕ್ರಮೇಣವಾಗಿ ಬೇರೆ ದೇಶಗಳಿಗೆ ಹರಿದು ಇದು ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಬಹುದು. ಉದಾಹರಣೆಗೆ ಬೆಂಗಳೂರಿನಲ್ಲಿ ಇತ್ತೀಚಿಗೆ ತಲೆಎತ್ತಿರುವ ಲುಲು ಮಾಲ್.
ಎಲ್ಲಾ ವಿಷಯಗಳಂತೆ ಮಾಲ್ ಗಳು ಸಹ ಅನುಕೂಲಗಳು ಮತ್ತು ಅನುಕೂಲಗಳನ್ನು ಹೊಂದಿವೆ .ಮಾಲ್ ಗಳು ಆಧುನಿಕತೆಯ ಪ್ರತಿಬಿಂಬ ಮತ್ತು ಅಭಿವೃದ್ಧಿಯ ಸೂಚಕಗಳೂ ಹೌದು ಹಾಗಾಗಿ ಮಾಲ್ ಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲು ಇದು ಶಿಲಾಯುಗವಲ್ಲ. ಆದರೆ ಸರ್ಕಾರಗಳು ಕಾಲಕಾಲಕ್ಕೆ ಇಂತಹ ಮಾಲ್ ಗಳ ಮೇಲೆ ನಿಗಾ ಇಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು.ಗ್ರಾಹಕರು ಸಹ ಅಗತ್ಯವಾದ ವಸ್ತುಗಳು ಮತ್ತು ಐಶಾರಾಮಿ ವಸ್ತುಗಳು ಮತ್ತು ಅನಗತ್ಯ ವಸ್ತುಗಳ ನಡುವಿನ ವ್ಯತ್ಯಾಸದ ಸಣ್ಣ ಗೆರೆಯನ್ನು ಅರಿತು ವಸ್ತುಗಳ ಕೊಳ್ಳಬೇಕಿದೆ. ಕೊಳ್ಳುಬಾಕ ಸಂಸ್ಕೃತಿಯನ್ನು ಕಡಿಮೆ ಮಾಡಿ ಸರಳಜೀವನ ರೂಢಿಸಿಕೊಂಡು ಸುಖೀಜೀವನ ನಡೆಸಬೇಕಿದೆ.
ಮುಗಿಸುವ ಮುನ್ನ..
ವಿದೇಶಿ ಮಾಲುಗಳ ಕೊಳ್ಳಲು
ಕ್ರೆಡಿಟ್ ಕಾರ್ಡ್‌ಗಳನ್ನು ಉಜ್ಜುತ್ತಾ
ಆಗಾಗ್ಗೆ ಭೇಟಿ ನೀಡುತ್ತಿದ್ದ ಅವನು
ಆ ಮಾಲು ಈ ಮಾಲು|
ದುಬಾರಿ ಬೆಲೆಯ ಮಾಲುಗಳ
ಕೊಂಡ ಪರಿಣಾಮವಾಗಿ ಈ
ಕೈ ಬರಿದಾಗಿ ದೇಶಿಯತೆಗೆ ಮಾರುಹೋಗಿ ಕುಳಿತಿದ್ದಾನೆ
ತಲೆಯಮೇಲೆ ಹಾಕಿಕೊಂಡು ಟವಾಲು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment