ಚೆಲ್ಲಾಡಿದ ಚಿತ್ರಗಳು
ಪುಸ್ತಕ ವಿಮರ್ಶೆ.
ಈ ವರ್ಷ ಗಣರಾಜ್ಯೋತ್ಸವದ ದಿನದಂದು ತುಮಕೂರಿನ ಗೋಕುಲ ಬಡಾವಣೆಯ ಗಣೇಶ ಮಂದಿರದಲ್ಲಿ ನಗರ ಕ ಸಾ ಪ ವತಿಯಿಂದ ನಡೆದ ವತಿಯಿಂದ ನಡೆದ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡ ನನಗೆ ಬಹುಮಾನವಾಗಿ ನೀಡಿದ ಪುಸ್ತಕವೇ ಚೆಲ್ಲಾಡಿದ ಚಿತ್ರಗಳು.
ಡಾ. ಸೋ ಮು ಭಾಸ್ಕರಾಚಾರ್ ರವರ ಆತ್ಮಕಥನ ಓದುತ್ತಿದ್ದರೆ ಇದು ನನ್ನದೇ ಕಥೆಯೆಂದು ಭಾಸವಾಯಿತು.
ಈ ಕಥಾನಕದ ಭಾಷೆ , ನಿರೂಪಣೆ ಬಹಳ ಸುಂದರವಾಗಿರುವುದು ವಿಶೇಷವಾದದು.
ಇದು ಇವರ ಹನ್ನೊಂದನೇ ಕೃತಿ. ಅವರು ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ತರುವಾಯ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಶ್ರೀಯುತರ ಬದುಕು ತುಂಬಾ ತಿರುವುಗಳಿಂದ ಕೂಡಿದ್ದು ರೋಚಕವಾಗಿದೆ. ಹಾಗಾಗಿ ಅವರು ಕಂಡುಂಡ ಸತ್ಯಗಳನ್ನು, ಎದುರಾದ ಘಟನೆಗಳನ್ನು ಒಂದೊಂದಾಗಿ ನಮ್ಮೆದುರು ತೆರೆದಿಟ್ಟಿದ್ದಾರೆ . ಇಲ್ಲಿನ ಘಟನೆಗಳು ಒಂದೇ ಬಾರಿಗೆ ಘಟಿಸಿದವುಗಳಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಎದುರಾದ ರೋಚಕ ಅನುಭವಗಳು. ಇವುಗಳನ್ನು ಕೇಳಿದ್ದ ಮಿತ್ರರು ಬರವಣಿಗೆ ರೂಪದಲ್ಲಿ ಪ್ರಕಟಿಸಲು ಯೋಗ್ಯವಾಗಿವೆ, ಪ್ರಕಟಿಸಿ ಎಂದು ನೀಡಿದ ಸಲಹೆ ಮೇರೆಗೆ ಈ ಕೃತಿ ಹೊರಬರಲು ಸಾಧ್ಯವಾಗಿದೆ. ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
'ಚೆಲ್ಲಾಡಿದ ಚಿತ್ರಗಳು' ಈ ಪುಸ್ತಕಕ್ಕೆ ಡಾ .ಮನು ಬಳಿಗಾರ್ ರವರು ಬರೆದ ಮುನ್ನುಡಿ ಪುಸ್ತಕದ ತೂಕವನ್ನು ಹೆಚ್ಚಿಸಿದೆ.
