06 January 2022

ಸಿಹಿಜೀವಿಯ ದಿನಚರಿ ೬ .


 


ಸಿಹಿಜೀವಿಯ ದಿನಚರಿ ೬

ದಿನಾಂಕ . 6.1.22 ರಂದು  ನಮ್ಮ ಕ್ಯಾತ್ಸಂದ್ರ ಸರ್ಕಾರಿ  ಶಾಲೆಯಲ್ಲಿ
ಗುಣಮಟ್ಟದ ಶಿಕ್ಷಣಕ್ಕೆ ಎಸ್. ಡಿ .ಎಂ ಸಿ. ಪಾತ್ರದ ಬಗ್ಗೆ  ಎಸ್ ಡಿ ಎಂ ಸಿ ಸದಸ್ಯರಿಗೆ   ಒಂದು ದಿನದ ತರಬೇತಿ ಹಮ್ಮಿಕೊಂಡಿದ್ದೆವು .ನಾನು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದೆ.ಈ ಹಿನ್ನೆಲೆಯಲ್ಲಿ ಎಸ್ ಡಿ ಎಂ ಸಿ ಬಗ್ಗೆ ಒಂದು ಮಾಹಿತಿಪೂರ್ಣ ಲೇಖನ

ಶಿಕ್ಷಣದ ಮಹತ್ವ ಅರಿತು ಶಿಕ್ಷಣ ನೀಡುವ  ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿದೆ.
ಶಿಕ್ಷಣ ರಂಗದಲ್ಲಿ ಕೇವಲ ಮಕ್ಕಳು, ಶಿಕ್ಷಕರು ,ಶಾಲೆಗಳು ಮಾತ್ರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಲದು ಸಮುದಾಯ, ಪೋಷಕರು ಸರ್ಕಾರ , ಮುಂತಾದ ಸಾಮಾಜಿಕ ನಿಯೋಗಗಳು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಣೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಮೊದಲು ಎಸ್ .ಬಿ .ಸಿ ಸಮಿತಿಗಳ ರಚನೆಯಾಯಿತು. ಕ್ರಮೇಣವಾಗಿ ಈ ಸಮಿತಿಗಳ ಹೆಸರನ್ನು ಎಸ್. ಡಿ .ಎಂ. ಸಿ .ಎಂದು ಬದಲಾವಣೆ ಮಾಡಿ ಕಾರ್ಯ ವ್ಯಾಪ್ತಿಯನ್ನು ವಿಸ್ತಾರ ಮಾಡಲಾಯಿತು.
ಎಸ್ ಡಿ ಎಂ ಸಿ ರಚನೆಯಾದ
ಸಂಕ್ಷಿಪ್ತ ಇತಿಹಾಸ ಈ ಕೆಳಗಿನಂತೆ ವಿಶ್ಲೇಷಣೆ ಮಾಡಬಹುದು.
ಸಮುದಾಯ ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿಯರ ಸಕ್ರಿಯ ಭಾಗವಹಿಸುವಿಕೆ ವಿಕೇಂದ್ರೀಕೃತ ಶಾಲಾ ಆಡಳಿತದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಮಹತ್ವದ ಅಂಶವನ್ನು ಆರಂಭದಿಂದಲೂ ಗುರುತಿಸಿರುವ ನಮ್ಮ ಶೈಕ್ಷಣಿಕ ನೀತಿ-ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ. ಈ ಪ್ರಯತ್ನಕ್ಕೆ ಶಾಲಾ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವ ಪ್ರಕ್ರಿಯೆಗೆ ಮಾತ್ರ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಯೂ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮೂಲಕ ಸಮುದಾಯವನ್ನು ಒಳಮಾಡಿಕೊಳ್ಳುವ ಪ್ರಯತ್ನವಾಗಿದೆ.

ಶಾಲಾ ಶಿಕ್ಷಣದ ಸಾರ್ವತ್ರೀಕರಣವು ಶಿಕ್ಷಣದಲ್ಲಿ ಗುಣಾತ್ಮಕತೆ, ಸಮತೆ, ಮಕ್ಕಳ ಭಾಗವಹಿಸುವಿಕೆ , ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಈ ಎಲ್ಲ ಅಂಶಗಳ ಅನುಷ್ಠಾನಕ್ಕೆ ಅಗತ್ಯವಾದ ಪ್ರಜಾಸತ್ತಾತ್ಮಕ ಚೌಕಟ್ಟು ವಿಕೇಂದ್ರೀಕರಣ ಆಡಳಿತ ವ್ಯವಸ್ಥೆಯ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ  ಪ್ರಯತ್ನಗಳು ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಾ ಬಂದಿವೆ. 1854ರಲ್ಲಿ ವುಡ್ಸ್  ಆಯೋಗ ಸ್ಥಳೀಯ ಕರಗಳ ಮೂಲಕ ಶಾಲೆಗಳ ನಿರ್ವಹಣೆಗೆ ಸಂಪನ್ಮೂಲಗಳನ್ನು ಕೋಡಿಕರಿಸುವ ಪ್ರಸ್ತಾಪ ಮಾಡಿತ್ತು. ನಂತರ ಲಾರ್ಡ್  ರಿಪ್ಪನ್ 1882  ರ ನಿರ್ಣಯ   ಸ್ಥಳಿಯ ಸರ್ಕಾರಿ ಕಾಯಿದೆ 1883ಮತ್ತು1919 ರ  ಭಾರತ ಸರ್ಕಾರದ ಕಾಯಿದೆ.ಈ ಎಲ್ಲಾ ಪ್ರಯತ್ನ ಮತ್ತು ಸ್ಥಳೀಯ ಹಂತದ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಹಲವು ಪ್ರಯತ್ನಗಳನ್ನು ನಡೆಸಿದವು.
ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ 73 ಮತ್ತು 74ನೇ ತಿದ್ದುಪಡಿ ಕಾಯಿದೆಗಳು ವಿಕೇಂದ್ರಿಕರಣ ಪ್ರಕ್ರಿಯೆಗೆ ಐತಿಹಾಸಿಕ ಚಾಲನೆ ನೀಡಿದವು ಮತ್ತೊಂದೆಡೆ ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾಗಿ 1986ರ ರಾಷ್ಟ್ರೀಯ, ಶಿಕ್ಷಣ ನೀತಿಯು ಸ್ಥಳೀಯ ಸಂಸ್ಥೆಗಳ ಮೂಲಕ ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸಿ ಸಮುದಾಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಗೆ ನೀತಿ ನಿರೂಪಣೆಯಲ್ಲಿ ಅವಕಾಶ ಕಲ್ಪಿಸಿತು. ನಂತರ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ 1994ರ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ,2000 ದಲ್ಲಿ ಸರ್ವ ಶಿಕ್ಷಣ ಅಭಿಯಾನ ಇತ್ಯಾದಿ ಯೋಜನೆಗಳು ಶಿಕ್ಷಣದ  ಸಾರ್ವತ್ರೀಕರಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಹೊಸ ಆಯಾಮಗಳನ್ನು ನೀಡಿದವು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನವು ಸಮುದಾಯದ ಸಹಭಾಗಿತ್ವದಲ್ಲಿ ಶಿಕ್ಷಣದ ಸಾರ್ವತ್ರೀಕರಣ ಎಂಬ ಧೈಯವಾಕ್ಯದೊಂದಿಗೆ ಪ್ರಾರಂಭವಾಯಿತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲಿಯೇ ಕರ್ನಾಟಕದಲ್ಲಿಯೂ ಶಿಕ್ಷಣ ಸಾರ್ವತ್ರೀಕರಣಕ್ಕೆ ರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಮಾದರಿಯಲ್ಲಿಯೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. 1995  ರಲ್ಲಿ ಗ್ರಾಮ ಶಿಕ್ಷಣ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಎಲ್ಲ ಪ್ರಯತ್ನಗಳಿಗೆ ಅಂತಿಮ ಸ್ವರೂಪ ನೀಡುವ ಭಾಗವಾಗಿ 1999 ರಲ್ಲಿ ರಚನೆಯಾದ ಶಿಕ್ಷಣ ಕಾರ್ಯಪಡೆಯ ವರದಿಯ ಶಿಫಾರಸ್ಸಿನಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿತು. ದಿನಾಂಕ; 28-04_2001 ರಲ್ಲಿ ಹೊರಡಿಸಿದ ಕಾರ್ಯಕಾರಿ ಅದೇಶದ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ
ಪ್ರೌಢಶಾಲೆಗಳಲ್ಲಿ ಎಸ್.ಡಿ.ಎಂ.ಸಿ.ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ಉದ್ದೇಶಗಳು.

I. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರೌಢ ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸುವುದು.
2 ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು.
3. ತಮ್ಮ ಮಕ್ಕಳ ಏಳಿಗೆಯ ಬಗ್ಗೆ ಸದಾ ಕಾಳಜಿಯುಳ್ಳ ಪೋಷಕರು   ಶಿಕ್ಷಣ ಪ್ರಕ್ರಿಯೆಯಲ್ಲಿ
ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು
4. ಶಿಕ್ಷಣ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ ಶಾಲಾ ಆಡಳಿತವನ್ನು ಸುಧಾರಿಸುವುದು.
5. ಶಿಕ್ಷಕರನ್ನು ಪ್ರೇರೇಪಿಸಿ ಅವರ ಜವಾಬ್ದಾರಿಯನ್ನು ಹೆಚ್ಚಿಸವುದು.
6. ಗ್ರಾಮ ಶಿಕ್ಷಣ ಸಮಿತಿಗಳ ರಚನೆಯಲ್ಲಿ ಉಳಿದುಕೊಂಡ ನ್ಯೂನತೆಗಳನ್ನು ಹೋಗಲಾಡಿಸವುದು
7. ಶಾಲಾ ಯೋಜನೆ ಹಾಗೂ ಅಭಿವೃದ್ಧಿಗಾಗಿ ಶಾಲೆಯನ್ನು ಒಂದು ಘಟಕವಾಗಿ ಪರಿಗಣಿಸಿ ಯೋಜನೆ ತಯಾರಿಸುವುದು.
8. ದಾಖಲಾತಿ, ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆ ಕುರಿತಂತೆ ಇರುವ ಸಮಸ್ಯೆಗಳನ್ನು ತೊಡೆದು ಹಾಕುವುದು.

9. ತರಗತಿಯ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಸಹಯೋಗ ನೀಡುವುದು.
10. ಶಾಲಾಭಿವೃದ್ಧಿಗೆ ಅಗತ್ಯ ಸಂಪನ್ಮೂಲಗಳನ್ನು ಕ್ರೋಢಿಕರಿಸುವುದು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳು:

1. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ಮಕ್ಕಳು ಪ್ರೌಢ ಶಿಕ್ಷಣಕ್ಕೆ ದಾಖಲಾಗುವಂತೆ ಕ್ರಮ ವಹಿಸುವುದು

2. ಈ ರೀತಿ ದಾಖಲಾದ ಎಲ್ಲಾ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಮಾಡುವುದು.
3. ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರೌಢ ಶಿಕ್ಷಣಕ್ಕೆ ದಾಖಲಾಗುವ ಸಂದರ್ಭದಲ್ಲಿ ಬುನಾದಿ ಸಾಮರ್ಥ್ಯಗಳನ್ನು ಗಳಿಸಲು ಸೇತುಬಂಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದು.

4. ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.

5. ಶಾಲೆಯ ಆವರಣವನ್ನು ಹಾಗೂ ಕಟ್ಟಡವನ್ನು ಅತಿಕ್ರಮಣ ಹಾಗೂ ವಿನಾಶಗಳಿಂದ ಕಾಪಾಡುವುದು

6. ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 220 .ಕಲಿಕಾ ದಿನಗಳು ಮತ್ತು ಪ್ರತಿ ದಿನ ಐದೂವರೆ ಗಂಟೆಗಳು ಕಾಲ ಕಲಿಕೆ ಆಗುವಂತೆ ಕ್ರಮವಹಿಸುವುದು.
7ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ನಿಯಮಾನುಸಾರ ಸಿಗಬೇಕಾದ ಉತ್ತೇಜಕಗಳನ್ನು ಸಕಾಲಕ್ಕೆ ಒದಗಿಸಲು ಅಗತ್ಯ ಕ್ರಮವನ್ನು ವಹಿಸುವುದು (ಉದಾ: ಬೈಸಿಕಲ್ ಬಿಸಿಯೂಟ, ಸಮವಸ್ತ್ರ ಪಠ್ಯಪುಸ್ತಕ ನೋಟ್ ಬುಕ್ ವಿದ್ಯಾರ್ಥಿವೇತನ ಇತ್ಯಾದಿ)

8. ಪೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಲಾಖೆಯಿಂದ ಏರ್ಪಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು (ವಿಜ್ಞಾನ ಮೇಳ, ಶೈಕ್ಷಣಿಕ ಪ್ರವಾಸ: ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆಗಳು, ಕ್ರೀಡಾ ಕೂಟಗಳು, ಶಾಲಾ ಸಂಸತ್ತು, ವಿಜ್ಞಾನ ಕ್ಲಬ್, ಇಕೋಕ್ಲಬ್, ಕಲಾಉತ್ಸವ ಹದಿಹರೆಯದ ಶಿಕ್ಷಣ ಇತ್ಯಾದಿ),
9 ಶಾಲಾಭಿವೃದ್ಧಿ ಯೋಜನೆ ತಯಾರಿಸಿ ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.
10. ವರ್ಷದಲ್ಲಿ ಮೂರು ಬಾರಿ ಅಂದರೆ ಜುಲೈ, ನವೆಂಬರ್ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪೋಷಕರ ಸಭೆಗಳನ್ನು ಆಯೋಜಿಸುವುದು.

11. ಶಾಲೆಗೆ ಮಂಜೂರಾದ ಅನುದಾನಗಳನ್ನು ನಿಯಮಾನುಸಾರ ಬಳಸಲು ಕಾಲಕಾಲಕ್ಕೆ ಅನುಮೋದನೆ ನೀಡಿ ಸಮರ್ಪಕವಾಗಿ ಬಳಕೆಯಾಗಿದೆಯೋ ಎಂಬುದನ್ನು ಖಾತರಿಪಡಿಸಿಕೊಳ್ಳುವುದು.
12, ಶಾಲಾ ಶಿಕ್ಷಣ ನಿಧಿ ಸ್ಥಾಪಿಸುವುದು. ಶಾಲಾ ಅಭಿವೃದ್ಧಿಗಾಗಿ ಎಸ್.ಡಿ.ಎಂ.ಸಿ ಯು ಸಾರ್ವಜನಿಕರಿಂದ
ವಂತಿಗೆಗಳನ್ನು ಸ್ವೀಕರಿಸಬಹುದು, ಸ್ವೀಕರಿಸಿದ ವಂತಿಗೊಳಿಗೆ ಸೂಕ್ತ ದಾಖಲೆಗಳನ್ನು ನಿರ್ವಹಿಸುವುದು.

13. ಶಾಲೆಗೆ ಸಂಬಂಧಿಸಿದ ಎಲ್ಲಾ ಕಾಮಗಾರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುವುದು,
14. ಎಸ್.ಡಿ.ಎಂ.ಸಿ.ಯು ಶಾಲೆಯಲ್ಲಿ ಸಾಮೂಹಿಕವಾಗಿ ಮತ್ತು ವಿಕೇಂದ್ರೀಕರಣ ತತ್ತ್ವದ ಆಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅಗತ್ಯವಿರುವ ಕಡೆ ವಿವಿಧ ಉಪ ಸಮಿತಿಗಳನ್ನು ರಚಿಸಿಕೊಳ್ಳಬಹುದು. ಉದಾ: ಅಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ಇತ್ಯಾದಿ:

ಹೀಗೆ ಎಸ್. ಡಿ. ಎಂ. ಸಿ. ಯು ಶಾಲೆಯ ಅಭಿವೃದ್ಧಿಗೆ ಮತ್ತು ಶಿಕ್ಷಣ ವ್ಯವಸ್ಥೆಯ  ಬಲವರ್ಧನೆಗೆ ತನ್ನದೇ ಆದ ಪಾತ್ರ ವಹಿಸುತ್ತವೆ ಆದರೆ ಕೆಲ ಕಡೆ ಈ ಸಮಿತಿಯ ಸದಸ್ಯರು ಶಾಲೆಯ ಅಭಿವೃದ್ಧಿಗೆ ಸರಿಯಾದ ಸಹಕಾರ ನೀಡದೆ ಇರುವ ದೂರುಗಳು ಕೂಡಾ ಬರುತ್ತಿವೆ. ಶಿಕ್ಷಣದ ವಿಷಯ ಬಂದಾಗ ಸಮುದಾಯದ ಸರ್ವರೂ ಸೇರಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ನಾವೆಲ್ಲರೂ ಪಣ ತೊಡಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


No comments: