20 January 2022

ನನ್ನ ಹೃದಯದಲಿ ಅವನಿಗೆ ಜಾಗವಿದೆ.


 


ಅವನ ಹೃದಯದಲ್ಲಿ ನನಗೆ ಜಾಗವಿದೆ .

ಅವನು ಮುಸ್ಲಿಂ,ನಾನು ಹಿಂದೂ .ಅವನು ನಗರದಲ್ಲಿ ಹುಟ್ಟಿ ಬೆಳೆದದ್ದು ನಾನು ಹಳ್ಳಿಯಲ್ಲಿ.ಅವನೀಗ ಆರಕ್ಷಕ, ನಾನು ಶಿಕ್ಷಕ . ನಮ್ಮಿಬ್ಬರದು ಈಗಲೂ ಒಳ್ಳೆಯ ಒಡನಾಟ. ಅಷ್ಟಕ್ಕೂ ನಮ್ಮಿಬ್ಬರನ್ನೂ ಒಂದುಗೂಡಿಸಿರುವ ಶಕ್ತಿ ಯಾವುದು? ಇನ್ನಾವುದು ಅದೇ ಗೆಳೆತನ!

ನಮಗೆ ನಮ್ಮ ಬಾಲ್ಯದ ಗೆಳೆಯರ ಒಡನಾಟವನ್ನು ಮರೆಯಲು ಸಾದ್ಯವಿಲ್ಲ ಆ ನೆನಪುಗಳೇ ಅಮರ .ನನಗೂ ನ್ನ ಲಬಾಲ್ಯವನ್ನು ಅವಿಸ್ಮರಣೀಯವಾಗಿಸಿದ  ಬಹಳ ಜನ ಚಡ್ಡಿ ದೋಸ್ತ್ಗಳಿದ್ದಾರೆ .ಅವರೆಲ್ಲರೂ ನನ್ನ ಜೀವನದಲ್ಲಿ ದೊರೆತ ಅಮೂಲ್ಯವಾದ ರತ್ನಗಳೆ ಸರಿ ಆ  ಗೆಳೆಯರ ಬಗ್ಗೆ ನಂತರ ಮಾತನಾಡುವೆ.

ನಾನೀಗ ಹೇಳಹೊರಟಿರುವುದು ನನ್ನ ಪ್ಯಾಂಟ್ ದೋಸ್ತ್ ಬಗ್ಗೆ ಅವನೇ ಇಸ್ಮಾಯಿಲ್ ಜಬೀವುಲ್ಲಾ . ಯರಬಳ್ಳಿಯಲ್ಲಿ ಪಿ. ಯು. ಮುಗಿಸಿ ಹಿರಿಯೂರಿನ ವಾಣಿ ಕಾಲೇಜ್ ಗೆ ಅಡ್ಮಿಷನ್ ಆದಾಗ ಇದ್ದವನೊಬ್ಬನೇ ಗೆಳೆಯ ಅವನು ಶಿವಕುಮಾರ .ಈಗ ಬೆಂಗಳೂರಿನಲ್ಲಿ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕ್ರಮೇಣವಾಗಿ ಹಿರಿಯೂರಿನ ಟಿ. ಬಿ. ಸರ್ಕಲ್ ನಿಂದ ಮಾರಿಕಣಿವೆ ಸರ್ಕಲ್ ಮಧ್ಯ ಎರಡು ಕಿಲೋಮೀಟರ್ ಅಂತರ ನಡೆಯಲಾರದೆ ಆ ಮಾರ್ಗವಾಗಿ ಹೊಸದುರ್ಗದ ಕಡೆ ಹೋಗುವ ಬಸ್ ನ ಟಾಪ್ ಹತ್ತಿ ನಮ್ಮ ಕಾಲೇಜ್ ಗೆ ಪಯಣ ಬೆಳೆಸುವಾಗ ಪರಿಚಿತನಾದವನೇ ಜಬಿ!

