ಮಹಿಷನಾಗಿ ಸಿಹಿಜೀವಿ.ಆತ್ಮಕಥೆ ೨೨
ನಾಟಕ ಸಂಗೀತ ಕಲೆ ಎಂದರೆ ನನಗೆ ಬಾಲ್ಯದಿಂದಲೂ ಬಲು ಆಸಕ್ತಿ ನಾನು ಮೊದಲು ನೋಡಿದ ನಾಟಕ ಶ್ರೀ "ದೇವಿ ಮಹಾತ್ಮೆ" ಅರ್ಥಾತ್ "ರಕ್ತಬಿಜಾಸುರ ವಧೆ" ಆಲೂರು ಪುಟ್ಟಾಚಾರ್ ಅವರು ಬರೆದು ನಿರ್ದೇಶಿಸಿದ ಆ ನಾಟಕ ನನಗೆ ಈಗಲೂ ಅಚ್ಚು ಮೆಚ್ಚು.
ಬಹುತೇಕ ಅನಕ್ಷರಸ್ಥರಿಗೆ ಪುಟ್ಟಾಚಾರ್ ರವರು ನಾಟಕ ಹೇಳಿಕೊಡುತ್ತಿದ್ದುದನ್ನು ನೋಡಲು ನಾವು ಪ್ರತಿದಿನ ರಾತ್ರಿ ಪ್ರಾಕ್ಟೀಸ್ ನೋಡಲು ಯರಬಳ್ಳಿಯ ರಂಗಪ್ಪನ ಗುಡಿಗೆ ಹೋಗುತ್ತಿದ್ದೆವು. ಅಲ್ಲಿ ನಮಗೆ ಹಾಸ್ಯ ಕುರುಕ್ಷೇತ್ರ ನಾಟಕದ ಪ್ರಸಂಗಗಳಂತೆ ಕೆಲ ಅಮೂಲ್ಯವಾದ ಪ್ರಸಂಗಗಳನ್ನು ನೋಡಿ ಪುಕ್ಕಟೆ ಮನರಂಜನೆಗೆ ಕೊರತೆಯಿರುತ್ತಿರಲಿಲ್ಲ. ಮೊದ ಮೊದಲು ಹಾಡು ಹಾಡಲು ಬರದೇ , ಮಾತುಗಳನ್ನು ಸರಿಯಾಗಿ ಆಡದೆ ಹಾಸ್ಯ ಪಾತ್ರಗಳಂತೆ ಕಾಣುವ ಕಲಾವಿದರು ದೇವಿಯ ಕೃಪೆಯೋ ಎಂಬಂತೆ ನಾಟಕದ ದಿನ ಹತ್ತಿರ ಬಂದಂತೆ ಪಾತ್ರಧಾರಿಗಳು ಉತ್ತಮವಾಗಿ ಹಾಡುಗಳು ಮತ್ತು ಮಾತುಗಳನ್ನು ಹೇಳುತ್ತಿದ್ದರು. ಅದಕ್ಕೆ ಹೇಳೋದು ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಪೆಕ್ಟ್ ಎಂದು .
ನಾಟಕದ ದಿನ ಹತ್ತೂವರೆಗೆ ನಾಟಕ ಶುರುವಾದರೆ ನಾನು ಮತ್ತು ನನ್ನ ಗೆಳೆಯರು ಸಂಜೆ ಏಳು ಗಂಟೆಗೆ ಚಾಪೆ ತೆಗೆದುಕೊಂಡು ಹೋಗಿ ಸ್ಟೇಜಿನ ಮುಂದೆ ಹಾಸಿ ನಾಟಕ ನೋಡಲು ಕುಳಿತುಬಿಡುತ್ತಿದ್ದೆವು.
ಒಂ ನಮೋ ಭವಾನಿ ತಾಯೇ..... ಎಂಬ ಪ್ರಾರ್ಥನೆಯ ಮೂಲಕ ಅರಂಭವಾಗುವ ನಾಟಕದ ಮೊದಲ ಸೀನ್ ಕಶ್ಯಪ ಬ್ರಹ್ಮ ನ ಅರಮನೆಯಲ್ಲಿ ನಾರದರ ಭೇಟಿಯ ಸಂಭಾಷಣೆ ಎಲ್ಲರ ಸೆಳೆಯುತ್ತಿತ್ತು. ರಕ್ತ ಬಿಜಾಸುರ, ಮಹಿಷಾಸುರ, ಶುಂಭ ,ನಿಶುಂಭರ ಆರ್ಭಟಗಳು, ಶ್ರೀದೇವಿ, ಶ್ರೀಕೃಷ್ಣ, ಬ್ರಹ್ಮ, ಮತ್ತು ಮಹೇಶ್ವರ ಇವರ ಸೌಮ್ಯ ಸ್ವಭಾವದ ಅಭಿನಯ ನೋಡುತ್ತಾ ನಿಜಕ್ಕೂ ನಾವೆಲ್ಲರೂ ಭಕ್ತಿ ಪರವಶದಿಂದ ನಾಟಕ ನೋಡುತ್ತಿದ್ದೆವು .ಶ್ರೀ ದೇವಿ ಪ್ರತ್ಯಕ್ಷವಾಗುವ ಸೀನ್ ನಲ್ಲಿ ರಂಗಸ್ಥಳದ ಮುಂದಿನ ಎಲ್ಲಾ ಪ್ರೇಕ್ಷಕರು ತಮಗರಿವಿಲ್ಲದೇ ಕೈಜೋಡಿಸಿ ವಂದಿಸುತ್ತಿದ್ದೆವು.
ನಾಟಕ ಮುಂದುವರೆದಂತೆ ದೇವಿಯು ಒಬ್ಬೊಬ್ಬ ಅಸುರರ ಸಂಹಾರ ಮಾಡುತ್ತಾ ಕೊನೆಯದಾಗಿ ರಕ್ತಬಿಜಾಸುರನ ಸಂಹಾರ ಮಾಡುವಾಗ ಮೂಡಣದಲಿ ಸೂರ್ಯ ಉದಯಿಸುವ ಲಕ್ಷಣ ಗೋಚರಿಸುತ್ತಿತ್ತು.
ನಾಟಕದ ನಂತರದ ದಿನ ನಾವು ಗೆಳೆಯರೆಲ್ಲಾ ಸೇರಿ ರಂಗಪ್ಪನ ಗುಡಿಯಲ್ಲಿ ಕಲೆತು ಕಟ್ಟಿಗೆಯ ಗದೆ, ಬಿಲ್ಲು ಬಾಣ ಮಾಡಿಕೊಂಡು ನಾವೇ ಹಾಡುತ್ತಾ .ಮಾತು ಹೇಳುತ್ತಾ ನಾಟಕ ಆಡುತ್ತಿದ್ದೆವು . ಸೀನ್ , ಹಾರ್ಮೋನಿಯಂ , ಪ್ರೇಕ್ಷಕರು ಮಾತ್ರ ಇರುತ್ತಿರಲಿಲ್ಲ!
ಅಂದು ಹುಡುಗರ ಆಟವಾಗಿ ಆಡಿದ ದೇವಿ ಮಹಾತ್ಮೆ ನಾಟಕದಲ್ಲಿ ನಾನು ದೊಡ್ಡವನಾದ ಮೇಲೆ ಮಹಿಷಾಸುರ ಪಾತ್ರವನ್ನು ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ.
ಮೊನ್ನೆ ನನ್ನ ಕಿರಿಯ ಮಗಳು ನಾನು ಅಭಿನಯಿಸಿದ ಮಹಿಷಾಸುರ ಪಾತ್ರದ ಪೋಟೊ ನೋಡಿದಾಗ ಇದೆಲ್ಲವೂ ನೆನಪಾಯಿತು.
ಸಿಹಿಜೀವಿ.
ಸಿ ಜಿ ವೆಂಕಟೇಶ್ವರ
No comments:
Post a Comment