ಈ ಪುಸ್ತಕ ಆಶ್ಚರ್ಯ ಹಾಗೂ ಅದ್ಭುತವೆನಿಸುವ ಜೀವನಾನುಭವಗಳಿಂದ ಕೂಡಿದ್ದು ಓದುಗರಿಗೆ ವಿಶಿಷ್ಟ ಅನುಭವ ತಂದುಕೊಡುತ್ತದೆ, ಇದೊಂದು ರೋಚಕ ಅನುಭವ ನೀಡುವ ಕೃತಿಯಾಗಿದೆ. 'ಅಪ್ಪನಿಗೆ ಹೆದರಿ ಶಾಲೆಗೆ ಹೋದೆ', 'ಸಾಲ ವಸೂಲಿಗೆ ಬಂದ ವ್ಯಕ್ತಿಯೇ ಬುಕ್ಸ್ ಕೊಡಿಸಿದ್ದು, ಪ್ರೀತಿಯ ಮುದ್ದೆ ತಿನ್ನಿಸಿದ ಮುಖ್ಯೋಪಾಧ್ಯಾಯ', 'ಸೊಡರೆಮ್ಮೆ ಸವಾರಿ ಮಾಡಿ ಕೈ ಮುರಿದುಕೊಂಡೆ', 'ಪಂಡರ ಭಜನೆಯಲ್ಲೂ ಜಾತಿ ಕುಣಿತ', 'ನಾಟಕಾಭಿನಯಕ್ಕೆ ಇನಾಮು', 'ಸ್ನೇಹದಲ್ಲೂ ಇಣುಕಿದ ಜಾತಿ ಜಂಜಾಟ' . . ಮುಂತಾದ ಲೇಖನಗಳು ಇದ್ದು, ಒಂದೊಂದೂ ಸ್ವಂತಿಕೆಯನ್ನು ಪಡೆದಿದ್ದು, ಓದುಗರಿಗೆ ಬಾಲ್ಯದ ದರ್ಶನವನ್ನು ಆಪ್ಯಾಯಮಾನವಾಗಿ ಮಾಡಿಸಿದ್ದಾರೆ.
ತಮ್ಮ ಬಡತನದ ಬದುಕು, ಆ ಕಾಲದಲ್ಲೇ ಕಂಡ ಜಾತಿ ವ್ಯವಸ್ಥೆಯನ್ನು ಕಂಡು ಕನಲಿರುವ ಶ್ರೀಯುತರು ಅದನ್ನು ಕಲಾತ್ಮಕವಾಗಿ ಬಿಡಿಸಿದ್ದಾರೆ. ಅದರಲ್ಲೂ ಇವರು ಶಾಲೆಗೆ ತಪ್ಪಿಸಿಕೊಂಡು ತಮ್ಮ ಊರಿನ ಆಂಜನೇಯ ದೇವಸ್ಥಾನದ ವಿಗ್ರಹದ ಹಿಂದೆ ಆಶ್ರಯ ಪಡೆದು, ಶಾಲೆಯ ಎಲ್ಲಾ ಮಕ್ಕಳು ಮನೆಗೆ ತಲುಪುವಾಗ ಹೊರ ಬಂದು ಸೇರುವ ಪ್ರಸಂಗ, ಆಗ ಇವರ ತಂದೆಯವರಿಂದ ಸಿಕ್ಕಿದ ಬಳುವಳಿಯ ಏಟುಗಳನ್ನು ಸ್ಮರಿಸಿಕೊಂಡಿದ್ದಾರೆ. ಮುಗ್ಧತೆಯ ಪ್ರತೀಕವಾಗಿರುವ ಈ ಪ್ರಸಂಗ ಬಹಳಷ್ಟು ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಆ ಕಾಲದ ಆಚಾರ, ವಿಚಾರಗಳು ಹೇಗಿದ್ದವೆಂಬುದನ್ನು ತಿಳಿಯಲು ಸಹಕಾರಿಯಾಗಿದೆ. ಇಲ್ಲಿನ ಬಹಳಷ್ಟು ಲೇಖನಗಳಲ್ಲಿ ಶ್ರೀಯುತರು ತಮ್ಮ ಕಾಲದಲ್ಲಿ ಘಟಿಸಿದ ಘಟನಾವಳಿಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಅವರ ಊರಿನಲ್ಲಿ ನಡೆದ ಪ್ರಸಂಗಗಳಲ್ಲಿ ಕೆಲವು ನಗು ಬರಿಸುವಂತಿದ್ದರೆ, ಮತ್ತೆ ಕೆಲವು ಆ ಕಾಲದ ಸಂಪ್ರದಾಯಗಳನ್ನು ಯಥಾವತ್ತಾಗಿ ನೀಡಿರುವುದರಿಂದ ತಮ್ಮ ಸಮಕಾಲೀನ ಸಂಗತಿಗಳನ್ನು ತಿಳಿದುಕೊಳ್ಳಲು ಈ ಕೃತಿ ನೆರವಾಗುತ್ತದೆ ಎನಿಸುತ್ತದೆ. ತಮ್ಮ ಬರವಣಿಗೆಯಲ್ಲಿ ಎಲ್ಲಿಯೂ ಅತಿರೇಕವನ್ನಾಗಲೀ, ಉತ್ಪ್ರೇಕ್ಷೆಯನ್ನಾಗಲೀ ತೋರಿಸದಿರುವುದು ಇವರ ಗಂಭೀರ ಚಿಂತನೆಗೆ ಸಾಕ್ಷಿಯಾಗಿದೆ. ಇಲ್ಲಿನ ಒಂದೊಂದು ಪ್ರಸಂಗಗಳೂ ಕೂಡ ಆ ಕಾಲದ ಬದುಕನ್ನು ಕಟ್ಟಿಕೊಡುವಲ್ಲಿ ಸಾಫಲ್ಯ ಪಡೆದಿರುವುದು ಕಂಡುಬರುತ್ತದೆ. ಹರೆಯದಲ್ಲಿ ನಡೆದ ಪ್ರೇಮ, ಕಾಲೇಜಿನಲ್ಲಿ ಒಂದು ವರ್ಷದ ಪಿಯುಸಿಯಲ್ಲಿ ನಪಾಸಾಗಿ ತಮ್ಮ ಗುರುಗಳ ಸಹಕಾರದಿಂದ ಕನ್ನಡದಲ್ಲಿ ವಿಜ್ಞಾನದ ವಿಷಯವನ್ನು ಬರೆದು ತೇರ್ಗಡೆಯಾದುದು. ಪ್ರೌಢ ಶಾಲೆಯಲ್ಲಿರಬೇಕಾದರೆ ತಮ್ಮ ಮುಖ್ಯೋಪಾಧ್ಯಾಯರಿಗೆ ಧಿಕ್ಕಾರ ಕೂಗಿದ್ದು ಹಾಗೂ ನಾಟಕಾಭಿನಯದಲ್ಲಿ ತೋರಿದ ಉತ್ಸಾಹ ಮತ್ತು ಅದಕ್ಕೆ ನಡೆದ ಪ್ರೋತ್ಸಾಹವನ್ನು ಯಥಾವತ್ತಾಗಿ ನೀಡಿದ್ದಾರೆ. ಜೊತೆಗೆ ತಮಗೆ ನೀಡಿದ ಸಹಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಒಟ್ಟಾರೆ ನೀವು ನಿಮ್ಮ ಬಾಲ್ಯದ ಮತ್ತು ಕಾಲೇಜು ದಿನದ ನೆನಪಗಳ ಮೆಲಕು ಹಾಕಲು ಒಮ್ಮೆ ಈ ಕೃತಿ ಓದಿಬಿಡಿ.
ಪುಸ್ತಕ: ಚೆಲ್ಲಾಡಿದ ಚಿತ್ರಗಳು
ಲೇಖಕರು: ಸೋ ಮು ಭಾಸ್ಕರಾಚಾರ್.
ಪ್ರಕಾಶನ: ಕಿರಣ್ ಪ್ರಕಾಶನ ತುಮಕೂರು.
ಬೆಲೆ: 100₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
9900925529
No comments:
Post a Comment