ಈಗ ಚಿತ್ರದುರ್ಗದಲ್ಲಿ ಪೊಲಿಸ್ ಇಲಾಖೆಯಲ್ಲಿ ಸೇವೆ ಮಾಡುವ ಜಬಿಯ ಗೆಳೆತನ ಈಗಲೂ ಮುಂದುವರೆದಿದೆ ಮುಂದೆಯೂ ಇರುವುದು.
ನಮ್ಮಿಬ್ಬರಲ್ಲಿ ಈಗಲೂ ಯಾರಾದರೂ
ಸಣ್ಣ ಪೆನ್ ನಿಂದ ಹಿಡಿದು ಹೊಸ ಮೊಬೈಲ್, ಆಗಲಿ, ಬೈಕ್, ಆಗಲಿ, ಯೂ. ಪಿ. ಎಸ್. ಆಗಲಿ, ಕಾರ್ ಆಗಲಿ ಏನೇ ಕೊಳ್ಳಬೇಕಾದರೆ ಗಂಟೆಗಟ್ಟಲೆ ಪೋನ್ ನಲ್ಲಿ ಸಂಭಾಷಣೆ ಮಾಡಿ ಪರಸ್ಪರ ಸಲಹೆ ಪಡೆದು ಖರೀದಿಸುವುದಿದೆ. ಜಬಿ ಪೋನ್ ಮಾಡಿದ ಎಂದರೆ ನನ್ನ ಮೊದಲ ಮಗಳು "ಅಪ್ಪ ,ಮಿನಿಮಮ್ ಅಂದರೆ  ಇನ್ನರ್ದ ಗಂಟೆ ನಿಮ್ ಮಾತು ಮುಗಿಯಲ್ಲ "ಎಂದು ಜೋಕ್ ಮಾಡುತ್ತಾಳೆ . ನಮ್ಮ ಮಾತು ಬರೀ ಪೋನ್ ನಲ್ಲಿ ಮುಗಿಯಲ್ಲ ಮುಖತಃ ಮಾತನಾಡಬೇಕು ಎಂದರೆ ದಿಢೀರ್ ಭೇಟಿಯಾಗುವುದೂ ಉಂಟು. ಒಮ್ಮೆ ತಾನು ಕೊಂಡ ಹೊಸ ಮೊಬೈಲ್ ತೋರಿಸಲು ಚಿತ್ರದುರ್ಗದಿಂದ ನಾನು ಕೆಲಸ ಮಾಡುವ ಗೌರಿಬಿದನೂರಿಗೆ ಬಂದಿದ್ದ ಎಂದರೆ ನೀವು ನಂಬಲೇಬೇಕು.
ನಮ್ಮ ಸ್ನೇಹ ನಮಗೆ ಮಾತ್ರ ಸೀಮಿತವಾಗಿಲ್ಲ ಅದು ಕುಟುಂಬಕ್ಕೂ ವಿಸ್ತರಿಸಿದೆ. ನಾವು ಡಿಗ್ರಿ ಓದುವಾಗ ಅವರ ಅಮ್ಮ ಅವರ ಗುಡಿಸಲ ಮನೆಯಲ್ಲಿ ಸೀಮೇಎಣ್ಣೆ ಸ್ಟೌವ್  ಮೇಲೆ ಮಾಡಿಕೊಡುತ್ತಿದ್ದ ನೀರ್ ದೋಸೆ ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ.  ಆಗ ಅವರ ಮನೆಯಲ್ಲಿ ನೀರ್ ದೋಸೆ ತಿಂದು ಒಂದು ಸಿನಿಮಾ ನೋಡಿ ಸಂಜೆ ಅವರ ಮನೆಯಲ್ಲಿ ಟೀ ಕುಡಿದು ನಮ್ಮ ಮನೆಯ ಕಡೆ ಹೊರಡುತ್ತಿದ್ದೆ .ನಮ್ಮಿಬ್ಬರಲ್ಲಿ ಯಾರ ಬಳಿಯಾದರೂ ಆರು ರೂಪಾಯಿ ಇದ್ದರೆ ಅಂದು ಸಿನಿಮಾ ಫಿಕ್ಸ್ ಏಕೆಂದರೆ ಆಗ ಜಯಲಕ್ಷ್ಮಿ ಥಿಯೇಟರ್ ನಲ್ಲಿ ಬೆಂಚಿನ ಮೇಲೆ ಕುಳಿತು ಸಿನಿಮಾ ನೋಡಲು ಮೂರು ರೂಪಾಯಿ ಟಿಕೆಟ್! ಆದರೆ ಕಾಲೇಜ್ ಬಂಕ್ ಮಾಡಿ ಮನೆಯಲ್ಲಿ ಹೇಳದೆ ಎಂದೂ ಸಿನಿಮಾಕ್ಕೆ ಹೋಗುತ್ತಿರಲಿಲ್ಲ. ಆದರೂ ಜಬಿಯ ತಾಯಿ "ನೀವಿಬ್ಬ್ರೂ ಇಂಗೇ ಸಿನಿಮಾ ನೋಡಿದ್ರೆ ಡಿಗ್ರಿ ಮಾಡದೆಂಗೆ "ಎಂದು ಪ್ರೀತಿಯಿಂದ ಬೈಯುತ್ತಿದ್ದರು.ಅವರಿಗೂ ಗೊತ್ತಿತ್ತು ನಮಗೆ ಸಿನಿಮಾ ನೋಡುವುದು ಮತ್ತು ಹಾಡು ಕೇಳೊದು ಬಿಟ್ಟು ಇನ್ನಾವುದೇ ಚಟಗಳಿಲ್ಲ ಎಂಬುದು.

ಜಬಿ ಏನದರೂ ತಿಂಗಳಲ್ಲಿ  ನಮ್ಮ ಊರಿಗೆ ಬರಲಿಲ್ಲ ಎಂದರೆ ಯಾಕೋ ಜಬಿ ಬರಲಿಲ್ಲ ಕಣಪ್ಪ ಎಂದು ನಮ್ಮ ಅಮ್ಮ ಕೇಳುತ್ತಿದ್ದರು. ನಮ್ಮ ತೋಟದ ಎಳನೀರು, ಮಾವಿನ ಕಾಯಿ , ಅಡಿಕೆ , ಬಾಳೆ ಹಣ್ಣು ಎಂದರೆ ಅವನಿಗೆ ಬಲು ಇಷ್ಟ

ಒಮ್ಮೆ ಚಿತ್ರದುರ್ಗ ದ ಬಳಿ ನನಗೆ ಬೈಕ್ ನಲ್ಲಿ  ಅಪಘಾತವಾದಾಗ ಮೊದಲು ಓಡೋಡಿ ಬಂದು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ ನಮ್ಮ ಮನೆಯವರಿಗೆ ಸುದ್ದಿ ಮುಟ್ಟಿಸಿ ತಮ್ಮ ಮನೆಯಲ್ಲೇ ಹಾರೈಕೆ ಮಾಡಿದ ಗೆಳೆಯನ ಹೇಗೆ ಮರೆಯಲಿ? 

ನನ್ನ ಬರವಣಿಗೆಯ ದೊಡ್ಡ ಅಭಿಮಾನಿಯಾದ ಅವನು ನನ್ನ  ಮೊದಲ ಕವನ ಸಂಕಲನ ಸಾಲು ದೀಪಾವಳಿ ಬಿಡುಗಡೆಯಾದಾಗ ಆ ಪುಸ್ತಕದ ಬೆಲೆ ಎಪ್ಪತ್ತು ಇತ್ತು ಗೂಗಲ್ ಪೇ ನಲ್ಲಿ ಎಂಭತ್ತು ರೂ ಹಾಕಿದ .ಯಾಕೆ ಅಂತ ಪ್ರಶ್ನೆ ಮಾಡಿದ್ದಕ್ಕೆ ನನ್ನ ಗೆಳೆಯ ಕವಿಯಾಗಿದ್ದಾನೆ ,ಅವನ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ಆದರೂ ನಾನು ಹತ್ತು ರೂ ಅಷ್ಟೇ ಜಾಸ್ತಿ ಕೊಡುತ್ತಿರುವೆ  ಅದು ನನ್ನ ಸಂತೋಷ ನೀನು ಕೇಳಬಾರದು ಎಂದು ಬಾಯಿ ಮುಚ್ಚಿಸಿದ.ಮೊನ್ನೆ " ನನ್ನಮ್ಮ ನಮ್ಮೂರಿನ ಪ್ಲಾರೆನ್ಸ್ ನೈಟಿಂಗೇಲ್ " ಪುಸ್ತಕ ಪ್ರಕಟವಾದಾಗ ನೂರಿಪ್ಪತ್ತರ ಪುಸ್ತಕಕ್ಕೆ ನೂರೈವತ್ತು ಕೊಟ್ಟು ಖರೀದಿಸಿ ,ಪುಸ್ತಕದ ಮುಖಪುಟವನ್ನು ವಾಟ್ಸಪ್ ,ಪೇಸ್ ಬುಕ್ ಗಳಲ್ಲಿ ಶೇರ್ ಮಾಡಿ ತನ್ನದೇ ಪುಸ್ತಕ ಬಿಡುಗಡೆಯಾಗಿದೆಯೇನೋ ಎಂದು ಸಂಭ್ರಮಿಸಿದನು.
ನಾನೀಗ ಇರುವುದು ತುಮಕೂರು ಅವನು ಚಿತ್ರದುರ್ಗ ಆದರೂ
ನಮ್ಮ ಸ್ನೇಹ ಹೀಗೆಯೇ ಮುಂದುವರೆದಿದೆ .ಒಂದೇ ಕಡೆ ನಾವು ಸೇರಿ ಮನೆಕಟ್ಟಿಕೊಳ್ಳಬೇಕೆಂದು ಒಂದೇ ಬಡಾವಣೆಯಲ್ಲಿ ಸೈಟ್ ಕೊಂಡಿದ್ದೇವೆ ಅಲ್ಲಿ ಮನೆ ಕಟ್ಟುತ್ತೇವೋ ಇಲ್ಲವೋ ಗೊತ್ತಿಲ್ಲ. ಅವನ ಹೃದಯದಲ್ಲಿ ನನಗೆ ಬೇಕಾದಷ್ಟು, ಅವನ ಹೃದಯದಲ್ಲಿ ನನಗೆ ಬೇಕಾದಷ್ಟು ಜಾಗವಿರುವುದು ಮಾತ್ರ ಸತ್ಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

No comments: