15 January 2022

ಸಿಹಿಜೀವಿಯ ದಿನಚರಿ


 

ಸಿಹಿಜೀವಿಯ ದಿನಚರಿ
 ಸಂಕ್ರಾಂತಿ ಹಬ್ಬದ ದಿನ

ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ ದಿನಪತ್ರಿಕೆ ಓದಿದೆನು. ಮನೆಯವರೆಲ್ಲರೂ ಸ್ನಾನ ಮಾಡಿ ಪೂಜೆ ಮಾಡಲು ಸಿದ್ದರಾದರು .ವಾರದಿಂದ ಕಷ್ಟ ಪಟ್ಟು ಇಷ್ಟ ಪಟ್ಟು  ತಯಾರಿಸಿದ ಎಳ್ಳು ಬೆಲ್ಲ ದೇವರಿಗೆ ನೈವೇದ್ಯ ಮಾಡಿ ಮನೆಯವರಿಗೆಲ್ಲ ಹಂಚಿ ತಿಂದು ನಲಿದೆವು.
ನಿನ್ನೆ ದಿನ ಶಾಪಿಂಗ್ ಮಾಡಿ ತಂದ ಅವರೇಕಾಯಿ, ಕಬ್ಬು ದೇವರಿಗೆ ನೈವೇದ್ಯ ಮಾಡುವುದನ್ನು ಮರೆಯಲಿಲ್ಲ.
ನಂತರ ಸಿಹಿ ಮತ್ತು ಖಾರ ಪೊಂಗಲ್ ಸವಿದೆವು. ಬಹುದಿನಗಳ ಹಿಂದೆ ಓದಿದ್ದ ಆವಿಷ್ಕಾರದ ಹರಿಕಾರ ಎಂಬ ಪುಸ್ತಕಕ್ಕೆ ವಿಮರ್ಶೆ ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟ ಮಾಡಿದೆ. ವಾಸು ಸಮುದ್ರವಳ್ಳಿ ಅವರು ಬರೆದ ಮಕ್ಕಳ ಕವಿತೆಗಳ ಪುಸ್ತಕ "ಉಂಡಾಡಿ ಗುಂಡ" ಓದಿ ವಿಮರ್ಶೆ ಬರೆದು ನನ್ನ ಬ್ಲಾಗ್ ಮತ್ತು ಪ್ರತಿಲಿಪಿಯಲ್ಲಿ ಪ್ರಕಟಮಾಡಿದೆನು. ಡಾ.ಪರಮೇಶ್ ರವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತಾದ "ಮಹಾಬಯಲು" ಎಂಬ ಪುಸ್ತಕ ಓದಲು ಶುರುಮಾಡಿದೆ.

ನನ್ನ ವಿದ್ಯಾರ್ಥಿ ವಿಶ್ವನಾಥ್ ಬರೆದ ಕವನ ಸಂಕಲನದ ಕರಡು ಪ್ರತಿಯನ್ನು ಓದಿ ಮುನ್ನುಡಿ ಬರೆಯಲು ಆರಂಭಿಸಿದೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆನು.
ಸಂಜೆ ನನ್ನ ಮಕ್ಕಳು ಮನೆಗೆ ಬರುವವರಿಗೆ ಎಳ್ಳು ಬೆಲ್ಲ ವಿತರಣೆ ಮಾಡಲು ಸಿದ್ದವಾದ ಬಗೆ ಸಂತಸವಾಯಿತು .
ಮನೆಯವರೆಲ್ಲರೂ ಕುಳಿತು
ಅಪರೂಪಕ್ಕೆ ಟೀವಿಯಲ್ಲಿ ಯುವರತ್ನ ಚಿತ್ರ ನೋಡಿದೆವು . ಆದರೂ ಸಂಜೆಯ ಹೊತ್ತಿಗೆ ನಮ್ಮ ಮಾವನವರಾದ ಕೃಷ್ಣಮೂರ್ತಿ ರವರ ಹಾರ ಹಾಕಿದ ಭಾವಚಿತ್ರ ನೋಡಿ ಬೇಡವೆಂದರೂ ಯಾಕೊ ಮನಸ್ಸು ಭಾರವಾಯಿತು. ಕಳೆದವರ್ಷ ನಮ್ಮೊಂದಿಗೆ ಹುಡುಗರಂತೆ ಚಟುವಟಿಕೆಯಿಂದ ಇದ್ದು ನಮ್ಮನೆ ಹಬ್ಬದಲ್ಲಿ ಪಾಲ್ಗೊಂಡ ಮಾವ ಈಗ ನಮ್ಮೊಂದಿಗೆ ಇಲ್ಲ ಅಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ ಅವನಾಟ ಎಂದು ಯೋಚಿಸುತ್ತಾ ಹಾಸಿಗೆಗೆ ಹೋದರೆ ನಿದ್ರೆ ಹತ್ತಲು ಯಾಕೋ ಬಹಳ ಹೊತ್ತು ಹಿಡಿಯಿತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

No comments: