08 January 2022

ಅಮ್ಮ ಹೆಣೆದ ಈಸ್ಲ ಸ್ಯಾಪೆ .ಆತ್ಮಕಥೆ ೨೨


 


ಅಮ್ಮ ಹೆಣೆದ ಈಸ್ಲ ಸ್ಯಾಪೆ

ಅಂದು ಕೊಟಗೇಣಿ ಎಂದು ಕರೆಯುತ್ತಿದ್ದ ಇಂದು ಚೌಡಗೊಂಡನಹಳ್ಳಿ ಎಂದು ಕರೆಯುವ ಊರಿನವನಾದ ನನ್ನ ಬಾಲ್ಯದ ನೆನಪುಗಳು ನನ್ನ ಸ್ಮೃತಿ ಪಠಲದಲ್ಲಿ ಅಚ್ಚಳಿಯದೆ ಉಳಿದಿವೆ.

ಅಪ್ಪನ ಅಕಾಲಿಕ ಮರಣದಿಂದ ಸಂಸಾರದ ನೊಗ ಹೊತ್ತ ನನ್ನಮ್ಮ ಕೂಲಿನಾಲಿ ಮಾಡಿ ನಮ್ಮ ಸಾಕುವ ಜವಾಬ್ದಾರಿ ಹೊತ್ತರ .
ನಮ್ಮ ತಂದೆ ನಮಗೆ ಬಿಟ್ಟು ಹೋದ ಆಸ್ತಿಯೆಂದರೆ ನಾಲ್ಕೆಕರೆ ಜಮೀನು ಒಂದು ಮನೆ . ಕಡಪ ಕಲ್ಲಿನ ಮನೆಯು ನಾನು ಅಮ್ಮ ಇರಲು ಎಷ್ಟು ಬೇಕೋ ಅಷ್ಟು ಸಾಕಾಗಿತ್ತು. ಮನೆಯ ಮುಂಭಾಗದಲ್ಲಿ ಒಂದು ಬಾಗಿದ ಚಪ್ಪರ ಕೂಡಾ ಇತ್ತು .ಕಡಪ ಕಲ್ಲಿನ ಮನೆಗೆ ಮೇಲೆ ಪ್ರತಿ  ಬೇಸಿಗೆಯಲ್ಲಿ  ವರ್ಷಕ್ಕೊಮ್ಮೆ ಕರಲ ಮಣ್ಣು ಹಾಕಿ ಮಳೆಗಾಲದಲ್ಲಿ ಮನೆ ಸೋರದಂತೆ ಮಾಡುತ್ತಿದ್ದೆವು. ಮನೆಯ ಮುಂಭಾಗದ ಬಾಗಿದ ಚಪ್ಪರಕ್ಕೆ ಪ್ರತಿ ವರ್ಷವೂ ಬಾದೆ ಹುಲ್ಲು ಹಾಕಿ ಸೋರದಂತೆ ಬಂದೋಬಸ್ತ್ ಮಾಡಬೇಕಾಗಿತ್ತು.

ನಮ್ಮ ಮನೆಗೆ ಆಗ ಯಾರಾದರೂ ನೆಂಟರು, ಅತಿಥಿಗಳು, ಬಂದರೆ ಮತ್ತು
ರಾತ್ರಿ ನಾವು  ಮಲಗಲು ಈಚಲ ಚಾಪೆ ಬಳಕೆ ಮಾಡುತ್ತಿದ್ದೆವು .
ಈ ಈಚಲ ಚಾಪೆ ಅಂಗಡಿಗಳಲ್ಲಿ ಕೊಂಡು ತಂದದ್ದಲ್ಲ ಬದಲಾಗಿ ನಮ್ಮ ಅಮ್ಮನೇ ಖುದ್ದು ಮಾಡಿದ ಚಾಪೆಗಳು!
ನಮ್ಮ ಊರಿನಿಂದ ಪೂರ್ವಾಭಿಮುಖವಾಗಿ ಎಂಟು ಕಿಲೋಮೀಟರ್ ಇರುವ ಗೌನಳ್ಳಿ ಹಳ್ಳಕ್ಕೆ ನಮ್ಮ ಊರಿನ ಜನರು ಬೆಳಿಗ್ಗೆ ಗುಂಪಾಗಿ ಕಾಲ್ನಡಿಗೆಯಲ್ಲಿ ಹೊರಟು ಗೌನಳ್ಳಿ ಹಳ್ಳ ತಲುಪಿ ಅಲ್ಲಿ ಈಚಲ ಮರದಿಂದ ಈಚಲ ಗರಿ ಕಿತ್ತು ಸಂಜೆಯ ವೇಳೆಗೆ   ನಮ್ಮ ಮನೆಗೆ ಹಿಂತಿರುಗುತ್ತಿದ್ದರು .ಆಗ ನನಗೆ ಹನ್ನೆರಡು ವರ್ಷ ನಾನೂ ಬರುವೆ ಎಂದು ಕೆಲವೊಮ್ಮೆ ಹಠ ಮಾಡಿದಾಗ ಅಮ್ಮ ವಿಧಿ ಇಲ್ಲದೆ ನನ್ನ ಕರೆದುಕೊಂಡು ಹೋಗುತ್ತಿದ್ದರು. ಹೋಗುವಾಗ ಅಂಗೂ ಇಂಗು ನಡೆದುಕೊಂಡು ಹೋಗುತ್ತಿದ್ದೆ. ಬರುವಾಗ  ಕಾಲು ನೋವಿನಿಂದ ಅಮ್ಮನ ಕಡೆ ನೋಡುತ್ತಿದ್ದೆ .ಅಮ್ಮ ತಲೆಯ ಮೇಲೆ ಈಚಲ ಗರಿಯ ಹೊರೆ ಹೊತ್ತು ಸಿಟ್ಟಿನಿಂದ ಕಂಕುಳಲ್ಲಿ ನನ್ನ ಕೂರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕುತ್ತಿದ್ದರು .ಅದನ್ನು ಈಗ ನೆನದು ಆಗ ಅಮ್ಮನಿಗೆ ತಿಳಿಯದೆ ಕಷ್ಟ ಕೊಟ್ಟಿದ್ದನ್ನು  ನೆನದು ಮರುಗುತ್ತೇನೆ.

ಹಾಗೆ ತಂದ ಈಚಲ ಗರಿಗಳಿಂದ ದಿಂಡನ್ನು ಬೇರ್ಪಡಿಸಿ ,ಚಿಕ್ಕ ಚಿಕ್ಕ  ಕಟ್ಟುಗಳಾಗಿ ವಿಭಾಗ ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು ಹೊಲದ ಕೆಲಸ ಇಲ್ಲದ ದಿನಗಳಲ್ಲಿ ಅಂಗೈ ಅಗಲದ ಚಿಕ್ಕ ಚಿಕ್ಕ ಚಾಪೆಯನ್ನು ಹೆಣೆಯುತ್ತಿದ್ದರು. ನಾನೂ ಚಾಪೆ ಹೆಣೆಯುವುದು ಕಲಿತು ಕೆಲವೊಮ್ಮೆ ಹೆಣೆಯುತ್ತಿದ್ದೆ ಹೀಗ ಹೆಣೆದ ಅಂಗೈ ಅಗಲದ ಪಟ್ಟಿಯನ್ನು ದುಂಡಾಗಿ ಸುತ್ತಿ ಅದನ್ನು ಒಂದರ ಪಕ್ಕ ಒಂದು ಜೋಡಿಸಿ ನಾಜೂಕಾಗಿ ಮತ್ತೊಂದು ಚಿಕ್ಕ ಈಚಲ ಎಳೆಯಿಂದ ಜೋಡಿಸಿ ಮೇಲೆ ಕೆಳೆಗೆ ದಿಂಡು ಕಟ್ಟಿದರೆ ಹಳ್ಳಿಯ ಜನರ ಬಾಯಲ್ಲಿ ಹೇಳುವ  "ಈಸಲ ಸ್ಯಾಪೆ " ಸಿದ್ದವಾಗುತ್ತಿತ್ತು.
ಹಸಿರು ಬಣ್ಣದ ಈಚಲ ಚಾಪೆಯ ಮೇಲೆ ಮಲಗಿದಾಗ ಹೊಸದಾದ ಒಂದು ರೀತಿಯ ಪರಿಮಳ ಸವಿಯುತ್ತಾ ಮಲಗಿದರೆ ನಿದ್ರಾದೇವತೆಯ ಆಲಿಂಗನದಲ್ಲಿ ಕರಗಿ ಹೋಗುತ್ತಿದ್ದೆ .ಅಮ್ಮ ಬೆಳಿಗ್ಗೆ ಜೋರಾಗಿ ಗದರಿದಾಗಲೆ ಎಚ್ಚರವಾಗುತ್ತಿತ್ತು .ಆಗ ಸೂರ್ಯ ದೇವ ನಮ್ಮ ಮನೆಯಲ್ಲಿ ಇಣುಕುತ್ತಿದ್ದ.
ನಂತರ ಕ್ರಮೇಣವಾಗಿ ಈಚಲ ಚಾಪೆ ಕಡಿಮೆಯಾಗಿ ಹಾಪಿನ ಚಾಪೆ ಬಂದವು. ಈಗ ಪ್ಲಾಸ್ಟಿಕ್ ಚಾಪೆಗಳ ಕಾಲ .ಅಮ್ಮ ಮೊನ್ನೆ ತುಮಕೂರಿಗೆ ಬಂದಾಗ "ಒಂದು ದೊಡ್ ಸ್ಯಾಪೆ ಕೊಡ್ಸಪ್ಪ ಊರಲ್ಲಿ ನೆಂಟರು ಬಂದಾಗ ಇರ್ಲಿ"  ಎಂದರು .ಆಗ ನನಗೆ ಈಚಲ ಚಾಪೆ ನೆನಪಾಯಿತು .ಈಗ ಮಂಚವಿದೆ ,ಮೆತ್ತನೆಯ ಹಾಸಿಗೆ ಇದೆ, ಕೊಠಡಿಯಲ್ಲಿ ಕೃತಕವಾದ ಪರಿಮಳವಿದೆ ಆದರೂ ಬಾಲ್ಯದಲ್ಲಿ ಅಮ್ಮ ನೇಯ್ದ  ಈಚಲ ಚಾಪೆಯ ಮೇಲೆ ಸ್ವಾಭಾವಿಕವಾದ ಪರಿಮಳ ಆಘ್ರಾಣಿಸುತ್ತಾ ಮಾಡಿದ ನಿದ್ದೆಗೆ ಸಮವಿಲ್ಲ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು


No comments: